ಸಂಡೆ ಸ್ಪಷಲ್
Kannada Novel: ಕರುವುಗಲ್ಲು ನೆಟ್ಟು ಊರು ಕಟ್ಟಿದರು – 2
CHITRADURGA NEWS | 08 SEPTEMBER 2024
ಅಂಥದೊಂದು ಕಾಲವಿತ್ತು. ನಮ್ಮ ಪೂರ್ವಿಕರು ಪಶುಪಾಲಕರಾಗಿದ್ದ ಕಾಲವದು. ತಮ್ಮ ಪಶುಗಳಿಗೆ ಹುಲ್ಲು ನೀರು ಹುಡುಕಿಕೊಂಡು ಒಂದು ಕಡೆ ನೆಲೆ ನಿಲ್ಲದೆ ಅಲೆಮಾರಿಗಳಾಗಿ ಪರದಾಡುತ್ತಿದ್ದವರು ತಮಗೆ ಸೂಕ್ತಕಂಡ ಸ್ಥಳದಲ್ಲಿ ನೆಲೆ ನಿಂತು ಬದುಕು ಕಟ್ಟಿಕೊಳ್ಳುತ್ತಿದ್ದ ಕಾಲ.
ಒಂದೆರಡು ಸಣ್ಣ ಗುಂಪುಗಳು ಹಿರಿಯೂರು ತಾಲೂಕಿನ ವಾಯುವ್ಯ ಗಡಿ ಭಾಗದಲ್ಲಿ ಎರಡು ಗುಡ್ಡಗಳ ಸಾಲಿನ ನಡುವೆ ಭೂಮಿ ಫಲವತ್ತಾಗಿರುವುದನ್ನ ಕಂಡು- ಕೊಂಡರು. ಅಲ್ಲೊಂದು ಒಡೆದಿದ್ದ ಕೆರೆಯ ಏರಿ ಇತ್ತು. ಕೆರೆ ಒಡಕಿನಲ್ಲಿ ಸಮೃದ್ಧ ನೀರು ಹರಿಯುತ್ತಿತ್ತು. ಇದನ್ನು ಕಂಡವರಿಗೆ ನಿಧಿಯೇ ಸಿಕ್ಕಷ್ಟು ಸಂತೋಷವಾಗಿ ಕೆರೆ ಏರಿಯ ಮೂಡಲಿಗೆ ದನಗಳನ್ನು ತರುಬಿ ಹಲವು ದಿನ ಬೀಡು ಬಿಟ್ಟರು.
ದನ ಮೇಯಿಸುತ್ತಿದ್ದವರಿಗೆ ಇದ್ದಕ್ಕಿದ್ದಂತೆ ನೀರಿನ ಪ್ರವಾಹ ಕಾಣಿಸಿಕೊಂಡಿತ್ತು, ಅಲ್ಲೆಲ್ಲೂ ಮಳೆ ಸುರಿದಿರಲಿಲ್ಲ. ಆದರೂ ನೀರಿನ ಪ್ರವಾಹ ಎರಡು ಗುಡ್ಡಗಳ ನಡುವಿನ ತಗ್ಗಿನಲ್ಲಿ ಬಡಗಣಿಂದ ತೆಂಕಲಿಗೆ ವಿಶಾಲವಾಗಿ
ಹರಡಿಕೊಂಡು ಹರಿಯುತ್ತಿತ್ತು. ಇದರಿಂದ ವಿಸ್ಮಯಗೊಂಡ ಅವರು ನೀರಿನ ದಂಡೆಗುಂಟಾ ಬಡಗಣೆಡೆಗೆ ನಡೆದುಕೊಂಡು ಹೋದರು,
ಅಲ್ಲೆಲ್ಲೋ ಒಂದು ಕಡೆ ನೀರು ಹೊಳೆ ರೂಪದಲ್ಲಿ ಹರಿಯುತ್ತಿತ್ತು. ಅದರ ಪಡವಲಿಗೆ ಸಮತಟ್ಟಾದ ನೆಲ ಕಾಣಿಸಿತು. ಅಲ್ಲಿ ಕೆಲವು ದಿನ ದನದ ಮಂದೆಯನ್ನು ತರುಬಿ, ಕೆಲವರು ಸೋಮೇರಳ್ಳಿಗೆ ಹಿಂದಿರುಗಿ ಭತ್ತೇವು ತಂದರು.
ಆ ಜಾಗದಲ್ಲಿ ದನಕರುಗಳು ನಿರುಮ್ಮಳವಾಗಿದ್ದವು. ಇದರಿಂದ ಉತ್ತೇಜಿತರಾದ ಅವರು ಈ ಜಾಗದಲ್ಲಿ ಊರು ಕಟ್ಟಬೇಕೆಂದು ತೀರಾನಿಸಿ ವೇಣುಕಲ್ಲುಗುಡ್ಡದ ಪಟ್ಟದ ಸಿದ್ದಯ್ಯ ಸ್ವಾಮಿ, ಮಂಗರಾಯಪಟ್ಟದ ನೀಲಕಂಠಯ್ಯ ಮತ್ತು ಭರಮಗಿರಿ ಪಟೇಲರಂಗಪ್ಪ ಇತ್ಯಾದಿ ಜನರನ್ನು ಕರೆಸಿ ಮಾರನೇ ದಿನ ನೀರೆಲ್ಲಾ ಬಸಿದು ಸಣ್ಣ ಹೊಳೆಯಾಗಿ ಹರಿಯುತ್ತಿದ್ದಾಗ ಅದನ್ನು ದಾಟಿ ಸಮತಟ್ಟು ನೆಲದಲ್ಲಿ ಒಂದು ಕರುವುಗಲ್ಲು (ಕುರುಹುಕಲ್ಲು) ನೆಡಿಸಿ ವಾಸಕ್ಕೆ ಮನೆ ಕಟ್ಟಿಕೊಂಡರು.
