
CHITRADURGA NEWS | 14 JULY 2024
ಚಿತ್ರದುರ್ಗ: ಪತ್ರಿಕಾ ರಂಗ ಇಂದು ಮಾಧ್ಯಮ ರಂಗವಾಗಿ ಬದಲಾಗಿದೆ. ಪತ್ರಿಕೋದ್ಯಮ ಅಚ್ಚುಕಲ್ಲಿನಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್(AI)ವರೆಗೆ ಬಂದಿದೆ ಎಂದು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ (Ravi Hegde) ಹೇಳಿದರು.
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೆ ಪತ್ರಿಕೆಗಳು ಮಾತ್ರ ಇದ್ದವು. ಈಗ ಟಿವಿ, ಸೋಷಿಯಲ್ ಮೀಡಿಯಾಗಳಾದ ಯೂಟ್ಯೂಬ್, ಡಿಜಿಟಲ್ ವೇದಿಕೆ, ವೆಬ್‍ಸೈಟ್ ಸೇರಿದಂತೆ ಅನೇಕ ಮಾಧ್ಯಮಗಳು ನಮ್ಮ ಮುಂದಿವೆ ಎಂದರು.
ಇದನ್ನೂ ಓದಿ: ಬದುಕು ಬೋರಾದಾಗ ರಿಫ್ರೆಶ್ ಆಗಲು ಜೋಗಿಮಟ್ಟಿಗೆ ಬನ್ನಿ | ಇಲ್ಲಿನ ಹಸಿರು, ಗಾಳಿ, ನೋಟ ನಿಮ್ಮನ್ನು ರೀಚಾರ್ಜ್ ಮಾಡುತ್ತೆ
ಕಾಲ ಬದಲಾಗಿದೆ. ಕನ್ನಡ ಪತ್ರಿಕೋದ್ಯಮ ಮಂಗಳೂರು ಸಮಾಚಾರದಿಂದ ಆರಂಭವಾಗಿ ಅದು ಬಳ್ಳಾರಿಗೆ ಬಂದು ಕನ್ನಡ ಸಮಾಚಾರವಾಗಿ ಅಚ್ಚುಕಲ್ಲಿನಲ್ಲಿ ಮುದ್ರಣವಾಗಿ ಇಂದು ಎಐ ವರೆಗೆ ತಲುಪಿದೆ. ಇಂದು ಪತ್ರಿಕಾ ದಿನಾಚರಣೆ ಎನ್ನುವುದಕ್ಕಿಂತ ಮಾಧ್ಯಮ ದಿನಾಚರಣೆ ಎನ್ನಬಹುದು ಎಂದು ಅಭಿಪ್ರಾಯಪಟ್ಟರು.
ಇದು ಪತ್ರಕರ್ತ ವೃತ್ತಿ ಬಾಂಧವರು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಾಗಿದೆ. ಹೊರಗಿನವರು, ಬೇರೆಯವರು ಬಂದು ನಮ್ಮನ್ನು ತಿದ್ದಲು ಅವಕಾಶ ಕೊಡಬಾರದು ಎಂದರು.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ಅಚ್ಚರಿ ಬಾಂಡ್ರಾವಿ ಕಮರದ ಕಾಡು | ಕಾಯಕಕ್ಕೆ ಸಂದ ಅತೀ ದೊಡ್ಡ ಗೌರವ ಕಾಡಿಗೆ ವನಪಾಲಕನ ಹೆಸರೇ ನಾಮಕರಣ
ನಮ್ಮ ನಡುವೆಯೇ ಮಾಧ್ಯಮ ಕ್ಷೇತ್ರಕ್ಕೆ ಕಳಂಕ ತರುವ ವ್ಯಕ್ತಿಗಳು ಸೇರಿಕೊಂಡಿದ್ದಾರೆ. ಅವರನ್ನು ಓಡಿಸಲು ಬೇರೆಯವರು ಬರಬೇಕಾಗಿಲ್ಲ. ಅಂಥವರನ್ನು ನಾವೇ ಹೊರಗೆ ಹಾಕಬೇಕು. ಅವರನ್ನು ಎಕ್ಸ್‍ಪೋಸ್ ಮಾಡಬೇಕು. ಕನ್ನಡಪ್ರಭ ಸಂಸ್ಥೆಯಲ್ಲೂ ಅಂತಹ ಕಿಡಿಗೇಡಿಗಳಿದ್ದರೂ ನಾವೇ ಹೊರಗೆ ಕಾಕಿ ಅವರ ವಿರುದ್ಧ ಸುದ್ದಿ ಮಾಡಿದ್ದೇವೆ ಎಂದು ಹೇಳಿದರು.
