ಸಂಡೆ ಸ್ಪಷಲ್
Kannada Novel: 7. ಊರು ತೊರೆದು ಬಂದವರು | ಹಬ್ಬಿದಾ ಮಲೆಮಧ್ಯದೊಳಗೆ
CHITRADURGA NEWS | 20 October 2024
ಮುಂಗಾರು ಮಳೆಗಳೆಲ್ಲಾ ಕೈಕೊಟ್ಟು ಮುಂಗಾರಿನ ಬಿತ್ತನೆಯಾಗದೆ ಗೌನಳ್ಳಿ ನಿವಾಸಿಗಳು ದಿನಬೆಳಗಾದರೆ ಮುಗಿಲು ನೋಡುತ್ತಾ ಎತ್ತು ದನಕರುಗಳಿಗೆ ಮೇವು ಹೊಂದಿಸುವುದು ಕಷ್ಟಕರವಾಗಿತ್ತು. ಆದ್ದರಿಂದ ಹಳ್ಳಿ ನಿವಾಸಿಗಳು ಉಂಬೊತ್ತಿಗೆ ಊಟ ಮಾಡಿ ಕರಾವಿನ ಆಕಳು ಎಮ್ಮೆ ಇತ್ಯಾದಿಗಳನ್ನು ಹಳ್ಳದ ದಂಡೆಯಲ್ಲಿ ಬೆಳೆದಿದ್ದ ಮೆದೆಸೆಂಟೆ ಮತ್ತಿತರ ಹುಲ್ಲು ಸೊಪ್ಪಿನ ಜಾಗಗಳಲ್ಲಿ ಅಡ್ಡಾಡಿಸಲು ಹೊಡೆದೊಯ್ಯುತ್ತಿದ್ದರು. ಉಳಿದವರು ಇದ್ದಬದ್ದ ಕೆಲಸ ಮುಂತಾದುವುಗಳಲ್ಲಿ ಮಗ್ನರಾಗಿರುತ್ತಿದ್ದರು.
ಸ್ವಲ್ಪ ಹೊತ್ತಿನಲ್ಲಿ ಊರಿನ ನೈರುತ್ಯ ದಿಕ್ಕಿಗಿದ್ದ ಓಣಿಯಲ್ಲಿ ಕೊರಳಿಗೆ ಕಟ್ಟಿದ್ದ ಗಂಟೆಯ ಸದ್ದು ಮಾಡುತ್ತಾ ಮುಂದುಗಡೆ ಅಲಂಕಾರಗೊಂಡಿದ್ದ ಬಸವ ಅದರ, ಹಿಂದೆ ತುಂಬಿದ ಬಂಡಿ, ಅದರ ಹಿಂದೆ, ಆಕಳು, ಕರು, ಎಮ್ಮೆ ಮತ್ತು ಕರುಗಳು, ಅವುಗಳ ಹಿಂದೆ ಕುರಿ ಆಡಿನ ಮಂದೆ ಜತೆಯಲ್ಲಿ ಏಳೆಂಟು ಜನ ಗಂಡಸರು ಹೆಂಗಸರು ಮಕ್ಕಳು ನಡೆದು ಬರುತ್ತಿದ್ದರು.
ಮುಂದುಗಡೆ ಠೀವಿಯಿಂದ ಬರುತ್ತಿದ್ದ ಬಸವನ ಬೆನ್ನಿಗೆ ಜೂಲು ಹಾಕಿ ಎರಡು ಕಡೆ ಇಳಿಬಿದ್ದಿದ್ದ ಎರಡು ಮಂಕರಿಗಳು, ಹಿತ್ತಾಳೆ ಗಿಂಡಿ ಬಸನನ ಎರಡೂ ಕೋಡುಗಳಿಗೆ ಪೂಜೆ ಮಾಡಿ ಹಣೆಗೆ ವಿಭೂತಿ, ಭಂಡಾರ ದೇವಿಗೆ ಸೊಪ್ಪು ಮುಂತಾದುವುಗಳಿಂದ ಅಲಂಕರಿಸಲಾಗಿತ್ತು. ಇವರನ್ನು ನೋಡುತ್ತಲೇ ಊರ ಜನ ಓಡೋಡಿ ಬಂದು ಜತೆಯಾದರು.
