Connect with us

Kannada Novel: 11. ಬಂಡಿ ತಂದ ಬದಲಾವಣೆ

Habbida Malemadhyadolage

ಸಂಡೆ ಸ್ಪಷಲ್

Kannada Novel: 11. ಬಂಡಿ ತಂದ ಬದಲಾವಣೆ

CHITRADURGA NEWS | 01 DECEMBER 2024

ಆಧುನಿಕವಾದ ಎತ್ತಿನ ಬಂಡಿಗಳು ಗೌನಹಳ್ಳಿಗೆ ಬಂದುದು ಒಂದು ಕ್ರಾಂತಿಕಾರಿ ಬದಲಾವಣೆಯಾಗಿತ್ತು. ಗಾಡಿಗಳನ್ನು ತಂದವರಲ್ಲದೆ ಊರಿನ ಜನರೆಲ್ಲಾ ಸಂಭ್ರಮಿಸಿದ್ದರು. “ಹೊರಗಿನ ಪ್ರಪಂಚ ಎಷ್ಟು ಬದಲಾಗಿದೆ. ಮೆಣಸಿನಕಾಯಿ ವ್ಯಾಪಾರಿ ದಾಸಣ್ಣ ನಮಿಗೆ ಗುಬ್ಬಿಗಾಡಿ ಮಹತ್ವ ತಿಳಿಸದಿದ್ರೆ ನಾವು ಮನಸ್ ಮಾಡತಿರಲಿಲ್ಲ. ಆ ಮಾರಾಯನ ಉಪಕಾರ ಮರಿಯೋಕಾಗಲ್ಲ.

ಎಂಥಾ ನಿಯತ್ತಿನ ಮನುಷ್ಯ. ಅವನ ಉದ್ಯೋಗ ಎಲ್ಲಾ ಬಿಟ್ಟು ನಮ್ ಜತೀಗ್ ಬಂದುದ್ದಲ್ಲೆ ನಮ್ ಜತೇಲೇ ಉಂಡ. ನಮ್ ಜತೆಗೇ ಮನಿಕ್ಯಂಡ. ಗುಬ್ಬಿ ಅಂದ್ರೆ ಬಾಳಾ ದೂರ. ಈ ಗುಂಡಾಚಾರಿ ಬಂದವನಲ್ಲಾ ಅವನೂ ಆಕಡೆ ದೇಶದವನೆ”.

“ಈಗ ಇದ್ದಿಲ ಬೆಂಕಿಯಿಂದ ನೀರು ಕಾಯಿಸಿ ಅದರ ಹಬೆಯಿಂದ ಓಡೋ ಬಸ್ ಬಂದೈದಾವೆ. ಅದು ಜಟಕಾ ಗಾಡಿಗಿಂತ ಜೋರಾಗಿ ಓಡುತ್ತೆ. ಚಾರ್ಜು ಏನೂ ಜಾಸ್ತಿ ಇಲ್ಲ. ಹಿರಿವೂರಾಗೆ ಹತ್ತಿಗಂಡ್ರೆ ಸೀರೇವು. ಆ ಮೇಲೆ ತುಮಕೂರು. ಅಲ್ಲಿ ಇಳಿದು ಒಂದು ಸಾಬರ ಜಟಕಾ ಗಾಡೇಗೆ ಗುಬ್ಬಿಗೋಗಬೇಕು. ಜಟಕಾ ಸಾಬಿ ಒಳ್ಳೆ ಜೋರಾಗೇ ಓಡಿದ್ದಾರೆ. ಕುಮರೇನಾ ರಶೀದೇ ಒಂದೀಟು ಸುಮಾರು. ಅಲ್ಲೋಗಿ ಇಟ್ಟು ಬಡಗೇರು ಇರೋ ಜಾಗಕ್ಕೋದ್ರೆ ಅಬಬಬಬ ಅಲ್ಲಿ ಎಂಟತ್ತು ಜನ ಸೇರಿಕ್ಕಂಡು ಒಂದ್‌ಕಡೆ ಗಾಡಿ ಅಚ್ಚು ಕೆಂಪಗೆ ಕಾಯಿಸಿ ದುಂಡಾಡದೇನೂ, ಇನ್ನೊಂಗ್ ಈ ಗಾಲಿ ಗುಂಭ ತಯಾರು ಮಾಡೋದು, ಆರೆಕಾಲು, ಹೊಟ್ಟೆ ಮರ ಉದ್ಯೋರು, ದೊಡ್ ಬಡಗಿ ಗುಂಭಕ್ಕೆ ಉಗುಲು ಹೊಯ್ದು ಆರೇಕಾಲ ಕೂಡುಸ್‌ತಾನೆ.

ಅಂದ್ರೆ ಹಂಗಿಂಗಲ್ಲ. ಎಲ್ಲಾ ಅಳತೆ ಪ್ರಕಾರ ಒಂದೀಟು ಯಶ್ವಾಸಾ ಆಗಂಗಿಲ್ಲ. ಒಂದು ಗುಂಭ ತಯಾರಾಗಕೆ ಕನಿಷ್ಟ ಮೂರ್ ದಿನ ಬೇಕಾಗ್‌ಬೌದು. ಅವರು ಎಷ್ಟು ಎಚ್ಚರಿಕೆಯಿಂದ ಮಾಡ್ತರೇ ಅಂದ್ರೆ ಅಕ್ಕಸಾಲಿಗರು ಚಿನ್ನ ಕರಗಿಸಿ ಉಸಾರಾಗಿ ಒಡವೆ ಮಾಡಿದಂಗೆ ಅಂದ್ಯಂಬಿಡ್ರಿ”. ಗೌಡರ ಗುಂಪಿನಾತ ತನ್ನ ಅನುಭವವನ್ನು ವಿವರಿಸುತ್ತಿದ್ದರೆ ಅಲ್ಲಿದ್ದ ಊರಿನ ಜನ ಬೆಕ್ಕಸ ಬೆರಗಾಗಿ ಆಲಿಸುತ್ತಿದ್ದರು.

ಹಿಂದಿನ ಸಂಚಿಕೆ ಓದಿ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

ಗೌಡ್ರು ಮತ್ತು ಗೊಂಚಿಕಾರರು ದಿನ ಬೆಳಿಗ್ಗೆ ಬೇಸಾಯಕ್ಕೆ ಹೊರಡಬೇಕಾದರೆ
ಬೇಸಾಯದ ಮರ ಮುಟ್ಟನ್ನು ಗಾಡಿಗಳಲ್ಲಿ ಹಾಕಿಕೊಂಡು ಹೊಲಕ್ಕೆ ಹೋಗಿ ಒಂದು ಮರದ ನೆರಳಲ್ಲಿ ಗಾಡಿ ನಿಲ್ಲಿಸಿ ಜಮೀನು ಕೆಲಸಗಳಲ್ಲಿ ನಿರತರಾಗುತ್ತಿದ್ದರು. ಸಂಜೆ ಮನೆಗೆ ಹೊರಡಬೇಕಾದರೆ ಮತ್ತೆ ಮುಟ್ಟೆಲ್ಲವನ್ನು ಗಾಡಿಗೆ ತುಂಬಿಸಿ ಎತ್ತುಗಳಿಗೆ ತಲೆಮೇವನ್ನೂ ಗಾಡಿಯಲ್ಲಿ ಹಾಕಿಕೊಂಡು
ಮನೆಗೆ ಹೊರಡುತ್ತಿದ್ದರು.

ಊರಿನ ಉಳಿದವರು ಎತ್ತುಗಳ ಜತೆ ತಲೆಮೇವನ್ನು ತಲೆ ಮೇಲೆ ಹೊತ್ತು ತರಬೇಕಾಗಿತ್ತು. ಅಕಸ್ಮಾತ್ ಯಾರಾದರೂ ಓಣಿಯಲ್ಲಿ ಜತೆಯಾದರೆ ಅವರ ಮೇವನ್ನು ಗಾಡಿಯಲ್ಲಿ ಹಾಕಿಸಿಕೊಂಡು ಊರಿಗೆ ತರುತ್ತಿದ್ದರು. ಇದು ಎಷ್ಟೇ ಉದಾರತೆಯಿಂದ ನಡೆದಿದ್ದರೂ ಕೆಲವರು ಮುಜುಗರ ಪಡುತ್ತಿದ್ದರು. ‘ನಿಧಾನವಾಗಿ ನಾವು ಗೌಡರ ಮತ್ತು ಗೊಂಚಿಕಾರರ ಮುಲಾಜಿಗೆ ಒಳಗಾಗುತ್ತಿದ್ದೇವೆ’ ಎಂಬ ಭಾವನೆ ಮೊಳಕೆಯೊಡೆಯುತ್ತಿತ್ತು.

ಕೆಲವರು ‘ನಾವೂ ಒಂದು ಹೊಸ ಗಾಡಿ ಕೊಳ್ಳಬಾರದೇಕೆ. ನೂರೋ ನೂರಾಹತ್ತು ರೂಪಾಯಿಗೆ ಒಂದು ಹೊಸಾ ಗಾಡಿ ಕೊಳ್ಳಬೌದು. ದುಡ್ಡು ಹೆಂಗೋ ಜೋಡಿಸಬೌದು, ಆದ್ರೆ ಗುಬ್ಬಿಗೆ ಹೋಗಿ ಹೊಸಾ ಗಾಡಿ ತರೋದೇ ಬಾಳ ತ್ರಾಸಿನ ಕೆಲಸ’ ಅಂದುಕೊಂಡವರೇ ಬಹಳ ಜನ.

