Connect with us

Kannada Novel: 1 ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

Habbida Malemadhyadolage

ಸಂಡೆ ಸ್ಪಷಲ್

Kannada Novel: 1 ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

CHITRADURGA NEWS | 01 SEPTEMBER 2024

ನಾಯಿಗಳು ಬೊಗಳುವುದನ್ನು ಕೇಳುತ್ತಲೇ ಮಂಚಿಗೆಗಳ ಮೇಲೆ ಮಲಗಿದ್ದ ರಾತ್ರಿ ಹೊಲ ಕಾಯುವ ಹುಡುಗರು ಎಚ್ಚರಗೊಂಡು ಖಾಲಿ ಸೀಮೆಎಣ್ಣೆ ಡಬ್ಬಗಳನ್ನು ಬಡಿಯಲಾರಂಭಿಸಿದರು.

ಹುಡುಗರು ನಿದ್ದೆಗೆ ಜಾರುವುದನ್ನೇ ನಿರೀಕ್ಷಿಸುತ್ತಿದ್ದ ಕಾಡುಹಂದಿಗಳ ದಂಡು ಪೈರಿನ ಹೊಲಗಳಿಗೆ ದಾಳಿ ಮಾಡುತ್ತಿದ್ದವು. ನಾಯಿಗಳು ಹಂದಿಗಳ ಬೆನ್ನಟ್ಟಿ ಓಡುತ್ತಿದ್ದ ಕಡೆಗೆ ಮಂಚಿಗೆಯಿಂದಿಳಿದು ತಾವೂ ಓಡಿ ಹಂದಿಗಳನ್ನು ಹುಡುಗರು ಓಡಿಸುತ್ತಿದ್ದರು. ಈ ಹೊಲದಲ್ಲಿ ಡಬ್ಬ ಬಡಿದ ಸದ್ದು ಕೇಳಿ ಪಕ್ಕದ ಜಮೀನಿನವರೂ ಎಚ್ಚರಗೊಂಡು ಪಟಾಕಿ ಸಿಡಿಸುವುದು, ಡಬ್ಬ ಬಡಿಯುವುದನ್ನು ಮಾಡುತ್ತಿದ್ದರು.

ಕಾಡು ಹಂದಿಗಳು ಡಬ್ಬ ಬಡಿಯುವುದು ನಿಲ್ಲುವ ತನಕ ಗಿಡಮರಗಳ ಬಳಿ ಮತ್ತು ಪೊದೆಗಳ ಬಳಿ ನಿಂತು ಅನಂತರ ದಾಳಿ ಮಾಡುತ್ತಿದ್ದವು..

ಗೌನಹಳ್ಳಿಯ ಪಡುವಲಿಗಿರುವ ಗುಡ್ಡದ ಸಾಲಿನ ಹಿಂದೆ ಸಾವಿರಾರು ಎಕರೆ ಅರಣ್ಯವಿದ್ದು, ಅದರಲ್ಲಿ ವಾಸವಿರುತ್ತಿದ್ದ ಕಾಡು ಹಂದಿ ಹತ್ತಿರದ ಹಳ್ಳಿಗಳ ಸುತ್ತಾಮುತ್ತ ಸುಳಿದಾಡುವುದು ಸಾಮಾನ್ಯವಾಗಿತ್ತು.

ಕೆಲವು ದಶಕಗಳ ಹಿಂದೆ ಸುರಿಯುತ್ತಿದ್ದ ಮಳೆ ಕಾಲ ಬದಲಾದಂತೆ ಕಡಿಮೆಯಾಗಿ ಕಾಡಿನಲ್ಲಿ ಕುಡಿಯಲು ನೀರು ಸಿಗುವುದು ಅಪರೂಪವಾಗಿತ್ತು.

