CHITRADURGA NEWS | 03 SEPTEMBER 2025
ಹಿರಿಯೂರು: ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ದಾವಣಗೆರೆಯ ಐಕಾಂತಿಕ ಸಮುದಾಯದ ಸಹಯೋಗದಲ್ಲಿ ಸಹಜ ಕೃಷಿ ಆನಂದಮಯ ಜೀವನಕ್ಕೆ ದಾರಿ ಕುರಿತು ಮೂರು ದಿನಗಳ ರೈತರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಡಿವೈಡರ್ ಗೆ ಬೈಕ್ ಡಿಕ್ಕಿ | ಸವಾರ ಸ್ಥಳದಲ್ಲೇ ಸಾವು
ತರಬೇತಿಯಲ್ಲಿ ದಾವಣಗೆರೆಯ ಐಕಾಂತಿಕ ತೋಟದ ರಾಘವ ಮಾತನಾಡಿ, ಕುಟುಂಬದ ಪ್ರಮುಖ ಅಗತ್ಯಗಳನ್ನು ರೈತರು ತಮ್ಮ ಜಮೀನಿನಿಂದಲೇ ಪೂರೈಸಿಕೊಳ್ಳುವಂತಹ ವ್ಯವಸ್ಥೆ ಮಾಡಿಕೊಂಡಲ್ಲಿ ತಕ್ಕಮಟ್ಟಿನ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಮ್ಮ ಭೂಮಿ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುವಂತಹ ವಾತಾವರಣ ನಿರ್ಮಿಸಿಕೊಳ್ಳಬೇಕು. ಸ್ವಾವಲಂಬನೆಯೇ ನಿಜವಾದ ಸ್ವಾತಂತ್ರ್ಯ ಎಂಬ ಅರಿವು ರೈತರಲ್ಲಿ ಇರಬೇಕು. ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿದೆ.
ಕುಟುಂಬದ ಆರ್ಥಿಕ ಸ್ಥಿತಿಯನ್ನು ಸಮತೋಲನ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಪ್ರಕೃತಿ ಜೊತೆ ಹೊಂದಿಕೊಂಡು ಜೀವನ ಮಾಡುವುದೊಂದೇ ನಮಗೆ ಉಳಿದಿರುವ ಏಕೈಕ ಮಾರ್ಗ ಎಂದು ಹೇಳಿದರು.
ಇದನ್ನೂ ಓದಿ: 3 ಅಂಗಡಿಗಳಲ್ಲಿ ಸರಣಿ ಕಳ್ಳತನ | ರೂ.1 ಲಕ್ಷ 52 ಸಾವಿರ ಕಳವು
ಪ್ರಕೃತಿಯ ಎದುರು ಡೈನೊಸಾರ್‌ನಂತಹ ದೈತ್ಯ ಪ್ರಾಣಿಗಳೇ ಅಳಿದು ಹೋಗಿರುವಾಗ ಮನುಷ್ಯರು ಲೆಕ್ಕವೇ ಅಲ್ಲ. ಮನುಷ್ಯ ಬದುಕಲು ಬೇಕಿರುವ ಗಾಳಿ, ನೀರು ಮತ್ತು ಎಲ್ಲ ತರಹದ ನೈಸರ್ಗಿಕ ಸಂಪನ್ಮೂಲಗಳು ಭೂಮಿಯ ಮೇಲೆಯೇ ಲಭ್ಯವಿರುವಾಗ, ಅವನ್ನೆಲ್ಲ ಹಾಳು ಮಾಡಿ ಚಂದ್ರಲೋಕ, ಮಂಗಳಲೋಕದ ಭ್ರಮೆ ಹುಟ್ಟಿಸುವುದು ಸರಿಯಲ್ಲ ಎಂದು ತಿಳಿಸಿದರು.
ರೈತರು ವಿಷಮುಕ್ತ ಆಹಾರ ಬೆಳೆಯಬೇಕು. ಸಹಜ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತ ಸಿಗುವ ಮಣ್ಣು, ಕಲ್ಲು, ಮರಮುಟ್ಟು ಬಳಸಿಕೊಂಡು ನಾವೇ ಸ್ವಂತ ಸೂರು ನಿರ್ಮಿಸಿಕೊಳ್ಳಬೇಕು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಬಳಸಬೇಕು.
ನೀರು ಮತ್ತು ವಾಯುವನ್ನು ಮಲಿನಗೊಳ್ಳಲು ಬಿಡಬಾರದು. ಪಾತ್ರೆ, ಬಟ್ಟೆ ತೊಳೆಯಲು ಹಾಗೂ ಸ್ನಾನಕ್ಕೆ ಅಂಟುವಾಳಕಾಯಿ, ಸೀಗೆಕಾಯಿ ಅತ್ಯುತ್ತಮ. ಅವನ್ನೆಲ್ಲ ಅಭ್ಯಾಸ ಮಾಡಿಕೊಂಡಲ್ಲಿ ರೈತರು ಸ್ವಾ-ವಲಂಬಿಗಳಾಗಿ ಬದುಕಲುಸಾಧ್ಯ ಎಂದು ರಾಘವ ಹೇಳಿದರು.
ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅಭಿಷೇಕ್, ಶೇ.100ರಷ್ಟು ಶುದ್ಧ ಹತ್ತಿ, ರೇಷ್ಮೆ ನೂಲಿನಿಂದ ತಯಾರಿಸಿದ ಉಡುಪು, ಬರಿಗಾಲಿನಲ್ಲಿ ನಡೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಪಾಂಡುರಂಗ, ಬೆಳೆಯಲ್ಲಿನ ವೈವಿಧ್ಯತೆ ಮತ್ತು ಸಜೀವ ಮಣ್ಣು ಕುರಿತು ಜಬೀವುಲ್ಲಾ, ಸಹಜ ಕೃಷಿಯ ತತ್ವಗಳ ಬಗ್ಗೆ ವೀರೇಶ್ ಉಪನ್ಯಾಸ ನೀಡಿದರು.
ಇದನ್ನೂ ಓದಿ: ಚಳ್ಳಕೆರೆ ಪೊಲೀಸರ ಕಾರ್ಯಾಚರಣೆ | 97 ಲಕ್ಷ ಎಗರಿಸಿದ್ದ ಕಾರು ಚಾಲಕನ ಬಂಧನ
ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಗಾಣದ ಎಣ್ಣೆ, ವಿಷಮುಕ್ತವಾಗಿ ಬೆಳೆದ ಕಂದು ಬಣ್ಣದ ಅಕ್ಕಿ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಸಾತ್ವಿಕ ಆಹಾರ, ರಾಗಿ ಅಂಬಲಿ ಮತ್ತು ಕಷಾಯ ಉಣಬಡಿಸಿದ್ದು ವಿಶೇಷವಾಗಿತ್ತು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