ಸುಗ್ಗಿಕಾಲ ಬಂದೇ ಬಿಟ್ಟಿತ್ತು. ಕಣದಲ್ಲಿ ಹುಲ್ಲು ತುಳಿಸಿ ಕಾಳು ಬೇರೂಡಿಸಿ ರಾಸಿ ಮಾಡಿದ ಮೇಲೆ ಮನೆಗೆ ಒಯ್ಯುವ ಸರದಿ ಬಂದಿತ್ತು. ಗೌಡರ ಗುಂಪಿನವರು ಮತ್ತು ಗೊಂಚಿಕಾರರ ಗುಂಪಿನವರು ಸರದಿ ಪ್ರಕಾರ ಮಂಕರಿಗಳಲ್ಲಿ ಕಾಳು ತುಂಬಿ ಗಾಡಿಗಳಲ್ಲಿ ಮನೆಗೆ ಹೇರಿಕೊಂಡಿದ್ದರು. ಊರಲ್ಲಿದ್ದ ಮರಬಂಡಿಯಲ್ಲಿ ಕಣದಿಂದ ಮನೆಗೆ ಕಾಳು ಹೇರುವ ಸಾಹಸಕ್ಕೆ ಒಂದಿಬ್ಬರು ಮುಂದಾಗಿದ್ದರು. ಕೆಲವರು ಮಾತ್ರ ಗೌಡರ ಮತ್ತು ಗೊಂಚಿಕಾರರ ಗಾಡಿಗಳನ್ನು ಎರವಲು ಪಡೆದು ತಮ್ಮ ಧಾನ್ಯವನ್ನು ಕಣದಿಂದ ಮನೆಗೆ ಹೇರಿಕೊಂಡಿದ್ದರು.

ಗಾಡಿ ಕೊಡುವಾಗ “ಹುಡುಗರ ಕೈಲಿ ಗಾಡಿ ಕೊಡಬೇಡಿ. ತುಂಬಿದ ಗಾಡಿ ಏನಾದರೂ ಉರುಳಿಕೊಂಡರೆ ಚಕ್ರದ ಗುಂಭಕ್ಕೆ ಏಟು ಬೀಳುತ್ತದೆ. ಅಂದರೆ ಗಾಡಿಯ ಅರ್ಧ ಆಯಸ್ಸು ಮುಗಿದಂತೇ ಸರಿ. ಆದಷ್ಟೂ ಹುಷಾರಾಗಿ ಹೇರಿಕೊಳ್ಳಿ”, “ಮತ್ತೆ ಅಚ್ಚಿಗೆ ಕೀಲೆಣ್ಣೆ ಹಚ್ಚದೆ ಗಾಡಿ ಹೂಡುವಂತಿಲ್ಲ” ಮುಂತಾಗಿ ಎಚ್ಚರಿಕೆಯ ಮಾತು ತಿಳಿಸಿದ್ದರು.

ಹಿಂದಿನ ಸಂಚಿಕೆ ಓದಿ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು

ಆದಷ್ಟು ಹುಷಾರಾಗಿ ಗಾಡಿ ಹೊಡೆದಾಡಿದ್ದ ಅವರು ‘ಥೋ ತಗಿ ನಾವು ಒಂದು ಹೊಸಾ ಗಾಡಿ ಕೊಂಡು ತಂದರೇನೇ ಬದುಕು ನೆಟ್ಟಗೆ. ಗೊಬ್ರ ಹೇರೋಕೆ, ಕಾಳು ಕಡಿ ಹೇರೋಕೆ ಗಾಡಿ ಬೇಕೇ ಬೇಕು. ಇಲ್ಲದಿದ್ರೆ ಬಾಳಾ ತ್ರಾಸು’ ಎಂಬ ವಿವೇಕ ಮೂಡಿತ್ತು. ‘ಹೊಸಗಾಡಿ ಕೊಳ್ಳಾಕೆ ಯಾರಾರು ಮನಸ್ ಮಾಡಿದಾರೆ ಹುಡುಕಾನಾ ಅಮ್ಮ ಕೆಲವುದಿನ ನೂಕಿದ ಮೇಲೆ ನಾಕೈದು ಜನ ರೈತರು ಹೊಸ ಗಾಡಿ ಕೊಳ್ಳೋರು ಜತೆಯಾಗಿದ್ರು. ಅವರೆಲ್ಲಾ ಜತೆಯಾಗಿ ನೀರಿಗಿಳಿದ ಮೇಲೆ ಚಳಿಯಾದ್ರೇನು, ನೀರಾಗೆ ನೆಂದ್ರೇನು’ ಅತ್ತ ಯೋಚನೆ ಮಾಡಿ ಗಾಡಿ ಕೊಳ್ಳೋಕೆ ಗುಬ್ಬಿಗೋಗಿದ್ದ ಗೌಡ್ರು ಮತ್ತು ಗೊಂಚಿಗಾರ ಮನೇನ್ನೇ ವಿಚಾರಿಸಿದ್ದರು.

“ಒಳ್ಳ ಯೋಚೆ ಮಾಡಿದ್ದೀರ. ಒಂದು ಸಮಸ್ಯೆ ಅಂದ್ರೆ ಅಲ್ಲಿ ಒಂದು ಹೊಸಾ ಗಾಡಿ ಮಾಡಾಕೆ ಕನಿಷ್ಟ ಹದಿನೈದು ದಿವೃ ಬೇಕಾಗುತ್ತೆ. ಯಾರಾದ್ರು ಇಬ್ರು ಅಲ್ಲಿಗೆ ಹೋಗಿ ಹಿರೇ ಬಡಿಗಿ ಹತ್ರ ಮಾತಾಡಿ ಮುಂಗಡ ಕೊಟ್ಟು ಅವರು ಇಂಥಾ ದಿನ ಬರಿ ಅಮ್ಮ ಹೇಳ್ತಾರೆ. ಆವೊತ್ತು ಹೋಗಿ ಹೊಸಾ ಗಾಡಿ ಹೊಡಕಂಡ್ ಬರಬೇಕು. ನೀವು ಇದ್ದಕ್ಕಿದ್ದಂಗೆ ಹೋದ್ರೆ ಗಾಡಿ ಸಿಗಲ್ಲ. ನೀವು ಇಲ್ಲಿಂದ ಎತ್ತುಗಳ ಹೊಡಕಂಡ್ ಹೋದ್ರೆ ವಾಸಿ. ನಮಿಗೆ ಬಡಿಗೇರೇ ಎತ್ತು, ಮತ್ತೆ ಗಾಡಿಗೆಳಾಳುಗಳೂ ಜತೆ ಮಾಡಿಕೊಟ್ಟಿದ್ರು. ಆ ಮಾರಾಯರು ಬಾಳಾ ಹುಷಾರಿಯಿಂದ ಗಾಡಿ ಹೊಡಕಂಡ್ ಬಂದು ಊರು ಮುಟ್ಟಿಸಿದರು.

ನೋಡಿ ನಿಮಿಗೆ ಹೆಂಗೆ ಅನುಕೂಲ ಆಗುತ್ತೋ ಹಂತೆ ಮಾಡಿ” ಅಂತ ಸಲಹೆ ನೀಡಿದ್ದರು. ಎಂಟು ದಿನದ ಬಳಿಕ ಊರಿಗೆ ಬಂದಿದ್ದ ಒಣ ಮೆಣಸಿನಕಾಯಿ ವ್ಯಾಪಾರಿ ದಾಸಣ್ಣ ಕೂಡಾ ಹೀಗೆಯೇ ಅಭಿಪ್ರಾಯಪಟ್ಟಿದ್ದ. “ಕಣ್ಣು ಕುಳ್ಳಾದ್ರೆ ಬಾಯಿ ಕುಳೆ. ಎಲ್ಲಾ ನೆಟ್ಟಗೆ ಇರೋರು ನೀವು. ತುಮಕೂರಿಗೆ ಹೋಗಿ. ಅಲ್ಲಿ ಜಟಕಾ ಗಾಡಿ ಮಸ್ತ್ ಸಿಗತಾವೆ. ಗುಬ್ಬಿಗೆ ಹೊಡಿತೀರೇನಪ್ಪಾ ಅಂದರೆ- ಯಾರನ್ನು ಬಂದೇ ಬತ್ತಾರೆ. ಅಲ್ಲಿಗೋಗಿ ಬಡಗೀರತ ಯಾಪಾರ ಮಾಡತಂಕ ಜಟಕಾ ಬಾಡಿ ವಾಪಾಸ್ ಕಳಿಸ್ ಬ್ಯಾಡ್ರಿ. ಯಾಪಾರ ಮುಗಸ್ಟಂಡ್ ಅದೇ ಜಟಕಾ ಗಾಜೀಗ್ ತುಮಕೂರಿಗೆ ಬಂದು ಬಿಡಿ.

ರಾತ್ರಿಯಾದ್ರೆ ಅಲ್ಲೇ ನಾಕ್ ಮೈಲಿ ದೂರದಾಗೆ ಸಿದ್ದಗಂಗೆ ಮಠ ಐತೆ, ಅಲ್ಲೋಗಿ ಸ್ವಾಮಿಗಳೆ ಅಡ್ಡಬಿದ್ದು ಅಲ್ಲಿ ಉಳಕಂಡ್ ಬಿಡ್ರಿ ಬೆಳಿಗ್ಗೆ ಎದ್ದು ತುಮಕೂರಿಗೆ ಬಂದ್ರೆ ಇಸ್ಲಾಗ್ ಬರಾಕ್ ಇದ್ದಿಲ ಬೆಂಕಿ ಬಸ್ ಸಿಗುತ್ತೆ”. ದಾಸಣ್ಣ ಬಿಡಿಸಿ ಬಿಡಿಸಿ ಹೇಳಿ ಧೈಯ್ಯ ತುಂಬಿದ್ದ. “ದೇವರಿಟ್ಟಿದ್ದಾಗಿ’ ಅಂದುಕೊಂಡು ಗುಬ್ಬಿಯ ಹೊಸಾ ಗಾಡಿ ಕೊಳ್ಳಲು ನಾಲ್ಕು ಜನ ರೊಟ್ಟಿಬುತ್ತಿ ಕಟ್ಟಿಸಿಕೊಂಡು ಗೌನಹಳ್ಳಿಯಿಂದ ಹೊಟ್ಟಿದ್ದರು. ಅವರ ಪುಣ್ಯಕ್ಕೆ ಹಿರಿಯೂರಲ್ಲಿ ಇದ್ದಿಲ ಬೆಂಕಿ ಹಬೆಯ ಬಸ್ ಸಿಕ್ಕಿತ್ತು. ತುಮಕೂರಲ್ಲಿ ಇಳಿದರೆ ಹಗಲೂಟದ ಹೊತ್ತಾಗಿತ್ತು. ಕೂಡಲೇ ಬಸ ನಿಲ್ದಾಣದ ಬಳಿ ನಿಲ್ಲಿಸಿದ್ದ ಜಟಕಾ ಗಾಡಿಯವರ ಕೂಡೆ ಮಾತಾಡಿ ಗುಬ್ಬಿಗೆ ಹೊರಟು ಸಂಜೆಯ ಹೊತ್ತಿಗೆ ತಲುಪಿದ್ದರು.