ಅಲ್ಲಿಂದ ಪಡುವಲಿಗೆ ಮತ್ತು ಮೂಡಲಿಗೆ ಸಮಾನ ದೂರದಲ್ಲಿ ಗುಡ್ಡದ ಸಾಲು ಹಬ್ಬಿತ್ತು. ಇದು ಊರವರಿಗೆ ಸ್ವಾಭಾವಿಕ ರಕ್ಷಣೆ ಒದಗಿಸಿತ್ತು. ಊರ ಮುಂದೆ ಹಳ್ಳ ಒಂದೇ ಫರಾಂಗ್ ದೂರ ಇದ್ದು ಕುಡಿಯುವ ನೀರಿಗೆ ಆಸರೆಯಾಗಿತ್ತು. ಇದು ಬೇಸಿಗೆ ಕಾಲದಲ್ಲೂ ಸಣ್ಣಗೆ ಹರಿಯುತ್ತಿದ್ದುದರಿಂದ ದನಕರುಗಳಿಗೆ ನೀರಾಸರೆ ಒದಗಿಸಿತ್ತು.
ಊರ ಮುಂದಿನ ಹಳ್ಳದ ಪಡವಲ ದಂಡೆಯ ಭೂಮಿಯನ್ನು ಅದರ ತೆಂಕಲಿಗೆ ಉದ್ದಕ್ಕೂ ಬಿತ್ತಿ ಬೆಳೆಯಲು ಹಸನು ಮಾಡಿಕೊಂಡರು. ಕರುವುಗಲ್ಲು ನೆಡಿಸಿದ ಮನೆತನದವರು ಕೆರೆ ಒಡಕಿನಿಂದ ಬಡಗಣಕ್ಕೆ ನೂರು ಎಕರೆಯಷ್ಟು ನೆಲವನ್ನು ತಮ್ಮ ಸುಪರ್ದಿಗೆ ಒಳಪಡಿಸಿಕೊಂಡರೆ, ಹಿಂದೆ ಬಂದವರು ಹಳ್ಳದ ಮೂಡಲ ಭಾಗದ ನೆಲವನ್ನು ಹಸನು ಮಾಡಿಕೊಂಡರು.
ಒಂದೊಂದೇ ಕುಟುಂಬದ ಗುಂಪುಗಳು ಆಗಮಿಸಿ ಸರಿಕಂಡಲ್ಲಿ ವಾಸಕ್ಕೆ ಮನೆ ನಿರಿಸಿಕೊಂಡು ಭೂಮಿ ಖಾಲಿ ಇದ್ದುದನ್ನು ಹಸನು ಮಾಡಿಕೊಂಡು ಬಿತ್ತಿ ಬೆಳೆಯಲು ಮುಂದಾದರು.
ಹೀಗಾಗಿ ಹತ್ತಾರು ಕುಟುಂಬಗಳು ಬಂದು ನೆಲೆಯೂರಿದ ಊರಿಗೆ ಗವುನಳ್ಳ, ಗೌನಳ್ಳಿ ಎಂದು ಕರೆದುಕೊಂಡರು. ಈ ಜನರು ಇಲ್ಲಿಗೆ ಬಂದು ನೆಲಸುವುದಕ್ಕೆ ಮುಂಚೆ ಕೆರೆ ಏರಿಯ ಮೂಡಲಕ್ಕಿದ್ದ ಊರನ್ನು ಮಂಗರಾಯನ ಪಟ್ಟ ಎಂದು ಕರೆಯಲಾಗುತ್ತಿತ್ತು. ಕೆರೆ ಏರಿಯನ್ನು ನಿರಿಸಿದಾತನೂ ಮಂಗರಾಯನೇ.
ಪಟ್ಟಕ್ಕೆ ಹೊಂದಿಕೊಂಡು ಅದರ ಮೂಡಲಕ್ಕಿದ್ದ ಮರಡಿಯನ್ನು ಪಟ್ಟಪದಲ ಹೆಸರಿನಿಂದ ಗುರುತಿಸಲಾಗುತ್ತಿದೆ. ಹೊಳೆಯಲ್ಲಿ ಪ್ರವಾಹ ಒಂದು ಕೆಲಿ ಎಲ ಒಡೆದು ಹೋಗಿರಬೇಕು. ಕೆರೆ ಒಡಕಿನ ಅಕ್ಕಪಕ್ಕದ ಏರಿ ಈಗಲೂ 59, 4 ಅಡಿ ಎತ್ತರವಿದೆ. ಮೂಡಲ ಭಾಗದ ಕೆರೆ ಏರಿಯ ಮೇಲೆ ಸಾಲು ಹುಡಿ – ಮರಗಳಿವೆ. ಕೆರೆ ಒಡಕಿನ ಬಳಿ ತೂಬು ಇದ್ದಿರಬೇಕು. ಆದರೆ ಅದರ ಕುರುಹು, ಮಾತ್ರ ಇಲ್ಲ. ಎಷ್ಟು ವರ್ಷಗಳ ಹಿಂದೆ ಈ ಕೆರೆಯನ್ನು ನಿನ್ನಿಸಲಾಗಿತ್ತೋ ತೂಬಿನ ಕಲ್ಲುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿರಬೇಕು.
ಊರ ಕರುವುಗಲ್ಲು ನೆಟ್ಟವರು ಆವಿನ ಕಾಮರಾಯನ ಮೂಲದವರೆಂದ ಇಲ್ಲಿಗೆ ಬಂದು ನೆಲಸುವುದಕ್ಕೆ ಮುಂಚೆ ಕೆಲ ಕಾಲ ತಾಲೂಕು ಕೇಂದ್ರವಾಗಿರುವ ಹಿರಿಯೂರಿನ ತೆಂಕಲಿಗಿರುವ ಸೋಮೇರಹಳ್ಳಿಯಲ್ಲಿ ತಂಗಿದ್ದರಂತೆ, ಹಿಂದೆ ಸುಮಾರು 35 ಕಡೆಗಳಲ್ಲಿ ಕೆಲವು ಕಾಲ ತಂಗಿದ್ದು ಅಲ್ಲೆಲ್ಲಾ ಊರಿನ ಗೌಡಿಕೆ ಮತ್ತು ದೈವದ ಪೂಜಾರಿಕೆಯನ್ನು ಮಾಡಿಯೂ ಇವರಿಗೆ ಸರಿಕಾಣದೆ ಊರಿಂದೂರಿಗೆ ಅಲೆದಾಡಿದ್ದರಂತೆ.