ಸಮಾಜದ ಒಳಿತಿನ ಉದ್ದೇಶದಿಂದ ಪತ್ರಿಕೋದ್ಯಮ ಆರಂಭವಾಯಿತು. ಆದರೆ, ಇಂದು ಆ ಉದ್ದೇಶ ನಮ್ಮ ಮುಂದಿದೆಯೇ ಎನ್ನುವುದನ್ನು ಆಲೋಚನೆ ಮಾಡಬೇಕಿದೆ.
ಇದನ್ನೂ ಓದಿ: ಬಯಲು ಸೀಮೆಯ ಊಟಿ | ಸ್ವರ್ಗವ ನಾಚಿಸುವ ಜೋಗಿಮಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು..!
ಕನ್ನಡ ಪತ್ರಿಕೋದ್ಯಮದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಒಂದು ಮತಪ್ರಚಾರಕ್ಕೆ ಆರಂಭವಾಗಿದ್ದು, ಆನಂತರ ಸಮಾಜದ ಒಳಿತಿಗಾಗಿ ಈ ವೃತ್ತಿ ಆಗಿದೆ. ಆದರೆ, ಸಮಾಜದ ಒಳಿತಿನ ಉದ್ದೇಶ ಇಂದು ವ್ಯಾಪಾರ ಆಗಿದೆ.
ಇಂದಿನ ಪರಿಸ್ಥಿತಿಯಲ್ಲಿ ಉಚಿತವಾಗಿ ಪತ್ರಿಕೆ ನಡೆಸಲು ಆಗುವುದಿಲ್ಲ. ಗಟ್ಟಿಯಾಗಿರುವ ಸಂಸ್ಥೆ ಸರ್ಕಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬಹುದು. ಗಟ್ಟಿ ಇಲ್ಲದಿದ್ದರೆ ಆ ಶಕ್ತಿ ಬರುವುದಿಲ್ಲ ಎಂದು ಹೇಳಿದರು.
ಮಾಧ್ಯಮ ಭ್ರಷ್ಟಾಚಾರದ ಟೂಲ್ ಆಗಿದೆ:
ಇಂದು ಒಂದೊಂದು ಪತ್ರಿಕೆ, ಮಾಧ್ಯಮ ಒಂದೊಂದು ಸಿದ್ಧಾಂತದ ಕಡೆಗೆ ಇದೆ ಎನ್ನುವ ವಾದವಿದೆ. ಅದರಲ್ಲಿ ತಪ್ಪೇನಿಲ್ಲ. ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆ. ಆದರೆ, ದುರಂತ ಇಂದು ಮಾಧ್ಯಮ ಭ್ರಷ್ಟಾಚಾರದ ಟೂಲ್ ಆಗಿದೆ ಎಂದರು.
ಇದನ್ನೂ ಓದಿ: ಬಾಲ ರಾಮನಿಗೆ ಭಾವ ತುಂಬಿದ ಭಾವನಾ | ಚಿತ್ರದುರ್ಗದ ಯುವತಿಯ ಕುಂಚದಲ್ಲಿ ಅರಳಿದ ಸುಂದರ ಕಲಾಕೃತಿ
ಇಂದು ಮಾಧ್ಯಮಗಳಲ್ಲಿ ಯಾವ ಸುದ್ದಿ ಪ್ರಸಾರವಾಗುತ್ತಿದೆ ಎನ್ನುವ ಬಗ್ಗೆ ನಮ್ಮ ಕಾಳಜಿಯಲ್ಲ. ಹೆಚ್ಚು ಕಡಿಮೆಯಾದರೆ, ಪೊಲೀಸರು, ನ್ಯಾಯಾಲಯ ಇದೆ. ಆದರೆ, ನಮ್ಮ ಕಳಕಳಿ ಇರುವುದು ಪ್ರಸಾರವಾಗದ ಸುದ್ದಿಗಳ ಬಗ್ಗೆ ಎಂದು ಸೂಕ್ಷ್ಮವಾಗಿ ಪ್ರಸ್ತಾಪಿಸಿದರು.