ಹಿಂದಿನ ಸಂಚಿಕೆ ಓದಿ: 3. ಎಲ್ಲರೂ ಲಿಂಗವಂತರಾದರು

ಹೊಸಾ ಗಾಡಿ ತಯಾರಿಸುವ ಬಡಗಿಗಳ ಕಾರ್ಯಾಗಾರದ ಬಳಿಗೆ ಹೋದರೆ ಅವರೆಲ್ಲಾ ಕೆಲಸ ನಿಲ್ಲಿಸಿ ಮುಖ ಕೈಕಾಲು ತೊಳೆದುಕೊಳ್ಳುತ್ತಿದ್ದರು. ಹಿರಿಯ ಬಡಗಿಯ ಬಳಿಗೆ ತೆರಳಿ “ಸ್ವಾಮಿ ನಾವು ಗೌನಳ್ಳಿಯಿಂದ ಬಂದಿದ್ದೀವಿ. ಗಾಡಿ ಕೊಳ್ಳಬೇಕಾಗಿತ್ತು” ಅನ್ನುತ್ತಲೇ “ಬಾಳ ಸಂತೋಷ, ಬಾಳ ಸಂತೋಷ ಇತ್ತಾಗ್ ಬರ್ಸ್ ಇಲ್ಲಿ ಕೂಡ್ ಬರಿ. ಹಿರಿಯೂರ್ ಗೌನಳ್ಳಿನಾ. ನಮ್ಮತ್ರ ಎಲ್ಡ್ ಗಾಡಿ ಕೊಂಡ ಜನಾ ಬಾಳ ದೊಡ್ ಮನುಸ್ತು, ನೀವೂ ಅಲ್ಲಿಂದ್ದೇ ಬಂದಿದೀರಾ ಸಂತೋಷ”. ಹಸನ್ಮುಖಿಯಾಗಿ ಹಿರಿಯ ಬಡಗಿ ಮಾತಾಡಿ ಕೂಡಲು ಜಾಗ ತೋರಿಸಿದ್ದರು.

ಗೌನಳ್ಳಿಯವರು ಸ್ವಲ್ಪ ಆತುರದಲ್ಲಿದ್ದಂತೆ ಅವರಿಗೆ ಕಂಡಿದ್ದರು. ಗೌನಳ್ಳಿಯವರ ಪೈಕಿ ಸಿದ್ದಪ್ಪ ಎಂಬಾತ “ಯಜಮಾನ್ರೆ ಜಟಕಾ ಗಾಡಿಗೆ ದೀಪ ಇಲ್ಲ, ಕತ್ತಲಾಗದೊಳಗೆ ತುಮಕೂರೆ ಹೋಗಬೇಕಂತೆ. ‘ನೀವು ಮಾತಾಡಿ ಯಾಪಾರ ಮುಗಿಸಿದ್ರೆ ನಾವೂನೂ ತುಮಕೂರಿಗೆ ಹೋಗಿ ಅಲ್ಲಿಂದ ಸಿದ್ದಗಂಗೆ ಮಠಕ್ಕೋಗಿ ಅಲ್ಲಿ ರಾತ್ರಿ ಉಳಕಾಬೇಕು’ ಅಮ್ಮ ಯೋಚನೆ ಮಾಡಿದೀವಿ” ಎಂದು ಪೀಠಿಕೆ ಹಾಕಿದ್ದರು. “ಏನಪ್ಪಾ ಸಾಬಣ್ಣಾ ಈವೊತ್ತು ರಾತ್ರಿ ಇಲ್ಲಿ ಉಳಕಂಡ್ರೆ ನಿಮ್ಮನೆಯಾಗೆ ನಡೀತೈತಾ” ಬಡಗಿಯವರು ಜಟಕಾ ಗಾಡಿಯವನನ್ನು ವಿಚಾರಿಸಿದ್ದರು.

“ಪಕ್ಕದ ಮನೆ ಗಾಡಿಯೋನು ಗಾಡಿ ಗುಬ್ಬಿಗೋಗಿದೆ. ಕತ್ತು ಅಂತ ಅಲ್ಲೇ ಎಲ್ಲೆರಾ ಉಳಕಂಡಿರ್‌ಬೌದು. ಬೆಳಿಗ್ಗೆ ಬಂದ್ ಬಿಡ್ತಾನೆ ಅಂತ ಹೇಳಿದ್ದಾನೆ. ಆದ್ರೆ ನಿಮಿಗ್ಯಾಕೆ ತೊಂದ್ರೆ ರಾತ್ರಿ ಕುದುರೆಗೆ ಹುಲ್ಲು ಕಮ್ಮಿ ಬರಬೌದು. ನೀವ್ ಮಾತಾಡ್‌ಕಳಿ ನಾನು ಹೋಲ್ಲೋಗ್ತಿನಿ”. ಜಟಕಾ ಸಾಬಿ ಮಾತಾಡಿದ್ದ. “ಕುದುರೆಗೆ ಹುಲ್ಲಿಗೆ ನೀನೇನ್ ಯೋಶ್ನೆ ಮಾಡಬೇಡ. ಹುಲ್ಲು ಕೊಡತೀವಿ” ಎಂದು ಅವನಿಗೆ ಅಭಯ ನೀಡಿ, “ಸಿದ್ದಪ್ಪರೇ ನೀವೂನು ಇಲ್ಲೇ ರಾತ್ರಿ ಉಳಕಂಡ್ ಬಿಡಿ. ಬೆಳಿಗ್ಗೆ ಇದೇ ಕುದುರೆ ಗಾಡೇಗೆ ತುಮಕೂರಿಗೆ ಹೋಗೀರಂತೆ”, ಹಿರಿಯ ಬಡಗಿ ತಮ್ಮ ಅನುಭವದ ಮಾತಾಡಿದ್ದರು.

ಇವರೆಲ್ಲಾ ಮುಖಾಮುಖ ನೋಡಿಕೊಂಡು “ಹಂಗೇ ಆಗಬೌದು, ಆದ್ರೆ ನಮ್ಮಿಂದ ನಿಮಗ್ಯಾಕೆ ತ್ರಾಸು” ಅಂದಿದ್ದರು. “ತಾಸೂ ಗೀಸೂ ಏನೂ ಇಲ್ಲ. ನೀವ್ಯಾಕೆ ಕತ್ತಲಾಗೋಗಿ ಫಜೀತಿ ಪಡ್ತೀರಿ ಹೊಸಾ ಜಾಗದಾಗೆ. ರಾತ್ರಿ ಇಲ್ಲೇ ಇದ್ ಬಿಡಿ. ಬೆಳಿಗ್ಗೆ ಹೋಗೀರಂತೆ. ನಿಮ್ಮೂರೋರು ನಮ್ಮ ಹತ್ರ ಎಳ್ ಹೊಸಾಗಾಡಿ ಕೊಂಡ್ಕೊಂಡೋಗಿ ನಮಿಗೆ ಒಂದ್ ಥರಾ ಒಳ್ಳೇ ಭಾವನೆ ಮೂಡ್ತಿದಾರೆ. ಇಲ್ಲಿಂದ ಗಾಡಿ ಹೊಡಕಂಡ್ ಬಂದಿದ್ರಲ್ಲಾ ಚೆಂಬಸಣ್ಣಾ ಅವನ ಕೈಲಿ ಗಮಗಮಾ ಅಂಬಾ ತುಪ್ಪ ಕಟ್ಟಿದಾರೆ. ಹೊಸಾ ಗಾಡಿ ಕೊಂಡ್ಕೊಂಡ್ ಹೋಗೋ ಜನ ದುಡ್ಟ್ ಯಾಪಾರ ಮುಗಿಸ್ತಾರೆ.

ಹಿಂದಿನ ಸಂಚಿಕೆ ಓದಿ: 4. ಮೈಲಾರಲಿಂಗಸ್ವಾಮಿ ಗುಡಿ ನಿಲ್ದಾಣ

ಆದ್ರೆ ಇವು ಒಳ್ಳೇ ಸಂಬಂಧ ಉಳಿದಾರೆ. ನೀವು ಅಲ್ಲಿಂದ ಬಂದಿದೀರಿ ಅಂದ್ ಮೇಲೆ ನಮಿಗೆ ಅಭಿಮಾನ ಬರುತ್ತೆ.” ಮನದುಂಬಿ ಬಡಗಿ ಮಾತಾಡಿದ್ದರು. “ಆಗಲಿ ಯಜಮಾನೆ ರಾತ್ರಿಗೆ ಮತ್ತೆ ಬೆಳಿಗ್ಗೆಗೆ ನಾವು ರೊಟ್ಟಿ ಬುತ್ತಿ ಕಟ್ಕಂಡ್ ತಂದಿದ್ದೀವಿ. ನಮಿಗೆ ಯಾರಿಗೂ ಅಡಿಗೆ ಮಾಡಿಸ್ ಬೇಡಿ. ಕುದುರೆ ಗಾಡಿ ಸಾಬರಿಗೂ ಊಟ ಕೊಡ್ತೀವಿ. ಊಟದ ಸಮಸ್ಯೆ ಮುಗೀತು. ಇನ್ನಾ ಗಾಡಿ ಯಾಪಾರದ ಮಾತಾಡ ಬೌದು”. ಗೌನಳ್ಳಿ ಸಿದ್ದಣ್ಣ ಮಾತಾಡಿದ್ದರು.

