
CHITRADURGA NEWS | 18 AUGUST 2025
ಚಿತ್ರದುರ್ಗ: ಸುಧಾರಿತ ತಾಂತ್ರಿಕತೆ ಹಾಗೂ ಅಂತರ ಬೆಳೆ ಅಳವಡಿಕೆಯಿಂದ ಅಡಿಕೆ ತೆಂಗು ಮತ್ತು ಬಾಳೆ ಬೆಳೆಯಲ್ಲಿ ಸುಸ್ಥಿರ ಇಳುವರಿ ಪಡೆಯಲು ಸಾಧ್ಯ ಎಂದು ಜಿಲ್ಲಾ ಕೃಷಿ ತರಬೇತಿ ಮುಖ್ಯಸ್ಥ ರಜನೀಕಾಂತ ಹೇಳಿದರು.
ಇದನ್ನೂ ಓದಿ: ರೈತರ ಆದಾಯ ವೃದ್ಧಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಅತ್ಯಗತ್ಯ | ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ.ಬಿ.ಪಾಟೀಲ್
ಇತ್ತೀಚಿಗೆ ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ, ಜಿಲ್ಲೆಯ ರೈತರಿಗೆ ಅಡಿಕೆ, ತೆಂಗು ಮತ್ತು ಬಾಳೆ ಬೆಳೆಗಳಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳ ಕುರಿತು 3 ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಅವರು ಮಾತನಾಡಿದರು.
ರೈತರು ಹೆಚ್ಚಿನದಾಗಿ ಅಡಿಕೆ, ತೆಂಗು ಮತ್ತು ಬಾಳೆ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಈ ಮೂರು ದಿನಗಳ ತರಬೇತಿಯಲ್ಲಿ ನೀಡುವ ತಾಂತ್ರಿಕ ಮಾಹಿತಿ ಮತ್ತು ಯಶಸ್ವಿ ಪ್ರಗತಿಪರ ರೈತರ ಅನುಭವ ಹಾಗೂ ವಿವಿಧ ಅಂತರ ಬೆಳೆಗಳನ್ನು ಕುರಿತ ಮಾಹಿತಿಯನ್ನು ರೈತರು ಸದುಪಯೋಗ ಪಡೆದುಕೊಂಡು ತಮ್ಮ ತಾಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಸುಸ್ಥಿರ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ತುಮಕೂರು ತಾಲ್ಲೂಕಿನ ಬೆಳ್ಳಾವಿ ಕ್ರಾಸ್ ಹತ್ತಿರವಿರುವ ಕುರಿಕೆಂಪನಹಳ್ಳಿ ಗ್ರಾಮದ ಪ್ರಗತಿಪರ ರೈತ ಹಫೀಜ್ ಉಲ್ಲಾ ಖಾನ್ ಮಾತನಾಡಿ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಮತ್ತು ವಿಶಮುಕ್ತ ಪರಿಸರ ಉಳಿಸಲು ರೈತರು ಸಾವಯವ ಅಥವಾ ನೈಸರ್ಗಿಕ ಕೃಷಿಗೆ ಒತ್ತು ನೀಡುವುದು ಅತ್ಯವಶ್ಯಕವಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 18 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್ ಎಷ್ಟಿದೆ?
ಕೃಷಿ ಸ್ವತಃ ನಾಟಿ ಹಸುಗಳನ್ನು ಸಾಕಿ ಅವುಗಳ ಸಗಣಿ ಮತ್ತು ಗಂಜಲಿನಿಂದ ಜೀವಾಮೃತ ಮಾಡಿ ಬಳಸುತ್ತಿದ್ದು, ಅಡಿಕೆಯಲ್ಲಿ ಅಂತರ ಬೆಳೆಯಾಗಿ ಜಾಕಾಯಿ, ಏಲಕ್ಕಿ ಮತ್ತು ಮೆಣಸು ಬೆಳೆಯುವುದು ಸೂಕ್ತವೆಂದರು. ಕಳೆ ನಾಶಕ ಬಳಕೆ ಮಾಡದೆ ಅವಶ್ಯವಿದ್ದಾಗ ಕಳೆಗಳನ್ನು ಕಳೆ ಕಟಾವು ಯಂತ್ರದ ಮೂಲಕ ಕಟಾವು ಮಾಡಿ ಅಲ್ಲೆ ಭೂಹೊದಿಕೆಯಾಗಿ ಬಿಡುವುದು ಉತ್ತಮ ಎಂದರು.