ಇವರೆಲ್ಲಾ ಈಗಿನ ಆಂಧ್ರಪ್ರದೇಶದ ರಾಯದುರ್ಗ ತಾಲೂಕಿನ ತೆಂಕಲಗಡಿಯ ಹೆಂಜೇರು/ಹೇಮಾವತಿಯ ಹೆಂಜೇರು ಸಿದ್ದೇಶ್ವರ ದೇವರ ಭಕ್ತರಾಗಿದ್ದಾರೆ. ಹಾಗೆಯೇ ಹಿಂದೊಮ್ಮೆ ಮುಖ್ಯ ಊರಾಗಿದ್ದ ವೇಣುಕಲ್ಲು ಗುಡ್ಡದ ಜಂಗಮರನ್ನು ತಮ್ಮ ಗುರುಗಳೆಂದು ಸ್ವೀಕರಿಸಿಕೊಂಡು ಅವರಿಂದ ಪೂಜೆ, ದೀಕ್ಷೆ ಇತ್ಯಾದಿ ಪಡೆದುಕೊಳ್ಳುತ್ತಿದ್ದರು. ಹೇಮಾವತಿಯ ಹಾದಿಯಲ್ಲಿರುವ ಹರಿಯಬ್ಬೆಯ ಏಳು ಮಂದಿ ಅಕ್ಕಗಳಿಗೂ ಪೂಜೆ ಮಾಡಿಸುತ್ತಿದ್ದರು.
ಇವರ ನಂತರ ಗೌನಳ್ಳಿಗೆ ವಲಸೆ ಬಂದು ನೆಲೆ ನಿಂತವರು ಹೊಸಳ್ಳಿ ಈರಬಡಪ್ಪನ ಮೂಲದವರೆಂದು ಗುರುತಿಸುವ ಮತ್ತು ಈಗ ಗೊಂಚಿಕಾರರ ಗುಂಪು ಎಂದು ಗುರುತಿಸಿಕೊಂಡಿರುವ ಬೆಳ್ಳೇನವರು. ಇವರು ಊರ ಮುಂದಲ ಹಳ್ಳದ ಮೂಡಲ ದಂಡೆಯ ಭೂಮಿಯನ್ನು ಹಸನುಗೊಳಿಸಿಕೊಂಡು ಉಳುಮೆ ಮಾಡತೊಡಗಿಕೊಂಡರು. ಅನಂತರ ಗೌನಳ್ಳಿಗೆ ಬಂದು ನೆಲೆಕಂಡುಕೊಂಡ ಕುಟುಂಬಗಳವರು ಊರಿನ ಬಡಗಣ ಮತ್ತು ಪಡುವಲ ದಿಕ್ಕಿನ ಭೂಮಿಯನ್ನು ಹಸನುಗೊಳಿಸಿಕೊಂಡರು.
ಇವರ ವಿಶೇಷವೆಂದರೆ ಎಲ್ಲರೂ ಕುಂಚಿಟಿಗರಾಗಿದ್ದುದು. ಗೊಂಚಿಕಾರರ ಗುಂಪು ಕೊಟ್ಟೂರು ಬಳಿಯ ಉಜ್ಜಿನಿಯ ಮರುಳುಸಿದ್ದೇಶ್ವರನ ಭಕ್ತರಾದರೆ, ಇನ್ನೊಂದು ಪಂಗಡದವರು ಬೇಲೂರ ಚೆನ್ನಕೇಶವನ ಭಕ್ತರು. ಎಲ್ಲಿಂದೆಲ್ಲಿಯ ಸಂಬಂಧಗಳೋ. ಬಹುಶಃ ಇವರು ಅತ್ತಣಿಂದ ಭದ್ರ ನೆಲೆಗಾಗಿ ಇಲ್ಲಿಗೆ ಬಂದವರಿರಬೇಕು.
ಮಂಗರಾಯನ ಪಟ್ಟಣ ಯಾವಾಗ ಏಕೆ ಮತ್ತು ಹೇಗೆ ಹಾಳಾಯಿತು ಯಾರಿಗೂ ಗೊತ್ತಿಲ್ಲ. ಇದಷ್ಟೇ ಅಲ್ಲ ಮಂಗರಾಯನ ಪಟ್ಟದ ನೇರ ನೈರುತ್ಯಕ್ಕೆ ಒಂದು ಮೈಲಿ ದೂರದಲ್ಲಿದ್ದ ನಡುವಲಹಳ್ಳಿಯೂ ನಾಶವಾಗಿದೆ. ನಡುವಲಹಳ್ಳಿ ಬಳಿಯಿಂದ ಆಗ್ನೆಯ ದಿಕ್ಕಿಗೆ ಸುಮಾರು ಒಂದು ಕಿಲೋಮೀಟರ್ ದೂರಕ್ಕಿದ್ದ ಗುಡಿಹಳ್ಳಿಯೂ ಹಾಳಾಗಿದೆ.
ಇಲ್ಲಿ ಶ್ರೀ ಮೈಲಾರ ಲಿಂಗ ದೈವದ ಗುಡಿ ಇದೆ. ಹೀಗಾಗಿ ಗುಡಿಹಳ್ಳಿ ಹೆಸರು ಅನ್ವರ್ಥಕವಾಗಿದೆ. ಗುಡಿಹಳ್ಳಿಯಲ್ಲಿ ವಾಸವಿದ್ದ ಮೈಲಾರಲಿಂಗನ ಭಕ್ತರು/ಗೊರವರು ತಮ್ಮ ಊರು ನಾಶವಾಗುವ ಲಕ್ಷಣಗಳು ಕಾಣಿಸಿದಾಗ ಉತ್ತರಕ್ಕೆ ಎರಡು ಮೈಲಿ ದೂರದಲ್ಲಿ ಹೊಸದಾಗಿ ನಿರ್ಮಾಣವಾಗಿದ್ದ ಗೌನಳ್ಳಿಗೆ ಕಾಲಾನಂತರದಲ್ಲಿ ವಲಸೆ ಬಂದು ವಾಸಕ್ಕೆ ಮನೆ ಕಟ್ಟಿಕೊಂಡು ಅಲ್ಲಿಂದಲೇ ಗುಡಿಹಳ್ಳಿ ಗಡಿಯಲ್ಲಿದ್ದ ತಮ್ಮ ಜಮೀನುಗಳಲ್ಲಿ ಉತ್ತಿ, ಬಿತ್ತಿ ಫಸಲು ಪಡೆಯಲಾರಂಭಿಸಿದರು.
