CHITRADURGA NEWS | 25 JULY 2025
ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ನಿಮಿತ್ತ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸ್ಥಾನದ ಗದ್ದುಗೆಯಲ್ಲಿ ನಡೆದ ವಚನಾಭಿಷೇಕ ಹಾಗೂ ಮುರಿಗಾ ಪರಂಪರೆಯಲ್ಲಿ ಸಾಗಿಬಂದ ಗುರುಪರಂಪರೆಯ ಮಹಾಸ್ವಾಮಿಗಳ ಜೀವನ ದರ್ಶನ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಜು.28ರಂದು ನಗರಸಭೆಯಲ್ಲಿ ತೆರವಾದ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ
ಈ ವೇಳೆ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಕೆ.ಎಂ. ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ಐತಿಹಾಸಿಕ ಚಿತ್ರದುರ್ಗಕ್ಕೆ ಕಳಶಪ್ರಾಯವಾದ ಇಲ್ಲಿನ ಚಿನ್ಮೂಲಾದ್ರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರಿಂದ ಪ್ರಾರಂಭವಾದ ಬಗ್ಗೆ ಇತಿಹಾಸಕಾರರು ಹೇಳುತ್ತಾರೆ. ಈ ಪೀಠ ಸ್ಥಾಪನೆಯ ಬಗ್ಗೆ ಐತಿಹಾಸಿಕ ಮಹತ್ವವಿದೆ.
ದನಗಾಹಿ ಹುಡುಗನೊಬ್ಬ ದುರ್ಗದ ದೊರೆಯಾಗುವುದಕ್ಕೆ ಮುರಿಗೆಯ ಶಾಂತವೀರರ ಆಶೀರ್ವಾದದ ಬಲವೇ ಕಾರಣ. ಮುಂದೆ ಆ ಹುಡುಗ ದುರ್ಗದ ದೊರೆ ಭರಮಣ್ಣ ನಾಯಕನಾದುದು, ಆಶೀರ್ವದಿಸಿದ ಗುರುಗಳಿಗೆ ಮಠಕಟ್ಟಿದ ಪ್ರಸಂಗಗಳು ಸ್ಮರಣೀಯ ಎಂದು ಸ್ಮರಿಸಿಕೊಂಡರು.
ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳವರು ಪೀಠಕ್ಕೆ ಬಂದ ಬಗ್ಗೆ, ಮಠ ಸ್ಥಾಪನೆ, ಅವರ ಸಮಾಜೋಧಾರ್ಮಿಕ ಕಾರ್ಯಗಳ ಬಗ್ಗೆ ಹೇಳುತ್ತ, ಶಾಂತವೀರರು ಪ್ರಕಾಂಡ ಪಂಡಿತರು, ಪೌರಾಣಾಗಮ ವೇದಶಾಸ್ತ್ರ ನಿಪುಣರು, ಸಂಗೀತದೆಡೆಗೆ ಅವರಲ್ಲಿದ್ದ ಅಪಾರ ಪ್ರೀತಿ, ರಾಜರ ಆಸ್ಥಾನಗಳಲ್ಲಿ ಪ್ರತಿವಾದಿಗಳನ್ನು ಸೋಲಿಸುತ್ತಿದ್ದ ಪರಿ.
ಇದನ್ನೂ ಓದಿ: Home Stay ನಿರ್ಮಾಣ | ಸಹಾಯಧನಕ್ಕೆ ಅರ್ಜಿ
ಹೇಳಿದ ಹಾಡನ್ನು ವಚನವನ್ನು ಪುನರುಚ್ಚರಿಸದೇ ಒಂದು ತಿಂಗಳವರೆಗೆ ಹಾಡಬಲ್ಲವರಾಗಿದ್ದ ಪ್ರೌಢಿಮೆ, ವಿವಿಧ ರಾಗಗಳ ಮೂಲಕ ಹಾಡಿ ಗಮಕಿಗಳ ತಲೆರೆನ್ನ ಎಂದು ಖ್ಯಾತರಾಗಿದ್ದರು. ಕಾವ್ಯಪ್ರವೀಣರು. ಹದಿನೇಳನೆಯ ಶತಮಾನದ ಉತ್ತರಾರ್ಧದಲ್ಲಿ ಕರ್ನಾಟಕ ಲಿಂಗಾಯತ ವೀರಶೈವ ಧರ್ಮದ ಪುನರುತ್ಥಾನಕ್ಕೆ ಕಾರಣಪುರುಷರಾಗಿದ್ದಾರೆಂದರೆ ತಪ್ಪಾಗಲಾರದು ಎಂದರು.
