8. ಮೋಜಣಿಕೆ ಮಾಡಿದರು | ಹಬ್ಬಿದಾ ಮಲೆ ಮಧ್ಯದೊಳಗೆ
CHITRADURGA NEWS | 27 OCTOBER 2024
ಗೌನಹಳ್ಳಿಯ ಕೆಲವು ಬಾಲಕರು ಮತ್ತೆ ಕೆಲವು ಮಂದಿ ಯುವಕರು ಸೇರಿಕೊಂಡು ಬೂರಿ ಚೆಂಡಾಟ ಆಡುತ್ತಿದ್ದರು. ಐವತ್ತು ಅರುವತ್ತು ಅಡಿ ದೂರದಲ್ಲಿ ಒಂದು ತೆಳ್ಳನೆಯ ಸಣ್ಣ ಕಲ್ಲನ್ನು ಮರಳಾಸರೆಯಿಂದ ನಿಲ್ಲಿಸಿ ಅದಕ್ಕೆ ದೂರದಿಂದ ಒಬ್ಬರು ಚಂಡೆಸೆಯುತ್ತಿದ್ದರು. ಚೆಂಡು ಕಲ್ಲಿಗೆ ತಗುಲಿ ಕಲ್ಲು ಬಿದ್ದ ಕೂಡಲೆ ಅದೇ ಚಂಡಿನಿಂದ ಓಡುತ್ತಿರುವ ಸಹ ಆಟಗಾರರನ್ನು ಬೆನ್ನಟ್ಟಿ ಹೊಡೆಯುತ್ತಿದ್ದರು.
ಅದನ್ನು ನೋಡುತ್ತಿದ್ದ ಕೆಲವು ಹೆಂಗಸರ, ಹುಡುಗಿಯರ ಸಾನಿಧ್ಯದಿಂದಾಗಿ ಆಟ ರಂಗೇರಿತ್ತು. ಅದೇ ಸಮಯಕ್ಕೆ ಓಣಿ ಬಾಯಿಂದ ಆರೇಳು ಕುದುರೆಗಳ ಮೇಲೆ ಕೆಂಪು ಪೋಷಾಕು ಧರಿಸಿದ್ದ ಮತ್ತು ತಲೆಗೆ ಬಣ್ಣ ಬಣ್ಣದ ಫಿರಂಗಿ ಟೋಪಿ ಧರಿಸಿದ್ದ ಜನ ಆಗಮಿಸಿದರು.
ಹಿಂದಿನ ಸಂಚಿಕೆ ಇಲ್ಲಿದೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ
ಚೆಂಡಾಟ ನಿಲ್ಲಿಸಿದ ಯುವಕರು ಹುಡುಗರು ಭಯ ಮಿಶ್ರಿತ ಕಣ್ಣುಗಳಿಂದ ಅವರನ್ನು ನೋಡಿದರು. ಕೆಲವು ಹುಡುಗರು ಹೆದರಿ ಓಡಿಹೋಗಿದ್ದರು. ಬಂದವರು ಕುದುರೆಗಳನ್ನು ನಿಲ್ಲಿಸಿ ಒಬ್ಬೊಬ್ಬರೇ ಕೆಳಗಿಳಿದರು. ಅವರ ಹಿಂದೆ ತೇಗುತ್ತಾ ಐದಾರು ಜನ ಓಡಿ ಬರುತ್ತಿದ್ದವರು
ಇವರನ್ನು ಕೂಡಿಕೊಂಡಾದ ಬಳಿಕ ಅವರಲ್ಲೊಬ್ಬ ಕುಡಿಯಲು ನೀರು ಯಾವಕಡೆ ಸಿಗುತ್ತದೆ ಎಂದು ಕೈಸನ್ನೆ ಮಾಡಿ ವಿಚಾರಿಸಿದ್ದ. ಯುವಕರು ಊರ ಮುಂದಲ ಹಳ್ಳದ ಕಡೆ ಕೈ ತೋರಿಸಿದ್ದರು.