ಮಂಗರಾಯನ ಪಟ್ಟದಿಂದ ನೇರ ತೆಂಕಲಿಗೆ ಮೂಡಲ ಗುಡ್ಡದ ತಪ್ಪಲಿನಲ್ಲಿ ಒಂದು ಹಾದಿ ಇತ್ತು. ಇದು ಗುಡಿಹಳ್ಳಿ ಮೂಡಲಕ್ಕಿದ್ದ ಬೆಟ್ಟದ ಮಲ್ಲಪ್ಪನ ಗವಿ ಇರುವ ಗುಡ್ಡದಾಚೆಗಿನ ಕಣಿವೆ ಮೂಲಕ ಹಾದು ಹೋಗುತ್ತಿತ್ತು. ಈ ಕಣಿವೆಗೆ ಕಳ್ಳಣಿವೆ (ಕಳ್ಳತನದ ಕಣಿವೆ) ಎಂಬ ಹೆಸರಿದೆ.
ಈ ಕಣಿವೆಯಲ್ಲಿ ನಡೆಯುತ್ತಿದ್ದ ಹಾದಿ ಹೋಕರ ಸುಲಿಗೆ/ಕಳ್ಳತನಗಳಿಗೆ ಸಮೀಪದ ಗುಡಿಹಳ್ಳಿ ನಿವಾಸಿಗಳೇ ಕಾರಣ ಎಂದೂ, ಇದರಿಂದಲೇ ಊರು ಹಾಳಾಯಿತೆಂದು ನಂಬಿದ್ದಾರೆ. ಗುಡಿಹಳ್ಳಿಯ ಮೈಲಾರಲಿಂಗ ದೈವ ಇವರನ್ನು ಕಾಯಲಿಲ್ಲ.
ಮಂಗರಾಯನ ಪಟ್ಟ ಇದ್ದ ಜಾಗದಲ್ಲಿ ಬಡಗಣಕ್ಕೆ ಟನ್‌ಗಟ್ಟಲೆ ಇದ್ದಿಲರಾಸಿ ಇತ್ತೀಚಿನವರೆಗೂ ಇತ್ತು. ಅದೇ ರೀತಿ ಗುಡಿಹಳ್ಳಿ ಮೈಲಾರಲಿಂಗ ದೈವದ ಗುಡಿಯ ಬಡಗಣ ಮಗ್ಗುಲಲ್ಲಿಯೂ ದೊಡ್ಡ ಇದ್ದಿಲ ರಾಸಿ ಇತ್ತು.
[ಎರಡೂ ಕಡೆಗಳಲ್ಲಿ ಲೋಹದ ಉದ್ದಿಮೆ ನಡೆದಿರಬೇಕೆಂದು ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಜಾನಪದ ಸಂಶೋಧಕ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅಭಿಪ್ರಾಯ ಪಡುತ್ತಾರೆ.]
ಗೌನಳ್ಳಿಯ ಮೂಡಲ ದಿಕ್ಕಿಗಿರುವ ಗುಡ್ಡದ ಸಾಲಿನಲ್ಲಿ ತೆಂಕಲ ದಿಕ್ಕಿಗಿರುವ ಕಳ್ಳಣಿವೆಯಲ್ಲದೆ, ಬಡಗಣಕ್ಕೆ ಒಂದು ಕಿಲೋ ಮೀಟರ್ ದೂರಕ್ಕೆ ಹುಣಿ ಕಣಿವೆ, ಅದರ ಬಡಗಣಕ್ಕೆ ಒಂದು ಕಿ.ಮೀ. ದೂರಕ್ಕೆ ‘ಕಾರಲ ಕಣಿವೆ’. ಅದರ ಬಡಗಣಕ್ಕೆ ಒಂದು ಕಿ.ಮೀ. ದೂರಕ್ಕೆ ‘ಸಂತೆಕಣಿವೆ’ ಮತ್ತು ಅದರ ಬಡಗಣಕ್ಕೆ ಒಂದು ಕಿ.ಮೀ. ದೂರಕ್ಕೆ ‘ಭೂತನ ಕಣಿವೆ’ ಇವೆ. ಸಂತೆಕಣಿವೆ ಬಡಗಣಕ್ಕಿರುವ ತಿಮ್ಮನ ಗುಡ್ಡ ಮತ್ತು ಪಡವಲ ಗುಡ್ಡದ ಎಮ್ಮೆ ತಿರುಗದ ನೆತ್ತಿ ಅತಿ ಎತ್ತರದ ನೆತ್ತಿಗಳಾಗಿವೆ.
[ಐವತ್ತರ ದಶಕದಲ್ಲಿ ಖನಿಜ ಸಂಪತ್ತಿನ ಸರೆಗೆ ಬಂದು ಕಾರಲಕಣಿವೆ ಸಮೀಪದಲ್ಲಿ ಗುಡಾರ ಹಾಕಿಕೊಂಡು 6 ತಿಂಗಳ ಕಾಲ ಗುಡ್ಡಗಳಲ್ಲಿ ಸುತ್ತಾಡಿದ್ದ ಭೂಗರ್ಭ ಶಾಸ್ತ್ರಜ್ಞ ಸುಂದರ್ ಹೆಸರಿನವರು ಎಮ್ಮೆ ತಿರುಗದ ನೆತ್ತಿ ಮತ್ತು ತಿಮ್ಮಪ್ಪನ ಗುಡ್ಡ Hill Station ಗಳೆಂದು (ಎತ್ತರದ ನೆತ್ತಿ) ಗುರುತಿಸಿದ್ದರು! ಸಂತೆ ಕಣಿವೆ ಮತ್ತು ಕಾರಲ ಕಣಿವೆ ನಡುವೆ ಬೃಹದಾಕಾರದ ಸಿಡಿಲೆರಗಿದ ಬಂಡೆ ಇದೆ. ಇದು ಸಿಡಿಲ ಹೊಡೆತಕ್ಕೆ ಸೀಳಿದ್ದು ಕೋಟೆ ಗೋಡೆಯಂತೆ ಕಡಿದಾಗಿದ್ದು ಮೇಲಕ್ಕೆ ಹತ್ತಲಾಗುವುದಿಲ್ಲ.
