Connect with us

Kannada Novel: 12. ಜಂಗಮಯ್ಯರ ಆಗಮನ

Habbida Malemadhyadolage

ಸಂಡೆ ಸ್ಪಷಲ್

Kannada Novel: 12. ಜಂಗಮಯ್ಯರ ಆಗಮನ

CHITRADURGA NEWS | 08 DECEMBER 2024

ಗೌನಳ್ಳಿಯ ಕುಂಚಿಟಿಗ ಲಿಂಗಾಯ್ತರಿಗೆ ಶ್ರೀಶೈಲ ಪರೈತದ ಸ್ವಾಮೀಜಿಯವರ ಲಿಂಗಧಾರಣೆ. ದೀಕ್ಷೆ ನೀಡಿದ ಬಳಿಕ ಇವರಲ್ಲಿ ಲಿಂಗನಿಷ್ಠೆ, ವಿಭೂತಿಧಾರಣೆ, ಶಿವಪೂಜೆ ಇವು ಸಾರೋದ್ಧಾರವಾಗಿ ಅನುಸರಣೆಯಲ್ಲಿದ್ದವು. ಮಕ್ಕಳಿಗೆ ಲಿಂಗಧಾರಣೆ ಮಾಡುವುದು.

ಮದುಮಕ್ಕಳಿಗೆ ಲಗ್ನ ಕಟ್ಟಿಸುವುದು, ಧಾರೆ ಮುಹೂರ್ತ ಮಾಡುವುದು, ಮರಣಿಸಿದವರಿಗೆ ಸಗ್ಗದ ಬಟ್ಟೆಯ ಜತೆ ಸಮಾಧಿಕ್ರಿಯೆ ಮಾಡುವುದು ಮುಂತಾದವನ್ನು ಜಂಗಮಯ್ಯಗಳ ಕೈಯಿಂದ ಮಾಡಿಸುತ್ತಿದ್ದರು. ಬೇರೆ ಊರುಗಳಲ್ಲಿದ್ದ ಜಂಗಮಯ್ಯಗಳನ್ನು ಕರೆತಂದು ಈ ಕ್ರಿಯೆಗಳನ್ನು ಮಾಡಿಸಬೇಕಾಗಿತ್ತು.

ಗೊಂಚಿಕಾರ ಗುಂಪಿನ ಸಿದ್ದಯ್ಯ ಹೆಸರಿನವರು ತಮ್ಮ ಅಣ್ಣತಮ್ಮಂದಿರ ಜತೆ ಚರ್ಚೆ ಮಾಡಿ ಸಮೀಪದ ಬೀರೇನಹಳ್ಳಿ ಕರೆಮುದ್ದಯ್ಯನ ಹಟ್ಟಿಯ ಬಳಿಯ ಅಯ್ಯಗಳ ಹಟ್ಟಿಯ ಒಬ್ಬ ಜಂಗಮರ ಬಳಿ ಸಮಾಲೋಚನೆ ಮಾಡಿ ತಮ್ಮ ಗುಂಪಿನ ಕ್ರಿಯಾದಿಗಳಿಗೆ ಹೇಳಿಕಳಿಸಿದ ಕೂಡಲೇ ಆಗಮಿಸಿ ಸಂಪನ್ನಗೊಳಿಸಿಕೊಡಬೇಕೆಂತಲೂ, ಇದಕ್ಕೆಲ್ಲಾ ಒಪ್ಪುವ ರೀತಿಯಲ್ಲಿ ದಕ್ಷಿಣೆ, ಕಾಣಿಕೆ ಪಡೆಯಬೇಕೆಂದು ಒಪ್ಪಂದವಾಗಿ ಅದರಂತೆ ನಡೆದುಕೊಳ್ಳುತ್ತಿದ್ದರು.

ಈ ಮಧ್ಯೆ ಗೌನಳ್ಳಿ ಮತ್ತು ತುಮಕೂರು ಜಿಲ್ಲೆಯ ಗುಬ್ಬ ಸಂಬಂಧ ಎತ್ತಿನ ಬಂಡಿ ನಿಮಿತ್ತ ಏರ್ಪಟ್ಟು, ಗುಬ್ಬಿ ಮತ್ತು ಸುತ್ತಮುತ್ತಲ ಹಳ್ಳಿಯಲ್ಲಿ ಜನರು ಮಾತಾಡುವಷ್ಟು ಪಸರಿಸಿತ್ತು. ಒಂದೇ ವರ್ಷದಲ್ಲಿ ಆರು ಹೊಸಾ ಬಂಡಿ ಕೊಂಡಿರುವುದು ಚರ್ಚಾಸ್ಪದ ವಿಷಯವಾಗಿತ್ತು.