ಆಗ ಕನ್ನಡದಲ್ಲಿ ಮಾತಾಡಿದ ಇನ್ನೊಬ್ಬಾತ “ನಡಿಯಪ್ಪಾ ತೋರಿಸು” ಎಂದು ಕೇಳಿ ಆ ಯುವಕನನ್ನು ಹಿಂಬಾಲಿಸಿದ್ದನು. ಉಳಿದವರು ಊರಿನ ಎರಡು ಸಾಲು “It is really a beautiful place” ತಮ್ಮತಮ್ಮಲ್ಲೇ ಮಾತಾಡಿಕೊಂಡರು. ಅವರಲ್ಲಿ ಮೂರು ಜನ ಬಿಳಿಯರಿದ್ದರು. ಅವರು ಬಹುಶಃ ವಿದೇಶಿಗರಿರಬಹುದೆಂದು ಅಲ್ಲಿಗೆ ಆಗಮಿಸಿದ ಹಳ್ಳಿಗರು ಮಾತಾಡಿಕೊಂಡರು. ಅವರು ಸುತ್ತಲ ಗುಡ್ಡ, ಗಿಡಮರಗಳನ್ನು ನೋಡುತ್ತಾ ತಮ್ಮತಮ್ಮಲ್ಲೇ ಇಂಗ್ಲೀಷಿನಲ್ಲಿ ಮಾತಾಡಿಕೊಂಡರು:
ಹಳ್ಳ ನೋಡಿ- ಕೊಂಡು ಬಂದಿದ್ದಾತ “ಇಲ್ಲೇ ಹತ್ತಿರದಲ್ಲಿ ಹಳ್ಳ ಇದೆ. ನೀರು ಕುಡಿಯಲು ಚೆನ್ನಾಗಿದೆ. ಹಳ್ಳದ ಪಕ್ಕದಲ್ಲಿ ಮಾವಿನಮರಗಳ ತೋಪು ಇದೆ. ಅಲ್ಲಿ ನಾವು ಸಾಮಾನು ಇಳಿಸಬಹುದು” ಎಂದು ತಿಳಿಸಿದ “you go and verify” ಎಂದು ಕೆಂಪು ಹಿರಿಯ ಇನ್ನೊಬ್ಬರಿಗೆ ಸೂಚಿಸಿದರು. ಕೂಡಲೇ ಆತ ಕುದುರೆ ಏರಿ ಹಳ್ಳದ ಕಡೆಗೆ ದೌಡಾಯಿಸಿದ. ಅಷ್ಟೊತ್ತಿಗೆ ಹಳ್ಳಿಯ ಇನ್ನಷ್ಟು ಮಂದಿ ಆಗಮಿಸಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು
‘ಇವರಾರು ಏಕೆ ಬಂದಿದ್ದಾರೆ. ಇಂಗ್ಲೀಷನೊರು ಬಂದೌರೆ. ಅವರೇನು ಪೋಲೀಸೋ ಬ್ಯಾರೇನೋ’ ಎಂದು ಹಳ್ಳಿಗರು ಸಂಶಯ ವ್ಯಕ್ತಪಡಿಸಿದರು. ಹಳ್ಳದ ಕಡೆಗೆ ಹೋಗಿದ್ದಾತ ಹಿಂದಿರುಗಿ ‘ಇಟ್ ಈಸ್ ನೈಸ್ ಫಾರ್ ಅವರ್ ಸ್ಟೇ” ಎಂದು ಖುಷಿಯಿಂದ ತಿಳಿಸಿದ. ಕೂಡಲೇ ಉಳಿದವರು ಕುದುರೆ ಏರಿ ಹಳ್ಳದ ಕಡೆ ಹೋಗಿದ್ದರು.
ಮಾವಿನ ಮರಗಳ ತಂಪಾದ ಸ್ಥಳದಲ್ಲಿ ಕುದುರೆಗಳನ್ನು ನಿಲ್ಲಿಸಿ ಅವರ ಸಾಮಾನು ಸರಂಜಾಮು ಇಳಿಸಿದರು. ಅವರಲ್ಲಿ ಕೆಲವರು ತಾವು ತಂದಿದ್ದ ಗುಡಾರಗಳನ್ನು ಬಿಚ್ಚಿ ಗೂಟ ನೆಟ್ಟು ಎತ್ತಿಕಟ್ಟಿದರು. ಒಟ್ಟು ಆರು ಗುಡಾರಗಳನ್ನು ಎತ್ತಿ ಕಟ್ಟಿ ಅಡಿಗೆ ತಯಾರಿಸುವ ಪರಿಕರಗಳನ್ನು ಹಳ್ಳ ಇಳಿದು ನೀರಿನಲ್ಲಿ ತೊಳೆದುಕೊಂಡು ತಂದರು. ಗುಡಾರಗಳಲ್ಲಿ ಒಂದು ಊಟ ಮಾಡುವ ಗುಡಾರವಾಗಿತ್ತು.