“ಅವಸರಾ ಯಾಕೆ ಬೆಳಿಗ್ಗೆ ಎದ್ದು ನಮ್ಮ ಹೊಸಾ ಗಾಡಿ ನೋಡ್ರಿ. ಬೆಳಿಗ್ಗೇನೇ ಮಾತಾಡನ”. ಹಿರಿಯ ಬಡಗಿ ತಮಾಷೆಯಾಗಿ ಮಾತಾಡಿದ್ದರು. “ರಾಜಾ ಇವರಿಗೆ ಒಂದು ಬಿಂದಿಗೆ ನೀರು, ಒಂದು ತಂಬಿಗೆ, ತಟ್ಟಿ ಪಟ್ಟಿ ತಂದುಕೊಡಪ್ಪಾ” ಅಂತ ಅವರ ಹುಡುಗನಿಗೆ ತಿಳಿಸಿ “ನೀವು ನಿಧಾನಕ್ಕೆ ಮುಖ, ಕೈಕಾಲು ತೊಳಕಂಡ್ ಇಲ್ಲೇ ಹತ್ತಿರದಾಗೆ ಚೆನ್ನಬಸವೇಶ್ವರ ಸ್ವಾಮಿ ದೇವಸ್ಥಾನ ಇದೆ. ನೋಡ್ಕಂಡ್ ಬರಿ. ಆಮೇಲೆ ಊಟ ಮಾಡೀರಂತೆ” ಎಂದು ತಿಳಿಸಿ ಮನೆಯೊಳಗೆ ನಡೆದರು.

ಇವರೆಲ್ಲಾ ಮುಖಕೈಕಾಲು ತೊಳೆದುಕೊಂಡು ರೊಟ್ಟಿಬುತ್ತಿ ಗಂಟುಗಳನ್ನು

ಬಡಗಿಯವರ ಮನೆಯಲ್ಲಿರಿಸಿ ದೇವಸ್ಥಾನದ ಕಡೆಗೆ ಹೊರಟರು.

ಜಟಕಾ ಸಾಬಿ ತನ್ನ ಗಾಡಿಯನ್ನು ಅಂಗಳದಲ್ಲಿ ನಿಲ್ಲಿಸಿ ಕುದುರೆಯನ್ನು

ಚಪ್ಪರದಡಿಯಲ್ಲಿ ಗೂಟಕ್ಕೆ ಕಣ್ಣಿ ಹಾಕಿ. ಅದರ ಮುಂದೆ ಸ್ವಲ್ಪ ಹುಲ್ಲು

ಹಾಕಿ ಇವರನ್ನು ಹಿಂಬಾಲಿಸಿದ್ದ. ದೇವಸ್ಥಾನದಲ್ಲಿ ಪೂಜಾರಿ ಕೆಂಪನೆಯ

ರೇಷ್ಮೆ ಪಂಚೆಯನ್ನುಟ್ಟು, ಅರ್ಧ ಬರಿ ಮೈಯಲ್ಲಿ ಬೆಳ್ಳಿ ಕೊಡವನ್ನು

ಹೊತ್ತು ಗುಡಿಯೊಳಗೆ ನಡೆದಿದ್ದ. ಇವರು ದೇವಾಲಯವನ್ನು ಪ್ರವೇಶಿಸಿ

ತೂಗಾಡುತ್ತಿದ್ದ ಗಂಟೆಯ ಸದ್ದು ಮಾಡಿ ಸ್ವಾಮಿಗೆ ಅಡ್ಡಬಿದ್ದರು. ಇವರನ್ನು

ಕಂಡ ಪೂಜಾರಿ ‘ಯಾವೂರವರು, ಯಾವಾಗ ಬಂದಿರಿ ಏಕೆ ಬಂದಿದ್ದೀರಾ’

ಮುಂತಾಗಿ ವಿಚಾರಿಸಿದ್ದ. ಇವರು ತಾವು ಹಿರಿಯೂರ ಸೀಮೆಯವರು ಹೊಸಾ

ಬಂಡಿಗಳನ್ನು ಕೊಳ್ಳಲು ಬಂದಿರುವುದಾಗಿ ತಿಳಿಸಿದರು.

ಹಿಂದಿನ ಸಂಚಿಕೆ ಓದಿ: 5. ಕೆನ್ನಳ್ಳಿಯ ದುರಂತ

“ಈಗ್ಗೆ ಆರೇಳು ತಿಂಗಳ ಹಿಂದೆ ನಿಮ್ಮ ಊರವರು ನಿಮ್ಮಂತೆ ಹೊಸಾ ಗಾಡಿ ಕೊಳ್ಳಲು ಬಂದಿರುವುದಾಗಿ ತಿಳಿಸಿದ್ದರು. ಯಾಕೆ ನಿಮ್ಮ ಕಡೆ ಯಾರೂ ಹೊಸಾ ಗಾಡಿ ತಯಾರು ಮಾಡುವವರಿಲ್ಲವೆ? ಎಷ್ಟು ದೂರದಿಂದ ಬಂದಿದ್ದೀರಿ. ರಾತ್ರಿ ಎಲ್ಲಿ ಬಿಡಾರ ಮಾಡುತ್ತೀರಿ. ಬೇಕಾದರೆ ಇಲ್ಲಿ ಪಾಗರದಾಗೆ ಮಲಗಬಹುದು. ರಾತ್ರಿ ಊಟಕ್ಕೆ ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ” ಇತ್ಯಾದಿ ಪೂಜಾರಿ ವಿಚಾರಿಸಿದ್ದರು. “ನಮ್ಮ ಕಡೆ ಇಷ್ಟು ವೈನಾಗಿ ಯಾರೂ ಗಾಡಿ ತಯಾರಿಸ್ತಾ ಇಲ್ಲ.

ಅಷ್ಟೆ ಇಲ್ಲೀತಂಕ ಬರಬೇಕಾಯ್ತು. ಮೊದಲು ಬಂದಿದ್ದೋರೂ ನಮ್ಮೂರೋರೆ. ನಮಗೂ ಹೊಸಾ ಗಾಡಿ ಬೇಕಾಗಿದ್ದು, ಅದಕೆ ಕೊಂಡುಕೊಳ್ಳೋಣಾಂತ ಸಾಯಂಕಾಲ ಬಂದ್ವಿ, ರೊಟ್ಟಿ ಬುತ್ತಿ ತಂದಿದ್ದೀವಿ. ರಾತ್ರಿ ಅಲ್ಲೇ ಉಂಡು ಮಲೀಕಳ್ತಿವಿ” ಎಂದು ತಮ್ಮ ತಂಗುವ ವ್ಯವಸ್ಥೆಯನ್ನು ತಿಳಿಸಿದ್ದರು. “ಕುತ್ತಳಿ ಪೂಜೆ ಮಾಡ್ತೀನಿ, ತೀರ್ಥ ಪ್ರಸಾದ ತೆಗಂಡೋಗೀರಂತೆ” ಎಂದು ತಿಳಿಸಿ ಪೂಜೆಗೆ ಸಿದ್ಧರಾದರು. ಪೂಜೆ ಮುಗಿಯುವತನಕ ದೇವಸ್ಥಾನದಲ್ಲೇ ಅಡ್ಡಾಡಿ ತೀರ್ಥ ಪ್ರಸಾದಗಳನ್ನು ಪಡೆದು ಬಡಗಿಗಳ ಅಂಗಳಕ್ಕೆ ಬಂದರು. “ಬಿಸಿ ಸಾರು ಬೇಕಿದ್ರೆ ಹಾಕಿಸ್ಕಳ್ಳಿ, ನೀವು ಮೊಸರನ್ನದ ಬುತ್ತಿ ತಂದಿರಬೇಕು”.

ಹಿರಿಯ ಬಡಗಿ ಕಕ್ಕುಲಾತಿಯಿಂದ ಕೇಳಿದ್ದರು.” ಯಜಮಾನೆ ನಂ ಬುತ್ತಿ ಅನ್ನ ಸ್ವಲ್ಪ ರುಚಿ ನೋಡ್ರಿ” ಎಂದು ಸ್ವಲ್ಪ ಬುತ್ತಿಯನ್ನವನ್ನು ಹಿರಿಯ ಬಡಗಿಗೂ ನೀಡಿದ್ದರು. ಜಟಕಾ ಸಾಬಿ “ಸ್ವಾಮಿ ಬುತ್ತಿ ಅನ್ನ ಭಾಳ ಚೆಂದಾಗದೆ. ಇದೆ ನೀರುಳ್ಳಿ, ಕೆಂಪಿಂಡಿ ಜೋಡಿ ಭೋ ಚೆಂದಾಗದೆ” ಎಂದು ಹೊಟ್ಟೆ ತುಂಬಾ ಉಂಡಿದ್ದ.

ಊಟ ಮಾಡಿದ ಬಳಿಕ ಹಿರಿಯ ಬಡಗಿ ಸೂಚಿಸಿದಂತೆ ಇಬ್ಬರು ಚಪ್ಪರದಲ್ಲಿ, ಮತ್ತಿಬ್ಬರು ಪಕ್ಕದಲ್ಲಿದ್ದ ಹಲಗೆಗಳ ಮೇಲೆ ಮಲಗಿದರೆ ಜಟಕಾ ಸಾಬಿ ಗಾಡಿ ಮತ್ತು ಕುದುರೆಗಳ ನಡುವೆ ಅಡ್ಡಾಗಿದ್ದ. ಮಾಯದ ನಿದ್ದೆ ಅಡರಿಕೊಂಡಿತ್ತು. ಮಾಮೂಲಿನಂತೆ ಗೌನಳ್ಳಿಗರು ನಸುಕಿನಲ್ಲಿ ಎದ್ದು ಹತ್ತಿರದ ಹೊಲಗಳಲ್ಲಿ ಅಡ್ಡಾಡಿ ತಮ್ಮ ನಿತ್ಯಕರಗಳನ್ನು ತೀರಿಸಿಕೊಂಡು ಊರಿಗೆ ಸಮೀಪದಲ್ಲಿದ್ದ ಬಾವಿಯಲ್ಲಿಳಿದು ಮುಖ ಕೈಕಾಲು ತೊಳೆದುಕೊಂಡು ತಮ್ಮ ಇಷ್ಟಲಿಂಗಗಳಿಗೆ ನೀರು ಪ್ರೋಕ್ಷಿಸಿ ಪೂಜೆಯ ಶಾಸ್ತ್ರ ಮಾಡಿಕೊಂಡು ಬಡಗಿಗಳ ಜಾಗಕ್ಕೆ ಬಂದರೆ, ಅಲ್ಲಿ ಕಸಗುಡಿಸುವ ಕೆಲಸದಲ್ಲಿ ಹಲವರು ನಿರತರಾಗಿದ್ದರು.