ಹಿಂದಿನ ಸಂಚಿಕೆ ಓದಲು ಕ್ಲಿಕ್ ಮಾಡಿ: 1 ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಗಾಡಿ ಮಗ್ಗುಲಲ್ಲಿ ಕಲಕೊಡ ತಲೆಗೆ ಕೆಂಪು ರೇಶಿಮೆ ವಸ್ತ್ರದ ರುಮಾಲು ಧರಿಸಿದ್ದ ಯಜಮಾನರು ಕೊಡಿ. ಕೊಂಡ ಗೌನಳ್ಳಿಗರಿಗೆ ಕೈ ಎತ್ತಿ ನಮಸ್ಕರಿಸಿದ್ದರು. ಊರಿನ ಗೌಡರಿಗೆ ಮತ್ತು ಗೊಂಚಿಕಾರರಿಗೆ ಪರಿಚಯವಿದ್ದ ಅವರು ಕಣಿವೆ ಮಾರಿಯ ಪೂಚಾರರಾಗಿದ್ದ ಲಿಂಗಣ್ಣನವರನ್ನು ಕಾಣುತ್ತಲೇ ಇವರೂ ನಮಸ್ಕಾರ ಮಾಡಿ ಅಶ್ಚತ್ಯದಿಂದ “ಇದೇನು ಹಿಂಗೆ ಮನೆ ಮಾರು ತೊರು ಎತ್ತುಕರ ಮಂದಿ ಮಕ್ಕಳ ಕಟ್ಟಿಗಂಡು ಬಾ ಇದೀರಾ. ಎಲ್ಲಿಗೋಗಬೇಕಯ್ತಾ ಇದೀರಾ.
ಇರೋದಾದ್ರೆ ನಮ್ಮೂರಾಗೆ ಇದ್ದುಬಿಡಿ” ಎಂದು ಕಕುಲಾತಿಯ ಮಾತಾಡಿದರು. ಪೂಜಾರಿ ಲಿಂಗಪ್ಪನವರು ಮುಂದೆ ನಡೆಯುತ್ತಿದ್ದ ಕಟ್ಟೆ ಬಸವನ್ನ ತೋರಿಸಿ “ಪೂಜೆ ಮಾಡಿ ಆಡ್ಡುಬಿದ್ದು ಅದರ ಹಿಂದೆ ಹೋಗ್ತಾ ಇದ್ದೀವಿ. ಅದು ಎಲ್ಲಿ ನಿಲ್ಲುತ್ತೋ ಅಲ್ಲಿ ಮನೆ ಮಾರು ಕಟ್ಟಂತೀವಿ”, ಸಮಾಧಾನದಿಂದ್ದೆ ಉತ್ತರಿಸಿದ್ದರು. ಹೀಗೆ ಮಾತಾಡುತ್ತಲೇ ಊರಿನ ಬಡಗಲ ದಿಕ್ಕಿನ ಓಣಿಗೆ ಸೇರಿದ್ದರು. ಊರಿನ ಕೆಲವರು ಇವರಿಗೆ ಕುಡಿಯಲು ಮಜ್ಜಿಗೆ ಮುಂತಾದುವನ್ನು ತಂದು ಕೊಟ್ಟಿದ್ದರು.