ಉಳಿದವರೆಲ್ಲಾ ಹಳ್ಳದ ನೀರಿನಲ್ಲಿ ಮುಖ ಕೈಕಾಲು ತೊಳೆದುಕೊಂಡರು. ಅವರ ಜತೆಯಲ್ಲಿ ಬಂದಿದ್ದ ಅಡಿಗೆಯವರು ಕೆನ್ನೀರಿನಂಥ ಚಾಯ್ ಮಾಡಿ ಮೊದಲು ಇಂಗ್ಲೀಷ್ನವರಿಗೆ ಅನಂತರ ಉಳಿದೆಲ್ಲರಿಗೆ ಸರಬರಾಜು ಮಾಡಿದ್ದರು. ಇಂಗ್ಲೀಷ್ ನವರಲ್ಲಿ ಇಬ್ಬರು ಚಾ ಸೇವಿಸಿ ಕುದುರೆ ಏರಿ ಮೂಡಲ ಗುಡ್ಡದ ಕಡೆಗೆ ಹೊರಟರು. ಅವರು ಗುಡ್ಡದ ತಪ್ಪಲಿನ ಎತ್ತರದ ಜಾಗದಲ್ಲಿ ಕುದುರೆಗಳನ್ನು ನಿಲ್ಲಿಸಿ ಅಲ್ಲಿಂದ ಕಾಣುವ ಸುತ್ತಲ ಪ್ರದೇಶವನ್ನು ದುರ್ಬೀನಿನಿಂದ ನೋಡಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 3. ಎಲ್ಲರೂ ಲಿಂಗವಂತರಾದರು
ಅವರು ಅಲ್ಲಿಂದ ಇಳಿದು ಬರುವ ಸಮಯಕ್ಕೆ ಅಡಿಗೆಯವರು ರೊಟ್ಟಿಯಂಥಾವನ್ನು ಬೇಯಿಸಿ ಎಂಥದೋ ಪಲ್ಯ ಮಾಡಿದ್ದರು. ಊರಿನ ಹಿರಿಯರು ಮತ್ತೆ ಕೆಲವರು “ಈ ಜಾಗದಲ್ಲಿ ಶ್ರೀಶೈಲದ ಸ್ವಾಮಿಗಳು ಕೆಲವು ದಿನ ಬಿಡಾರ ಮಾಡಿದ್ದ ಜಾಗ ಇದು. ಹೊರಗಿನಿಂದ ಬಂದೋರಿಗೆ ಇಳಕೊಳ್ಳಾಕೆ ಒಳ್ಳೆ ಜಾಗ” ಎಂದು ಮಾತಾಡಿಕೊಂಡಿದ್ದರು. ಬಂದವರಲ್ಲಿ ಕನ್ನಡ ಮಾತಾಡುವ ಮತ್ತು ಮರಾಠಿ ಮಾತಾಡುವ ಜನಗಳೂ ಇದ್ದರು. ಕನ್ನಡ ಮಾತಾಡುವವರು “ಇವರು ಮೂವರು ಇಂಗ್ಲೀಷ್ನೋರು ನಾಕೈದು ಜನ ಮರಾಠಿ ಮಾತಾಡುವವರು ಇದ್ದಾರೆ. ಎಲ್ಲಾ ಸೇರಿ ಜಮೀನು ಅಳೀತೀವಿ ಎಂದು ತಿಳಿಸಿದ್ದರು.
ಊರವರಿಗೆ ‘ಇದೇನು ಬಂತಪ್ಪಾ ಈ ರಗಳೆ ನಮ್ ಜಮೀನುಗಳೆಲ್ಲಾ ಅಳೀತಾರಂತೆ ಹೆಂಗ್ ಅಳೀತಾರೆ ನೋಡಾನ’ ಎಂದು ಆತಂಕಗೊಂಡಿದ್ದರು. ಬಂದವರೂ ಕೂಡಾ “ಹಾಲು ತಂದುಕೊಡಿ ದುಡ್ಡು ಕೊಡುತೀವಿ” ಎಂದು ಕೇಳಿದ್ದರು.