ಹಿಂದಿನ ಸಂಚಿಕೆ ಓದಿ: 6. ಎಲ್ಲೆಲ್ಲಿಂದಲೋ ಬಂದರು

ಹಿರಿಯ ಬಡಗಿಗಾಗಿ ಕಣ್ಣು ಹಾಯಿಸಿದರೆ ಆತನಾಗಲೇ ಎದ್ದು ಒಂದು ಚಕ್ರದ ಗುಂಭದ ಮರಕ್ಕೆ ಸೀಸದ ಕಡ್ಡಿಯಿಂದ ಗುರುತು ಮಾಡುತ್ತಿದ್ದ. ಅಲ್ಲಿಗೆ ಬಂದ ಇವರನ್ನು ನೋಡಿ “ಚೆಂದಾಗಿ ನಿದ್ದೆ ಮಾಡಿದಿರಾ. ಹೊಸಾ ಜಾಗ” ವಿಚಾರಿಸಿದ್ದ, ಇವರೆಲ್ಲಾ “ನಮಿಗೇನ್ ಸ್ವಾಮಿ ಮಶಾಣದಾಗೂ ನಿದ್ದೆ ಮಾಡ್ತೀವಿ, ಸುಖವಾಗಿ ನಿದ್ದೆ ಮಾಡಿದಿವಿ. ನಮ್ಮನ್ನ ಕಳಿಸಿಕೊಟ್ಟಿದ್ರೆ ಸೆಂದಾಕಿತ್ತು” ಎಂದು ಪೀಠಿಕೆ ಹಾಕಿದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಚೆಂಬಸಣ್ಣಾ “ಅಣ್ಣಾ ಗೌನಳ್ಳೇರು ಹೊಸಾ ಗಾಡಿ ಕೊಂಡ್‌ಳಾಕ್ ಬಂದಿದಾರಂತೆ.

ಇವೇ ಏನು?” ಅನ್ನುತ್ತ ಇವರತ್ತ ನೋಡಿದ್ದ. “ಈಯಪ್ಪೆ ಕಣಪ್ಪಾ ನಿಮ್ಮೂರಿಗೆ ಹೊಸಗಾಡಿ ಹೊಡಕಂಡ್ ಹೋಗಿದ್ದೋನು”. ಹಿರಿಯ ಬಡಗಿ ಪರಿಚಯಿಸಿದ್ದರು. ಸಿದ್ದಣ್ಣ ಮತ್ತು ಉಳಿದವರು ಚೆಂಬಸಣ್ಣನಿಗೆ ನಮಸ್ಕಾರ ಅಂದಿದ್ದು, ಆತನೂ ಇವರಿಗೆ ನಮಸ್ಕಾರ ಹೇಳಿ “ನಿಮೂರು ಬಾಳ ಚೆಂದಾಕಿದೆ. ಸುತ್ತೂ ಗುಡ್ಡ ನಡೆಂತ್ರ ಊರು. ನಿಮ್ಮ ಜಮೀನೂ ಒಳ್ಳೇವು. ಅವು ಗೌಡ್ರು ಗೊಂಚಿಕಾರು ಹೊಸಗಾಡಿ ಕೊಂಡಿದ್ರಲ್ಲಾ ಚೆಂದಾಗಿದಾರಾ” ವಿಚಾರಿಸಿದ್ದ. “ಚೆನ್ನಾಗಿದ್ದಾರೆ. ಅವರೇ ನಮ್ಮನ್ನ ಇಲ್ಲಿಗೆ ಕಲ್ಲಿದ್ದು” ಅಂದಿದ್ದರು.

“ನಿಮ್ ಕಡೆ ಜನ ಬಾಳ ಒಳ್ಳೇ ಜನ ಕಂಡ್ರಿ ಐವತ್ ರೊಟ್ಟಿ, ಕೆಂಪಿಂಡಿ, ತುಪ್ಪ ಕಟ್ಟಿಕೊಟ್ಟಿದ್ರು, ಅಣ್ಣಾರಿಗೂ ತುಪ್ಪ ಕಳಿಸಿದ್ರು, ಇದನ್ನೆಲ್ಲ ಮರಿಯಾಕಾಗಲ್ಲ” ಚೆಂಬಸಣ್ಣ ಉದ್ಧಾರವೆತ್ತಿದ್ದ. ಹಿರಿಯ ಬಡಗಿಯವರು “ಈಗ ನಿಮಿಗೆ ಎಷ್ಟು ಗಾಡಿ ಬೇಕು. ಗಾಡಿ ಎಲ್ಲಾ ತಯಾರಾಗಬೇಕು. ಒಳ್ಳೆ ಒಣಗಿದ ಮುಟ್ಟು ಸಿಗೋದೂ ಕಷ್ಟ” ಅಂದಿದ್ದರು. “ಸ್ವಾಮಿ ನಮಿಗೆ ನಾಲಕ್ಕು ಜನಕ್ಕೂ ನಾಲಕ್ಕು ಹೊಸಾಗಾಡಿ ಬೇಕು. ಗಾಡಿ ಎಲ್ಲಾ ತಯಾರಾದ ಮ್ಯಾಲೆ ಇಂಥಾ ದಿನ ನೀವ್ ಬರ್ರಿ ಅಂದ್ರೆ ಆವೊತ್ತು ನಾವು ಬಂದು ಗಾಡಿ ಹೊಡಕಂಡ್ ಊರೀಗ್ ಹೋಗ್ತಿವಿ”. ಸಿದ್ದಣ್ಣ ತಿಳಿಸಿದ್ದರು. “ನಾಲಕ್ ಗಾಡಿ ಅಂದ್ರೆ ಎಲ್ಲ ತಿಂಗಳಾದ್ರೂ ಬೇಕಾಗುತ್ತೆ. ಈಗ ನಾವು ಕೊಂಡಿರೋ ಮುಟ್ಟು ಎಲ್ಲಾ ಖಾಲಿಯಾಗಿ ಬಿಡುತ್ತೆ.

ಹೊಸದಾಗಿ ಮುಟ್ ಕೊಳ್ಳಬೇಕು. ಚೆಂದಾಗಿ ಒಣಗಿರೋ ಮುಟ್ಟೇ ಬೇಕು. ನಮ್ಮ ಇದೆಲ್ಲಾ ಇದ್ದದ್ದೇ. ಒಂದ್ ಗಾಡಿಗೆ ನೂರು ರೂಪಾಯಿನಂಗೆ ನಾಲಕ್ ಗಾಡೀಗೆ ನಾನೂರು ರೂಪಾಯಿ ಆಗ್ತದೆ. ನಿಮ್ಮೂರೋರೆ ತೊಂಭತ್ತೈದರಂಗೆ ಎಲ್ಡ್ ಗಾಡಿ ಕೊಟ್ಟಿದ್ವಿ, ಅವುಕ್ಕೆ ಮೊದ್ದೇ ಮಾತಾಡಿ ಮುಂಗಡ ಇಸಗಂಡಿದ್ವಿ, ಅದರಂಗೆ ಕೊಟ್ಟೋಗ್ರಪ್ಪಾ ಅಂತ ಕೊಟ್ಟಿದ್ವಿ, ಈಗ ಐದು ತಿಂಗಳಿಂದ ಕೂಲಿ ಜಾಸ್ತಿ ಮಾಡೀದೀವಿ. ಅದ್ರಿಂದ ನೀವು ಅದೇ ನೂರು ರೂಪಾಯಂಗೆ ಮಾಡಿಸ್ಟಂಡ್ ಹೋಗ್ರಿ”. ಹಿರಿಯ ಬಡಗಿ ನಿಧಾನವಾಗಿ ಅಷ್ಟೆ ದೃಢವಾಗಿ ಮಾತಾಡಿದ್ದರು.

ಹಿಂದಿನ ಸಂಚಿಕೆ ಓದಿ: 7. ಊರು ತೊರೆದು ಬಂದವರು

ಗೌನಳ್ಳಿ ಸಿದ್ದಣ್ಣ ಮತ್ತು ಅವರ ತಂಡದವರಿಗೆ ಏನು ಮಾತಾಡಬೇಕು ಅನ್ನುವುದು ಹೊಳೆಯಲಿಲ್ಲ. ಜಟಕಾ ಸಾಬಿ “ಅಣ್ಣೂರು ಅವರ ನಿರ್ಧಾರ ತಿಳಿಸ್‌ಬಿಟ್ಟಿದಾರೆ. ನೀವು ನಿಮ್ಮ ವಿಚಾರ ತಿಳಿಸ್‌ಬಿಡಿ. ಮಾತು ಕಲಾಸ್ ಆದ್ರೆ ತುಮಕೂರಿಗೆ ಹೊಳ್‌ಬಿಡಬೌದು”. ಮಧ್ಯೆ ಮಾತಾಡಿ ಸಂದರ್ಭವನ್ನು ಸರಳಗೊಳಿಸಿದ. “ಅಷ್ಟೋರೇ ನಾವೇನ್ ಜಾಸ್ತಿ ದೇಶ ತಿರಿಗಿದೋರಲ್ಲ.