ಸಂತೆ ಕಣಿವೆ ಮೂಲಕ ಮೂಡಲ ಆದಿರಾಳು ಚಿಕ್ಕೀರಣ್ಣನ ಮಾಳಿಗೆ ಕಡೆಗೆ, ಕಾರಲ ಕಣಿವೆ ಮೂಲಕ ಸೂರಗೊಂಡನಹಳ್ಳಿ ಕಡೆಗೆ ಮತ್ತು ಹುಣಿಸೆಕಣಿವೆ ಮಾರ್ಗವಾಗಿ ಮೂಡಲ ದಿಕ್ಕಿನ ತವಂದಿ ಊರುಗಳಿಗೆ ಕಾಲು ಹಾದಿಗಳಿವೆ. ಭೂತನ ಕಣಿವೆ ಮಾರ್ಗವಾಗಿ ಕರೆಚಿಕ್ಕಯ್ಯನರೊಪ್ಪಕ್ಕೆ ಕಾಲುದಾರಿ ಇದೆ.
ಇನ್ನು ಪಡುವಲ ಗುಡ್ಡಸಾಲು ಮೂಡಲಗುಡ್ಡದ ಸಾಲಿಗಿಂತ ಎತ್ತರವಾಗಿದೆ ಮತ್ತು ಕಡಿದಾಗಿದೆ. ಈ ಗುಡ್ಡ ಸಾಲಿನಲ್ಲಿ ತೆಂಕಲಿಗಿರುವ ಕಣಿಮೆ ಉದಿ ಒಂದು ಫರಾಂಗ್‌ನಷ್ಟು ಅಗಲವಾಗಿದ್ದು ಇದರ ಮೂಲಕ ಎತ್ತಿನ ಬಂಡಿ ಮತ್ತಿತರ ವಾಹನಗಳು ಪಡುವಲ ಗುಡ್ಡದ ಹಿಂದಿರುವ ವಿಶಾಲ ಅರಣ್ಯದೊಳಕ್ಕೆ ಹೋಗಿ ಬರುತ್ತವೆ. ಇದು ಬಿಟ್ಟರೆ ಈ ಗುಡ್ಡದ ಸಾಲಿನ ಮಧ್ಯ ಭಾಗದಲ್ಲಿರುವ ಎಮ್ಮೆ ಕಣಿವೆಯೊಂದೇ ದನಕರುಗಳು ಮುಂತಾದುವು ಕಮರದ ಅರಣ್ಯದೊಳಕ್ಕೆ ಹೋಗಿ ಬರುವ ಮಾರ್ಗವಾಗಿದೆ.
ಈ ಕಣಿವೆಯ ಹೆಸರು ಎಮ್ಮೆಕಣಿವೆ. ಎಂದಿದ್ದರೂ ಎಮ್ಮೆಗಳು ಹತ್ತಿ ಇಳಿಯಲು ತ್ರಾಸು ಪಡುತ್ತದೆ.
ಪಡುವಲ ಗುಡ್ಡದ ಸಾಲಿನಲ್ಲಿ ಕಣಿಮೆ ಉದಿಯಿಂದ ಬಡಗಣಕ್ಕೆ ಸನಿಹದಲ್ಲೇ ಗೊಲಗುಡ್ಡ ಇದ್ದು ಇದರ ಒಂದು ಏಣು ಜಾಮೇನಪ್ಪನ ಏಣು ಎಂದು ಪ್ರಸಿದ್ಧವಾಗಿದೆ. ಹಿಂದೆ ಈ ಭಾಗದಲ್ಲಿ ಹುಲಿಯ ಉಪಟಳ ಜಾಸ್ತಿ ಇತ್ತು.
ಪ್ರತಿ ತಿಂಗಳೂ ಗೌನಳ್ಳಿ ನಿವಾಸಿಗಳ ಒಂದಿಲ್ಲೊಂದು ಆಕಳು, ಎತ್ತು ಮುಂತಾದುವು ಹುಲಿಗೆ ಆಹಾರವಾಗುತ್ತಿದ್ದವು. ಜಾಮೇನಪ್ಪ ದನಗಾಹಿಯಾಗಿ ಹುಲಿಯ ದಾಳಿಗೆ ಈಡಾಗಿ ಗೊಲ್ಲ ಗುಡ್ಡದ ಮಧ್ಯಭಾಗದಲ್ಲಿ ಮರಣಿಸಿರಬೇಕು. ಗೌನಳ್ಳಿಯ ಗೌಡರ ಮತ್ತು ಗೊಂಚಿಕಾರರ ಗುಂಪಿನವರು ಉಗಾದಿ ಹಬ್ಬದ ನಡುವಲ ಹಬ್ಬದಂದು ಜಾಮೇನಪ್ಪನಿಗೆ ಪೂಜೆ ಸಲ್ಲಿಸಿ ಎಡೆ ನೀಡುತ್ತಾರೆ. ಈತ ಬಹುಶಃ ಈ ಗುಂಪಿಗೆ ಸೇರಿದವನಾಗಿರಬೇಕು. ಇದನ್ನು ಪುಸ್ವೀಕರಿಸುವವರಾರೂ ಈಗ ಇಲ್ಲ.
