ಮುಖ್ಯ ಸುದ್ದಿ
60 ಸಾವಿರ ಗಿಡ ನೆಡಲು ಯೋಜನೆ | ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್

CHITRADURGA NEWS | 05 JUNE 2024
ಚಿತ್ರದುರ್ಗ: ಅರಣ್ಯನಾಶದಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಇದನ್ನು ತಡೆಗಟ್ಟಲು ಕಾನೂನು ಸೇವಾ ಪ್ರಾಧಿಕಾರವು ಅರಣ್ಯ ಇಲಾಖೆ ಸಹಯೋಗದಲ್ಲಿ, ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ 10 ಸಾವಿರ ಗಿಡ ನಡೆಲು ಯೋಜನೆ ರೂಪಿಸಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ತಿಳಿಸಿದರು.
ನಗರದ ಓನಕೆ ಓಬವ್ವ ವೃತ್ತದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಲಿಕ್ ಮಾಡಿ ಓದಿ: ಚಿತ್ರದುರ್ಗಕ್ಕೆ ಮುಂಗಾರು ಮಳೆ ಸಂಭ್ರಮ | ತುಂಬಿ ಹರಿದ ಹಳ್ಳಕೊಳ್ಳ


ಚಿತ್ರದುರ್ಗ ನಗರದ ಓನಕೆ ಓಬವ್ವ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ಪರಿಸರ ಜಾಥಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಚಾಲನೆ ನೀಡಿದರು.
ಇತ್ತೀಚೆಗೆ ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದಕ್ಕೆ ಕಾರಣ ಪರಿಸರ ನಾಶ, ರೆಫ್ರಿಜಿರೇಟರ್ ಬಳಕೆಯಿಂದ ಹಾನಿಕಾರ ಸಿಎಫ್‌ಸಿ ಅನಿಲ ವಾತಾವರಣ ಸೇರುತ್ತಿದೆ. ಇದರಿಂದ ಮುಂದಿನ ಪೀಳಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಪ್ರತಿ ಒಬ್ಬರಿಗೂ ಒಂದು ಗಿಡ ಎಂಬ ಘೋಷ ವಾಕ್ಯದೊಂದಿಗೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಗಿಡ ನೆಟ್ಟು ಬೆಳಸಬೇಕು ಎಂದರು.
ಕ್ಲಿಕ್ ಮಾಡಿ ಓದಿ: ಚುನಾವಣೆ ಫಲಿತಾಂಶ ಘೋಷಣೆಯಲ್ಲಿ ದೇಶದಲ್ಲಿಯೇ ಚಿತ್ರದುರ್ಗ ಮೊದಲು

ಮುಂದಿನ ವರ್ಷ ಚಿತ್ರದುರ್ಗ ಜಿಲ್ಲೆಯಲ್ಲೂ ಉಷ್ಣಾಂಶ 42 ಡಿಗ್ರಿ ಸೆಲ್ಸಿಯಸ್‌ನಿಂದ 35ಕ್ಕೆ ಇಳಿಯಲಿ. ಜಿಲ್ಲೆಯಾದ್ಯಂತ ಮುಂದಿನ ಎರಡು ತಿಂಗಳು ಕಾಲ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ. ಮಾಧ್ಯಮಗಳು ಕೂಡ ಸಾರ್ವಜನಿಕರಲ್ಲಿ ಪರಿಸರ ಹಾನಿಯ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಪರಿಸರ ರಕ್ಷಣೆ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕೋರಿದರು.
ಪರಿಸರ ಅಧಿಕಾರಿ ಈ. ಪ್ರಕಾಶ್ ಮಾತನಾಡಿ, ‘ಭೂ ಮರುಸ್ಥಾಪನೆ, ಮರುಭೂಮಿಕರಣ ಹಾಗೂ ಬರ ತಡೆಯುವಿಕೆ’ ಘೋಷವಾಕ್ಯದೊಂದಿಗೆ ಈ ಬಾರಿ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕ್ಲಿಕ್ ಮಾಡಿ ಓದಿ: ಗೋವಿಂದ ಕಾರಜೋಳ ಕೊರಳಿಗೆ ವಿಜಯಮಾಲೆ | ಪೈಪೋಟಿಯಿಲ್ಲದೆ ಗೆದ್ದು ಬೀಗಿದ ಬಿಜೆಪಿ
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಗರಸಭೆ ಆಯುಕ್ತೆ ಎಂ.ರೇಣುಕಾ, ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ ನಾಯಕ್, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ನಾಶಿರುದ್ದೀನ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯುರು ಜಾಥದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರು ಪರಿಸರ ರಕ್ಷಣೆಯ ಘೋಷಣೆಗಳನ್ನು ಕೂಗುವುದರೊಂದಿಗೆ ನಗರ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