ಹಂದಿಗಳು ಬೇರೆ ಹೊಲಗಳ ಕಡೆ ನಡೆದರೆ ಅಥವಾ ನೀರು ಹುಡುಕಿಕೊಂಡು ಹಳ್ಳದ ಕಡೆ ಹೋದರೆ ನಾಯಿ ಬೊಗಳುವುದನ್ನು ನಿಲ್ಲಿಸಿ ಕುಞಗುಡುತ್ತಾ ಅವು ಮಲಗಲು ಸಜ್ಜಾಗುತ್ತಿದ್ದವು. ಹಗಲೆಲ್ಲಾ ಕೃಷಿ ಕಸುಬುಗಳಲ್ಲಿ ನಿರತರಾಗಿ ರಾತ್ರಿಯಾಗುತ್ತಲೇ ನಿದ್ದೆಗೆ ಜಾರುತ್ತಿದ್ದ ಹೊಲ ಕಾಯುವವರೂ ಮತ್ತೆ ನಿದ್ದೆಗೆ ಜಾರುತ್ತಿದ್ದರು.

ಸರಿರಾತ್ರಿಯಲ್ಲಿ ಬಸವನಹೊಳೆ ಹಳ್ಳದ ಮೂಡಲಕ್ಕಿದ್ದ ಪಟ್ಟಮರಡಿಯ ಮಗ್ಗುಲಲ್ಲಿ ಬ್ಯಾಟರಿ ಬೆಳಕಿನಲ್ಲಿ ಕೆಲವರು ಅಡ್ಡಾಡುತ್ತಿದ್ದರು. ಅದನ್ನು ಕಂಡ ನಾಯಿಗಳು ಅತ್ತ ಮುಖಮಾಡಿ ಬೊಗುಳುತ್ತಿದ್ದವು.

ಅಮಾವಾಸ್ಯೆಯ ರಾತ್ರಿ ಸರೊತ್ತಿನಲ್ಲಿ ಬ್ಯಾಟರಿ ಬೆಳಕುಗಳಲ್ಲಿ ಪಟ್ಟಮರಡಿಯ ಪಕ್ಕದ ಬಯಲಿನಲ್ಲಿ ಹೂತಿರುವ ನಿಧಿಗಳ ಶೋಧನೆಗಾಗಿ ಜನ ತಡಕಾಡುತ್ತಿದ್ದರು. ಈ ಪ್ರದೇಶದ ಬಳಿ ಜಮೀನುಗಳು ಇರದಿದ್ದರಿಂದ ಜನ ಅತ್ತ ಸಂಚರಿಸುತ್ತಿರಲಿಲ್ಲ.

ಇದನ್ನೂ ಓದಿ: ಹಬ್ಬಿದಾ ಮಲೆ ಮಧ್ಯದೊಳಗೆ | ಬಯಲು ಸೀಮೆಯ ಮಹಾ ಕಾದಂಬರಿ

ಅವರು ಯಾರೋ ಗೌನಳ್ಳಿಯವರೋ ಅಥವಾ ಬೇರೆ ಊರಿನವರೋ ಅದರ ಬಗ್ಗೆ ಗೌನಹಳ್ಳಿಯ ಜನ ತಲೆ ಕೆಡಿಸಿಕೊಂಡಿರಲಿಲ್ಲ, ತಮಗೇ ಸಾಕನಿಸುವಷ್ಟು ಕೆಲಸವಿರುತ್ತಿದ್ದುದು ಇನ್ನೊಂದು ಕಾರಣವಾಗಿತ್ತು.