ಮಸಣಾಪುರದ ಪ್ರಗತಿಪರ ರೈತ ಮೃತ್ಯುಂಜಯಪ್ಪನವರು ಮಾತನಾಡಿ ತೆಂಗು ಮತ್ತು ಅಡಿಕೆಯ ತಾಕಿನಲ್ಲಿ 100 ಕ್ಕೂ ಹೆಚ್ಚಿನ ವಿವಿಧ ಜಾತಿಯ ಹಣ್ಣು ಮತ್ತು ಸಂಬಾರು ಬೆಳೆಗಳನ್ನು ಮಿಶ್ರ ಹಾಗೂ ಬಹು ಮಹಡಿ ಪದ್ದತಿಯಲ್ಲಿ ಬೆಳೆಯುತ್ತಿದ್ದು, ಎರೆಹುಳು ಗೊಬ್ಬರ ತಯಾರಿಕೆ, ಜೀವಾಮೃತ, ಗಂಜಲು, ಹುಳಿಮಜ್ಜಿಗೆಯ ಬಳಕೆ ಮತ್ತು ವೆಲವೆಟ್ ಬಿನ್ಸ್, ಅಲಸಂಧೆ, ಹುರಳಿ ಹಾಗೂ ಅಡಿಕೆ ಮತ್ತು ತೆಂಗಿನ ತ್ಯಾಜ್ಯವನ್ನು ಭೂಹೊದಿಕೆಯಾಗಿ ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ತೇವಾಂಶ ಮತ್ತು ಫಲವತ್ತತೆ ಕಾಪಾಡಲು ಸಹಕಾರಿಯಗಿದೆಯಲ್ಲದೆ ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆಂದರು.
ಚಳ್ಳಕೆರೆ ತಾಲ್ಲೂಕಿನ ಪಿಲ್ಲಹಳ್ಳಿಯ ಚಿತ್ರಲಿಂಗಪ್ಪ ಮಾತನಾಡಿ, ಕೃಷಿಯಲ್ಲಿ ಆಸಕ್ತಿ ಹಾಗೂ ತಾಳ್ಮೆಯಿಂದ ರೈತರು ಬೇಸಾಯ ಮಾಡಿದರೆ ಉತ್ತಮ ಕೃಷಿಕರಾಗಬಹುದು. ಪ್ರಗತಿಪರ ಕೃಷಿಕರ ತಾಕುಗಳಿಗೆ ಭೇಟಿ ನೀಡಿ ಸದರಿ ರೈತರ ಅನುಭವನ್ನು ತೆಗೆದುಕೊಂಡು ಮತ್ತು ವಿವಿಧ ತಾಂತ್ರಿಕ ತರಬೇತಿಗಳಿಂದ ಪಡೆದ ಮಾಹಿತಿಯನ್ನು ತಮ್ಮ ತಾಕಿನಲ್ಲಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ.
ರೈತರು ತಾವು ಬೆಳೆದ ಉತ್ತನ್ನಗಳನ್ನು ತಾವೇ ಮಾರಾಟ ಮಾಡುವ ಕಲೆ ಕಲಿತರೆ ಉತ್ತಮ ಬೆಲೆ ದೊರೆಯತ್ತದೆ. ಕೃಷಿಯನ್ನು ಶ್ರದ್ದೆಯಿಂದ ಮಾಡಿದರೆ ಋಷಿತ್ವ ಕಾಣಬಹುದು ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದಾಗಿದೆ ಎಂದರು.
ಹಿರಿಯೂರು ತಾಲ್ಲೂಕಿನ ಹೇಮದಳದ ಪ್ರಗತಿಪರ ರೈತ ಸಿದ್ದಪ್ಪ, ಹಾಲಗೊಂಡನಹಳ್ಳಿಯ ರುದ್ರಮುನಿಯಪ್ಪ ಮಾತನಾಡಿದರು.
ಇದನ್ನೂ ಓದಿ: POP ಗಣೇಶ ನಿಷೇಧ
ಕಾರ್ಯಗಾರದಲ್ಲಿ ಹಿರಿಯೂರು ತೋಟಗಾರಿಕೆ ಕಾಲೇಜು ಡೀನ್ ಹಾಗೂ ಸಸ್ಯ ರೋಗಶಾಸ್ತ್ರಜ್ಞ ಡಾ.ಸುರೇಶ್ ಏಕಬೋಟೆ, ಕೀಟಶಾಸ್ತ್ರಜ್ಞ ಡಾ.ಎಸ್.ಓಂಕಾರಪ್ಪ, ಅಡಿಕೆ, ತೆಂಗು ಮತ್ತು ಬಾಳೆ ಬೆಳೆಗಳಲ್ಲಿ ಬರುವ ಪ್ರಮುಖ ರೋಗಗಳ ಹಾಗೂ ಕೀಟ ನಿರ್ವಹಣೆ ಕುರಿತು ತರಬೇತಿ ನೀಡಿದರು.
ತೋಟಗಾರಿಕೆ ವಿಜ್ಞಾನಿ ಡಾ. ಮಹಾಂತೇಶ್ ಸದರಿ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಕ್ರಮಗಳು, ಅಂತರ ಬೆಳೆ ಮತ್ತು ಅನುಸರಿಸಬಹುದಾದ ಸಾವಯವ ಪದ್ದತಿಗಳ ಕುರಿತು ರೈತರಿಗೆ ಮನವರಿಕೆ ಮಾಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