ಮಾರನೇ ದಿನ ಅಡಿಗೆ ಮಾಡುವವರನ್ನುಳಿದು ಎಲ್ಲರೂ ನಿಕ್ಕರ್ ಧರಿಸಿಕೊಂಡು, ತಲೆಗೆ ಇಂಗ್ಲೀಷ್ ಟೋಪಿ, ಕನ್ನಡಕ ಹಾಕಿಕೊಂಡು ಜಮೀನು ಅಳೆಯಲು ಸಿದ್ಧರಾಗಿದ್ದರು. ಹಾಲು ಕೊಡಲಿಕ್ಕೆ ಹೋದವರಿಗೆ “ನೀರೊಳೇ ಹಾದಿಯಿಂದ ತೆಂಕಲಿಗಿರುವ ಜಮೀನಿನವರು ಬರಬೇಕು. ಹಾರೆ, ಸಲಿಕೆ, ಬಿಂದಿಗೆ ಚೊಂಬು ತರಬೇಕು” ಎಂದು ಹೇಳಿಕಳಿಸಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ
ದೊಡ್ಡುಂಬೊತ್ತಿಗೆಲ್ಲಾ ಅಳತೆ ಕೆಲಸಕ್ಕೆ ಬೇಕಾದ ದುರ್ಬಿನು, ಹಿತ್ತಾಳೆ ಸರಪಳಿ, ಅಳತೆಯ ಕೋಲು, ಶಂಖ ಅನ್ನುವ ಗೂಟದಂತಹ ಕಬ್ಬಿಣದ ಸಲಾಕೆ ಮುಂತಾದುವುಗಳನ್ನು ಕೈಲಿಡಿದು ಊರ ಕರುವುಗಲ್ಲ ಮೂಡಲಿಂದ ಅಳೆಯಲು ಸುರುವಿಟ್ಟುಕೊಂಡಿದ್ದರು. ಇಂಗ್ಲೀಷ್ ಅಧಿಕಾರಿಗಳು ಇಂಗ್ಲೀಷಿನಲ್ಲಿ ಮಾತಾಡುತ್ತಾ ಮರಾಠಿ ಬರವಣಿಗೆದಾರರಿಗೆ ಸಲಹೆ, ಸೂಚನೆ ಕೊಡುತ್ತಿದ್ದರು. ಅವರು ತೋರಿಸಿದಲ್ಲಿ ಜಮೀನು ರೈತರು ಬಾಂದು ಕಟ್ಟಿಕೊಳ್ಳಲು ಸೂಚಿಸಿ ಬಾಂದು ಅಂದರೆ ಹೆಂಗಿರಬೇಕು ಎಂಬುದನ್ನು ತೋರಿಸಿ ಕಲ್ಲುಗಳನ್ನು ತರಿಸಿ ಕಟ್ಟಿತೋರಿಸಿದ್ದರು.
ಸರಪಳಿಯಿಂದ ಅಳೆಯುವವರು ಇಬ್ಬರು ಶಂಖ ನೆಡಿಸಿ ಅಲ್ಲಿಂದ ಕಿತ್ತು ಮುಂದೆ ಒಯ್ಯುವವರು ಇಬ್ಬರು, ಅವರಿಗೆ ಚಹಾ ತಂದು ಕೊಡುವವರಿಬ್ಬರು. ಹೀಗೆ ದೊಡ್ಡುಂಬೊತ್ತಿನಿಂದ ಆರಂಭಿಸಿ ಹೊತ್ತು ನೆತ್ತಿಬಿಟ್ಟು ವಾಲುವ ತನಕ ಅಳತೆ ಮಾಡುತ್ತಿದ್ದರು.