ಅವರ ಜತೆಯಲ್ಲೇ ನಡೆಯುತ್ತಾ “ಅಮ್ಮನ ಪೂಜಾರಿಕೆ ಮಾಡ್ಕಂಡು ನಿರುಮ್ಮಳವಾಗಿದ್ರಿ, ಊರು ಬಿಡೋ ಅಂಥದ್ದೇನು ಬಂತು” ಅಂತ ಒತ್ತಾಯ ಮಾಡಿ ಕೇಳಿದಾಗ, “ಮತ್ತೋಡು ಪಾಳೇಗಾರು ನಮಿಗೆ ಕಣಿವೆ ಮಾರಿಯ ಪೂಜಾರಿಕೆ ಕೊಟ್ಟಿದ್ರು. 60, 70 ವರ್ಷ ಯಾವ ಅಡ್ಡಿ ಆತಂಕ ಇಚ್ಛೆ ನಡಿಸ್ಟೆಂಡ್ ಬರಿದ್ವಿ. ಈಗ ದುರ್ಗದೋರು ಇದು ನಮ್ಮ ಆಳ್ವಿಕೆಗೆ ಸೇರುತ್ತೆ.
ಹಿಂದಿನ ಸಂಚಿಕೆ ಓದಲು ಕ್ಲಿಕ್ ಮಾಡಿ: 2 ಕರುವುಗಲ್ಲು ನೆಟ್ಟು ಊರು ಕಟ್ಟಿದರು
ಮತ್ತೋಡಿನರು ಏನಿದ್ರೂ ಹೊಳೆ ಆಚೆಗೆ ಮಾತ್ರ. ಈಚೆ ಕಡೆ ನಡಿಯಲ್ಲ. ಈಗ ಭರಮಗಿರಿ ಸೀಮೆಗೆ ನೀವು ಒಳ ಪಟ್ಟಿದೀರಿ ಅು ಕಿರುಕುಳ ಕೊಡ್ತಿದ್ರು. ಕುರಿ ಆಡು ಕಳ್ಳನ ಆದ್ದು, ಆದ್ರೂ ಸುಧಾರಿಸ್ಸಂದ್ವಿ, ಈಗ ಅವರ ದೌರ್ಜನ್ಯ ಜಾಸ್ತಿ ಆತು. ಅದಕ್ಕೆ ಅಲ್ಲಿರಬಾರು ಅಯ್ತ ಹೊಳ್ ಬಂದಿದ್ದೀವಿ. ನೋಡೋಕು ಕಟ್ಟೆ ಬಸವ ಎಲ್ಲಿಗೆ ಮುಟ್ಟಿಸ್‌ತಾನೋ”. ಬೇಜಾರಿನಿಂದಲೇ ಪೂಜಾರರು, ಮಾತಾಡಿದ್ದರು. ಹೀಗೆ ಮಾತಾಡುತ್ತಾ ಕೆನ್ನಳ್ಳಿ ಸಮೀಪಕೆ ಬಂದಿದ್ದರು.
ಗೌನಹಳ್ಳಿಯ ಕೆಲವರು ತುಂಬಿದ ಬಂಡಿಯನ್ನು ಸ್ವಲ್ಪದೂರ ಹಳ್ಳದಲ್ಲಿ ನಡೆಸಿ ಇಳಕಲು ಇದ್ದಕಡೆ ಹಳ್ಳದ ದಡ ಹತ್ತಿಸಿದ್ದರು. ಕಟ್ಟೆ ಬಸವ ಮಾತ್ರ ಹಳ್ಳಹತ್ತಿ ಬಡಗಲ ದಿಕ್ಕಿನಲ್ಲಿ ನಿಧಾನಕ್ಕೆ ಹೆಜ್ಜೆ ಹಾಕುತ್ತಿತ್ತು. ಹಿಂದೆ ಬಂದಿದ್ದ ದನಕರು. ಎಮ್ಮೆ, ಕುರಿ, ಆಡು ಹಳ್ಳದಲ್ಲಿ ನೀರು ಕಂಡಕೂಡಲೇ ಹೊಟ್ಟೆ ತುಂಬಾ ನೀರು ಕುಡಿದು ದಡದಲ್ಲಿ ಸಿಗುತ್ತಿದ್ದ ಮೇವಿಗೆ ರಾಪಾಡಿದ್ದವು. ಗೌನಳ್ಳಿ ಜನ ಅವೆಲ್ಲವನ್ನೂ ಹಳ್ಳದ ಗಡ್ಡೆ ಹತ್ತಿಸಿ ಬಂಡಿ ಹಿಂದೆ ಸಾಗಹಾಕಿದರು. “ಒಳ್ಳೆ ಜನಕ್ಕೆ ದೇವು ಅನ್ಯಾಯ ಮಾಡಲ್ಲ. ಇವು ಎಲ್ಲಿಗೋದ್ರು ಕಾಪಾಡ್ತಾನೆ” ಅಂ- ದುಕೊಂಡು ಭಾರವಾದ ಹೃದಯದಿಂದ ಗೌನಹಳ್ಳಿಯತ್ತ ಹೆಜ್ಜೆ ಹಾಕಿದ್ದರು.
