ಸಂಡೆ ಸ್ಪಷಲ್
Kannada Novel: 24. ಐಗಳ ಗೃಹಪ್ರವೇಶ
CHITRADURGA NEWS | 16 MARCH 2025
ಮರ ಕೊಯ್ಯುವವರು ಗೌನಳ್ಳಿಗೆ ಬಂದು ಒಂದೂವರೆ ತಿಂಗಳಾಗುತ್ತಾ ಬಂದಿತ್ತು. ಅವರು ಕೊಯ್ದು ಕೊಟ್ಟಿದ್ದ ಎಂಟು ತೊಲೆಗಳ ಜತೆಗೆ ಗೌಡರು, ಗೊಂಚಿಕಾರ ಶಿದ್ದಯ್ಯ ಮತ್ತು ಕಾಮಜ್ಜರು ಹೊಂದಿಸಿದ್ದ ನಾಲ್ಕು ತೊಲೆ ಮತ್ತು ಹನ್ನೆರಡು ಕಂಭಗಳು, ಬೋದಿಗೆ, ಗದ್ದಿಗೆ ಕೊರಡು ಮುಂತಾದವುಗಳ ಜತೆಗೆ ಊರಜನ ಉದಾರವಾಗಿ ನೀಡಿದ್ದ ನಾಲ್ಕು ಕಂಭ, ಬೋದಿಗೆ ಮುಂತಾದುವು ಎರಡು ಹೊಸಾ ಮಾಳಿಗೆ ಮನೆಗಳನ್ನು ನಿಲೆ ಹಾಕಲು ಸಾಕಾಗಿದ್ದವು. ಬಾಗಿಲ ನಿಲ, ಜರಾಲುಗಳಿಗೆ ಕೊಯ್ದಿದ್ದ ಬೇವಿನ ಮರದ ಮುಟ್ಟುಗಳು ಜತೆಗೂಡಿದ್ದವು.
ಹಿಂದಿನ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಗೌಡ್ರು, ಗೊಂಚಿಕಾರು ಮತ್ತು ಕಾಮಜ್ಜರು ಬೋವಿಗಳ ಹಿರಿಯನನ್ನು ಮನೆಗೆ ಕರೆಯಿಸಿಕೊಂಡು ಹೊಸ ಮನೆಗಳ ಒಳಗೆ ಒಳಕಲ್ಲು ಸಾಗಿಸಿ ಪಡಸಾಲೆ ಕಂಭಗಳನ್ನು ನಿಲ್ಲಿಸಲು ಮೊಳಕಾಲ್ ಮಟ್ಟ ಕಿರುಗೋಡೆಯನ್ನು ಕಟ್ಟಿ ಅದರ ಮೇಲೆ ಸುಟ್ಟ ಬಂಡೆಗಳನ್ನು ಹಾಸಬೇಕು. ಆದ್ದರಿಂದ ನಾಳೆಯಿಂದ ಕೆಲಸ ಆರಂಭಿಸಲು, ಬೋವಿಗೆ ತಾಕೀತು ಮಾಡಿದ್ದರು.
ಅದರಂತೆ ಮಾರನೆ ದಿನ ಚಿಕ್ಕುಂಬೊತ್ತಿಗೆ ಬೋವಿಜನ ಕೆಲಸಕ್ಕೆ ಹಾಜರಾಗಿದ್ದರು. ಬಾಗಿಲಿಡುವುದಕ್ಕೆ ಮುಂಚೆ ಮನೆಯೊಳಗೆ ಒಳಕಲ್ಲು ಸಾಗಿಅಇ ಮೊಳಘಾತ ಆದಿತೋಡಿ ಜಲ್ಲಿ ಕಲ್ಲು ಭರ್ತಿ ಮಾಡಿ ಅದರ ಮೇಲೆ ನೀರು ಸುರಿದು ಹೋಗಿದ್ದರು. ಮಾರನೇ ದಿನ ಕೆಸರು ಕಲೆಸಿ ಬಂಡೆ ಗುಂಡುಕಲ್ಲಿನಿಂದ ಮೊಳಕಾಲೆತ್ತರದ ಕಲ್‌ಕಟ್ ಕಟ್ಟಿ ಆದಿನ ಅದು ಒಣಗಲು ಬಿಟ್ಟು ಮಾರನೇ ದಿನ ಅದರ ಮೇಲೆ ಸುಟ್ಟಬಂಡೆಗಳನ್ನು ಹಾಸಿದರು. ಅದರ ಮೇಲೆ ಮತ್ತು ಎದುರಿಗೆ ದಪ್ಪನೆಯ ಗುಂಡು ಬಂಡೆಯನ್ನು ಜೋಡಿಸಿ ಗದ್ದಿಗೆ ಕೊರಡು ಹೊಂದಿಸಿ ಕಂಬಗಳನ್ನು ನಿಲ್ಲಿಸಿ ಬಿರಿಕಟ್ಟಿದರು.
ಹಿಂದಿನ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು
ಇದಾದ ಬಳಿಕೆ ಕೆಳಗಿನ ಅಂಕಣದಲ್ಲಿ ಅಡಿಗೆ ಬಂಡೆ ಜೋಡಿಸಿ ಅದರ ಮೇಲೆ ಗದ್ದಿಗೆ ಕೊರಡು ಇಟ್ಟು ದೊಡ್ಡ ಕಂಬಗಳನ್ನು ನಿಲ್ಲಿಸಿ ಅಲುಗಾಡದಂತೆ ಬಿರಿಕಟ್ಟಿದರು. ಒಂದೇ ವಾರದಲ್ಲಿ ತೊಲೆಗಳನ್ನು ಮೇಲೆತ್ತಿ ಕಂಬಗಳ ಮೇಲಿನ ಬೋದಿಗೆ ಮೇಲೆ ಸರಿಯಾಗಿ ಜೋಡಿಸಿ ಕೂಡಿಸಿದರು. ತೊಲೆಗಳ ಮೇಲೆ ಗೇಣಿಗೊಂದರಂತೆ ಜಂತೆಗಳನ್ನು ಹರಡಿ ತೊಲೆಗೆ ಬಿಗಿದುಕಟ್ಟಿ ಅವುಗಳ ಮೇಲೆ ಮಾಳ್ವಂತದ ಕಟ್ಟಿಗೆ ತುಂಡುಗಳನ್ನು ಹರಡಿ ಅವುಗಳ ಮೇಲೆ ಹಸಿ ಬಂದ್ರೆಸೊಪ್ಪು ಲಕ್ಷ್ಮಿ ಸೊಪ್ಪನ್ನು ಹರಡಿದರು. ಅಷ್ಟೊತ್ತಿಗೆ ಮನೆ ಪಕ್ಕದಲ್ಲಿ ಕಲ್ಲು ಮಿಶ್ರಿತ ಮೇಲ್ಮುದ್ದೆ ಕೆಸರು ಸಿದ್ಧವಾಗಿತ್ತು.
ಒಂದು ಸಂಜೆ ಮರುಳಯ್ಯನ ಮನೆಗೆ ಮೇಲ್ಮುದ್ದೆ ಕೆಸರು ಹರಡಿ ಎರಡನೇ ದಿನ ಸಂಜೆಯಲ್ಲಿ ಮಳಿಯಪ್ಪಯ್ಯರ ಮನೆಗೆ ಮೇಲ್ಮುದ್ದೆ ಕೆಸರು ಹರಡಲಾಯ್ತು. ಎರಡನೇ ದಿನ ಸಂಜೆ ಮೇಲ್ಮುದ್ದೆ ಮಣ್ಣು ಮೇಲೆತ್ತಿ ಹಾಕಿದವರಿಗೆಲ್ಲಾ ಹಣಿದ ಗೋದಿಹುಗ್ಗಿ, ಚೆನ್ನಂಗಿ ಅಕ್ಕಿಯ ಅನ್ನ, ನೀರಾಮ್ರದ ಊಟವನ್ನು ಗೌಡ್ರು ಗೊಂಚಗಾರು ಏರ್ಪಡಿಸಿದ್ದರು.
ಹಿಂದಿನ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು
ಜಂಗಮೈಗಳು ತಮ್ಮ ಕನಸಿನ ಮನೆಗಳಲ್ಲಿ ಹೊಕ್ಕು ತಣ್ಣನೆ ವಾತಾವರಣವನ್ನು ಅನುಭವಿಸಿದ್ದರು. ಆದೇ ವಾರ ಮೇಲ್ಮುದ್ದೆ ಕೆಸರು ಒಣಗಿದ ಬಳಿಕ ಮೇಲೆ ಬೂದಿ ಮಣ್ಣು ಚೆಲ್ಲಿ ಕಲ್ಲು ಮಣ್ಣು ಹರಡಿದರು. ಬೋವಿಗಳು ಎರಡೂ ಮನೆಗಳ ಬಲ್ಬವನ್ನು ಕಟ್ಟಿ ಅದರ ಮೇಲೆ ಒಣ ಮಣ್ಣು ಸುರಿದರು. ಮನೆಗಳ ಒಳಗೆ ಮತ್ತು ಹೊರಗಿನ ಗೋಡೆಗಳಿಗೆ ಚಟ್ಟು ಮಣ್ಣನ್ನು ನೀರಾಕಿ ಕದಡಿ ಕೆಲದಿನ ಮುಗ್ಗಲು ಬಿಟ್ಟು ಗೋಡೆಗಳಿಗೆ ಮೆತ್ತಿ ತುಸು ಒಣ-ಗಿದ ಬಳಿಕ ತಟ್ಟುಗೊರಡಿನಿಂದ ಗೋಡೆಗೆ ಮೆತ್ತಿಕೊಳ್ಳುವಂತೆ ತಟ್ಟಿದರು. ಅದು ಒಣಗುವುದಕ್ಕೆ ಮುಂಚೆಯೇ ಸಗಣಿ ಬಗ್ಗಡದಲ್ಲಿ ಸುಣ್ಣವನ್ನು ಬೆರೆಸಿ ಗೋಡೆಗಳಿಗೆ ಹಚ್ಚಲಾಯಿತು. ಇದೆಲ್ಲವನ್ನು ಊರಿನ ಜನ ತಮ್ಮದೆಂಬಂತೆ ಮುತುವರ್ಜಿಯಿಂದ ಮಾಡುತ್ತಿದ್ದರೆ ಜಂಗಮೈಗಳು ಮತ್ತು ಅವರ ಹೆಣ್ಣು ಮಕ್ಕಳು ಬೆಪ್ಪರಂತೆ ನೋಡುತ್ತಿದ್ದರು.
ಎಂಟೇ ದಿನದಲ್ಲಿ ಐಗಳ ಎರಡು ಮನೆಗಳು ಸಿದ್ಧವಾಗಿದ್ದವು. ಈಗ ತುರ್ತಾಗಿ ಮನೆ ಬಾಗಿಲುಗಳಿಗೆ ಕದಗಳನ್ನು ಜೋಡಿಸಬೇಕಾಗಿತ್ತು. ಯಾರದಾದರೂ ಹಲಸಿನ ಮರದ ಒಣಗಿದ ದಿಮ್ಮಿ ಸಿಗಬೌದೇನೋ ಎಂದು ಗೌಡ್ರು, ಗೊಂಚಿಕಾರು ಮತ್ತು ಯಜಮಾನ ಕಾಮಜ್ಜರು ಯೋಚಿಸಿದರು. ಆದರೆ ಯಾರ ಬಳಿಯೂ ಇರಲಿಲ್ಲ. ಹಾಗಾಗಿ ಸದ್ಯಕ್ಕೆ ಬಂದ್ರೆ ಸೊಪ್ಪಿನ ನೆರಿಕದಗಳನ್ನು ಎರಡು ಮನೆಗಳಿಗೆ ಜೋಡಿಸಲಾಯಿತು.
ಹಿಂದಿನ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
ಪಡಸಾಲೆ ಮತ್ತು ಅಡಿಗೆ ಕೋಣೆಗಳ ನೆಲಕ್ಕೆ ಅಡಿದಪ್ಪ ಪುಡಿಗಲ್ಲು ಬೆಂಜೆಯನ್ನು ತುಂಬಿ ಸಾಕಷ್ಟು ನೀರು ಹೊಯ್ದು ಧಮ್ಮಸ್ ಮಾಡಿ ಅದರ ಮೇಲೆ ಚಟ್ಟು ಮಣ್ಣು ಹರಡಿ ಅದು ನೆನೆದು ಅರಳಿಕೊಳ್ಳಲು ಯಥೇಚ್ಚ ನೀರು ಸುರಿದು ತಟ್ಟುಗೊರಡಿನಿಂದ ತಟ್ಟಿ ನಯಗೊಳಿಸಲಾಯಿತು. ಪಡಸಾಲೆ ಎದುರಿಗಿನ ಅಂಕಳದ ತುಂಬಾ ಪುಡಿಗಲ್ಲು ಬೆಂಜೆಯನ್ನು ಗೇಣು ಮಟ್ಟ ಹರಡಿ ನೀರು ಸುರಿದು ಅದರ ಮೇಲೂ ಚಟ್ಟುಮಣ್ಣು ಹಾಕಿ ನೀರುಣಿಸಿ ಧಮ್ಮಸ್ ಮಾಡಿ ತಟ್ಟಲಾಯಿತು. ಊರಿನ ಯುವಕರು ಹೆಣ್ಣುಮಕ್ಕಳು ಮುತುವರ್ಜಿಯಿಂದ ಈ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರೆ ಜಂಗಮೈಗಳು ಗೃಹ ಪ್ರವೇಶಕ್ಕೆ ತಿಥಿ ನಕ್ಷತ್ರ ನೋಡುತ್ತಿದ್ದರು. ಅವರ ಅದೃಷ್ಟಕ್ಕೆ ಕಲ್ಯಾಣದ ಶರಣ ಬಸವಣ್ಣ ಜನಿಸಿದ ಅಕ್ಷಯ ತೃತೀಯ ಸಮಿಾಪಿಸಿತ್ತು.