ಆಧ್ಯಾತ್ಮ, ಸಾಹಿತ್ಯಿಕ ಸಿದ್ಧಿಯಿಂದ ಶಿಷ್ಯರ ಸಮೂಹ ಕಟ್ಟಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಮ್ಮ ಐತಿಹಾಸಿಕ ಕಾನಾಮಡುಗುವಿನ ಶರಣಾರ್ಯರಿಗೆ ಮುರುಘಾ ಶಾಂತವೀರರು ಜಂಗಮದೀಕ್ಷೆ ನೀಡಿದ್ದು ಉಲ್ಲೇಖನೀಯ. ಸಮಾಜಮುಖಿ ಕಾರ್ಯಗಳ ಮೂಲಕ ಇಂದಿಗೂ ಎಂದೆಂದಿಗೂ ಅವರು ಪ್ರಸ್ತುತರು. ಸ್ಮರಣೀಯ ಕೆಲಸ ಅವರಿಂದ ಸಾಗಿದೆ ಎಂದು ನುಡಿದರು.
ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಮುರುಘಾ ಪರಂಪರೆಯ ಮಹಾಸ್ವಾಮಿಗಳವರಲ್ಲಿ ಮುರಿಗೆಯ ಶಾಂತವೀರರ ಐತಿಹ್ಯದ ಬಗ್ಗೆ ಲಾವಣಿ, ತಾರಾವಳಿ, ಜನಪದರು ಕಟ್ಟಿರುವ ಹಾಡುಗಳಲ್ಲಿ ಹಾಗೆಯೇ ರಾಜಾಬಿಚ್ಚುಗತ್ತಿ ಭರಮಣ್ಣ ನಾಯಕರ ಇತಿಹಾಸದ ಜತೆಗೆ ಶ್ರೀಗಳವರ ಚಾರಿತ್ರಿಕ ಘಟನೆಗಳು ಬರುತ್ತವೆ.
ಶಾಂತವೀರ ಮಹಾಕರ್ತೃಗಳು ಗುರು-ವಿರಕ್ತ ಪರಂಪರೆಯಾಚೆಗಿನ ಭಕ್ತವರ್ಗ ಪರಂಪರೆಯನ್ನು ಕಟ್ಟಬಯಸಿ ಆ ಮೂಲಕ ಶ್ರೇಷ್ಠತೆಯನ್ನು ಮೆರೆದರು ಎಂದು ಹೇಳಿದರು.
ಇದನ್ನೂ ಓದಿ: ವೀರಶೈವ ಲಿಂಗಾಯತ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ | ನೌಕರರ ಸಮಾವೇಶ
ಈ ಸಂದರ್ಭದಲ್ಲಿ ವಚನಾಭಿಷೇಕದ ಸೇವಾಕರ್ತರಾದ ಗುತ್ತಿನಾಡಿನ ರೈತಮುಖಂಡರು, ವೀರಶೈವ ಸಮಾಜದ ನಿರ್ದೇಶಕರಾದ ಪ್ರಕಾಶ್ ದಂಪತಿಗಳು, ಮುರುಘಾಮಠದ ಸಾಧಕ ಸ್ವಾಮಿಗಳಾದ ಮುರುಘೇಂದ್ರ ಸ್ವಾಮಿಗಳು ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಸಂಸ್ಥೆಗಳ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.
ನಾಳೆ ಬೆಳಗ್ಗೆ 8 ಗಂಟೆಗೆ ಮುರುಘಾಪರಂಪರೆಯ ಜೀವನ ದರ್ಶನ ಕಾರ್ಯಕ್ರಮ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ನಡೆಯಲಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