ಮುಂದೆ ನಿಧಾನವಾಗಿ ನಡೆಯುತ್ತಿದ್ದ ಕಟ್ಟೆ ಬಸವ ಅರ್ಧ ಮೈಲಿ ದೂರ ಪಡುವಲಕ್ಕಿದ್ದ ಗುಡ್ಡದ ಮಗ್ಗುಲಲ್ಲಿ ನಡೆದು ಗುಡ್ಡ ಕೊನೆಯಾದ ಕಡೆ ಸ್ವಲ್ಪ ಹೊತ್ತು ನಿಂತು ಹಿಂದೆ ಬರುತ್ತಿದ್ದ ಬಂಡಿ ಹತ್ತಿರ ಬಂದ ಕೂಡಲೇ ಪಡುವಲ ಮುಖನಾಗಿ ಮುಂದೆ ನಡೆಯಿತು. ಬಸವನನ್ನೆ ಹಿಂಬಾಲಿಸಿ ನಡೆದಿದ್ದವರು ಏನೊಂದೂ ಯೋಚಿಸದೆ ‘ಬಸವಣ್ಣ ಎಲ್ಲಿಗೆ ಕರೆದೊಯ್ಯುತ್ತಾನೋ ಅಲ್ಲಿಗೆ ಹೋಗೋಣ’ ಎಂದು ಹಿಂದೆ ಹಿಂದೆ ನಡೆದರು. ಹೊತ್ತು ವಾಲಿ ಇನ್ನೊಂದು ಗಂಟೆಗೆ ಮುಳುಗಿ ಕತ್ತಲಾಗೋ ಸಮಯಕ್ಕೆ ಕೊಳಾಳು ಗ್ರಾಮ ತಲುಪಿದ ಬಸವ ತೆಂಕಲಿಗೆ ಎತ್ತರದಲ್ಲಿದ್ದ ಹಾಳು ಕೋಟೆಗೋಡೆ ಕಡೆಗೆ ಹೆಜ್ಜೆ ಹಾಕಿ ಅಲ್ಲಿನ ದಿಬ್ಬದ ಮೇಲೆ ನಿಂತು ಗಂಜು ಹೊಯ್ದು, ಸಗಣಿ ಉದುರಿಸಿತ್ತು.
ಹಿಂದಿನ ಸಂಚಿಕೆ ಓದಲು ಕ್ಲಿಕ್ ಮಾಡಿ: 3 ಎಲ್ಲರೂ ಲಿಂಗವಂತರಾದರು.