ಹಗಲಿನಲ್ಲಿ ದನಕಾಯುವ ಹುಡುಗರು, ಹುಡುಗಿಯರು ಪಟ್ಟಮರಡಿಯ ಬಳಿಗೆ ಹೋದಾಗ ಅಲ್ಲಲ್ಲಿ ಗುಂಡಿ ತೋಡಿರುವುದು, ಕೋಳಿ ಕೊಯ್ದ ರಕ್ತದ ಕಲೆ, ತೆಂಗಿನಕಾಯಿ ಒಡೆದ ಹೋಳುಗಳು, ಹೂವುಪತ್ರೆ ಇತ್ಯಾದಿ ಕಂಡು ಬರುತ್ತಿದ್ದವು. ಗುಂಡಿ ಪಕ್ಕದಲ್ಲಿ ಎಡೆ ಹಾಕಿರುವುದು, ಹೆಂಡದ ಕುಡಿಕೆ ಮತ್ತು ಕೋಳಿಯ ತಲೆ ಪುಕ್ಕ ಮುಂತಾದುವೂ ಕೆಲವು ಕಡೆ ಕಂಡು ಬರುತ್ತಿದ್ದವು. ಇವನ್ನೆಲ್ಲಾ ಯಾರು ಮಾಡುತ್ತಿದ್ದರು ಅನ್ನುವುದು ಮಾತ್ರ ಊರಲ್ಲಿ ಯಾರಿಗೂ ಗೊತ್ತಿರಲಿಲ್ಲ.

ಪಟ್ಟಮರಡಿಯ ಪಡುವಲಕ್ಕಿದ್ದ ಬಯಲಿನಲ್ಲಿ ಹಿಂದೆ ಮಂಗರಾಯನ ಪಟ್ಟಣ ಇದ್ದಿತೆಂದೂ ಅಲ್ಲಿದ್ದ ನಿವಾಸಿಗಳು ತಮ್ಮ ದುಡಿಮೆಯ ನಿಧಿ, ನಗನಾಣ್ಯಗಳನ್ನು ಕುಂಬಾರರ ಮಣ್ಣಿನ ಮಡಿಕೆಗಳಲ್ಲಿಟ್ಟು ಭೂಮಿಯಲ್ಲಿ ಹುದುಗಿಸಿಟ್ಟರುವರೆಂದೂ ಗೌನಹಳ್ಳಿಯ ಜನ ಮಾತಾಡಿಕೊಳ್ಳುತ್ತಿದ್ದರು. ಅಲ್ಲಿ ಕೆಲವರಿಗೆ ನಿಧಿ ಸಿಕ್ಕಿದ್ದು ಅದಕ್ಕೆ ಪುಷ್ಟಿ ನೀಡಿತ್ತು.

ಅಲ್ಲೇ ಹತ್ತಿರದಲ್ಲಿ ನೂರಾರು ಗಾಡಿ ತುಂಬುವಷ್ಟು ಇದ್ದಿಲ ರಾಸಿ ಹರಡಿತ್ತು. ಇದೆಲ್ಲಾ ನೂರಾರು ವರ್ಷ ಹಿಂದೆ ಇಲ್ಲಿ ಬಾಳಿ ಬದುಕಿದ್ದ ಮಂಗರಾಯನ ಪಟ್ಟಣದ ಜನರ ಕಾಣಿಕೆಯಾಗಿದ್ದಿತು. ಮಂಗರಾಯನ ಪಟ್ಟ ಇದ್ದಿರಬಹುದಾದ ಜಾಗದ ಪಕ್ಕದ ಮರಡಿಗೆ ಪಟ್ಟಮರಡಿ ಎಂಬ ಹೆಸರು ಜನಜನಿತವಾಗಿತ್ತು.

ಆ ಸ್ಥಳದಿಂದ ನೇರವಾಗಿ ಪಡುವಲ ದಿಕ್ಕಿಗೆ ನಿರಿಸಿದ್ದ ಒಂದು ಏರಿಯ ಕುರುಹು ಮಾತ್ರ ಇದೆ. ಇದು ಇನ್ನೂ ನೂರಾರು ಸಾವಿರಾರು ವರ್ಷ ಇರಬಹುದು. ಇದಕ್ಕೆ ಮಂಗರಾಯನ ಕೆರೆ ಏರಿ ಎಂದೂ ಕರೆಯಲಾಗುತ್ತಿದೆ.