ವ್ಯಾಪಾರನೂ ಮಾಡಿದೋರಲ್ಲ. ನೀವೇ ಧರಕರ ತೂಗಿ ನೋಡಿ ಇಷ್ಟು ಅಂತ ಹೇಳಿ ಬಿಡಿ ಅಂತ ಸಿದ್ದಣ್ಣ ಮಾತಾಡಿದ್ದರು. “ಇದರಾಗೇ ಧರರನ್ನು ತಿಳಕಂಡೇ ಮಾತಾಡಿದ್ದೀನಿ. ಈಗಾಗ್ಲೆ ಒಂದ್ ಹೊಸಾ ಗಾಡಿಗೆ ನೂರು ರೂಪಾಯಂಗೆ ನಾಲಕ್ ಗಾಡಿ ಮಾಡಿ ಕೊಟ್ಟಿದೀವಿ. ಇದರಾಗೆ ನಾವೇನ್ ಶಿಖರ ಕಟ್ಟಿಸ್ಥಳದೇನೂ ಇಲ್ಲ. ನೂರು ರೂಪಾಯಿನಂತೆ ಮಾತಾಡಿ ಮುಗಿಸಿ”, ಕಡ್ಡಿ ಮುರಿದಂತೆ ಹಿರಿಯ ಬಡಗಿ ಮಾತಾಡಿದ್ದರು. ಮುಂದೆ ಏನೂ ಮಾತಾಡಲು ತೋಚದೆ ಸಿದ್ದಣ್ಣ ಮತ್ತು ಅವರ ಸಂಗಡಿಗರು ಮುಖಾಮುಖಾ ನೋಡಿಕೊಂಡು “ಆಗಲಿ ಅಣ್ಣೂರೇ ನಿಮ್ಮ ಮಾತಿನಂತೇನೇ ಆಗಲಿ, ಈಗ ನಾವು ಗಾಡೀಗ್ ಹತ್ತು ರೂಪಾಯಿನಂತೆ ಮುಂಗಡ ಕೊಡ್ತೀವಿ, ಗಾಡಿ ಚಿ- ಂದಾಗಿ ಮಾಡಿಕೊಡ್ರಿ.

ಯಾಕಂದ್ರೆ ದುಡ್ಡಿರೋದಿಲ್ಲ, ಖರ್ಚಾಗುತ್ತೆ. ಆದ್ರೆ ಗಾಡಿ ಮಾತ್ರ ಹೊಡದಾಡತಿದ್ದೀವಿ” ಅಂತ ಸಿದ್ದಣ್ಣ ತಮ್ಮ ಅಭಿಪ್ರಾಯ ತಿಳಿಸಿದ್ದರು. “ಹತ್ತನಾ ಕೊಡ್ರಿ ಐದು ರೂಪಾಯನಾ ಮುಂಗಡ ಕೊಡ್ರಿ, ಯಾಪಾರ ಆಖೈರಾತು. ನಿಮ್ಮ ಹತ್ರ ವೀಳೇದೆಲೆ, ಅಡಿಕೆ ಇದ್ರೆ ಅದರಾಗೆ ರೂಪಾಯಿ ಇಟ್ಟು ಕೊಡ್ರಿ. ಇಲ್‌ದಿದ್ರೆ ಇಲ್ಲೇ ಹತ್ರದಾಗೆ ಅಂಗಡಿ ಐತೆ ಅಲ್ಲೋಗಿ ತಗಂಡ್ ಬಂದು ಕೊಡಿ”. ಹಿರಿಯ ಬಡಗಿ ಮಾತಾಡಿದ್ದರು.

ಕೂಡಲೇ ಒಬ್ಬರು ಅಂಗಡಿಗೆ ಹೋಗಿ ವೀಳೇದೆಲೆ ಅಡಿಕೆ ತಂದರು. ತಮ್ಮ ಸೊಂಟಪಟ್ಟಿ ಸಡಿಲಿಸಿ ಅದರಲ್ಲಿದ್ದ ಬೆಳ್ಳಿ ರೂಪಾಯಿಗಳಲ್ಲಿ ತಲಾ ಹತ್ತರಂತೆ ನಾಲ್ಕು ಹೊಸಾ ಗಾಡಿಗಳಿಗೆ ನಲವತ್ತು ರೂಪಾಯಿಗಳನ್ನು ಹಿರಿಯ ಬಡಗಿ ಕೈಗೆ ನೀಡಿದ್ದರು.

ಹಿಂದಿನ ಸಂಚಿಕೆ ಓದಿ: 8. ಮೋಜಣಿಕೆ ಮಾಡಿದರು

“ಚಿಕ್ಕುಂಬತ್ತಾಗಿದೆ ಹೊಟ್ಟೆಗೊಂದಿಷ್ಟು ನೋಡಿಕೊಂಡು ನಾವು ತುಮಕೂರಿಗೆ ಹೊಳ್‌ತೀವಿ. ನಾವು ಎಂದು ಬರಬೇಕು ನಿಖರವಾಗಿ ತಿಳಿಸಿದರೆ, ಆ ದಿನ ಖಂಡಿತಾ ನಾವು ಬಂದು ಹೊಸಗಾಡಿ ಹೊಡಕಂಡ್ ಹೋಗ್ತಿವಿ”. ಸಿದ್ದಣ್ಣ ತಮ್ಮ ಯೋಜನೆ ತಿಳಿಸಿದ್ದರು.

ಹಿರಿಯ ಬಡಗಿ ರೂಪಾಯಿ ಸಮೇತ ಮನೆಯೊಳಗೆ ನಡೆದು ತಮ್ಮ ಅನುಚರರೊಂದಿಗೆ ಚರ್ಚಿಸಿದ್ದರು. ಅಷ್ಟೊತ್ತಿಗೆ ಮನೆಯವರಿಂದ ನೀರು ಕೇಳಿ ಪಡೆದು ರೊಟ್ಟಿ, ಕೆಂಪಿಂಡಿ ತುಪ್ಪದ ಉಪಾಹಾರವನ್ನು ತಿನ್ನಲು ಗೌನಹಳ್ಳಿಗರು ಆರಂಭಿಸಿದ್ದರು. ಹೊರಗೆ ಬಂದ ಬಡಗಿಯವರಿಗೂ ಸಜ್ಜೆರೊಟ್ಟಿಯನ್ನು

ಸವಿಯಲು ಕೇಳಿಕೊಂಡರು. “ನಿಮ್ಮ ಕೆಂಪಿಂಡಿ ನೋಡಿದರೆ ಬಾಯಲ್ಲಿ ನೀರು ಬರುತ್ತೆ. ನೀವು ಊಟ ಮಾಡಿ, ನಾನು ಮೈ ತೊಳಕಂಡ್ ಪೂಜೆ ಮಾಡಿ ನಿಮ್ಮ ರೋಟೀನೆ ತಿಂತೀನಿ” ಎಂದು ತಿಳಿಸಿ ಮೈ ತೊಳೆಯಲು ಹೋದರು. ಇವರು ಮತ್ತು ಜಟಕಾ ಸಾಬಿ ಎರಡೆರಡು ರೊಟ್ಟಿ ತಿಂದು ಸ್ವಲ್ಪಸ್ವಲ್ಪ ಬುತ್ತಿ ಅನ್ನವನ್ನೂ ಉಂಡಿದ್ದರು.

ಅಷ್ಟೊತ್ತಿಗೆ ಅಲ್ಲಿ ಕಾಣಿಸಿಕೊಂಡ ಚೆಂಬಸಣ್ಣ “ಹೊಸಾಗಾಡಿ ಹೊಡಕಂಡ ಹೋಗೋಕೆ ಎಂದು ಬರ್ರಿ ಅಂತ ಹೇಳಿದಾರೆ” ಗೌನಳ್ಳಿಯವರನ್ನು ವಿಚಾರಿಸಿದ್ದ. “ಇನ್ನಾ ಏನೂ ಹೇಳಿಲ್ಲ ಪೂಜೆ ಮಾಡ್ತಿದಾರೆ”. ಗೌನಳ್ಳಿ ಸಿದ್ದಣ್ಣ ತಿಳಿಸಿ “ಎಳ್ಳೆ ರೊಟ್ಟಿ ತಿನ್ನಿ” ಅನ್ನುತ್ತಾ ಸಜ್ಜೆ ರೊಟ್ಟಿಗೆ ಕೆಂಪಿಂಡಿ ಮತ್ತೆ ತುಪ್ಪ ಹಾಕಿ ಕೊಟ್ಟರು. “ನಿಮ್ ಕಡೆಯಂಗೆ ನಮ್ಮಲ್ಲಿ ರೊಟ್ಟಿ ಸುಡೋದಿಲ್ಲ. ಕೆಂಪಿಂಡಿ ಬಣ್ಣ ನೋಡಿದ್ರೆ ಭಯವಾಗುತ್ತೆ. ಆದ್ರೆ ಅಷ್ಟೊಂದು ಖಾರ ಏನೂ ಇಲ್ಲ”. ಚೆಂಬಸಣ್ಣ ಪ್ರತಿಕ್ರಿಯಿಸಿದ್ದ. “ಇಂಥಾ ರೊಟ್ಟಿ ಊಟ ನಾನು ಉಂಡೇ ಇಲ್ಲ” ಜಟಕಾ ಗಾಡಿ ಸಾಬಣ್ಣ ಖುಷಿಯಿಂದ ಮಾತಾಡಿದ್ದ.

ಹಿಂದಿನ ಸಂಚಿಕೆ ಓದಿ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ

ಪೂಜೆ ಮುಗಿಸಿ ಹೊರಬಂದಿದ್ದ ಹಿರಿಯ ಬಡಗಿ “ಎಲ್ಲಿ ಕೊಡ್ರಪ್ಪಾ ನಿಮ್ ರೊಟ್ಟಿ ಕೆಂಪಿಂಡಿ” ಅನ್ನುತ್ತಾ ಇವರ ಮಗ್ಗುಲಲ್ಲಿ ಕುಳಿತರು, ಸಿದ್ದಣ್ಣ ಎರಡು ಸಜ್ಜೆ ರೊಟ್ಟಿ ಮೇಲೆ ಕಿತ್ತಳೆ ಹಣ್ಣಿನ ಗಾತ್ರದ ಕೆಂಪಿಂಡಿ ಗುಂಡಿ ಮಾಡಿ ಅದರ ತುಂಬಾ ಹೆತ್ತುಕೊಂಡಿದ್ದ ತುಪ್ಪವನ್ನು ಹಾಕಿ ಬಡಗಿಯವರಿಗೆ ನೀಡಿದರು. ಅವರು ಕೆಂಪಿಂಡಿಯನ್ನು ತುಪ್ಪದಲ್ಲಿ ಕಲೆಸಿ ರೊಟ್ಟಿ ಮುರಿದು ಕೆಂಪಿಂಡಿಗೆ ಸವರಿ ಬಾಯಿಗಿಟ್ಟರು. “ಇದೇನ್ರಿ ಇಷ್ಟು ರುಚಿಯಾಗಿದೆ” ಎಂದು ಉದ್ಗಾರ ಹೊರಡಿಸಿ ರೊಟ್ಟಿ ಪೂರ್ತಿ ನುಂಗಿದರು. “ಅಷ್ಟೋರೆ ಬುತ್ತಿ ಅನ್ನ ಬಾಳಾ ಚೆನ್ನಾಗಿದೆ. ಒಂದೀಟು ತಿಂದು ನೋಡ್ರಿ” ಅನ್ನುತ್ತಾ ಸ್ವಲ್ಪ ಬುತ್ತಿ ಅನ್ನ ಕೆಂಪಿಂಡಿ ಬಡಿಸಿದರು. ಬಡಗಿಯರು ಸಾಕು ಅನ್ನುತ್ತಾ ಕೈ ತೋರಿಸಿ ಅದನ್ನೂ ಸವಿದಿದ್ದರು.