ಕೊಳಹಾಳ ನಿವಾಸಿಗಳಲ್ಲಿ ನಾಯ್ಕರ ಜಾತಿಯವರು ಬಹು ಸಂಖ್ಯೆಯಲ್ಲಿದ್ದರು. ಸ್ವಲ್ಪ ಭಾಗ ಕೆಳಜಾತಿ ಜನರು ವಾಸಿಸುತ್ತಿದ್ದರು. ಊರ ಮುಂದಿನ ಬಯಲಲ್ಲಿ ಲೋಕಾಭಿರಾಮ ಮಾತಾಡುತ್ತಿದ್ದವರು ಮತ್ತಿತರರು ಕಟ್ಟೆ ಬಸವ ಹತ್ತಿ ಹೋದ ಕಡೆ ಹೋಗಿ ಆಶ್ಚರದಿಂದ ನೋಡುತ್ತಿರುವಾಗ ಕೆಂಪು ರುಮಾಲಿನ ಪೂಜಾರಿ ಲಿಂಗಪ್ಪನವರು ನಿಧಾನವಾಗಿ ಅಲ್ಲಿಗೆ ತಲುಪಿದ್ದರು.
ತುಂಬಿದ ಬಂಡಿ ಅಲ್ಲಿಗೆ ತಲುಪಲು ಕಷ್ಟಸಾಧ್ಯವಿತ್ತು. ಬಸವ ನಿಂತ ಸ್ಥಳ ತಲುಪಿದ ಲಿಂಗಪ್ಪನವರ ಗುರು ಕೂನ ವಿಚಾರಿಸಿದರು ಕೊಳಾಳ ಜನ. ಲಿಂಗಪ್ಪನವರು ನಿಧಾನವಾಗಿ ತಾವು “ಭರಮಗಿರಿ ವಾಸಿಗಳೆಂದೂ ಮತ್ತು ಕಣಿವೆ ಮಾರಮ್ಮನ ಪೂಜಾರರು” ಎಂದೂ” ತಿಳಿಸಿ, “ಈಗ ಯಾವುದೋ ತಾಪತ್ರಯಕ್ಕೆ ಸಿಲುಕಿ ಊರು ಬಿಟ್ಟು ಹೊರಡಬೇಕಾಯಿತು. ನಾವು ಹೊರಡುವಾಗ ಈ ಬಸವನಿಗೆ ಪೂಜೆ ಮಾಡಿ ನೀನು ಕಟ್ಟೆ ಬಸವ ನೀನು ಕರೆದಲ್ಲಿಗೆ ಬರುತ್ತೇವೆ ಎಂದು ಎಲ್ಲರೂ ಪೂಜೆ ಮಾಡಿ ಅಡ್ಡಬಿದ್ದಿದ್ದೆವು. ಈಯಪ್ಪ ಈಗ ಇಲ್ಲಿಗೆ ತಂದು ಮುಟ್ಟಿದ್ದಾನೆ” ಎಂದು ಹೇಳಿಕೊಂಡಿದ್ದರು.
ಇದನ್ನು ಕೇಳಿದ ಕೊಳಾಳಿನ ಜನ ಮತ್ತು ಮುತಖಂಡರು “ಉತ್ತವಾರು ಊರಿಗೆ ಬಂದಿದೀರಾ. ನಿಮಗೆ ಪಾಗ ಕೊಡಬೇಕಾದ್ದು ನಮ್ಮ ಕರ್ತವ್ಯ” ಎಂದು ಉದಾರತೆಯಿಂದ ಮಾತಾಡಿ “ಈಗ ನಿಮ್ಮ ಕಟ್ಟೆ ಬಸವಣ್ಣ ಎಲ್ಲಿ ನಿಂತು ಗಂಜು ಹೊಯ್ದು ಸಗಣಿ ಹಾಕಿದೆಯೋ ಅಲ್ಲೆ ಮನೆ ಕಟ್ಟಿಕೊಳ್ಳಿ, ನಾವ ಕೈಲಾದ ಸಹಾಯ ಮಾಡ್ತೀವಿ” ಎಂದು ಆಶ್ವಾಸನೆ ನೀಡಿದರು. ಪೂಚಾರಿ ಲಿಂಗಪ್ಪನವರು ಕಟ್ಟೆ ಬಸವನ ಪಾದಕ್ಕೆ ಅಡ್ಡಬಿದ್ದು “ಇಲ್ಲಿ ಇರನೇನಪ್ಪಾ ಮಾಸ್ವಾಮಿ” ಎಂದು ಕೇಳಿದರು.