ಹಗಲೊತ್ತಿನ ಊಟಕ್ಕೆ ಗುಡಾರಕ್ಕೆ ಬಂದರೆ ಮತ್ತೆ ಜಮೀನು ಅಳತೆಗೆ ಹೋಗುತ್ತಿರಲಿಲ್ಲ. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಅಳೆದ ಜಮೀನುಗಳಿಗೆ ಅಂಕೆ, ಸಂಖ್ಯೆ ಕೊಟ್ಟು ಜಮೀನುಗಳ ನಕಾಶೆ ತಯಾರಿಸಿ ಅವಕ್ಕೆ ತರಿ, ಖುಷಿ, ಬಾಗಾಯ್ತು, ಖರಾಬು ಮತ್ತು ಗುಂಡುತೋಪು, ಗೋಮಾಳ ಹೀಗೆ ಹೆಸರು ನೀಡಿ ಗುರುತಿಸುತ್ತಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 5. ಕೆನ್ನಳ್ಳಿಯ ದುರಂತ
ಮಾರನೇ ದಿನ ಗೌಡ್ರ ಮನೆತನದವರ ಜಮೀನುಗಳ ಮೋಜಣಿಕೆ ನಡೆದಿತ್ತು. ಆಯಾ ಜಮೀನುಗಳ ರೈತರು ಹಾಜರಿದ್ದು, ಬಾಂದು ನಿರಿಸುವುದು ಹದ್ದುಬಸ್ತು ಮತ್ತು ಗುರ್ತಿನ ಕಲ್ಲು ಹೂಳುವುದು ಇತ್ಯಾದಿ ಮಾಡುತ್ತಿದ್ದರು. ಊರಿಂದ ತೆಂಕಲ ದಿಕ್ಕಿನ ಭೂಮಿ ಅಳತೆಯಾದ ಮೇಲೆ ಹಳ್ಳದ ಮೂಡಲ ದಂಡೆಯ ಜಮೀನುಗಳು ಅನಂತರ ಬಡಗಣ ದಿಕ್ಕಿನ ಜಮೀನುಗಳು, ಹೀಗೆ ಗೌನಳ್ಳಿಯಲ್ಲದೆ ಬಡಗಣ ದಿಕ್ಕಿನ ಗೋಗುದ್ದು, ಕೆನ್ನಳ್ಳಿ ಅಳತೆಯಾದ ಬಳಿಕ ತೆಂಕಲ ದಿಕ್ಕಿನ ಗುಡಿಹಳ್ಳಿ ಜಮೀನುಗಳ ಅಳತೆಯನ್ನು ಮಾಡಿದ್ದರು.
ಇವರು ಗೌನಳ್ಳಿಯಲ್ಲಿ ತಂಗಿದ್ದ ಮುವ್ವತ್ತು ದಿನಗಳಲ್ಲಿ ಊರವರನ್ನು ಮಯ್ಯಾದೆಯಿಂದ ಮಾತಾಡಿಸುತ್ತಿದ್ದರು. ಹಳ್ಳಿಗರು ತಂದು- ಕೊಡುತ್ತಿದ್ದ ಹಾಲಿಗೆ ದುಡ್ಡು ಪಡೆಯಲು ನಿರಾಕರಿಸಿದ್ದರು.
ಜಮೀನು ಮೋಜಣಿಕೆ ಎಲ್ಲಾ ಮುಗಿದ ಬಳಿಕ ಸರ್ಕಾರ ‘ತರಿ, ಖುಷಿ, ಬಾಗಾಯ್ತು ಜಮೀನುಗಳಿಗೆ ಮೂರು ರೀತಿಯ ಕಂದಾಯ ಹಾಕುತ್ತದೆ. ಅದೇನು ಜಾಸ್ತಿ ಇರುವುದಿಲ್ಲ. ನೀವು ಬೆಳೆದುಕೊಳ್ಳುವ ಫಸಲಿನ ಕಾಲು ಭಾಗ ಇರಬಹುದು’ ಎಂದು ಅಧಿಕಾರಿಗಳು ತಿಳಿಸಿದಾಗ ಹಳ್ಳಿಗರು ಆತಂಕಕ್ಕೊಳಗಾಗಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 6. ಎಲ್ಲೆಲ್ಲಿಂದಲೋ ಬಂದರು
ಅವರು ಮುಂದಿನ ಊರಿಗೆ ಹೊರಡುವುದಕ್ಕೆ ಮುಂಚೆ ಅಧಿಕಾರಿ ತಮ್ಮ ಪರಿಚಯ ತಿಳಿಸಿ ಮೇಜರ್ ವಿಲಿಯಂ ಆಂಡರ್ಸನ್ ಮತ್ತು ಅವರ ಸಹಾಯಕರು ಕರ್ನಲ್ ಜಿ.ಸಿ. ಗ್ರಾಂಟ್ ಎಂದು ತಿಳಿಸಿ. ಮೋಜಣಿಕೆದಾರರೆಲ್ಲಾ ಮರಾಠಿಗರೆಂದು ತಿಳಿಸಿದ್ದರು. ಇದು ನಡೆದುದ್ದು 1863-64ರ ಸುಮಾರಿನಲ್ಲಿ ಭೂ ಮಾಪನಾ ಅಧಿಕಾರಿಗಳು ತೆರಳಿದ ಹತ್ತು ವರ್ಷದ ತನಕ ಯಾವ ಕಂದಾಯ ವಸೂಲಿ ಜಾರಿಯಾಗಿರಲಿಲ್ಲ. ಆದರೂ ಜಮೀನು ಅಂತ ಗುರುತಿಸಿಕೊಂಡಿದ್ದ ಮಣೆಗಾರರು ತಮ್ಮ ಜಮೀನುಗಳಲ್ಲಿ ಏನನ ಬೆಳೆದುಕೊಳ್ಳುತ್ತಿರಲಿಲ್ಲ. ಕಂದಾಯ ಹಾಕಿದರೆ ಹೆಂಗೆ ಅದನ್ನು ಸಲ್ಲಿಸುವುದು ಎಂದು ಅವರು ಚಿಂತೆಗೊಳಗಾಗಿದ್ದರು.
