ಚಿತ್ರದುರ್ಗ ನ್ಯೂಸ್.ಕಾಂ
ಸಕಾಲಕ್ಕೆ ಮಳೆ ಬಾರದ ಕಾರಣ ಈ ಬಾರಿ ರಾಗಿ ಬೆಳೆ ಸಂಪೂರ್ಣ ಕುಂಠಿತವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಪ್ರತಿ ಕ್ವಿಂಟಾಲ್‌ಗೆ ₹ 3,846 ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯಲ್ಲಿ ಕಳೆದ ಬಾರಿ ಉತ್ತಮ ಮಳೆಯಾದ ಕಾರಣ 74,135 ಟನ್ ರಾಗಿ ಉತ್ಪಾದನೆಯಾಗಿತ್ತು, ಹೊಸದುರ್ಗ ತಾಲ್ಲೂಕು ಒಂದರಲ್ಲೇ ಬರೋಬ್ಬರಿ 47,540 ಟನ್ ರಾಗಿ ಬೆಳೆಯಲಾಗಿತ್ತು. ಜತೆಗೆ ಬೆಂಬಲ ಬೆಲೆ ಯೋಜನೆಯಡಿ ಕಳೆದ ವರ್ಷ 2.17 ಲಕ್ಷ ಕ್ವಿಂಟಲ್ ರಾಗಿ ಖರೀದಿಸಲಾಗಿತ್ತು.
ಇದನ್ನೂ ಓದಿ: ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಾಟ; ರೋಗಿಗಳ ಪರದಾಟ
ಈ ಬಾರಿ ಮಳೆಯ ಕೊರತೆಯಿಂದಾಗಿ ಕೇವಲ 18,285 ಟನ್ ರಾಗಿ ಉತ್ಪಾದನೆಯಾಗಿರುವ ನಿರೀಕ್ಷೆ ಇದೆ ಎನ್ನುತ್ತಾರೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್.
ಪ್ರಸಕ್ತ ಸಾಲಿಗೆ ರಾಗಿ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ₹ 3,846 ಬೆಂಬಲ ಬೆಲೆ ಘೋಷಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಟ 20 ಕ್ವಿಂಟಲ್ ರಾಗಿ ಖರೀದಿಸಲು ಅವಕಾಶವಿದೆ. ಬೆಂಬಲ ಬೆಲೆಯಡಿ ರಾಗಿ ಖರೀದಿಗಾಗಿ ರೈತರ ನೋಂದಣಿ ಕಾರ್ಯ ಶೀಘ್ರ ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಕಳೆದ ಬಾರಿ 4 ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ರಾಗಿ ಆವಕ ಹೆಚ್ಚಾದ ಕಾರಣ ಖರೀದಿ ಕೇಂದ್ರಗಳಲ್ಲಿ ಗೊಂದಲ ಹಾಗೂ ಜನಜಂಗುಳಿಗೆ ಕಾರಣವಾಗಿತ್ತು. ಈ ಬಾರಿ ಇಂತಹ ಸಮಸ್ಯೆಗಳಿಗೆ ಕಾರಣವಾಗದಂತೆ ಖರೀದಿ ಕೇಂದ್ರಗಳ ಸಂಖ್ಯೆಯನ್ನು 4 ರಿಂದ 6 ಕ್ಕೆ ಹೆಚ್ಚಿಸಲಾಗಿದೆ. ಜತೆಗೆ ಬಯೋಮೆಟ್ರಿಕ್ ಆಧಾರದಲ್ಲಿ ರೈತರ ನೋಂದಣಿ ಮಾಡುವುದರಿಂದ ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಶೀಘ್ರವೇ ರೈತರ ನೋಂದಣಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ರಾಗಿ ಮಾರಾಟ ಮಾಡಿದ 484 ರೈತರಿಗೆ ಹಣ ಪಾವತಿ ಬಾಕಿ ಇದೆ, ಕೂಡಲೇ ಈ ಎಲ್ಲ ರೈತರಿಗೆ ಹಣ ಪಾವತಿಯಾಗಬೇಕು. ಕಳೆದ ಬಾರಿ ಅಕ್ರಮವಾಗಿ ರೈತರಲ್ಲದವರು, ರಾಗಿ ಬೆಳೆಯದವರೂ ಕೂಡ ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಿದ್ದರು, ಇದರಿಂದಾಗಿ ನಿಜವಾದ ರೈತರಿಗೆ ಅನ್ಯಾಯವಾಗಿತ್ತು. ಈ ಬಾರಿ ಇಂತಹ ಪ್ರಮಾದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ರೈತ ಮುಖಂಡರಾದ ರಘು, ಸತೀಶ್, ವೇದಮೂರ್ತಿ ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದ್ದಾರೆ.
ಇದನ್ನೂ ಓದಿ: ನ್ಯಾಯ ಪೀಠದ ಮುಂದೆ ದೇವರು; ಜಾರಿಯಾಯ್ತು ಸರ್ಚ್ ವಾರೆಂಟ್
ಕಳೆದ ಬಾರಿ ಸಮರ್ಪಕವಾಗಿ ಗುಣಮಟ್ಟ ಪರಿಶೀಲಿಸದೆ, ಧೂಳು, ಕಸದಿಂದ ಕೂಡಿದ ರಾಗಿಯನ್ನು ಕೂಡ ಖರೀದಿಸಲಾಗಿತ್ತು. ಈ ರೀತಿ ಖರೀದಿಸಿದ ರಾಗಿ ಪಡಿತರ ವ್ಯವಸ್ಥೆ ಮೂಲಕ ಪುನಃ ಜನರಿಗೇ ತಲುಪುವುದರಿಂದ, ಕಳಪೆ ಗುಣಮಟ್ಟದ ರಾಗಿಯನ್ನು ಜನರಿಗೆ ಸರ್ಕಾರವೇ ಪೂರೈಸಿದಂತೆ ಆಗುತ್ತದೆ. ಹೀಗಾಗಿ ಗುಣಮಟ್ಟವನ್ನು ಸರಿಯಾಗಿ ಪರಿಶೀಲಿಸಿಯೇ ಖರೀದಿಸುವಂತೆ ಗ್ರೇಡರ್ಸ್ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ರೈತರ ನೋದಣಿ ಹಾಗೂ ಖರೀದಿ ಸಂದರ್ಭದಲ್ಲಿ ರೈತರು ಹಗಲು ರಾತ್ರಿ ನಿಂತು ಕಾಯುವ ಸ್ಥಿತಿ ಬರಬಾರದು ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ‘ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ. 484 ರೈತರ ಬಾಕಿ ಮೊತ್ತ ಒಂದು ವಾರದ ಒಳಗಾಗಿ ಪಾವತಿಯಾಗಲಿದೆ. ಈ ಬಾರಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಗೊಂದಲವಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಗುಣಮಟ್ಟದ ಖರೀದಿಗೆ ಸೂಕ್ತ ಎಚ್ಚರಿಕೆ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