ಹಿಂದಿನ ಸಂಚಿಕೆ ಓದಲು ಕ್ಲಿಕ್ ಮಾಡಿ: 4 ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ.
ಅದಕ್ಕೆ ಬಸವ ತಲೆಯಾಡಿಸಿತ್ತು, ಆಗ ಕೊಳಹಾಳ ವಾಸಿಗಳು ಕೆಳಗೆ ಹೋಗಿ ತುಂಬಿದ ಬಂಡಿಯನ್ನು ಕೇಕೇ ಹಾಕಿಕೊಂಡು ಎತ್ತುಗಳಿಂದ ಎಳೆಸಿಕೊಂಡು ಮೇಲೆ ಹತ್ತಿಸಿದ್ದರು. ಕೆಲ ಹೊತ್ತಿಗೆಲ್ಲಾ ಹಿಂದೆ ಬರುತ್ತಿದ್ದ ದನಕರು ಎಮ್ಮೆ, ಕುರಿ ಆಡು ಎಲ್ಲಾ ಹತ್ತಿ ಬಂದು ಇವರನ್ನೂ ಕೂಡಿಕೊಂಡಿದ್ದವು.
“ಈಗ ಮಳೆಗಾಲ ಆದ್ರೂ ಮುಂಗಾರು ಕೈಕೊಟ್ಟಿತೆ. ಬ್ಯಾಗ್ಗೆ ಕಾಲ ಇದ್ದಂಗೈತೆ. ರಾತ್ರಿ ಇಲ್ಲೆ ಇದ್ದೀರಾ ಅತ್ವಾ ಯಾರದಾನ ಮನೆ ಹಜಾರದಾಗೆ ಮನಿಕೈಮೀರಾ. ಹೆಂಗ್ ಮಾಡ್ತೀರಾ ನೋಡ್ರಿ.” ಕೆಲವು ಕೊಳಾಳ ನಿವಾಸಿಗಳು ವಿಚಾರಿಸಿದ್ದರು. “ಬುತ್ತಿಕಟ್ಕಂಡ್ ಬಂದೈದೀವಿ ಇಲ್ಲೇ ಉಂಡು ಇಲ್ಲೇ ಪಸಂದಾಗೈತೆ ಇಲ್ಲೇ ಮಲಗಿ ರಾತ್ರಿ ಕಳೀತೀವಿ. ದನಕರು ಕುರಿ ಮ್ಯಾಕೆ ಐದಾವೆ ಎಲ್ಲಾ ಇಲ್ಲೆ ಇದ್ದಾವೆ”, ಪೂಜಾರಿ ಲಿಂಗಪ್ಪ ಮಾತಾಡಿದ್ದರು.
“ಯಾರಾದೂ ಹುಡುಗ್ರು ನಾಕೈದು ಕೊಡ ನೀರು ತಂದು ಕೊಡ್ರಪ್ಪಾ, ಇವರಿಗೆ ಊಟ ಮಾಡಾಕೆ ಕುಡಿಯಾಕೆ ನೀರು ಬೇಕಾಗುತ್ತೆ”. ನಾಯ್ಕರ ಹಿರಿಯನೊಬ್ಬ ಸೂಚಿಸಿದ ಕೂಡಲೇ ಕೆಲವು ಯುವಕರು ದಡಾಬಡಾ ಇಳಿದು ಹೋಗಿದ್ದರು. “ಪೂಜಾರೇ ಉಂಡು ಮಲಿಕ್ಕಳ್ಳಿ ಬೆಳಿಗ್ಗೆ ಬಂದು ಕಾಣೀವಿ” ಎಂದು ಆತನೇ ಮಾತಾಡಿ “ಬರೆಪ್ಪಾ ಎದ್ದಾಗ ಬರಾನ” ಎಂದು ತಮ್ಮೂರವರೊಡನೆ ಹಿಂತಿ- ರುಗಿದ್ದರು.