ಗೌಡ್ರು, ಗೊಂಚಿಕಾರು ಮತ್ತು ಕಾಮಜ್ಜರ ಬಳಿ ಇದನ್ನು ಪ್ರಸ್ತಾಪಿಸಿದ ಮಳಿಯಪ್ಪಯ್ಯ ಇದೊಂದನ್ನು ನೆರವೇರಿಸಿಕೊಡಲು ಬಿನ್ನವಿಸಿದರು. “ಆಗಲಿ, ಹಂಗೇ ಆಗಲಿ. ಬಸವನ ಹಬ್ಬದ ದಿನ ನಿಮ್ಮ ಗೃಹಪ್ರವೇಶ ಆಗಿಬಿಡ್ಲಿ” ಎಂದು ಅವರುಗಳು ಸಮ್ಮತಿಸಿದರು. ಅದರಂತೆ ಹೊಸ ಮನೆಗಳ ಸುತ್ತಾ ಬತ್ತದ ಹುಲ್ಲಿನ ಹಗ್ಗಗಳನ್ನು ಬಿಟ್ಟು ಹಸಿ ಸಗಣಿಯಲ್ಲಿ ವಿನಾಯಕನನ್ನು ಮಾಡಿ ಗರಿಕೆಹುಲ್ಲನ್ನು ಸಿಕ್ಕಿಸಿ ಸಿದ್ಧಗೊಳಿಸಿದರು.
ಹಿಂದಿನ ಸಂಚಿಕೆ: 5. ಕೆನ್ನಳ್ಳಿಯ ದುರಂತ
ಜಂಗಮೈಯ್ಯರ ಹೆಣ್ಣು ಮಕ್ಕಳು ಗಂಗಾ ಪೂಜೆ ಮಾಡಿ ಹೊತ್ತು ತಂದಿದ್ದ ತುಂಬಿದ ಗಡಿಗೆಗಳಿಗೆ ಪೂಜೆ, ಒಳಗೆ ತಂದು ಗದ್ದುಗೆ ಮೇಲೆ ಸ್ಥಾಪಿಸಿ ಮಂತ್ರೋಚ್ಚಾರಣೆಯಿಂದ ಪೂಸಿ ಗಂಗೆ ಹೆಸರಿನ ಬಿಳಿ ಆಕಳನ್ನು ಹೊಸ್ತಿಲು ದಾಟಿಸಿ ಪೂಜಿಸಿದರು. ಒಲೆಯನ್ನು ಪೂಜಿಸಿ ಬೆಂಕಿಕಾಣಿಸಿ ಗೌಡ್ರ ಮನೆಯ ಆಕಳ ಹಾಲನ್ನು ಉಕ್ಕಿಸಿ ಶಾಸ್ತ್ರಗಳನ್ನು ಪೂರೈಸಿದರು. ಜಂಗಮಯ್ಯರಿಗೆ ಅದು ಅತ್ಯಂತ ಸಂಭ್ರಮದ ದಿನವಾಗಿತ್ತು, ಪೂಜೆಗೆ ಬಂದವರಿಗೆ ತಂಬಿಟ್ಟು ನೆನೆಯಕ್ಕಿ ನೆನೆಗಡಲೆ ತೆಂಗಿನಕಾಯಿ ಚೂರಿನ ಪಳಾರ ಹಂಚಲಾಯಿತು.
ಬಸವನ ಹಬ್ಬದ ದಿನವಾಗಿದ್ದರಿಂದ ಊರಿನ ಜನ ತಮ್ಮ ತಮ್ಮ ಎತ್ತುಕರುಗಳ ಮೈತೊಳೆದು, ಮನೆಗೆ ಹೊಡೆತಂದು ಕರಿ ಕಂಬಳಿ ಗದ್ದುಗೆ ಮಾಡಿ ಅದರ ಮೇಲೆ ಎತ್ತುಗಳನ್ನು ನಿಲ್ಲಿಸಿ ಪೂಜೆ ಮಾಡಿ ಸೀ ಅಡಿಗೆಯನ್ನು ತಿನ್ನಿಸಿ ಜಂಗಮಯ್ಯರನ್ನು ಬಿನ್ನ ತೀರಿಸಲು ಕರೆದರು. ಅವರು ಮೂರುಜನ ಮತ್ತಿಬ್ಬರು ಹುಡುಗರು ರುದ್ರಯ್ಯ ಮತ್ತು ಮುರಿಗೇಂದ್ರಯ್ಯ ಎಲ್ಲಾ ಲಿಂಗವಂತರ ಮನೆಗಳಿಗೆ ಹೋಗಿ ಬಂದರು.
ಹಿಂದಿನ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು
ಭಕ್ತರು ನೀಡಿದ್ದ ಮತ್ತು ಎಡೆ ಎಂದು ತಂದುಕೊಟ್ಟಿದ್ದ ವಿವಿಧ ಭಕ್ಷ್ಯಗಳನ್ನು ಜಂಗಮಯ್ಯರ ಮೂರು ಮಂದಿ ಮಹಿಳೆಯರು ಉಂಡು ಮಿಗಿಸಿದರು. ಹಗಲಲ್ಲಿ ಎಂದೂ ಮಲಗದ ಮಳಿಯಪ್ಪಯ್ಯ ಮರುಳಯ್ಯ ಮತ್ತು ಶಿವಲಿಂಗಯ್ಯರು ಭರ್ಜರಿ ಊಟದ ಪರಿಣಾಮ ಮಾಳಿಗೆ ಮನೆಗಳ ತಂಪಿನಲ್ಲಿ ಮಲಗಿ ಗೊರಕೆ ಹೊಡೆದಿದ್ದರು. ಸಣ್ಣ ಹುಡುಗರಾಗಿದ್ದ ರುದ್ರಯ್ಯ ಮತ್ತು ಮುರಿಗೇಂದ್ರಯ್ಯ ಕೂಡಾ ಸುದೀರ್ಘ ನಿದ್ದೆ ಮಾಡಿದ್ದರು.