ಎಲ್ಲಿ ಗುಡ್ಡದೊಳಗಿನ ಕುಗ್ರಾಮ ಗೌನಳ್ಳಿ, ತಾಲೂಕು ಕೇಂದ್ರವಾಗಿ ಸಾಕಷ್ಟು ದೊಡ್ಡ ಊರಾಗಿದ್ದ ಗುಬ್ಬಿ ಎಲ್ಲಿ, ಎಲ್ಲಿಂದೆಲ್ಲಿಯ ಸಂಬಂಧ. ಗೌನಳ್ಳಿಗೆ ವಲಸೆ ಬಂದಿದ್ದ ಗುಂಡಾಚಾರಿ ಕುಟುಂಬ ಕೂಡಾ ತೆಂಕಲ ಸೀಮೆಯಿಂದಲೇ ಆಗಮಿಸಿದ್ದು, ಊರ ನಿವಾಸಿಗಳು ಒಳ್ಳೆಯವರು ಎಂದು ಗುಂಡಾಚಾರಿಗೆ ಯಾರೋ ತಿಳಿಸಿದ್ದರಂತೆ. ಊರ ನಿವಾಸಿಗಳೆಲ್ಲಾ ಕಷ್ಟ ಸಹಿಷ್ಣುಗಳಾಗಿದ್ದು ತಾವಾಯಿತು, ತಮ್ಮ ಕೃಷಿ ಬದುಕಾಯಿತು ಎಂದು ಅದರಲ್ಲೇ ತಲ್ಲೀನರಾಗಿ ಹದ ಬೆದೆಗೆ ಹೊಂದಿಕೊಂಡು ಬಾಳುತ್ತಿದ್ದವರು.

ಇಂತಹ ಊರಿನ ವಿಶೇಷತಗೆ ಗುಬ್ಬಿ ಸಮೀಪದ ಮೂಗನಾಯ್ಕನ ಕೋಟೆ ಬಳಿಯ ಬೆಟ್ಟದಹಳ್ಳಿ ನಿವಾಸಿಗಳಾಗಿದ್ದ ಮೂರು ಜಂಗಮಯ್ಯರ ಕುಟುಂಬಗಳಿಗೆ ತಲುಪಿತ್ತು. ಅವರಿದ್ದ ಊರಲ್ಲಿ ಅದೇನು ತೊಂದರೆ ತಾಪತ್ರಯಗಳಿದ್ದವೋ ಮಳಿಯಪ್ಪಯ್ಯ ಹೆಸರಿನ ಹಿರಿಯರೊಡನೆ ಮೂರು ಕುಟುಂಬಗಳು ತಮ್ಮ ಊರು ತೊರೆದು ಗೌನಳ್ಳಿಯತ್ತ ಮುಖ ಮಾಡಿ ಹೊರಟಿದ್ದವು. ಅವರಿಗೆ ಗೌನಳ್ಳಿ ಇಂಥಾ ಕಡೇಲೇ ಇದೆ ಎಂದು ಯಾರು ತಿಳಿಸಿದ್ದರೋ, ಅಂತೂ ಒಂದು ಸಂಜೆ ಅವರು ಗೌನಳ್ಳಿ ತಲುಪಿದ್ದರು.

ಹಿಂದಿನ‌ ಸಂಚಿಕೆ: 1. ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ

ಊರಜನ ಊರ ಮುಂದಿನ ಹಳ್ಳದಿಂದ ಮತ್ತು ಮಾರಿಗುಡಿ ಹಳ್ಳದಿಂದ ಕುಡಿಯುವ ನೀರು ತಂದುಕೊಳ್ಳುತ್ತಿದ್ದರು. ಕೆಲವರು ಮನೆಯಂಗಳದ ಕಸ ಗುಡಿಸುವುದು, ದನಗಳಿಗೆ ಮೇವು ತರುವುದು, ಹೆಂಗಸರು ಸಂಜೆಯ ಅಡಿಗೆಗೆ ಒಲೆ ಹೊತ್ತಿಸಲು ಸಣ್ಣ ಸಣ್ಣ ಪುಳ್ಳೆ ಸೌದೆ ಇತ್ಯಾದಿ ಜೋಡಿಸಿಕೊಳ್ಳುತ್ತಿದ್ದರು. ಈ ದೃಶ್ಯಗಳನ್ನು ಮತ್ತು ಊರಿನ ಮೂಡಲಿಗೆ ಮತ್ತು ಪಡುವಲಿಗೆ ಸಮೀಪದಲ್ಲೇ ಇದ್ದ ಗುಡ್ಡಗಳ ಸಾಲನ್ನು ನೋಡುತ್ತಾ ಆಯ್ಯನವರು ಇದೊಂದು ವಿಚಿತ್ರವಾದ ಊರು ಅಂದುಕೊಂಡಿದ್ದರು.

ಒಂದಿಬ್ಬರು ಯಜಮಾನರಂಥವರು ಊರು ತಲುಪಿ, ಕುಳಿತು ಸುಧಾರಿಸಿಕೊಳ್ಳುತ್ತಿದ್ದ ಈ ಆಗಂತಕರ ಬಳಿ ಸಾರಿ ‘ಯಾವ ಊರು ಸ್ವಾಮಿ, ಎಲ್ಲಿಂದ ಬಂದ್ರಿ’ ಅಂತ ವಿಚಾರಿಸುತ್ತಾ ಹತ್ತಿರ ಬಂದ ಮಕ್ಕಳಿಗೆ “ಇವರಿಗೆ ಕುಡಿಯಲು ನೀರು ತಂದು ಕೊಡ್ರಪ್ಪಾ” ಎಂದು ಸೂಚಿಸಿದ್ದರು. ಜಂಗಮಯ್ಯರಿಗೂ ಹಸಿವು ಬಾಯಾರಿಕೆ ಎರಡೂ ಆಗಿದ್ದವು. ಯಜಮಾನರನ್ನು “ನೀವು ಲಿಂಗಾಂಗಿಗಳೇ, ನಾವು ಜಂಗಮಯ್ಯರು. ಬೇರೆ ಜನಾಂಗದಲ್ಲಿ ಬಳಕೆ ಇಲ್ಲ” ಎಂದು ತಮ್ಮ ಪರಿಚಯ ಹೇಳಿಕೊಂಡಿದ್ದರು.

‘ಹೌದು ಸ್ವಾಮಿ ನಾವು ಲಿಂಗಾಯ್ತರೇ. ಬರ್ರಿ ನಮ್ಮನೆ ಇಲ್ಲೇ ಪಕ್ಕದಲ್ಲಿದೆ’ ಅಂತ ಕಕ್ಕುಲಾತಿಯಿಂದ ತಮ್ಮ ಮನೆಗೆ ಆಹ್ವಾನಿಸಿದ್ದರು. ಮಕ್ಕಳು ತಂದುಕೊಟ್ಟಿದ್ದ ನೀರನ್ನು ಕುಡಿದು “ಇನ್ನೂ ಸ್ವಲ್ಪ ನೀರು ತರಪ್ಪಾ ನೀರು ತುಂಬಾ ಚೆನಾಗಿವೆ” ಅಂದು ಮತ್ತೆ ನೀರು ತರಿಸಿ ಕುಡಿದಿದ್ದರು.

“ಬರಿ ಸ್ವಾಮಿ ಮನಿಗೋಗನ ಬರ್ರಿ” ಎಂದು ಆಹ್ವಾನಿಸಿದ್ದ ಯಜಮಾನರನ್ನು ಜಂಗಮಯ್ಯರು ಹಿಂಬಾಲಿಸಿ ಅವರ ಮನೆಯ ಮುಂದಿನ ಜಗುಲಿ ಮೇಲೆ ತಮ್ಮ ಸಾಮಾನುಗಳನ್ನು ಇಳಿಸಿ ಕುಳಿತರು. ಯಜಮಾನರು ಮನೆಯೊಳಗೆ ಮುಖ ಮಾಡಿ “ಅಮ್ಮಾ ಇದ್ರಿಗೆ ಬಿಸಿಬಿಸಿ ಹಾಲು ತಂದು ಕೊಡಮ್ಮಾ” ಅಂತ ಮನೆಯ ಹೆಣ್ಣುಮಕ್ಕಳಿಗೆ ಸೂಚಿಸಿದ್ದರು. ಸ್ವಲ್ಪ ಹೊತ್ತಿನಲ್ಲಿ ಹೆಣ್ಣು ಮಕ್ಕಳು ಉದ್ದನೆಯ ಲೋಟಗಳಲ್ಲಿ ಬಿಸಿಬಿಸಿ ಹಾಲು ತಂದು ನೀಡಿದ್ದರು.

ಗಟ್ಟಿ ಹಾಲನ್ನು ಸವಿದು “ಹಾಲು ಬೆಲ್ಲ ತುಂಬಾ ರುಚಿಯಾಗಿದೆ. ನಮಿಗೆ ಹಾದಿ ನಡೆದು ಸಾಕಾಗಿತ್ತು” ಅಂತ ಜಂಗಮಯ್ಯರು ಪ್ರತಿಕ್ರಿಯಿಸಿದ್ದರು. ಅಷ್ಟೊತ್ತಿಗೆ ಬೇಸಾಯಕ್ಕೆ ಹೋಗಿದ್ದ ಗಂಡಸರು ಕೆಲವು ಹೆಂಗಸರು ಮನೆ ತಲುಪಿದ್ದರು. ಅವರಲ್ಲಿ ಹಿರಿಯಾತ “ಯಾವೂರು ಸ್ವಾಮಿ ಮುಂದೆಲ್ಲಿಗೆ ಹೋಗಬೇಕು” ವಿಚಾರಿಸಿಕೊಂಡಿದ್ದರು.

ಹಿಂದಿನ‌ ಸಂಚಿಕೆ: 2. ಕರುವುಗಲ್ಲು ನೆಟ್ಟು ಊರು ಕಟ್ಟಿದರು

“ನಿಮ್ಮೂರೋರು ಗುಬ್ಬಿಯಿಂದ ಹೊಸಾ ಗಾಡಿ ಮಾಡಿಸ್ಕಂಡ್ ಬಂದಿರೋದು ನಂಕಡೆ ಸುದ್ದಿಯಾಗಿದೆ. ನಾವೂ ಗುಬ್ಬಿ ಸಮೀಪದೋರೆ. ಮೂಗನಾಯ್ಕನ ಕೋಟೆ, ಬೆಟ್ಟದಳ್ಳಿಯೋರು. ಮೂರು ನಾಕು ವರ್ಷದಿಂದ ಒಂದು ಹನಿ ನೆಲಕ್ಕೆ ಬಿದ್ದಿಲ್ಲ. ಇಂಥಾ ಕಾಲದಾಗೆ ವರ್ಷದಾಗೆ ಆರು ಹೊಸಾ ಗಾಡಿ ಮಾಡ್ತಿದೀರಾ. ಅಲ್ಲಿ ನಮಿಗೆ ಜೀವನ ಮಾಡೋದೇ ಕಷ್ಟವಾಗೈತೆ. ನಮಿಗೂ ಒಂದೀಟೀಟು ಜಮೀನು ಇದೆ. ಕರಿಕೆ ಬರು, ಬರೀ ಕತ್ತೆ ಕುರಿ ಮೇಯೋಕೆ ಸರಿಯಾಗೈತೆ. ಮನಿಯಾಗೆ ಎತ್ತು ಕರಾ ಇದ್ರೆ ಏನರಾ ಮಾಡಬೌದಿತ್ತು. ನಾವು ಹೇಳಿ ಕೇಳಿ ಜಂಗಮಯ್ಯಗಳು, ಶಾಸ್ತ್ರ ಪುರಾಣ ಹೇಳ್ಕೊಂಡಿದ್ಯೋರು. ಇದು ಎಲ್ಲಾ ಕಾಲದಾಗೂ ನಡೆಯಲ್ಲ.

ಊರಾಗೆ ಅಪ್ಪಂತೋರೇ ಮೇವು ಕಾಳಿಗೆ ಒದ್ದಾಡ ಕಾಲ ಬಂದೋಗಿದೆ. ಇನ್ನ ನಮ್ಮಂಥೋರ ಗತಿ ಏನು ಅಂದೂಂಡು, ನಿಮ್ಮೂರು ಹೆಂಗಿರಬೌದು, ಅಲ್ಲಿಗೆ ಹೋದ್ರೆ ಜೀವನ ಮಾಡಬೌದು ಅಂತ ಬಾಳ ಯೋಚೆ ಮಾಡಿ ಮೂರ್‌ದಿನ ನಡಕಂಡ್ ಬಂದು ನಿಮ್ಮೂರ್ ಮುಟ್ಟಿದೀವಿ”. ಪ್ರಾಂಜಲವಾಗಿ ಇದ್ದ ಪರಿಸ್ಥಿತಿಯನ್ನು ಜಂಗಮಯ್ಯಗಳ ಹಿರಿಯರಾಗಿದ್ದ ಮಳಿಯಪ್ಪಯ್ಯ ಹೇಳಿಕೊಂಡಿದ್ದರು.

“ಇಲ್ಲೇನೂ ಸ್ವರ್ಗ ಇಲ್ಲ. ನಿಮ್ಮಂತೆ ನಾವೂನು ಒಂದು ಕಾಲದಾಗೆ ಇಲ್ಲಿಗೆ ವಲಸೆ ