ಮುಖ್ಯ ಸುದ್ದಿ
ದೇವರ ಎತ್ತುಗಳಿಗೆ 9 ಟನ್ ಮೇವು ವಿತರಿಸಿದ ಶಾಸಕ ಟಿ.ರಘುಮೂರ್ತಿ | ಶಾಶ್ವತ ಶೆಡ್ ನಿರ್ಮಿಸಲು ಸೂಚನೆ

CHITRADURGA NEWS | 20 JANUARY 2024
ಚಿತ್ರದುರ್ಗ (CHITRADURGA): ಬರದ ಹಿನ್ನೆಲೆಯಲ್ಲಿ ದೇವರ ಎತ್ತುಗಳಿಗೆ ಮೇವಿನ ಸಮಸ್ಯೆ ಆಗದಂತೆ ಎಚ್ಚರವಹಿಸಿರುವ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಕ್ಷೇತ್ರ ವ್ಯಾಪ್ತಿಯಲ್ಲಿ ₹ 5 ಲಕ್ಷ ಮೌಲ್ಯದ 9 ಟನ್ ಮೇವು ವಿತರಿಸಿದರು.
ಇದನ್ನೂ ಓದಿ: ಕಾರಿನ ಟೈಯರ್ ಬ್ಲಾಸ್ಟ್ | ಅಜ್ಜಿಯ ಶವ ಸಂಸ್ಕಾರಕ್ಕೆ ಹೋಗುತ್ತಿದ್ದ ಮೂವರು ಮೃತ
ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮ ಹಾಗೂ ಚಳ್ಳಕೆರೆ ನಗರದ ಅಜ್ಜನ ದೇವಸ್ಥಾನದ ಹತ್ತಿರ ಇರುವ ದೇವರ ಎತ್ತುಗಳಿಗೆ ಮೇವು ವಿತರಿಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ‘ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಚರಿತ್ರೆ ಕಟ್ಟಿಕೊಡುವ ಮ್ಯಾಸಬೇಡರ ದೇವರ ದನಗಳ ರಕ್ಷಣೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬದ್ಧವಾಗಿದೆ. ಜಿಲ್ಲೆಯ ದೇವರ ದನಗಳ ಮೇವು ಪೂರೈಕೆಗೆ ಸರ್ಕಾರ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಿದೆ’ ಎಂದು ತಿಳಿಸಿದರು.

ಇದನ್ನೂ ಓದಿ: ಕಾರು-ಟ್ಯಾಂಕರ್ ನಡುವೆ ಡಿಕ್ಕಿ | ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವು
‘ಜಗಲೂರಜ್ಜನ ದೇವಸ್ಥಾನದ ಬಳಿ ಹಾದು ಹೋಗಿರುವ ಹೊಸ ಬೈಪಾಸ್ ರಸ್ತೆ ಹೆದ್ದಾರಿ ಪಕ್ಕದ ಸರ್ಕಾರಿ ಜಾಗ ಪರಿಶೀಲನೆ ನಡೆಸಬೇಕು. ಅಲ್ಲದೇ ಆ ದೇವರ ದನಗಳ ಮೇವು–ನೀರು ಪೂರೈಕೆ ಹಾಗೂ ಅವುಗಳ ಸಂರಕ್ಷಣೆಗೆ ಶಾಶ್ವತವಾದ ಶೆಡ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಹಶೀಲ್ದಾರ್ ರೇಹಾನ್‍ಪಾಷ ಅವರಿಗೆ ಸೂಚನೆ ನೀಡಿದರು.

‘ಬರದ ಹಿನ್ನೆಲೆಯಲ್ಲಿ ಕಸಬಾ ಹೋಬಳಿ ದನಗಳಿಗೆ ಮೇವು, ನೀರಿನ ಕೊರತೆ ಉಂಟಾಗಿದೆ. ಆದ್ದರಿಂದ ಜಗಲೂರಜ್ಜನ ದೇವಸ್ಥಾನದ ಹಿಂಭಾಗದ ಸ್ಥಳದಲ್ಲಿ ವಿದ್ಯುತ್ ಸೌಲಭ್ಯ ಒದಗಿಸಿ ದನಗಳಿಗೆ ಮೇವು ಸಂಗ್ರಹ ಹಾಗೂ ನೀರಿನ ತೊಟ್ಟಿ ನಿರ್ಮಿಸಿದ ನಂತರ ಗೋ ಶಾಲೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ರೇವಣ್ಣ ತಿಳಿಸಿದರು.
ಇದನ್ನೂ ಓದಿ: ಮಠದ ಆವರಣದಲ್ಲಿ ಕರಡಿಯ ಸಂಚಾರ
ಚಳ್ಳಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ, ಕಂದಾಯ ಅಧಿಕಾರಿ ಪಿ.ಎಲ್.ಲಿಂಗೇಗೌಡ, ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ , ಪಶುವೈದ್ಯಾಧಿಕಾರಿ ಇಂದ್ರಾಬಾಯಿ, ಗ್ರಾಮದ ಮುಖಂಡರಾದ ರಾಜಣ್ಣ, ಕಿಲಾರಿ ಓಬಯ್ಯ, ಪ್ರಹ್ಲಾದ್, ಅಣ್ಣಪ್ಪದೊರೆ, ನಾಗರಾಜ್, ಪಾಲಯ್ಯ, ರಂಗಸ್ವಾಮಿ, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