ಮರಕೊಯ್ಯುವವರಿಗೆ ಬಸವನ ಹಬ್ಬದ ಊಟ ಸುಖ ನಿದ್ದೆ ಬರಿಸಿತ್ತು. ಉಂಡ ಬಳಿಕ ಮರಕೊಯ್ಯುವುದನ್ನು ನಿಲ್ಲಿಸಿ ಹುಣಿಸೆ ಮರಗಳಡಿಯಲ್ಲಿ ನಿದ್ದೆಗೆ ಶರಣಾಗಿದ್ದರು. ಬಸವನಹಬ್ಬದ ದಿನ ಊರಿನ ಹಲವಾರು ಬೋವಿಗಳು ಮತ್ತು ನಾಯ್ಕರ ಗಂಡಸರು ಮತ್ತು ಹೆಂಗಸರನ್ನು ಊರಿನ ಕುಂಚಿಟಿಗ ಲಿಂಗಾಯ್ತರು ಊಟಕ್ಕೆ ಕರದಿದ್ದರು. ಉಳಿದಂತೆ ಮಣಿಗಾರು, ಕಮ್ಮಾರು, ಮಡಿವಾಳರು ಮುಂತಾದ ಕೈವಾಡಸ್ತರೂ ಹಬ್ಬದೂಟ ಸವಿದಿದ್ದರು.
ಹಿಂದಿನ ಸಂಚಿಕೆ: 7. ಊರು ತೊರೆದು ಬಂದವರು
ಬಿಸಿಲು ಸ್ವಲ್ಪ ತಗ್ಗಿದ ಮೇಲೆ ಮತ್ತು ಸಂಜೆ ಸಮಿಾಪಿಸಿದಂತೆ ಎಮ್ಮೆ, ದನಕರುಗಳಿಗೆ ನೀರು ಕುಡಿಸಲು ಊರಬಾವಿಗಳಿಗೆ ಹಿಂಡು ಹಿಂಡು ಬಂದಿದ್ದವು. ಗುಂಡಾಚಾರಿ ಮತ್ತು ಆತನ ಪತ್ನಿ ತಿಪ್ಪಮ್ಮ ಕೂಡಾ ಹಬ್ಬದ ಸಲುವಾಗಿ ಸೀ ಅಡಿಗೆ ಮಾಡಿ ಉಂಡಿದ್ದರು. ಆಚಾರಿಯ ಅಡ್ಡಗಲ್ಲಾ ಬಡಿಯುವ ಸದ್ದು ಕೇಳಿಸುತ್ತಿತ್ತು. ‘ಈ ಮಾರಾಯ ರಾತ್ರಿ ಮಲಗಿದಾಗ ಮಾತ್ರ ಕೆಲಸ ಮಾಡೋದಿಲ್ಲ.
ಎದ್ದು ಪೂಜೆ ಮಾಡಿ ಉಂಡ ಅಂದ್ರೆ ಕೊಟಾ ಕೊಟ ಬಡೀತಿದ್ದಾನೆ’ ಅಂದುಕೊಂಡವರೇ ಎಲ್ಲಾ, ಅವನ ಪತ್ನಿ ತಿಪ್ಪಮ್ಮ ಮಹಿಳೆಯರ ಅದರಲ್ಲೂ ಯುವತಿಯರ ಕುಪ್ಪಸಗಳನ್ನು ಅಳತೆಗೆ ತಕ್ಕಂತೆ ಕೈ ಹೊಲಿಗೆ ಮಾಡಿಕೊಡುವುದರಲ್ಲಿ ನಿಷ್ಣಾತೆಯಾಗಿದ್ದಳು. ಹೀಗಾಗಿ ಆಚಾರಿಯ ಮನೆಗೆ ಒಡವೆ ಮಾಡಿಸುವವರ ಮತ್ತು ಕುಪ್ಪಸ ಹೊಲಿಸುವವರ ಓಡಾಟ ಕಡಿಮೆಯಾಗಿರಲಿಲ್ಲ.
ಹಿಂದಿನ ಸಂಚಿಕೆ: 8. ಮೋಜಣಿಕೆ ಮಾಡಿದರು
ಹೊತ್ತು ವಾಲಿದ ಬಳಿಕ ಶಿವಲಿಂಗಯ್ಯ ಮತ್ತು ಆತನ ಪತ್ನಿ ತಮ್ಮ ಹಳೇ ಮನೆಗೆ ನಡೆದಿದ್ದರು. ಊರ ಮಹಿಳೆಯರು ಹೊಸದಾಗಿ ಸಂಸಾರ ನಡೆಸುವ ಮಳಿಯಪ್ಪಯ್ಯ ಮತ್ತು ಮರುಳಯ್ಯರಿಗೆ ಕೆಲವು ಹೊಸಾ ಮಡಕೆ. ಕುಡಿಕೆಗಳನ್ನು ತಂದು ಕೊಟ್ಟಿದ್ದರು. ಜಂಗಮಯ್ಯರ ಹೆಣ್ಣು ಮಕ್ಕಳಿಗೆ ಇದೊಂದು ಹೊಸಾ ಅನುಭವವಾಗಿತ್ತು. ಅವರು ಗೌನಳ್ಳಿಗೆ ಆಗಮಿಸಿದ ಬಳಿಕ ಅಡಿಗೆ ಮಾಡುವುದನ್ನೇ ನಿಲ್ಲಿಸಿದ್ದರು. ‘ದಿನ, ರಾತ್ರಿ ಕಂತೇಭಿಕ್ಷಾ ಮಾಡಿ.