ಬೆಂಗಳೂರಿನ ಮಸಾಜ್ ಪಾರ್ಲರ್‍ನಲ್ಲಿ ಪತ್ರಕರ್ತರೇ ಬ್ಲಾಕ್‍ಮೇಲ್ ಮಾಡಿದ ಘಟನೆ ನಡೆದಿದೆ. ಅದು ಮಾಧ್ಯಮಗಳಲ್ಲಿ ಪ್ರಸಾರ ಆಗಲ್ಲ. ಸ್ಟಿಂಗ್ ಹೆಸರಿನಲ್ಲಿ ಅನಾಚಾರ ನಡೆಯುತ್ತಿವೆ. ಇಂತಹ ಕೆಲವು ವ್ಯಕ್ತಿಗಳ ಕಾರಣದಿಂದ ಒಳ್ಳೆಯ ಕೆಲಸ ಮಾಡುವವರಿಗೂ ಕಳಂಕ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭ್ರಷ್ಟರಿಗೆ ಪತ್ರಕರ್ತರ ಸಂಘಟನೆಗಳ ಸದಸ್ಯತ್ವ ಬೇಡ:
ಪತ್ರಕರ್ತರ ಸಂಘ ಸಂಸ್ಥೆಗಳಲ್ಲಿ ಹೀಗೆ ಭ್ರಷ್ಟಾಚಾರ, ಅನಾಚಾರ ಮಾಡುವವರಿಗೆ ಸದಸ್ಯತ್ವ ಕೊಡಬಾರದು. ಇಲ್ಲಿ ಸಿಗುವ ಐಡಿ ಕಾರ್ಡ್ ಇಟ್ಟುಕೊಂಡೇ ವಸೂಲಿ ಮಾಡುತ್ತಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಜ್ಯೂಸ್ ಕುಡಿಯುವಾಗ 3.50 ಲಕ್ಷ ದೋಚಿದ್ದ ಕಳ್ಳನ ಬಂಧನ | ಹೊಳಲ್ಕೆರೆ ಪೊಲೀಸರ ಕಾರ್ಯಚರಣೆ
ಕರ್ನಾಟಕದ ಮಾಧ್ಯಮಗಳಿಗೆ ಶಕ್ತಿ ಇದೆ. ಪಿಎಸ್‍ಐ ನೇಮಕಾತಿ ಹಗರಣವನ್ನು ಕನ್ನಡಪ್ರಭ ಮೊದಲು ಸುದ್ದಿ ಮಾಡಿತ್ತು. ಸ್ವತಃ ಗೃಹ ಸಚಿವರು ಈ ಸುದ್ದಿಯನ್ನು ನಿರಾಕರಿಸಿದ್ದರು. ಆದರೆ, ಆನಂತರ ಅವರೇ ಹಗರಣದಲ್ಲಿ ಭಾಗಿಯಾದವರನ್ನು ಬಂಧಿಸಲು ಸೂಚನೆ ಕೊಡುವಂತಾಯಿತು. ಇದಕ್ಕೆ ಸಂಬಂಧಿಸಿದಂತೆ ಸುವರ್ಣ ನ್ಯೂಸ್, ಕನ್ನಡಪ್ರಭ ಒಂದು ಸಾವಿರ ಸುದ್ದಿ ಮಾಡಿದೆ. ನೂರಕ್ಕೂ ಹೆಚ್ಚು ಜನರ ಬಂಧನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ(ಪಪ್ಪಿ), ಕೆ.ಎಸ್.ನವೀನ್, ಚಿಂತಕ ಬಂಜಗೆರೆ ಜಯಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಪರ ರಕ್ಷಣಾಧಿಕಾರಿ ಕುಮಾರಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮತ್ತಿತರರಿದ್ದರು.
ಚಿತ್ರದುರ್ಗದ ಪತ್ರಕರ್ತರು ಮುನ್ನೆಲೆಯಲ್ಲಿ ನಿಂತು ಹೋರಾಟ ನಡೆಸಿದ ಪರಿಣಾಮ ಇಂದು ಭದ್ರಾ ಮೇಲ್ದಂಡೆಯಂತಹ 22 ಸಾವಿರ ಕೋಟಿಗಳ ಬೃಹತ್ ಯೋಜನೆ ರೂಪುಗೊಂಡಿದೆ. ಕೆಲ ಕ್ರಿಮಿಗಳಿಂದ ಇಂತಹ ಕೆಲಸಗಳಿಗೆ ಕಳಂಕ ಬಾರದಂತೆ ನೋಡಿಕೊಂಡು ಹೊರಗೆ ಹಾಕಬೇಕು ಎಂದರು.
| ರವಿ ಹೆಗಡೆ, ಕನ್ನಡಪ್ರಭ, ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