ಏರಿಯ ಮಧ್ಯ ಭಾಗದಲ್ಲಿ ಕೆರೆ ಒಡಕು ಇದ್ದು ಅದರಲ್ಲಿ ಬಸವನ ಹೊಳೆಯ ನೀರು ಹರಿಯುತ್ತಿರುತ್ತದೆ. ಕೆರೆ ಏರಿ ಬೃಹದಾಕಾರದಲ್ಲಿದ್ದು ಒಡಕಿನ ಅಕ್ಕಪಕ್ಕದ ಏರಿ ಸುಮಾರು ನಲವತ್ತು ಐವತ್ತು ಅಡಿ ಎತ್ತರ ಇದೆ. ಕೆರೆಯ ತೂಬು ಯಾವ ಕಡೆಗಿತ್ತು ಎಂಬುದರ ಕುರುಹು ಮಾತ್ರ ಕಂಡು ಬರುವುದಿಲ್ಲ.

ಏರಿ ನಿರಾತೃ ಮಂಗರಾಯ ತೂಬಿಲ್ಲದ ಕೆರೆಯನ್ನು ನಿರಿಸಿದ್ದನೆ ಅಥವಾ ತೂಬು ಇರಿಸುವ ಕಾಲಕ್ಕೆ ಬಸವನ ಹೊಳೆಯಲ್ಲಿ ಪ್ರವಾಹ ಬಂದು ಏರಿ ಒಡೆಯಿತೆ? ಗೊತ್ತಿಲ್ಲ.

ಅದಿರಲಿ ಮಂಗರಾಯನ ಪಟ್ಟ ಮತ್ತು ಅದರ ತೆಂಕಲಿಗೆ ಬಹಳ ವರ್ಷ ಬೆಚರಾಕ್ ಆಗಿದ್ದು ಈಗ ಜನ ವಸತಿ ಇರುವ ಗುಡಿಹಳ್ಳಿ ಮತ್ತು ಮಂಗರಾಯನ ಪಟ್ಟ ಮತ್ತು ಗುಡಿಹಳ್ಳಿಗಳ ಮದ್ಯದ ನಡುವಲಹಳ್ಳಿ ಹೆಸರಿನ ಹಳ್ಳಿ ಇವೆಲ್ಲಾ ಯಾಕೆ ಮತ್ತು ಹೇಗೆ ನಾಶವಾದವು ಯಾರಿಗೂ ಗೊತ್ತಿಲ್ಲ.

ಗುಡಿಯಳ್ಳಿಯಲ್ಲಿ ವಾಸವಿದ್ದ ನಾಯ್ಕರು ಇವರಲ್ಲಿ ಕೆಲವರು ಗುಡಿಹಳ್ಳಿಯಲ್ಲಿರುವ ಮೈಲಾರಲಿಂಗ ದೈವದ ಗೊರವರು. ಊರುಹಾಳಾಗುವ ಮೊದಲೇ ಮಂಗರಾಯನ ಕೆರೆಯ ಬಡಗಣ ಅಂಚಿನಲ್ಲಿ ಸ್ಥಾಪಿತಗೊಂಡಿದ್ದ ಗೌನಹಳ್ಳಿಗೆ ವಲಸೆ ಬಂದು ಮನೆ ನಿರಿಸಿಕೊಂಡು ಅಲ್ಲಿಂದಲೇ ಗುಡಿಹಳ್ಳಿ ಗಡಿಯಲ್ಲಿದ್ದ ಜಮೀನು ಸಾಗುವಳಿ ಮಾಡುತ್ತಿದ್ದರು.

ಮುಂದುವರೆಯುವುದು…

Click to comment

Leave a Reply

Your email address will not be published. Required fields are marked *

More in ಸಂಡೆ ಸ್ಪಷಲ್

To Top
Exit mobile version