ಭಕ್ತರು ನೀಡಿದ್ದನ್ನು ಉಂಡವರು ಈಗ ಒಲೆ ಹೊತ್ತಿಸಿ ಅಡಿಗೆ ಮಾಡಬೇಕೆ? ನಮ್ಮೋರು ಕಂತೇಭಿಕ್ಷಾ ತರುವುದನ್ನು ನಿಲ್ಲಿಸುತ್ತಾರಾ? ಅಡಿಗೆ ಮಾಡಲು ಮನೆಯಲ್ಲಿ ಏನೈತೆ? ನಮ್ಮೋರು ದಡಾಬಡಾ ದನ ಕಾಯ್ದಂಗಾತು. ಅದ್ಯಾವ ಗಳಿಗೆಗೆ ಹೊಸಾ ಮನೆ ಕಟ್ಟಿಸಬೇಕು ಅಮ್ರ ಯೋಚನೆ ಮಾಡಿದರೋ, ಈ ಊರಿನ ತಂದೆ ತಾಯಿಯಂಥ ಯಜಮಾನು ಎಳ್ ಮೂರ್ ತಿಂಗಳಾಗೆ ಅಪ್ಪಂತ ಮನೆಗಳ ಕಟ್ಟಿಕೊಟ್ರು. ಮುಂದಿಂದು ಹೆಂಗ್ ನಡಿಯಿತ್ತೋ’ ಇತ್ಯಾದಿ ಯೋಚಿಸಿದ್ದರು.
ಹಿಂದಿನ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ
ಸಂಜೆಯಾಗುತ್ತಿದ್ದಂತೆ ಮಳಿಯಪ್ಪಯ್ಯ ಮಗ ರುದ್ರಯ್ಯನನ್ನು ಮನೆಯಲ್ಲಿರಿಸಿ ಮಧ್ಯಾಹ್ನ ಭಕ್ತರು ನೀಡಿದ್ದ ಭಕ್ಷ್ಯಗಳಲ್ಲಿ ಸ್ವಲ್ಪ ಭಾಗವನ್ನು ಎತ್ತಿಕೊಂಡು ತಮ್ಮ ಹಳೇ ಮನೆಗೆ ಬಂದರು. ಅದೇ ರೀತಿ ಮರುಳಯ್ಯನೂ ಸ್ವಲ್ಪ ಊಟವನ್ನು ಶಿವಲಿಂಗಯ್ಯ ಮತ್ತು ಆತನ ಪತ್ನಿಗೆಂದು ತಂದು ಹಳೇ ಮನೆಯಲ್ಲಿದ್ದರು. ಇವರು ಆಗಮಿಸಿದ್ದನ್ನು ನೋಡಿದ ತಮ್ಮ ಶಿವಲಿಂಗಯ್ಯ ಮತ್ತು ಆತನ ಪತ್ನಿಯ ಕಣ್ಣಲ್ಲಿ ನೀರು ತರಿಸಿತ್ತು. ತಾವೆಲ್ಲ ದೂರ ದೂರ ಹೋದವರಂತೆ ಅವರ ಹೃದಯಗಳು ತುಂಬಿ ಬಂದಿದ್ದವು.
ಮಳಿಯಪ್ಪಯ್ಯರ ಗಂಟಲು ಕಟ್ಟಿತ್ತು. ಕೆಮ್ಮಿ ಸರಿಪಡಿಸಲು ಯತ್ನಿಸಿ ವಿಫಲರಾಗಿದ್ದರು. ಮರುಳಯ್ಯ ಮತ್ತು ಆತನ ಪತ್ನಿ ಕಣ್ಣುಂಬ ನೀರು ತುಂಬಿಕೊಂಡು ಶಿವಲಿಂಗಯ್ಯ ಮತ್ತು ಆತನ ಪತ್ನಿಯರನ್ನು ಅಪ್ಪಿಕೊಂಡಿದ್ದರು.
ಹಿಂದಿನ ಸಂಚಿಕೆ: 10. ಹೊಸ ಬಂಡಿಗಳ ಆಗಮನ
“ಇಷ್ಟು ದಿನ ತುಂಬಿದ ಮನೆಯಾಗಿತ್ತು. ಇವತ್ತಿಂದ ಖಾಲಿ ಮನೆಯಾತು” ಶಿವಲಿಂಗಯ್ಯನ ಪತ್ನಿ ಬಿಕ್ಕುತ್ತಾ ನುಡಿದಿದ್ದಳು. “ಅಂಗ್ಯಾಕೆ ಅಮ್ರಾಯಮ್ಮಾ ನಾವೇನೂ ದೂರ ಹೋಗಿಲ್ಲ. ಮನೆ ಬ್ಯಾರೆ ಆದ್ರೆ, ಮನಸ್ಸು ಬ್ಯಾರೆ ಆಗಲ್ಲ” ಇಲ್ಲಿಗೆ ಬಾ ಇದ್ದೀನಿ” ಮಳಿಯಪ್ಪಯ್ಯ ನಿಧಾನವಾಗಿ ಮಾತಾಡಿದ್ದರು. “ದೇವು ಕಣ್ ಬಿಟ್ಟು ನಿಮಿಂಗೊಂದು ಕೂಸು ಕೊಡ್ಲಿ” ಮರುಳಯ್ಯನ ಪತ್ನಿ ಕಣ್ಣೀರೊರೆಸಿಕೊಂಡು ಮಾತಾಡಿದ್ದಳು. “ಇಷ್ಟೊಂದು ಊಟ ಯಾರುಣ್ಣಬೇಕು? ಅರ್ಧ ತಗಂಡೋಗ್ರಿ” ಶಿವಲಿಂಗಯ್ಯ ಮಾತಾಡಿ ಅರ್ಧ ಊಟವನ್ನು ಎತ್ತಿಕೊಡಲುದ್ಯುಕ್ತನಾದ. “ಬ್ಯಾಡ ಬ್ಯಾಡ ಉಳಕಂಡ್ರೆ ಬೆಳಿಗ್ಗೆ ಗೌಡ್ರ ಎಮ್ಮೆ ದನಕ್ಕೆ ಕೊಟ್ಟುಬಿಡ್ರಿ” ಮಳಿಯಪ್ಪಯ್ಯ ಸೂಚಿಸಿದರು.
“ಇನ್ನೊಂದು ವಿಚಾರ, ಈಗ ನಾವು ಕಂತೇಭಿಕ್ಷಾ ಮಾಡಿಕೆಂಡು ಜೀವ ಮಾಡ್ತಿದ್ದೀವಿ. ಅದನ್ನು ನಿಲ್ಲೋದು ಬ್ಯಾಡ, ಭಕ್ತರು ಕಣಾ ಮಾಡಬೇಕಾದ್ರೆ ಆಯಗಾರಿಗೆಲ್ಲಾ ತುಂಬಿದ ಮೊರದಾಗೆ ಕಾಳು ಕಡಿ ಕೊಡ್ತಾರೆ. ಸ್ವಲ್ಪ ದಿನ ನಮಿಗೂ ಹಂಗೆ ಕೊಡ್ರಿ, ಅಮ್ಮ ಕೇಳಾನ ಅವರು ಒಪ್ಪಿದರೆ ಕಂತೇಭಿಕ್ಷ ನಿಲ್ಲಿಸಿ ನಮ್ ನಮ್ ಮನೆಯಾಗೆ ಅಡಿಗೆ ಮಾಡ್ಕಂಡು ಇರಾನ” ಮಳಿಯಪ್ಪಯ್ಯ ತಮ್ಮ ಆಲೋಚನೆಯನ್ನು ತಿಳಿಸಿದರು.