ಕೊಳಹಾಳ ನಿವಾಸಿಗಳ ಸಹಾಯ ಸಹಕಾರದಿಂದ ತಿಂಗಳೊಪ್ಪತ್ತಿನಲ್ಲಿ ಒಂದು ಮಾಳಿಗೆ ಮನೆಯನ್ನ ನಿರಿಸಿಕೊಂಡು ಪೂಜಾರ ಲಿಂಗಪ್ಪನವರು ಮತ್ತು ಅವರ ಬಂಧುಗಳು ಕೊಳಹಾಳ ನಿವಾಸಿಗಳಾದರು.
ಹಿಂದಿನ ಸಂಚಿಕೆ ಓದಲು ಕ್ಲಿಕ್ ಮಾಡಿ: 5 ಕೆನ್ನಳ್ಳಿಯ ದುರಂತ.
ಭರಮಗಿರಿಯನ್ನು ತೊರೆದು ಕೊಳಹಾಳಿಗೆ ಬಂದು ನೆಲಸಿದ ಪೂಜಾರ ಲಿಂಗಪ್ಪನವರು ಸ್ಥಳೀಯರ ಪ್ರೀತಿ ವಿಶ್ವಾಸಗಳನ್ನು ಗಳಿಸಿ ಕಾಲಾನಂತರದಲ್ಲಿ ಭೂಮಿ ಕಾಣಿ ಆಸ್ತಿ ಸಂಪಾದಿಸಿ ಊರಿನಲ್ಲಿ ಗೌರವಸ್ಥರಾಗಿದ್ದರು.
ಮುಂದೆ 60 ವರ್ಷಗಳಲ್ಲಿ ಈ ಮನೆತನದಲ್ಲಿ ಕೆಂಚಪ್ಪನೆಂಬ ಅವಧೂತನ ಜನನವಾಗುತ್ತದೆ. ಈತನ ಪ್ರಭಾವಲಯದಲ್ಲಿ ಈ ಮನೆತನ ಗದ್ದುಗೆಯವರ ಮನೆತನವೆಂದು ಪ್ರಖ್ಯಾತವಾಗುತ್ತದೆ.
ಅವಧೂತ ಕೆಂಚಪ್ಪನ ಮಗಳು ಚಲುವೆ ಭೈರಮ್ಮನೆಂಬ ಹೆಸರಿನವಳಲ್ಲಿ ಗೌನಳ್ಳಿ ಪರಿಸರದ ಕೆನ್ನಳ್ಳಿಯ ಗೌಡನು ಅನುರಕ್ತನಾಗಿ, ಅವಳು ಮತ್ತು ಈ ಗೌಡ ಕೊಳಾಳು ಕೆನ್ನಳ್ಳಿಗಳ ಗುಡ್ಡ ಕಣಿವೆಗಳಲ್ಲಿ ಮಧ್ಯೆ ಓಡಾಡಿಕೊಂಡಿದ್ದರು. ಕೆನ್ನಳ್ಳಿ ಗೌಡನ ಪತ್ನಿ ಇದರಿಂದ ರೋಸಿ ಹೋಗಿ ಗೌಡನ ಅನುಚರರಿಂದಲೇ ಕೆನ್ನಳ್ಳಿ ಸಮೀಪದ ಕಣಿವೆಯಲ್ಲಿ ಭೈರಮ್ಯಳ ಕೊಲೆ ಮಾಡಿಸುತ್ತಾಳೆ. ಈಗಲೂ ಕೊಲೆಯಾದ ಕಣಿವೆಗೆ ಭೈರಜ್ಜಿ (ಪ್ರೀತಿಯಿಂದ ಭೈರಜ್ಜಿ ಎಂದು ಸಂಬೋಧಿಸುತ್ತಾರೆ) ಕಣಿವೆ ಎಂದೇ ಹೆಸರಾಗಿದೆ.