ಎಮ್ಮೆ ಕಣಿವೆಯ ಬಡಗಣಕ್ಕೆ, ಭೂತನ ಕಣಿವೆ (ಇದೇನೂ ಕಣಿವೆಯಲ್ಲ ಈ ಹೆಸರಿನಿಂದ ಕರೆಯಲಾಗುತ್ತಿದೆ) ಅದರ ಪಕ್ಕದ ಎತ್ತರದ ನೆತ್ತಿ, ಎಮ್ಮೆ ತಿರುಗದ ನೆತ್ತಿ ಅದರ ಮೂಡಲ ಭಾಗದ ಗಾಳಿ ಕೊಲ್ಲ ಮತ್ತು ಅದರ ಬಡಗಣ- ಕೈ ಅಲಾದಿಯಾಗಿರುವ ಮರಡಿಗೆ ರಾಮದಾಸನ ಮರಡಿ ಎಂದೆ ಹೆಸರು. ಅಮಾವಾಸ್ಯೆ ಹುಣ್ಣಿಮೆಗಳಂದು (ಮಂಗರಾಯನ) ಪಟ್ಟ ಮರಡಿಯಿಂದ ಒಬ್ಬ ಯೋಗಿ/ಸನ್ನೇಶಿ ಗೌನಳ್ಳಿ ಊರೊಳಗೆ ಹಾಯ್ದು ರಾಮದಾಸನ ಮರಡಿಗೆ ಸೇರುತ್ತಾನೆಂದು ಪ್ರತೀತಿ.
ಹುಣ್ಣಿಮೆ ನಡುರಾತ್ರಿಯಲ್ಲಿ ಕೋಲು ಕುಟ್ಟಿಕೊಂಡು ಹೋಗಿರುವ ಒಬ್ಬರನ್ನು ಕಂಡವರಿದ್ದಾರೆ. ರಾಮದಾಸನ ಮರಡಿಗೆ ಈ ಹೆಸರು ಏಕೆ ಬಂದಿತು ಯಾರಿಗೂ ಗೊತ್ತಿಲ್ಲ.
ಈ ಮರಡಿಯಿಂದ ನೈರುತ್ಯಕ್ಕೆ ಇರುವ ಗುಡ್ಡದ ಸಾಲಿನಲ್ಲಿ ಬಡ ಎತ್ತಿನ ಕಣಿವೆ ಎಂಬುದಿದೆ. ಈ ಭಾಗದಲ್ಲಿ ಅಳಲೆಕಾಯಿ ಮರಗಳು ಇದ್ದು ಅವುಗಳ ಕಾಯಿಗಳನ್ನು ಔಷಧಕ್ಕೆ ಬಳಸುತ್ತಿದ್ದರು. ಕಾಟುಗರ ಹಾವಳಿಯಿಂದ ಇದ್ದ ಬದ್ದ ಮರಗಳೆಲ್ಲಾ ನಾಶವಾಗಿವೆ.
ಬಡ ಎತ್ತಿನ ಕಣಿವೆಯಿಂದ ನೇರ ಬಡಗಣಕ್ಕೆ ಒಂದು ಕಿಲೋ ಮೀಟರ್ ದೂರದಲ್ಲಿ ಕೆಂದಗಾನಹಳ್ಳಿ/ಕೆನ್ನಳ್ಳಿ ಹೆಸರಿನ ಊರು ಇತ್ತು, ಇ ಹಳ್ಳಿಯ ಪಡವಲಕ್ಕೆ ಅರಣ್ಯವಿದ್ದು, ಇದರಲ್ಲಿ ಪಡವಲದಿಕ್ಕಿನ ಊರುಗಳಾದ ಕೊಮಾರನಹಳ್ಳಿ, ಕೆರೆಯಾಗಳಹಳ್ಳಿ, ಉಪ್ಪರಿಗೇನಹಳ್ಳಿಗಳಿಗೆ ಹೋಗಲು ಒಂದು ಕಾಲುದಾರಿ ಇತ್ತು.
ಈ ದಾರಿಯಲ್ಲಿ ಯಾರಾದರೂ ಹೋದರೆ ಬಂದರೆ ಕೆನ್ನಲ್ಲ ನಿವಾಸಿಗಳು (ಎಲ್ಲರೂ ನಾಯ್ಕರ ಜಾತಿಗೆ ಸೇರಿದವರು) ಕಾಡಿನಲ್ಲಿ ಅಡ್ಡಗಟ್ಟ ಸುಲಿಗೆ/ಕೊಲೆ ಮಾಡುತ್ತಿದ್ದರಂತೆ. ಒಬ್ಬ ಬಾಣಂತಿ ಮಗುವಿನ ಸಂಗಡ ಈ ಹಾದಿಯಲ್ಲಿ ಧೈಯ್ಯ ಮಾಡಿ ಬಂದು ತನ್ನಲ್ಲಿದ್ದ ಒಡವೆಗಳನ್ನು ಸುಲಿಗೆಗಾರರು ಕಸಿದುಕೊಂಡಾಗ ಪ್ರತಿಭಟಿಸಿ ಕೊಲೆಯಾಗಿದ್ದಳಂತೆ. ಈ ಜಾಗಕ್ಕೆ ಬಾಣತಿ- ದೊಣೆ ಎಂಬ ಹೆಸರು ಇದೆ.
ಕೊಳಹಾಳು ಕೆಂಚಾವಧೂತರ ಮಗಳು ಚೆಲುವೆ ಭೈರಮ್ಮ
ಗೌನಹಳ್ಳಿ ನಿವಾಸಿಗಳು ಕೊಳಹಾಳಿಗೆ ಹೋಗಿ ಬರುವಾಗ ಅಲ್ಲಿನ ಅವಧೂತ ಕೆಂಚಪ್ಪನ ಮಗಳು ಚೆಲುವೆ ಭೈರಮ್ಮ ಕೊಲೆಯಾಗಿದ್ದ ಮತ್ತು ಭೈರಜ್ಜಿ ಕಣಿವೆ ಎಂದೇ ಹೆಸರಾಗಿದ್ದ ಕಣಿವೆಯ ಕಾಲುದಾರಿಯನ್ನು ಬಳಸುತ್ತಿದ್ದರು. ಆಗಲೂ ಇಬ್ಬರು ಅದಕ್ಕಿಂತ ಹೆಚ್ಚಿನವರು ಇಲ್ಲಿ ಓಡಾಡುತ್ತಿದ್ದರು.