ಹಿಂದಿನ ಸಂಚಿಕೆ: 11. ಬಂಡಿ ತಂದ ಬದಲಾವಣೆ
ಇದಕ್ಕೆ ಮರುಳಯ್ಯ ಶಿವಲಿಂಗಯ್ಯ ಇಬ್ಬರೂ ತಕ್ಷಣ ಪ್ರತಿಕ್ರಿಯಿಸಲಿಲ್ಲ. “ಇಷ್ಟು ದಿನ ಒಂದು ಮನೆಯಗಿದ್ವಿ. ಈಗ ಮೂರು ಮನೆ ಆದ್ದು, ನಾವು ಮೂರು ಜನ ಭಕ್ತರ ಕಣಕ್ಕೋದ್ರೆ ಮೂವ್ವಾರಿಗೂ ಅವರು ಧಾನ್ಯ ಕೊಡಬೇಕಾಗುತ್ತೆ. ಇದು ಅವರಿಗೂ ಸರಿ ಬರಲ್ಲ ನಮಿಗೂ ಸರಿ ಕಾಣ್ಣಲ್ಲ” ಮರುಳಯ್ಯ ತಡೆದು ನಿಧಾನವಾಗಿ ತನ್ನ ಅಭಿಪ್ರಾಯ ತಿಳಿಸಿದ. “ಹೂಂಕಣಣ್ಣಾ, ನನಿಗೂ ಇದು ಸರಿ ಅಲ್ಲ ಅನ್ಸುತ್ತೆ” ಶಿವಲಿಂಗಯ್ಯ ದನಿಗೂಡಿಸಿದ.
“ಆಯಿತು ಬಿಡ್ರಿ ನಾನು ಮನಿಗೆ ಹತ್ರದ ಎರಡು ಮೂರು ಮನಿಯಾಗೆ ಭಿಕ್ಷೆ ಬೇಡುತೀನಿ. ನೀವೂ ಅಂಗೆ ಮಾಡ್ರಿ. ಮುಂದೆ ನೋಡಾನ” ಅನ್ನುತ್ತಾ ಮಳಿಯಪ್ಪಯ್ಯ ಹೊರ ನಡೆದರು. ಅವರ ಹಿಂದೆಯೇ ಅವರ ಪತ್ನಿ ಮತ್ತು ಮರುಳಯ್ಯ ಮತ್ತು ಆತನ ಪತ್ನಿ ಮನೆಯಿಂದ ಹೊರ ಬಂದರು.
ಹಿಂದಿನ ಸಂಚಿಕೆ: 12. ಜಂಗಮಯ್ಯರ ಆಗಮನ
ಶಿವಲಿಂಗಯ್ಯ ಮತ್ತು ಆತನ ಪತ್ನಿ ಇಬ್ಬರೇ ಮನೆಯಲ್ಲಿ ಉಳಿದರು. ಇಬ್ಬರಿಗೂ ಏನೋ ಕಳೆದುಕೊಂಡವರಂತೆ ತುಂಬಾ ಹೊತ್ತು ನಿಂತೇ ಇದ್ದರು. “ಬರಿ ಉಣಬರಿ ಇದು ಮುಂದೆಂದೋ ಆಗಬೇಕಾಗಿತ್ತು. ಇವತ್ತೇ ಆಗೈತೆ” ಅನ್ನುತ್ತಾ ಶಿವಲಿಂಗಯ್ಯನ ಪತ್ನಿ ಗಂಡನನ್ನು ಊಟಕ್ಕೆ ಕರೆದಳು. ಶಿವಲಿಂಗಯ್ಯ ಪತ್ನಿಯನ್ನು ತಬ್ಬಿಕೊಂಡು ಮೂಕರೋದನ ಮಾಡುತ್ತಿದ್ದ,
ಮಳಿಯಪ್ಪಯ್ಯ ತನ್ನ ಪತ್ನಿ ಮರುಳಯ್ಯ ಮತ್ತು ಆತನ ಪತ್ನಿ ಸಂಗಡ ನಾಲ್ಕು ಜನ ಮರುಳಯ್ಯನ ಹೊಸಾಮನೆ ಬಳಿಗೆ ಬಂದರು. ಬಾಗಿಲಲ್ಲಿ ಮುರುಗೇಂದ್ರಯ್ಯ ನಿಂತಿದ್ದ. ಇವರನ್ನು ಕಾಣುತ್ತಲೇ “ಅಪ್ಪಯ್ಯಾ ವಿಟೊತ್ತು ಹೋದ್ರಿ. ದೊಡ್ಡಪ್ಪಯ್ಯಾ ಇಲ್ಲೇ ಉಣಬರ್ರಿ ದೊಡಮ್ಮಾ” ಕುಕ್ಕಲತೆಯಿಂದ ಆಹ್ವಾನಿಸಿದ್ದ. “ಇಲ್ಲಪ್ಪ ಮನಿಗೋಗಿ ಊಟ ಮಾಡ್ತೀವಿ. ಅಪ್ಪ ಅಮ್ಮರ ಜತೆ ನೀನೂ ಊಟ ಮಾಡು. ಮನೀಯಾಗೆ ಅಣ್ಣಯ್ಯಾ ಒಮ್ಮೆ ಕಾಯ್ತಾ ಇದಾನೆ” ಅನ್ನುತ್ತಾ ಮಳಿಯಪ್ಪಯ್ಯ ಪತ್ನಿ ಜತೆ ಮುಂದೆ ನಡೆದರು.