ತೃಪ್ತಿಯಿಂದ ಕೈ ತೊಳೆದುಕೊಂಡು “ಚೆಂಬಸಣ್ಣ ಬಂದಿದ್ದಾನೆ. ಏನಪ್ಪಾ ಇನ್ನೊಂದ್ ತಿಂಗಳಿಗೆ ಎಲ್ಡ್ ಹೊಸಾ ಗಾಡಿ ಸಿದ್ಧ ಆಗ್ತಾವೆ. ಎರಡೂ ಅವರೂರಿಗೆ ತಲುಪಿಸ್ತೀಯಾ ಅಥಾ ಅವರೇ ಬರಬೇಕೋ”, ಅಂತ ವಿಚಾರಿಸಿದರು. “ಅವರು ದುಡ್ ತಗಂಡ್ ಬಲ್ಲಿ, ಅವರ ಜತೇಲೇ ಗಾಡಿ ಹೊಡಕಂಡೋಗಿ ಅವರ ಊರ್ ಮುಟ್ಟಿಸ್‌ತೀನಿ”. ಚೆಂಬಸಣ್ಣ ಉತ್ತರಿಸಿದ್ದ. “ಸರಿ ಅಂಗೇ ಆಗಬೌದು” ಸಿದ್ದಣ್ಣ ಒಪ್ಪಿಕೊಂಡಿದ್ದರು. “ಈವೊತ್ತು ಬುಧವಾರ ಇನ್ನಾ ನಾಲ್ಕನೇ ಬುಧವಾರ ನಾವು ಹೊಲ್ಡ್ ಬತ್ತೀವಿ”. ಸಿದ್ದಣ್ಣ ಸೂಚನೆ ನೀಡಿದರು. “ಬರ್ರಿ ಬರ್ರಿ ಬುಧವಾರ, ಗುರುವಾರ, ಬುಧವಾರನೇ ಅಂದ್ರೆ ಆವೊತ್ತು ನಿಮಿಗೆ ಏನಾದ್ರೂ ಕೆಲ್ಲಾ ಬೀಳಬೌದು, ನೋಡಿಕೆಂಡ್ ಬರಿ” ಹಿರಿಯ ಬಡಗಿ ಮಾತಾಡಿ ಮೇಲೆದ್ದರು.

ಅಷ್ಟೊತ್ತಿಗೆ ಅವರ ಎಲ್ಲಾ ಕೆಲಸಗಾರರು ಕೆಲಸಕ್ಕೆ ಹಾಜರಾಗಿದ್ದರು. ಅವರ ಕೆಲಸಗಳನ್ನು ಸ್ವಲ್ಪ ಹೊತ್ತು ವೀಕ್ಷಿಸಿ ತುಮಕೂರಿಗೆ ಹೊರಟಿದ್ದ ಜಟಕಾ ಗಾಡಿ ಬಳಿಗೆ ಬಂದು ಎಲ್ಲರಿಗೂ ನಮಸ್ಕರಿಸಿ ಹೊರಟ್ಟಿದ್ದರು.

ಈ ಗುಬ್ಬಿ ಭೇಟಿ ಒಂದು ಹೊಸಾ ಅನುಭವವನ್ನು ನೀಡಿತ್ತು. ಹೊಸಾ ಬಂಡಿಗಳು ಅವರ ಬದುಕಿನಲ್ಲಿ ತುಂಬಾ ಅಗತ್ಯ ಮತ್ತು ಅನುಕೂಲವಾಗುತ್ತವೆ. ಇಲ್ಲಿ ತನಕ ಅವರ ಬದುಕಿನಲ್ಲಿ ಗಾಡಿ ಮಹತ್ವದ ಅರಿವೇ ಆಗಿರಲಿಲ್ಲ. ಜಟಕಾ ಸಾಬಿ ತನ್ನ ಕುದುರೆಗಾಡಿಯನ್ನು ಓಡಿಸುತ್ತಲೇ “ನೀವು ಬಾಳ ಒಳ್ಳೇ ಜನ. ಅವೂ ಕೂಡಾ ಒಳ್ಳೇ ಜನ” ಅಂತ ತಾರೀಪ್ ಮಾಡಿದ್ದ. “ನಮ್ಮ ಅದೃಷ್ಟನಪ್ಪಾ ನೀನು ನಮಿಗೆ ಒಳ್ಳೇ ಮನುಷ್ಯನೇ ಸಿಕ್ಕಿದೆ. ರಾತ್ರಿ ಗುಬ್ಬಿನಾಗೆ ಉಳಕೊಳ್ಳಾಕಾಗದಿಲ್ಲ ಅಂತ ಜಗಳ ತಗಿದಿದ್ರೆ ಫಜೀತಿ ಆಗತಿತ್ತು”.

ಗೌನಳ್ಳಿಯವರು ಜಟಕಾ ಸಾಬಿಯನ್ನು ಹೊಗಳಿ ಮಾತಾಡಿದ್ದರು. “ಸಾಯಂಕಾಲ ನಾನು ಗುಬ್ಬಿಯಿಂದ ಹೊರಟು ಬಂದಿದ್ರೆ ತುಮಕೂರಿಗೆ ತಲುಪೊ ಹೊತ್ತಿಗೆ ಕತ್ತಲಾಗಿ ಬಿಡ್ತಿತ್ತು. ನನಗಾಡೀಲಿ ದೀಪ ಬ್ಯಾರೆ ಇಲ್ಲ, ತೊಂದ್ರೆ ಆಗ್ತಿತ್ತು. ಆದ್ರಿಂದ ನಾನು ಅಲ್ಲೇ ಉಳಕಂಡೆ. ಉಳಕಂಡಿದ್ದು ಒಳ್ಳೇದೇ ಆಯ್ತು. ಕುದುರೆ ಕಟ್ಟೋಕೆ ಒಳ್ಳೇ ಜಾಗ ಸಿಕ್ಕಿತ್ತು” ಅಂತ ಸಾಬಿ ಸಮಾಧಾನದ ಮಾತಾಡಿದ್ದ.

ಹಿಂದಿನ ಸಂಚಿಕೆ ಓದಿ: 10. ಹೊಸ ಬಂಡಿಗಳ ಆಗಮನ

ತುಮಕೂರು ತಲುಪಿ ಜಟಕಾ ನಿಲ್ದಾಣಕ್ಕೆ ಹೋದಾಗ ಅಲ್ಲಿ ಇತರ ಗಾಡಿಗಳವರು ಗುಬ್ಬಿಗೆ ಹೋಗಿದ್ದ ಈತನ ಬಗ್ಗೆಯೇ ಮಾತಾಡುತ್ತಿದ್ದರು. ಗೌನಹಳ್ಳಿಗರು ಜಟಕಾ ಇಳಿದರೆ ಹಿರಿಯೂರಿಗೆ ಹೊರಟಿದ್ದ ಇದ್ದಿಲ ಬೆಂಕಿಯ ನೀರಿನ ಹಬೆಯ ಬಸ್ಸು ಖಾಲಿಯಾಗಿ ನಿಂತಿತ್ತು. ಇವರು ನಾಲ್ಕು ಜನ ಬಸ್ ಹತ್ತಿ ಕುಳಿತರು. ಒಬ್ಬೊಬ್ಬರೇ ಪ್ರಯಾಣಿಕರು ಆಗಮಿಸಿ ಬಸ್ ತುಂಬಲು ಕೊಂಚ ಸಮಯ ಹಿಡಿದಿತ್ತು. ಚಾಲಕ, ನಿರಾಹಕರು ಆಗಮಿಸಿ ಸ್ವಲ್ಪ ದೂರ ಬಸ್ಸನ್ನು ಪ್ರಯಾಣಿಕರಿಂದ ತಳ್ಳಿಸಿ ಆನಂತರ ಎಲ್ಲರನ್ನು ಹತ್ತಿಸಿಕೊಂಡು ಮುಂದೆ ಹೊರಟಿದ್ದರು. ಸೀರ್ಯ ತಲುಪಿದ ಬಳಿಕ ಅಲ್ಲಿಂದ ಮುಂದೆ ಹೊರಡುವಾಗಲೂ ಬಸ್ಸನ್ನು ತಳ್ಳಿಸಿದ್ದರು. ಬಸ್ ಹಿರಿಯೂರು ತಲುಪಿದಾಗ ಸಂಜೆಯಾಗುತ್ತಿತ್ತು. ಹೊಟ್ಟೆ ಹಸಿದಿದ್ದವು.

ಬಸ್ ಇಳಿದವರು ನೇರವಾಗಿ ತೇರು ಮಲ್ಲೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ರೊಟ್ಟಿ ಬುತ್ತಿ ಉಂಡರು. ಪಡುವಲಲ್ಲಿ ಹೊತ್ತು ಮುಳುಗುತ್ತಿತ್ತು. “ಬರೆಪ್ಪಾ ರಾತ್ರಿ ಉಂಬೊತ್ತಿಗಾದ್ರೂ ಊರು ಸೇರಂಬನಾ ಅನ್ನುತ್ತಾ ಊರದಾರಿ ಹಿಡಿದರು. ಕಣ್ಣಲ್ಲಿ ಬೆಳಕಿರುವಾಗಲೇ ಕರೇಮಲ್ಲನಾಯ್ಕನ ಕೋಡಿಯನ್ನು ದಾಟಿ ಮಾಯಸಂದ್ರದ ಹಾದಿ ತುಳಿದಿದ್ದರು.