ಈ ಕೃತ್ಯಗಳನ್ನು ನಡೆಸುತ್ತಾ ಬಿತ್ತದೆ, ಬೆಳೆಯದೆ ಕೆನ್ನಳ್ಳಿ ನಾಶವಾಯಿತೆಂದು ಗೌನಳ್ಳಿಗರು ಹೇಳುತ್ತಾರೆ. ತೀರಾ ಇತ್ತೀಚೆಗೆ ಅಂದರೆ 1930ರ ದಶಕದಲ್ಲಿ ಉಳಿದಿದ್ದ ಎರಡು ಮನೆಗಳವರು ಊರು ತೊರೆದು ಚಿತ್ರದುರ್ಗ ಬಳಿಯ ಕುಂಚಿಗನಹಾಳಿಗೆ ವಲಸೆ ಹೋದರೆಂದು ತಿಳಿದು ಬರುತ್ತದೆ.
ಬಡ ಎತ್ತಿನ ಕಣಿವೆಯಿಂದ ಪಡುವಲಕ್ಕೆ ಹಾಲಗುಡ್ಡವಿದೆ. ಬಡ ಎತ್ತಿನ ಕಣಿವೆ ಮತ್ತು ಹಾಲಗುಡ್ಡದ ವಿಶಾಲ ಬಯಲಿನಲ್ಲಿ ಯತೇಚ್ಛವಾಗಿ ಮರಗಿಡಗಳು ಬೆಳೆದಿದ್ದವು. ಈ ಪ್ರದೇಶದ ಮಧ್ಯ ಭಾಗದಲ್ಲಿ ಹತ್ತು ಮೈಲಿ ದೂರಕ್ಕೆ ಕಾಣಿಸುತ್ತಿದ್ದ ಭೂಚಕ್ರದ ಕೊಡೆಯಂತೆ ಎತ್ತರಕ್ಕೆ ಬೆಳೆದು ನಿಂತಿದ್ದ ದೊಡ್ಡ ಕಮರದ ಮರವಿತ್ತು. ಇದರ ಆಸುಪಾಸಿನಲ್ಲಿ ಹಿಂದೆ ಶಂಕರನಹಳ್ಳಿ ಎಂಬ ಚಿಕ್ಕ ಊರು ಇತ್ತು. (ಇದರ ವಿಚಾರ ಮುಂದೆ ಬರುತ್ತದೆ)
ದೊಡ್ಡ ಕಮರದ ಮರದ ಪಡುವಲಕ್ಕೆ ಒಂದು ಕಿಲೋಮೀಟರ್ ದೂರದಲ್ಲಿ ಹಾಲಗುಡ್ಡದ ಕಡೆಯಿಂದ ಹರಿದು ಬರುವ ತ್ರಿಶೂಲದ ಹಳ್ಳಪಕ್ಕದ ಗುಡ್ಡದ ಬಡಗಣ ಮಗ್ಗುಲಲ್ಲಿ ಹರಿಯುವ ಬಸವನಹೊಳೆಗೆ ಸೇರುತ್ತದೆ. ಇಲ್ಲಿ ಮರಗಿಡಗಳು ಒತ್ತಾಗಿ ಬೆಳೆದಿದ್ದು ಒಂದು ಬಗೆಯ ಗೌವ್ವನುವ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಸ್ಥಳದಲ್ಲಿಯೇ ಹಾದಿಹೋಕರನ್ನು ಸುಲಿಗೆ ಮಾಡುತ್ತಿದ್ದುದು ಎಂಬ ನಂಬಿಕೆ ಜನರಲ್ಲಿದೆ.
ಬಸವನಹೊಳೆ ದೊಡ್ಡಕಮರದ ಮರದ ಮಗುಲಲ್ಲಿ ಒಂದು ಮೈಲಿ ದೂರ ಮೂಡಲಕ್ಕೆ ಹರಿದು ಅನಂತರ ಎರಡು ಮೈಲಿ ದೂರದ ಗುಡಿಹಳ್ಳಿವರೆಗೆ ತೆಂಕಣದಿಕ್ಕಿಗೆ ಹರಿಯುತ್ತದೆ. ಈ ಹಳ್ಳವನ್ನು ದೊಡ್ಡಹಳ್ಳ ಎಂತಲೂ ಇದಕ್ಕೆ ಬಡಗಣಿಂದ ಹರಿದು ಬಂದು/ತೆಂಕಣಕ್ಕೆ ತಿರುಗುವ ಮುನ್ನ/ಸೇರುವ ಹಳ್ಳವನ್ನು ಚಿಕ್ಕಹಳ್ಳ ಎಂದು ಕರೆಯಲಾಗುತ್ತದೆ. ಈ ಪರಿಸರದಲ್ಲಿ ಗೋಗುದ್ದು ಎಂಬ ಚಿಕ್ಕ ಗ್ರಾಮ ಬೇಚರಕ್ ಆಗಿದ್ದು ಇಲ್ಲಿನ ಭೂಮಿಗಳನ್ನು ಮುಂಜೂರು ಮಾಡಿಸಿಕೊಂಡ ಬೇರೆ ಊರಿಗರು ಇಲ್ಲಿ ನೆಲಸುತ್ತಿದ್ದಾರೆ. ಇವರಲ್ಲಿ ಬಹುಪಾಲು ಮಲ್ಲಪ್ಪನಹಳ್ಳಿ ಬಳಿಯ ‘ಮಡೇರು’ ಜನಾಂಗದವರಿದ್ದಾರೆ.