ಹಿಂದಿನ ಸಂಚಿಕೆ: 13. ಮತ್ತೆರಡು ಬಂಡಿ ತಂದರು
ಬೆಳಿಗ್ಗೆ ಗೌಡ್ರ ಚಿಕ್ಕಪ್ಪ ಎಮ್ಮೆದನಗಳ ಹಾಲು ಕರೆದುಕೊಂಡು ಮಾಮೂಲಿನಂತೆ ಜಂಗಮೈಗಳಿಗೆ ನೊರೆ ಹಾಲು ತುಂಬಿದ ಒಂದು ತಂಬಿಗೆಯನ್ನು ಕೊಡಲು ಹೋದರೆ ಶಿವಲಿಂಗಯ್ಯನ ಪತ್ನಿ ನೆಲಕಾರಣಿ ಮಾಡಿ ಬಾಗಿಲ ಪೂಜೆ ಮಾಡುತ್ತಿದ್ದಳು. “ಅಮ್ಮಾ ನಿಮ್ಮ ಮಾವಂದಿರಿಗೆ ನೀವೇ ಹಾಲು ಕೊಡ್ರಿ”. ಎಂದು ತಿಳಿಸಿ ಗೌಡ್ರು ಮುಂದೆ ಹೋಗಿದ್ದರು. ನೀರು ಬಾವಿಯಿಂದ ತುಂಬಿದ ಗಡಿಗೆ ಹೊತ್ತು ಬಂದ ಶಿವಲಿಂಗಯ್ಯನಿಗೆ ಗೌಡರು ನೀಡಿದ ಹಾಲಿನ ಬಗ್ಗೆ ತಿಳಿಸಿ “ಮಕ್ಕಿಲ್ಲ, ಮರಿಇಲ್ಲ. ಹಾಲಿಟ್ಕಂಡು ನಾವೇನ ಮಾಡನಾ ನೀವೇ ಹೋಗಿ ಮಾವಯ್ಯರ ಮನಿಗೆ ಕೊಟ್ಟು ಬರಿ” ಅಂದಳು.
‘ಇನ್ನು ಮೇಲೆ ಪ್ರತಿದಿನ ಇದೊಂದು ಕೆಲಸ ಮಾಡಬೇಕು’ ಅಂದುಕೊಂಡು “ಒಂದು ಲೋಟದಷ್ಟು ಹಾಲು ಬಳಸಿಗಂಡು ತಂಬಿಗೆ ಕೊಡು ಅಣ್ಣಯ್ಯಾರಿಗೆ ಕೊಟ್ಟು ಬರ್ತಿನಿ” ಅನ್ನುತ್ತಾ ಹಾಲ ತಂಬಿಗೆಯೊಂದಿಗೆ ಅಣ್ಣಂದಿರ ಮನೆಯತ್ತ ನಡೆದ. ಮರುಳಯ್ಯನ ಮನೆಯಲ್ಲಿ ಆತ ಪತ್ನಿಯ ಜತೆ ಕುಡಿಯುವ ನೀರು ತರಲು ಊರ ಬಾವಿ ಕಡೆಗೆ ಹೋಗಿದ್ದ. ಮನೆಯಲ್ಲಿದ್ದ ಮುರಿಗೇಂದ್ರಯ್ಯನಿಗೆ “ಗೌಡ್ರು ದಿನಾ ಕೊಡತಿದ್ದಂಗೆ ತಂಬಿಗೆ ತುಂಬಾ ನೊರೆ ಹಾಲು ಕೊಟ್ಟಿದಾರೆ. ನಿಮಿಗೊಂದಿಷ್ಟು ಉಳಿಸಿಗಂಡು ದೊಡ್ಡಪ್ಪಯ್ಯಾರಿಗೆ ಕೊಡಬೇಕಂತೆ ಅಮ್ತ್ ಅಪ್ಪಯ್ಯಗೆ ಹೇಳು” ಎಂದು ತಿಳಿಸಿ ಹಾಲಿದ್ದ ತಂಬಿಗೆಯನ್ನು ಬಾಲಕ ಮುರಿಗೇಂದ್ರಯ್ಯನ ಕೈಯ್ಯಲ್ಲಿರಿಸಿ ಶಿವಲಿಂಗಯ್ಯ ಹಿಂತಿರುಗಿದ.
ಹಿಂದಿನ ಸಂಚಿಕೆ: 14. ಗೌನಳ್ಳಿ ಬದುಕಿನಲ್ಲಿ ಬಂಡಿಗಳ ಪಾತ್ರ
ಮರುಳಯ್ಯ ಮತ್ತು ಆತನ ಪತ್ನಿ ನೀರಿನ ಗಡಿಗೆಗಳನ್ನು ಹೊತ್ತು ಮನೆಗೆ ಬಂದವರಿಗೆ ಮುರಿಗೇಂದ್ರಯ್ಯ ಚಿಕ್ಕಪ್ಪ ಶಿವಲಿಂಗಯ್ಯ ತಿಳಿಸಿದುದನ್ನು ಹೇಳಿ ಹಾಲಿನ ತಂಬಿಗೆ ತೋರಿಸಿದ. “ಈ ಗೌಡ್ರ ಋಣ ಇನ್ನಾ ಮುಗಿಯಂಗಿಲ್ಲ” ಅಂದು “ಲೇ ಇವೆ, ಹಾಲು ಬೇಕಿದ್ರೆ ಒಂದು ಲೋಟದಷ್ಟು ತಗಂಡು ಬಿಡು. ಮಿಕ್ಕಿದ್ದನ್ನ ಅಣ್ಣಯ್ಯಾರ ಮನಿಗೆ ಕೊಟ್ ಬತ್ತೀನಿ” ಅಂದ. ಆತನ ಪತ್ನಿ ಒಂದು ಲೋಟದ ತುಂಬಾ ನೊರೆ ಹಾಲನ್ನು ಬಸಿದುಕೊಂಡು ಅರ್ಧ ತಂಬಿಗೆ ಹಾಲನ್ನು ಗಂಡನ ಕೈಗೆ ನೀಡಿದಳು. ಅದನ್ನು ಕೈಲಿಡಿದು ಅಣ್ಣ ಮಳಿಯಪ್ಪಯ್ಯರ ಮನೆಗೆ ಹೋದರೆ, ಅಣ್ಣನೇ ನೀರು ತರಲು ಹೋಗಿದ್ದು ಅತ್ತಿಗೆ ಮತ್ತು ರುದ್ರಯ್ಯ ಮನೆಯಲ್ಲಿದ್ದರು.