ಮತ್ತೋಡು ಪಾಳೇಗಾರ ಹಿರಿಯ ಹಾಲಪ್ಪ ನಾಯಕನು ತಮ್ಮ ಪಟ್ಟಮಹಿಷಿ ನಾಗಕೆಂಚಾಂಬೆಯ ಸೀಮಂತದ ನೆನಪಿನಲ್ಲಿ ಶಾಲಿವಾಹನ ಶಕೆ 1651 (1729- 30) ಸೌಮ್ಯನಾಮ ಸಂವತ್ಸರದಲ್ಲಿ ತಮ್ಮ ಪಾಳೇಪಟ್ಟಿನ ಕೆಲವು ದೈವಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿದಾಗ ಲಿಂಗಪ್ಪನ ಮೂಲ ಪುರುಷರಾದ ಹುಳಿಯಾರ ವಕ್ಕಲು ಗೌಡರಿಗೆ ಕಣಿವೆ ಮಾರಮ್ಮ ದೈವದ ಪೂಜಾಧಿಕಾರವನ್ನು ವಹಿಸಿಕೊಟ್ಟಿರುತ್ತಾರೆ.
ಹಿಂದಿನ ಸಂಚಿಕೆ ಓದಲು ಕ್ಲಿಕ್ ಮಾಡಿ: 6 ಎಲ್ಲೆಲ್ಲಿಂದಲೋ ಬಂದರು.
ಈ ಮಧ್ಯೆ ಹಿರಿಯೂರ ಪಾಳೇಗಾರ ಕೆಂಚಣ್ಣ ನಾಯಕ ಕ್ರಿ.ಶ. 1652ರಲ್ಲಿ ಮೃತನಾದ ಮೇಲೆ ಕೆಲ ಕಾಲಾನಂತರದಲ್ಲಿ ಚಿತ್ರಕಲ್ ದುರ್ಗದ ಪಾಳೇಗಾರ ಇಮ್ಮಡಿ ಮೆದಕೇರಿನಾಯಕನು ಹಿರಿಯೂರು, ನನ್ನಿವಾಳ ಮತ್ತು ಐಮಂಗಲ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾನೆ.
ಆನಂತರ ಇವನು ತನ್ನ ಆಡಳಿತಾನುಕೂಲಕ್ಕೆ ಬೇರೆ ಬೇರೆ ಊರುಗಳನ್ನು ಸೇರಿಸಿ ಹಿರಿಯೂರು ಸೀಮೆ, ಐಮಂಗಲ ಸೀಮೆ, ಇಕ್ಕನೂರು ಸೀಮೆ, ಭರಮಗಿರಿ ಸೀಮೆ ಧರಪುರ ಸೀಮೆ ಮತ್ತು ರಂಗಸಮುದ್ರ ಸೀಮೆ ಮುಂತಾಗಿ ವ್ಯವಸ್ಥೆಗೊಳಿಸಿದ್ದನು. ಭರಮಗಿರಿ ಸೀಮೆಯ ಉಸ್ತುವಾರಿ ನಾಯಕನು ಕಣಿಮೆ ಮಾರಿಯ ಪೂಜಾರರಿಗೆ ಕಿರುಕುಳ ನೀಡಿ, ಅವರು ಊರು ತ್ಯಜಿಸುವಂತೆ ಮಾಡಿದ್ದನೆಂದು ಪ್ರತೀತಿ.
ಮುಂದುವರೆಯುವುದು……..