CHITRADURGA NEWS | 16 JULY 2025
ಚಿತ್ರದುರ್ಗ: ಬೀದಿ ನಾಯಿಗಳಿಗೆ ಬಿರಿಯಾನಿ ತಿನಿಸಲು ಹೊರಟಿರುವ ರಾಜ್ಯ ಸರ್ಕಾರ, ಸರ್ಕಾರಿ ಶಾಲೆ ಮಕ್ಕಳಿಗೆ ಶೂ ವಿತರಿಸದಿರುವುದನ್ನು ವಿರೋಧಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಶ್ವಾನಗಳೊಂದಿಗೆ ವಿನೂತನವಾಗಿ ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ನಗರದ ಪ್ರವಾಸಿ ಮಂದಿರದಿಂದ ಬರಿಗಾಲಿನಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಶಿಕ್ಷಣ ಸಚಿವರ ವಿರುದ್ದ ಧಿಕ್ಕಾರ ಕೂಗಿದರು.
ಸರ್ಕಾರಿ ಶಾಲೆಗಳು ಪ್ರಾರಂಭವಾಗಿ ಎರಡು ತಿಂಗಳಾಗಿದ್ದರೂ, ಇನ್ನು ಮಕ್ಕಳಿಗೆ ಶೂ ವಿತರಿಸಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಪಾದರಕ್ಷೆ ಧರಿಸದೆ ಬರಿಗಾಲಿನಲ್ಲಿ ಓಡಾಡಬೇಕು. ಸರ್ಕಾರಿ ವಾಹನ ಬಳಸಬಾರದು ಎಂದು ಒತ್ತಾಯಿಸಿದರು.
ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಡಿ. ಗ್ರೂಪ್ ನೌಕರರಿಲ್ಲ. ಶಿಕ್ಷಕರ ಕೊರತೆಯಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದರಿಂದ ಸರ್ಕಾರದ ಯೋಜನೆಗಳೆಲ್ಲಾ ಹಳ್ಳ ಹಿಡಿಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಒಂದು ನಾಯಿಗೆ 27 ರೂ.ಗಳನ್ನು ವೆಚ್ಚ ಮಾಡುತ್ತಿರುವುದು ಯಾವ ನ್ಯಾಯ?
ಇದನ್ನೂ ಓದಿ: ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ನೀರು ಹರಿಸಲು ಅನುಮತಿ | 4.21 TMC ನೀರೆತ್ತಲು ಅವಕಾಶ
ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಕ್ಕಳಿಗೆ ಶೂ, ಟೈ, ಬೆಲ್ಟ್, ಸಮವಸ್ತ್ರಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಹೈಟೆಕ್ ಶಾಲೆಗಳನ್ನು ಪರಿವರ್ತಿಸಬೇಕು. ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳ ಎದುರು ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ರಾಜ್ಯ ಸಮಿತಿ ಸದಸ್ಯ ನಿಸಾರ್ ಅಹಮದ್, ಉಪಾಧ್ಯಕ್ಷರುಗಳಾದ ರತ್ನಮ್ಮ, ಮುಜಾಹಿದ್, ಜಿಲ್ಲಾ ಸಂಚಾಲಕ ನಾಗೇಶ್, ಅಖಿಲೇಶ್, ಶಶಿ, ಜಗದೀಶ್ ಸಿ. ವಿಜಯ್‍ಬಾಬು, ಹರೀಶ್‍ಕುಮಾರ್ ಪಿ.ಆರ್. ಅವಿನಾಶ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