ಈ ಹಳ್ಳದ ನೀರು ಎರಡೂ ಪಕ್ಕದ ಜಮೀನುಗಳಲ್ಲಿ ಹರಿದು ಸಾಕಷ್ಟು ಮೆಕ್ಕಲು ಮಣ್ಣು ತಂದು ಹರಡಿ ಇಲ್ಲಿನ ನಿವಾಸಿಗಳು ತಲೆತಲಾಂತರಗಳಿಂದ ಜಮೀನುಗಳಿಗೆ ಗೊಬ್ಬರ ಹಾಕದೇ ಪೈರು ಬೆಳೆದುಕೊಳ್ಳುತ್ತಿದ್ದರು. ಇತ್ತೀಚೆಗೆ ಅಂದರೆ 1958 ರಲ್ಲಿ ಕಡಿದಾಳು ಮಂಜಪ್ಪನವರು ಮುಖ್ಯಮಂತ್ರಿ ಆಗಿದ್ದಾಗ 1958 ರಲ್ಲಿ ಶಂಕುಸ್ಥಾಪನೆ ಮಾಡಿ ತಡವಾಗಿ ಕೆಲಸ ಆರಂಭವಾಗಿ ಈ ಹಳ್ಳಕ್ಕೆ ಅಡ್ಡಲಾಗಿ ಕೆರೆ ನಿರಿಸಿ, ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಸಹಜವಾಗಿಯೇ ಈ ಭೂಮಿ ಫಲವತ್ತಾಗಿದ್ದರೂ ಗೌನಹಳ್ಳಿ ನಿವಾಸಿಗಳು ತೋಟ ತುಡಿಕೆ ಮಾಡುವುದರ ಬದಲು ಕಪಿಲೆ ನೀರಿನಿಂದ ರಾಗಿ, ಮೆಣಸಿನ ಗಿಡ, ಗೋದಿ ಇತ್ಯಾದಿ ಬೆಳೆದುಕೊಂಡರೆ, ಬೆದ್ದಲು ಭೂಮಿಯಲ್ಲಿ ಮಳೆಗಾಲದಲ್ಲಿ ನವಣೆ, ಸಜ್ಜೆ, ಗಿಡತಿಮ್ಮನ ಜೋಳ, ಕೇಸರಿ ಜೋಳ ಮುಂತಾದುವನ್ನು ಬೆಳೆಯುತ್ತಿದ್ದರು.
ಕಡಿಮೆ ಎರೆ ಭೂಮಿ ಇದ್ದು ಅವುಗಳಲ್ಲಿ ಬಿಳಿಜೋಳ, ಕುಸುಮೆ ಇತ್ಯಾದಿ ಬೆಳೆದುಕೊಳ್ಳುತ್ತಿದ್ದರು. ಗೊಂಚಿಕಾರ ಗುಂಪಿನವರು ಎರಡು ತೋಡು ಬಾವಿಗಳನ್ನು ಹೊಂದಿದ್ದರೆ ಗೌಡರ ಗುಂಪಿನವರು ಒಂದು ಬಾವಿ ತೋಡಿಸಿದ್ದರು. ತಲೆಸಿದ್ದಜ್ಜ, ಸಿದ್ರಾಮಜ್ಜ ಹೆಸರಿನವರು ಒಂದು ತೋಡು ಬಾವಿ ಹೊಂದಿದ್ದರು.
ಅಪರೂಪಕ್ಕೆ ಗೊಂಚಿಕಾರರ ಗುಂಪಿನವರು ಐವತ್ತು ತೆಂಗಿನ ಮರದ ಒಂದು ‘ತೆಂಗಿನ ಮಡಿ’ ಹೆಸರಿನ ತೋಟ ಮಾಡಿದ್ದರು. ಈ ಊರಿಗೆ ವಲಸ ಬರುತ್ತಿದ್ದ ಜನರು ಖಾಲಿ ಇದ್ದ ಪ್ರದೇಶಗಳನ್ನು ಉತ್ತು ಬಿತ್ತಿ ಬೆಳೆಯಲು ಸಂ ಮಾಡಿಕೊಳ್ಳುತ್ತಿದ್ದರು.
ಹೀಗೆ ವಲಸೆ ಬಂದು ನೆಲೆ ನಿಂತ ಗೊಲ್ಲರು ತಮ್ಮ ಕುರಿ ಹಿಂಡುಗಳಿಗೆ ಅನುಕೂಲಕರವಾದ ಪಡುವಲ ಗುಡ್ಡದ ತಪ್ಪಲಿನಲ್ಲಿ ಹಟ್ಟಿಗಳನ್ನು ನಿರಿಸಿಕೊಂಡು ಊರಿಗೆ ಹತ್ತಿರದಲ್ಲಿ ತಮ್ಮ ವಾಸದ ಗುಡಿಸಲುಗಳನ್ನು ನಿರಿಸಿಕೊಂಡರು. ಬಹುಶಃ ಗೊಲ್ಲರ ಪ್ರಭಾವದಿಂದ ಗೊಂಚಿಕಾರರ ಗುಂಪಿನವರು ಮತ್ತೆ ಕೆಲವರು ಕುರಿ ಸಾಕಣೆಯನ್ನು ಕೈಗೊಂಡಿದ್ದರು.
ಮೂಡಲ ಗುಡ್ಡ ಮತ್ತು ಪಡುವಲ ಗುಡ್ಡಗಳ ವಾಲಿನ ಮೇಲೆ ಬೆಳಗಿನಿಂದ ಸಂಜೆಯ ತನಕ ಕುರಿ, ಮೇಕೆ ಮತ್ತು ದನಕರುಗಳ ಹಿಂಡುಗಳೇ ಕಂಡು ಬರುತ್ತಿದ್ದವು. ಇವುಗಳನ್ನು ಕಾಯುವ ಹುಡುಗ, ಹುಡುಗಿಯರ ಹಾಡು, ಕೇಕೆ ಮತ್ತು ಪಿಳ್ಳಂಗೋವಿಯ ದನಿಗಳು ಗಾಳಿಯಲ್ಲಿ ತೇಲಿಕೊಂಡು ಊರ ನಿವಾಸಿಗಳಿಗೆ ತಲುಪುತ್ತಿದ್ದವು.
ಊರ ಮುಂದೆ ಹರಿಯುತ್ತಿದ್ದ ಬಸವನಹೊಳೆ ತುಂಬಿ ಹರಿಯುವಾಗ ಜಮೀನುಗಳಲ್ಲಿ ಹರಡಿಕೊಂಡು ಹರಿಯುತ್ತಿದ್ದದು ಕೆಲವೊಮ್ಮೆ ಬೆಳೆದ ಫಸಲಿಗೆ ನಷ್ಟ ಮಾಡಿದ್ದು ಇದೆ. ‘ಧಮ್ಮದ ಊರಿಗೆ ಮಳ ಬಂದು ಕರದ ಊರ ಮುಂದೆ ಹಳ್ಳ ಹರಿಯಿತು’ ಎಂಬ ನುಡಿ ಈಗಲೂ ಚಾಲ್ತಿಯಲ್ಲಿದೆ.