“ಗೌಡ್ರು ದಿನಕೊಡತಿದ್ದಂಗೆ ಒಂದು ತಂಬಿಗೆ ಹಾಲು ಕೊಟ್ಟಿದಾರೆ. ನಾನೊಂದು ಲೋಟಾ ಶಿವಣ್ಣ ಒಂದು ಲೋಟ ತಗಂಡಿದೀವಿ. ಈಗ ಅರ್ಧ ತಂಬಿಗೆ ಹಾಲಿದೆ ತಗೋಳಕ್ಕಾ” ಅಂದು ಹಾಲಿನ ತಂಬಿಗೆಯನ್ನು ಚಾಚಿದ. ರುದ್ರಯ್ಯ ಬಂದು ಹಾಲಿನ ತಂಬಿಗೆಯನ್ನು ಇಸಗೊಂಡ. “ಚಿಕ್ಕಪ್ಪಾ ತಡೀಬೇಕಂತೆ ತಂಬಿಗೆ ಕೊಡತೀನಿ” ಅಂದು ಹಾಲನ್ನು ಸುರುವಿಕೊಂಡು ಖಾಲಿ ತಂಬಿಗೆಯನ್ನು ತಂದುಕೊಟ್ಟ. “ತಡಿಯೋ ತೊಳಕೊಡತೀನಿ” ಅನ್ನುತ್ತ ಅವನ ತಾಯಿ ಅಡಿಗೆ ಕೋಣೆಯಿಂದ ಹೊರಬಂದರು.
ಹಿಂದಿನ ಸಂಚಿಕೆ ಓದಿ: 15.ಹಿರೇ ಬಡಗಿ ಗೌನಹಳ್ಳಿಗೆ ಬಂದರು
ನಮ್ಮನೆಯಾಗೆ ತೊಳೀತೀನಿ ಬಿಡ್ರಿ” ಅನ್ನುತ್ತಾ ಮರುಳಯ್ಯ ತಂಬಿಗೆಯೊಡನೆ ಮನೆ ಕಡೆ ಹೊರಟ. ಇದಿರಿಗೆ ನೀರಿನ ಗಡಿಗೆಯನ್ನು ಹೊತ್ತು ಅಣ್ಣ ಮಳಿಯಪ್ಪಯ್ಯ ಬಂದರು. “ಇಲ್ಲಿ ಕೊಡಣ್ಣಾ” ಅನ್ನುತ್ತಾ ಅವರ ಹೆಗಲ ಮೇಲಿನ ಗಡಿಗೆಯನ್ನು ಕೈ ಹಾಕಿ ತೆಗೆದುಕೊಂಡು ಅಣ್ಣನ ಮನೆಯತ್ತ ಮರುಳಯ್ಯ ತಿರುಗಿದ. “ಇಲ್ಲಿ ಬಿಡಯ್ಯಾ, ನಾನೇ ಹೊತ್ಕಂಡು ಬರಿದ್ದೆ.” ಏದುಸಿರು ಬಿಡುತ್ತಿದ್ದ ಮಳಿಯಪ್ಪಯ್ಯ ಮಾತಾಡಿದರು.
‘ಹೊಸಾ ಮನೆ ಕಟ್ಟಿಸ್ಟಂಡು ದಿನಾಲೂ ಊರ ಬಾವಿಯಿಂದ ನೀರು ಹೊರೋ ಕೆಲ್ಸಾ ತಗಂಡ ನಮ್ಮಣ್ಣಾ’ ಅಂದುಕೊಂಡು ಅಣ್ಣನ ಮನೆ ಬಳಿಗೆ ಹೋದರೆ ಅತ್ತಿಗೆ ಕಸಬರಿಗೆ ಹಿಡಿದು ಕಸಾ ಗುಡಿಸುತ್ತಿದ್ದರು. ಪಡಸಾಲೆ ಕಂಬದ ಬಳಿ ತುಂಬಿದ ಗಡಿಗೆಯನ್ನಿಳಿಸಿ “ನೀರು ಸುರಕಳಿ, ಇನ್ನೊಂದು ಗಡಿಗೆ ನೀರು ತರೀನಿ” ಅಂದು ನಿಂತ. ಹಿಂದೆ ಬಂದ ಮಳಿಯಪ್ಪಯ್ಯ “ ಇವೆ, ಗುಡಾಣ ತೊಳ್ಳು ನೀರು ಸುರ್ಮಾ ಬಾಲೆ” ಅಂದು ಪತ್ನಿಯನ್ನು ಕ-ರೆದರು.
ಹಿಂದಿನ ಸಂಚಿಕೆ ಓದಿ: 16. ಬಡಗಿ ಕಂಡ ಗೌನಳ್ಳಿ
ಆಕೆ ಗಂಡ ಮೈದುನರಿಬ್ಬರನ್ನು ನೋಡಿ ಮರುಮಾತಾಡದೆ ನೀರಿದ ಗುಡಾಣವನ್ನು ಅಲ್ಲಾಡಿಸಿ ತೊಳೆಯಲು ಹಿತ್ತಿಲ ಬಾಗಿಲ ಕಡೆ ಹೋದರು. “ಇಲ್ಲಿ ಬಿಡಯ್ಯಾ, ಇನ್ನೊಂದು ಗಡಿಗೆ ನೀರು ತಂದ್ರೆ ಸಾಕಾಗುತ್ತೆ” ಎಂದು ಮಳಿಯಪ್ಪಯ್ಯ ತಮ್ಮನಿಗೆ ತಿಳಿಸಿದರು. “ಮೈ ತೊಳಿಯಾಕೆ ಬ್ಯಾಡ್” ಅನ್ನುತ್ತಾ ಅತ್ತಿಗೆ ತಂದಿತ್ತ ಖಾಲಿ ಗಡಿಗೆಯೊಂದಿಗೆ ಮರುಳಯ್ಯ ನೀರು ತರಲು ಊರ ಬಾವಿ ಕಡೆ ತೆರಳಿದ.
ಹಿಂದಿನ ಸಂಚಿಕೆ ಓದಿ: 17. ಕೊಳ್ಳಿ ಇಕ್ಕಿದರು
ಹಿಂದಿನ ಸಂಚಿಕೆ ಓದಿ: 18. ಜಂಗಮಯ್ಯರಿಗೆ ಪುತ್ರೋತ್ಸವ
ಹಿಂದಿನ ಸಂಚಿಕೆ ಓದಿ: 19. ಊರ ಬಾವಿ ತೋಡಿದರು
ಹಿಂದಿನ ಸಂಚಿಕೆ ಓದಿ: 20. ಕಾಮಜ್ಜ ಒಡ್ಡು ಕಟ್ಟಿದ
ಹಿಂದಿನ ಸಂಚಿಕೆ ಓದಿ: 21. ದುಷ್ಟನಿಂದ ದೂರ ಹೋದವರು
ಹಿಂದಿನ ಸಂಚಿಕೆ ಓದಿ: 22.ಜಂಗಮಯ್ಯರಲ್ಲಿ ಬಿಕ್ಕಟ್ಟು
ಹಿಂದಿನ ಸಂಚಿಕೆ ಓದಿ: 23.ಜಂಗಮಯ್ಯರ ಗೃಹ ನಿರ್ಮಾಣ