CHITRADURGA NEWS | 14 MARCH 2026
ಚಿತ್ರದುರ್ಗ: ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸುವ ಮೂಲಕ ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಲು ಕ್ರಮವಹಿಸಬೇಕು. ಜಿಲ್ಲೆಯ ಎಲ್ಲ ಗ್ರಾಮಗಳನ್ನೂ ತಂಬಾಕು ಮುಕ್ತ ಗ್ರಾಮಗಳನ್ನಾಗಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ತಪ್ಪಿಸಲು HPV ಲಸಿಕೆ ಸಹಕಾರಿ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಸಮನ್ವಯ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ಜನತೆಯು ಅತೀ ಹೆಚ್ಚಾಗಿ ತಂಬಾಕಿನ ದುಶ್ಚಟಗಳಿಗೆ ಒಳಗಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದರಿಂದಾಗಿ ಸಮಾಜದಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ. ಹಾಗಾಗಿ ತಂಬಾಕಿನ ದುಷ್ಪರಿಣಾಮಗಳ ಕುರಿತು ಆರೋಗ್ಯ ಇಲಾಖೆಯು ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಸ ವಿಲೇವಾರಿ ವಾಹನದಲ್ಲಿ ಆಡಿಯೋ ಜಿಂಗಲ್ಸ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ ಅವರು, ತಂಬಾಕು ಮುಕ್ತ ಗ್ರಾಮ ಘೋಷಣೆಗೆ ಸಹಕರಿಸಿದ ಆಯಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಮೇ31 ರಂದು ಆಚರಿಸಲಾಗುವ ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮದಲ್ಲಿ ಗೌರವಿಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 13 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ..
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಕಳೆದ ನಾಲ್ಕ ತಿಂಗಳಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ತಲಾ 20 ಕಾರ್ಯಾಚರಣೆಯ ಗುರಿ ನಿಗದಿಪಡಿಸಿದ್ದು, ಜಿಲ್ಲೆಯಲ್ಲಿ ಒಟ್ಟು 120 ಕಾರ್ಯಾಚರಣೆಯ ಗುರಿಗೆ ಕೇವಲ 32 ಕಾರ್ಯಾಚರಣೆ ಮಾತ್ರ ನಡೆಸಲಾಗಿದೆ. ಸಮರ್ಪಕವಾಗಿ ತಂಬಾಕು ಕಾರ್ಯಾಚರಣೆ ನಡೆಸದೇ ಕಡಿಮೆ ಪ್ರಗತಿ ಸಾಧಿಸಿದ ತಾಲ್ಲೂಕು ಮಟ್ಟದ ತಂಬಾಕು ನಿಯಂತ್ರಣ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಶೋಕಾಸ್ ನೀಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಾಕೀತು ಮಾಡಿದರು.
ತಂಬಾಕು ನಿಯಂತ್ರಣ ಮತ್ತು ತಡೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಪಾತ್ರ ಮಹತ್ವದಾಗಿದ್ದು, ಆಯಾ ತಾಲ್ಲೂಕುಗಳ ತಹಶೀಲ್ದಾರ್‍ಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ತಂಬಾಕು ನಿಯಂತ್ರಣ ಸಮಿತಿಯ ತನಿಖಾ ದಳದ ಸದಸ್ಯರೊಂದಿಗೆ ನಿಯಮಿತವಾಗಿ ತ್ರೈಮಾಸಿಕ ಸಭೆ ಹಾಗೂ ತಂಬಾಕು ಕಾರ್ಯಾಚರಣೆ ನಡೆಸಿ ಗುರಿ ಸಾಧಿಸಬೇಕು ಎಂದು ಹೇಳಿದರು.
ಶಾಲಾ-ಕಾಲೇಜುಗಳ ಆವರಣದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಯಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಕೋರ್ಸ್ ಪ್ರಾರಂಭಕ್ಕೆ ಸ್ಥಳ ಪರೀಶೀಲನೆ
ಶಾಲಾ-ಕಾಲೇಜುಗಳ ಹಂತದಲ್ಲಿಯೇ ಮಕ್ಕಳು ತಂಬಾಕು ವ್ಯಸನಕ್ಕೆ ತುತ್ತಾಗುತ್ತಿರುವುದು ಅವರ ಆರೋಗ್ಯ ಮತ್ತು ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದನ್ನು ತಡೆಯಲು ಶಾಲಾ-ಕಾಲೇಜುಗಳ ಸುತ್ತಮುತ್ತ ತಂಬಾಕು ಮಾರಾಟವಾಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದ ಅವರು, ಅಬಕಾರಿ ಇಲಾಖೆ ಅಧಿಕಾರಿಗಳು ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ತಂಬಾಕು ಬಳಕೆ ಮತ್ತು ಧೂಮಪಾನ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘಿಸುವ ಮಳಿಗೆಗಳ ಪರವಾನಗಿ ರದ್ದುಪಡಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ ಮಾತನಾಡಿ, ಜಿಲ್ಲೆಯಲ್ಲಿ ತಂಬಾಕು ಮುಕ್ತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂಸ್ಥೆಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ 64 ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗಿದೆ.
46 ತಂಬಾಕು ಮುಕ್ತ ಶಾಲಾ/ಕಾಲೇಜುಗಳನ್ನು ಘೋಷಿಸಲಾಗಿದೆ. 32 ತಂಬಾಕು ದಾಳಿಗಳನ್ನು ನಡೆಸಲಾಗಿದೆ. ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ 7 ತರಬೇತಿಗಳನ್ನು ನಡೆಸಲಾಗಿದೆ. 61 ಐಇಸಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಇದನ್ನೂ ಓದಿ: ಆದರ್ಶ ವಿದ್ಯಾಲಯ | ಮಾ.22 ರಂದು ಪ್ರವೇಶ ಪರೀಕ್ಷೆ | ಅಗತ್ಯ ಕ್ರಮ ಕೈಗೊಳ್ಳಿ
ತಂಬಾಕು ವ್ಯಸನದಿಂದ ಮುಕ್ತರಾಗಲು ಇಚ್ಛಿಸುವವರಿಗಾಗಿ ಇರುವ ತಂಬಾಕು ವ್ಯಸನ ಮುಕ್ತ ಕೇಂದ್ರಗಳಲ್ಲಿ ಒಟ್ಟು 4715 ಜನರಿಗೆ ಸಮಾಲೋಚನೆ ನೀಡಲಾಗಿದೆ. ಈ ಪೈಕಿ 246 ಜನರು ಚಿಕಿತ್ಸೆ ಪಡೆದಿದ್ದು, 24 ಮಂದಿ ತಂಬಾಕು ತ್ಯಜಿಸಿದ್ದಾರೆ. 4 ತಂಬಾಕು ಮುಕ್ತ ಹಳ್ಳಿ ಹಾಗೂ 4 ತಂಬಾಕು ಮುಕ್ತ ದೇವಸ್ಥಾನಗಳನ್ನು ಘೋಷಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಎಂ.ರಂಗಸ್ವಾಮಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ತಂಬಾಕು ನಿಯಂತ್ರಣಾಧಿಕಾರಿ ಡಾ.ರೇಖಾ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ಸಿ.ಓ.ಸುಧಾ, ಡಾ.ಕಾಶಿ, ಡಾ.ಚಂದ್ರಶೇಖರ್ ಕಂಬಾಳಿಮಠ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಡಿ.ಎಂ.ಅಭಿನವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