“ಕಾಲಕಾಲಕ್ಕೆ ಮಳೆಯಾದ್ರೆ ಎಂಥಾ ಬೀಜ ಒಗದ್ರೂ ಹುಟ್ಟಿಗೆದ್ದಾನೆ. ಎಡೆಕುಂಟೆ ಹೊಡೆದು ಅಗಾ ಇಗಾ ಅಂಬದ್ರಾಗೆ ಹೊಡೆ ಒಡೆದು ಬೆಳೆಸ ಕಾಳಾಗ್ತಾವೆ. ನೋಡು ನೋಡ್ತಲೆ ಕೊಯ್ಲಿಗೆ ಬಾವೆ. ಮೊದ್ಲು ಆ ಹೊಲ ಕೊಯ್ಯೋನೋ ಈ ಹೊಲ ಕೊಯ್ಯೋನೋ ಅಂಬಂಗಾಗುತ್ತೆ. ಗಾಡಿ ಇದ್ರೆ ಸರಸರ ಹೇಳ್ಕೊಂಡು ಬಣವೆ ಹಾಕ್ಯಬೌದು. ಇಷ್ಟು ದಿನ ತಲೆ ಮೇಲೊತ್ತು ಕುತ್ತೆ ನೋವು ಬರಿದ್ದು. ಇನ್ ಮೇಲೆ ಈ ಫಜೀತಿ ಇರಲ್ಲ” ಎಂದು ಬಿತ್ತುವುದು ಬೆಳೆಯುವುದನ್ನೇ ಮಾತಾಡುತ್ತಾ ಈಚಲಹಳ್ಳದ ಬಳಿಗೆ ಬಂದಿದ್ದರು. ಎಲ್ಲರೂ ಹದ್ದುಗಣ್ಣಾಗಿ ಹಳ್ಳದ ಎರಡೂ ದಂಡೆಗಳನ್ನು ಪರೀಕ್ಷಿಸಿದ್ದರು.

“ಈಟತ್ತಿಗೆಲೆ ಕಳ್ಳು ಯಾರೂ ಬರಲ್ಲಾ” ಎಂದು ಪಿಸಿಪಿಸಿ ಮಾತಾಡಿಕೊಂಡು ಆ ಕಡೆ ಈ ಕಡೆ ಏಳೆಂಟು ಕಲ್ಲು ಬೀರಿದ್ದರು. ಕಲ್ಲು ಬಿದ್ದ ಸದ್ದು ಬಿಟ್ಟರೆ ಮತ್ತೇನೂ ಕೇಳಿಸಲಿಲ್ಲ. “ಬರ್ರೊ ನಿಮ್ಮ, ನಾಕ್ ಜನ ಇದೀವಿ ಯಾರಿಗ್ಯಾಕೆ ಹೆದರಬೇಕು” ಎಂದು ಗಟ್ಟಿಯಾಗಿ ಮಾತಾಡುತ್ತಾ ಹಳ್ಳದಾಟ ಈಚೆಗೆ ಬಂದಿದ್ದರು. “ನಮ್ ಭಯಾನೇ ನಮ್ಮ ದೆವ್ವಾಗುತ್ತೆ. ಇನ್ನ ಕಳ್ಳಗಣಿವೆ ಒಂದೈತೆ. ಅದೊಂದ್ ದಾಟಿಬಿಟ್ರೆ ಊರು ಸೇರಂಡಂಗೆ”. ಸಿದ್ದಣ್ಣ ಮಾತಾಡಿದ್ದರು. “ನೋಡಿಕೆ ಹೋಗಾನ. ನಾವೂ ನಾಕ್ ಜನ ಇದೀವಿ. ಯಾವ ಕಡೆಲಿಂದನಾದ್ರೂ ಕಲ್ಲು ಬಂದ್ರೆ ಆ ಕಡೆಗೇ ಕಲ್ಲು ಎಸೆಯಾನಾ”.

ಮತ್ತೊಬ್ಬರು ಮಾತಾಡಿದ್ದರು. ಹೀಗೆ ಮಾತಾಡುತ್ತಲೇ ಕಳ್ಳಣಿವೆಗೆ ಬಂದಿದ್ದರು. ಎಲ್ಲರೂ ಹದ್ದುಗಣ್ಣಾಗಿ ಅತ್ತಿತ್ತ ನೋಡುತ್ತಲೆ ಕಣಿವೆ ಮಧ್ಯಭಾಗಕ್ಕೆ ಬಂದಿದ್ದರು. ಯಾವ ಸದ್ದೂ ಕೇಳಿ ಬರಲಿಲ್ಲ. ಕಣಿವೆ ದಾಟಿ ಕಲ್ಲುಂಡಿಗೆ ಬಂದಾಗ ಎಲ್ಲಿಂದಲೋ ಒಂದು ಶಿಳ್ಳೆ ಕೇಳಿಸಿತ್ತು. ಯಾವ ಕಡೆಯಿಂದ ಅದು ಕೇಳಿಸಿತು ಎಂದು ಎಲ್ಲರೂ ಕಿವಿ ನಿಮಿರಿಸಿ ಆಲಿಸಿದರು. ಮತ್ಯಾವ ಸದ್ದು ಕೇಳಿ ಬರಲಿಲ್ಲ. ನಿಧಾನವಾಗಿ ನಡೆದು ಓಣಿ ತಲುಪಿ ಊರಕಡೆ ಹೆಜ್ಜೆ ಹಾಕಿದ್ದರು. ಓಣಿ ಬಾಯಿಗೆ ತಲುಪುವಷ್ಟರಲ್ಲಿ ನಾಕೈದು ನಾಯಿಗಳು ಬೊಗುಳಿ ಸ್ವಾಗತಿಸಿದ್ದವು.

ಬೆಳಿಗ್ಗೆ ಎದ್ದು ಜನ ತಿರುಗಾಡುವಾಗ ಗುಬ್ಬಿಗೆ ಹೋಗಿದ್ದವರು ಕಾಣಿಸಿಕೊಂಡಿದ್ದರು. “ಈಟಗಡಾ ವಾಪಾಸ್ ಬಂದಿದೀರಾ. ಹೊಸ ಗಾಡಿ ತಂದ್ರೇನೂ” ಎಂದು ಊರಜನ ವಿಚಾರಿಸಿದ್ದರು. ಇವರು ಕೇಳಿದೋರಿಗೆ ಇಲ್ಲಿಂದ ಹೊರಟು ಹಿರಿಯೂರು, ತುಮಕೂರು, ಅಲ್ಲಿಂದ ಗುಬ್ಬಿಗೆ ಹೋಗಿ ಬಂದ ವಿವರಗಳನ್ನು ಹಂಚಿಕೊಂಡಿದ್ದರು. “ಗೌಡ್ರು ಮತ್ತು ಗೊಂಚಿಕಾರರ ಗುಂಪಿನವರು ಅದೃಷ್ಟವಂತರು. ಯಾರಿಗೋ ಸಿದ್ದ ಮಾಡಿದ್ದ ಎರಡು ಹೊಸಾಗಾಡಿ ಸಿಕ್ಕದ್ದು, ಅವನ್ನೇ ಕೊಂಡ್‌ಕಂಡು ಹೊಡೆಸ್ಟಂಡು ಬಂದ್ರು.

ಈಗ ನಾವು ತಿಂಗು ಎಳ್ ತಿಂಗು ಕಾಯ್ದೆಕು. ಒಂದು ಹೊಸಾಗಾಡಿ ತಯಾರಾಗೋಕೆ ಕನಿಷ್ಟ ಹದಿನೈದು ದಿವೃ ಬೇಕಾಗುತ್ತೆ. ತಿಂಗಳು ಬಿಟ್ ಬ ಎಲ್ಡ್ ಹೊಸಗಾಡಿ ಹೊಡಿಸ್ಕಂಡ್ ಹೋಗೀರಂತೆ ಅಂತ ಹೇಳಿ ಕಲ್ಲಿದಾರೆ. ದೂರ ಬ್ಯಾರೆ, ಏನೂ ಮಾಡಾಕಾಗಲ್ಲ. ತಿಂಗು ಎಲ್ಡ್ ತಿಂಗು ಅಗಾಇಗಾ ಅಂಬದ್ರಾಗೆ ಕಳೆದು ಹೋಗುತ್ತೆ” ಎಂದು ಸಮಾಧಾನದ ಮಾತಾಡಿದ್ದರು ಊರಜನ.

ಈ ನಾಲಕ್ ಗಾಡಿ ಊರಿಗೆ ಬಂದ್ರೆ, ಊರಾಗೆ ಆರು ಗಾಡಿ ಆಗ್ತಾವೆ. ಒಂದಲ್ಲಾ ಒಂದು ಗಾಡಿ ನಮ್ಮ ಉಪಯೋಗಕ್ಕೆ ಸಿಗ್ತಾವೆ. ಹಲವಾರು ಜನ ನಾನಾ ರೀತಿ ಯೋಚಿಸುತ್ತಿದ್ದರು. ಈ ನಾಲಕ್ ಹೊಸಾ ಗಾಡಿ ಊರೀಗ್ ಬಂದ್ ಮೇಲೆ ಇನ್ನೂ ಯಾರಾದ್ರೂ ಗಾಡಿ ಕೊಳ್ಳಾಕೆ ಉಮೇದು ಮಾಡಬೌದು. ಹೀಗೆಲ್ಲಾ ಆಲೋಚನೆಗಳು ಹರಿದಾಡಿದ್ದವು.

Click to comment

Leave a Reply

Your email address will not be published. Required fields are marked *

More in ಸಂಡೆ ಸ್ಪಷಲ್

To Top
Exit mobile version