CHITRADURGA NEWS | 05 APRIL 2026
ಚಿತ್ರದುರ್ಗ: ಸಮಾಜದಲ್ಲಿ ಪ್ರತಿನಿತ್ಯ ನಿರುದ್ಯೋಗ, ಹಸಿವು, ಬಡತನದಿಂದ ಅಸಂಖ್ಯಾತರು ನರಳುತ್ತಿದ್ದಾರೆ. ಅದ್ಧೂರಿ ವಿವಾಹಗಳಿಂದ ಸಾಕಷ್ಟು ತಂದೆ-ತಾಯಿಯರು ಸಾಲಗಾರರಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಇದರ ನಡುವೆ ಮುರುಘಾಮಠವು 36 ವರ್ಷಗಳಿಂದ ನಿರಂತರ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ಲಿಖಿತಾ ಆತ್ಮಹತ್ಯೆ ತನಿಖೆ ನಡೆಸಿ ನ್ಯಾಯ ಕೊಡಿಸಲು ಎಬಿವಿಪಿ ಒತ್ತಾಯ
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಭಾನುವಾರ ನಡೆದ ಮೂವತ್ತಾರನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ 21 ಜೋಡಿ ವಿವಾಹಗಳನ್ನು ನೆರವೇರಿಸಿ ಮಾತನಾಡಿದ ಶ್ರೀಗಳು,
ಶ್ರೀಮಠವು ಹಲವಾರು ಅಂತರ್ಜಾತಿ ವಿವಾಹಗಳಿಗೆ ಸಾಕ್ಷಿಯಾಗಿದೆ. ಇಂದು ನಾಲ್ಕು ಜೋಡಿಗಳು ಅಂತರ್ಜಾತಿ ವಿವಾಹ ಆಗುತ್ತಿದ್ದಾರೆ. ಅವರು ಕೂಡ ಮುಂದೆ ತಮ್ಮ ಮಕ್ಕಳಿಗೆ ಬಂಧುಗಳಿಗೆ ಅದ್ಧೂರಿ ವಿವಾಹಗಳಿಗೆ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಸರಳ ಸಾಮೂಹಿಕ ವಿವಾಹಗಳಿಗೆ ಪ್ರೇರಣೆಯಾಗಬೇಕೆಂದರು.
ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಾಗತಿಕವಾಗಿ ಇಂದು ಜಗತ್ತು ತಲ್ಲಣಿಸುತ್ತಿದೆ. ಎಲ್ಲೋ ನಡೆಯುವ ಯುದ್ಧದ ಬಿಸಿ ಭಾರತಕ್ಕೂ ತಟ್ಟಿದೆ. ಅದೇರೀತಿ ಸಂಸಾರದ ಜೀವನದಲ್ಲಿ ಗಂಡ-ಹೆಂಡತಿಯರ ನಡುವಿನ ಜಗಳ ಇಡೀ ಸಂಸಾರವನ್ನು ಅಷ್ಟೇ ಅಲ್ಲ ತಮ್ಮ ತಮ್ಮ ಬಂಧುಗಳ ನಡುವಿನ ಸಂಬಂಧಕ್ಕೂ ಆತಂಕವನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ
ಸತಿ-ಪತಿಗಳ ಮಾತು ಮುತ್ತಿನಂತೆ ಇರಬೇಕು. ಬಸವಣ್ಣನವರು ಹೇಳಿದ ಹಾಗೆ ಅಯ್ಯಾ ಎಂದರೆ ಸ್ವರ್ಗ. ನಮ್ಮ ಮಾತಿನಲ್ಲಿ ಪ್ರೀತಿ ಇರಬೇಕು. ವ್ಯವಹಾರ ಇರಬಾರದು. ಈ ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು. ಸತಿ-ಪತಿಗಳು ಪರಸ್ಪರ ಗೌರವದಿಂದ ಬಾಳಬೇಕು. ಹಾಗಿದ್ದಾಗ ಜೀವನದ ಸಾಕ್ಷಾತ್ಕಾರವಾಗುತ್ತದೆ. ತಮ್ಮ ಕುಟುಂಬವನ್ನು, ಜಗತ್ತನ್ನು ಪ್ರೀತಿಸುವಂತವರಾಗಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಡಾ.ಕಾಂತರಾಜ್ ಮಾತನಾಡಿ, ಶ್ರೀಮಠವು ನಿರಂತರವಾಗಿ 36 ವರ್ಷಗಳಿಂದ 20 ಸಾವಿರ ದಂಪತಿಗಳ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿರುವಂಥ ಮಠವಾಗಿದೆ. ದಾಂಪತ್ಯ ಜೀವನ ಎರಡು ಮನಸ್ಸುಗಳ ನಡುವೆ ನಡೆಯುವಂತದ್ದು, ಎರಡು ಕುಟುಂಬಗಳನ್ನು ಕೂಡಿಸುವಂತದ್ದು.
ಇಂದು ಸಾಕಷ್ಟು ಸಂಸಾರಗಳು ದೂರ ದೂರ ಆಗುತ್ತಿವೆ. ಹಾಗಾಗಿ ಸತಿಪತಿಗಳು ತಮ್ಮೊಳಗಿನ ಅಹಂಕಾರವನ್ನು ಕಳೆದು ಪ್ರೀತಿ, ವಿಶ್ವಾಸದ ಮೂಲಕ ಜೀವನ ನಡೆಸುವಂತಾಗಬೇಕು. ಇಬ್ಬರ ನಡುವೆ ಪರಸ್ಪರ ಸಹಕಾರ ಇರಬೇಕು. ಆಗಿದ್ದಾಗ ಮಾತ್ರ ಸಂಸಾರದಲ್ಲಿ ಸುಖ ಸಂತೋಷವನ್ನು ಕಾಣಲು ಸಾಧ್ಯ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇದನ್ನೂ ಓದಿ: ಚಳ್ಳಕೆರೆ | ಏ.8ರಂದು ರಾಣಿಕೆರೆ ಒತ್ತುವರಿ ತೆರವು ಕಾರ್ಯಾಚರಣೆ
ಕಾರ್ಯಕ್ರಮದಲ್ಲಿ ಶ್ರಿ ಬಸವಮುರುಘೇಂದ್ರ ಸ್ವಾಮೀಜಿ, ಪೈಲ್ವಾನ್ ತಿಪ್ಪೇಸ್ವಾಮಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಕವಿ ಗಂಗಾಧರಪ್ಪ, ಸಮಾಜಸೇವಕ ಲಿಂಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