ಭೂಮಿ ಅಳತೆ ಮಾಡಿದವರು “ನಿಮ್ಮ ಹಿಡುವಳಿಗಳಿಗೆಲ್ಲಾ ಸರ್ಕಾರ ಕಂದಾಯ ಹಾಕುತ್ತದೆ’ ಎಂದು ತಿಳಿಸಿದ್ದರಿಂದ ಗೌನಹಳ್ಳಿಯ ಅರ್ಧಕ್ಕರ್ಧ ಜನ ಅಧೀರರಾಗಿದ್ದರು.
ಇಷ್ಟು ದಿನ ಭೂಮಿ ನೇರ್ಪು ಮಾಡಿಕೊಂಡು, ಉತ್ತು, ಬಿತ್ತಿ ಬೆಳೆದುಣ್ಣುತ್ತಿದ್ದ ಅವರು ಒಂದು ರೀತಿಯಲ್ಲಿ ನಿರುಮ್ಮಳವಾಗಿದ್ದರು. ನಮ್ಮನ್ನು ಕೇಳುವವರು ಹೇಳುವವರು ಯಾರೂ ಇಲ್ಲವೆಂದೇ ಭಾವಿಸಿದ್ದವರಿಗೆ “ಕಾಟಣ್ಣ ಮೋಟಣ್ಣ ಕೂಡ್ಯಾರೆ ಕರಿಕೆ ಹೊಲವ ಗೇದಾರೆ, ಕಂದಾಯ ಬಂತಲ್ಲೋ ಕಾಟಣ್ಣಾ, ಓಡೋಗನ ಬಾರೋ ಮೋಟಣ್ಣಾ ಹಿಂಗಾತಲ್ಲಪ್ಪ” ಎಂದು ಅವರವರೇ ಮಾತಾಡಿಕೊಳ್ಳುತ್ತಿದ್ದರು.
ಹಿಂದಿನ ಸಂಚಿಕೆ ಇಲ್ಲಿದೆ: 7. ಊರು ತೊರೆದು ಬಂದವರು
ಮೋಜಣಿಕೆ ಮಾಡಿದ್ದ ಇಂಗ್ಲೀಷ್ ಅಧಿಕಾರಿ “ಫಸಲಿನ ನಾಕಾಣೆ ಭಾಗ ಕಂದಾಯ ಹಾಕಬಹುದು” ಎಂದು ಹೇಳಿದ್ದು ಎಲ್ಲಾ ಜಮೀನಿಗೂ ‘ನಾಕಾಣೆ, ನಾಕಾಣೆ’ ಭಾಗ ಕಂದಾಯ ಹಾಕಿದರೆ ಏಸು ನಾಕಾಣೆ ಆಗ್ತಾವೆ. ಎಲ್ಲಾ ಕೂಡ್ಲಿದರೆ ಅವೇಸ್ ರೂಪಾಯಾಗ್ತವೊ ಏನೋ. ಅಷ್ಟೊಂದು ಕಂದಾಯ ಹೆಂಗ್ ಕಟ್ಟಬೇಕು. ಏನೋ “ಕಂದಾಯ ಬಂತಲ್ಲೊ ಕಾಟಣ್ಣಾ ಓಡೋಗನ ಬಾರೋ ಮೋಟಣ್ಣಾ, ಅಮ್ಮ ಪದ ಇರೋದು ಇವು ಬರದಿದ್ರೇ ಸೆಂದಾಕಿತ್ತು. ನಿರುಮ್ಮಳವಾಗಿದ್ದೋರಿಗೆ ಎಂಥದೊ ಕಂದಾಯದ ಹುಳ ಬಿಟ್ಟೋಗಿ ಬಿಟ್ರು” ಅಂದುಕೊಂಡವರೇ ಎಲ್ಲಾ.
ಇಷ್ಟಾದರೂ ತಮ್ಮ ಜಮೀನುಗಳ ಹದ್ದುಬಸ್ತು ಗುರುತಿಸುವ ಬಾಂದು ನಿಲ್ದಾಣ ಮತ್ತು ಗುರ್ತಿನ ಕಲ್ಲು ನೆಡಿಸುವುದು ಮುಂತಾದುವನ್ನು ಗುಟ್ಟಾಗಿಯೇ ಮಾಡಿಕೊಳ್ಳುತ್ತಿದ್ದರು. ‘ಎಲ್ಲರಿಗೂ ನಮ್ಮ ಹಿಡುವಳಿಗಳನ್ನು ಸರ್ಕಾರ ಮಾನ್ಯ ಮಾಡುತ್ತದೆ. ಕಂದಾಯ ಹಾಕುತ್ತಾರೆ ಅಂದರೆ ನಮ್ಮ ನಮ್ಮ ಜಮೀನುಗಳನ್ನು ನಮ್ಮ ಹೆಸರಿಗೆ ನಮೂದಿಸುತ್ತದೆ ಎಂದರ್ಥವಲ್ಲವೆ. ಅಂತೂ ಈ ತನಕ ಎಲ್ಲರೂ ಗುತ್ತು ಕೂನ ಇಲ್ಲದವರಾಗಿದ್ದೆವು. ಇನ್ನು ಮುಂದೆ ಸರ್ಕಾರದ ಅಧೀನಕ್ಕೆ ಒಳಪಟ್ಟೆವು’ ಎಂಬ ಆಲೋಚನೆಗಳೂ ಹರಿದಾಡಿದ್ದವು.
ಈ ಎಲ್ಲಾ ವಿಚಾರಗಳು ಕೆಲಕಾಲ ಗೌನಳ್ಳಿಗರ ನೆಮ್ಮದಿ ಹಾಳು ಮಾಡಿದ್ದವು. ಆದರೆ ಹತ್ತು ವರ್ಷಕಾಲ ಯಾವ ಕಂದಾಯ ವಸೂಲಿಯೂ ಆಗಲಿಲ್ಲ. ಆದರೆ ಹಿರಿಯೂರು ತಾಲ್ಲೂಕಿನ ಸುಮಾರು ಹಳ್ಳಿಗಳ ರೈತರು ಮೈಸೂರು ಸರ್ಕಾರ ನಿಗದಿ ಪಡಿಸಿದ್ದ ಕಂದಾಯವನ್ನು ಧಾನ್ಯದ ರೂಪದಲ್ಲಿ ನೀಡುತ್ತಿದ್ದರು.
ಯಾಕೋ ಇದು ಗೌನಳ್ಳಿಯಲ್ಲಿ ಜಾರಿಯಾಗಿರಲಿಲ್ಲ. ರೈತರೆಲ್ಲಾ ತಮ್ಮ ತಮ್ಮ ಕೃಷಿ ಬದುಕಿನಲ್ಲಿ ತೊಡಗಿಸಿಕೊಂಡಿದ್ದರು. ಮಾಗಿ ಉಳುಮೆ ಮಾಡುವುದು ಹದ ಬೆದೆ ಕಾಯ್ದುಕೊಂಡು ಬಿತ್ತುವುದು, ಎಡೆಕುಂಟೆ ಹೊಡೆಯುವುದು, ಕಳೆ ಕೀಳುವುದು ಮುಂತಾದುವುಗಳಲ್ಲಿ ಊರಿನ ರೈತರೆಲ್ಲಾ ನಿರತರಾದರು. ಈ ಕೆಲಸ ಕಾವ್ಯಗಳಲ್ಲಿ ಬೆಳಗಿನಿಂದ ತೊಡಗಿಕೊಂಡರೆ ಸಂಜೆಯಾಗುವುದೇ ತಿಳಿಯುತ್ತಿರಲಿಲ್ಲ.
ಮುಂದುವರೆಯುವುದು..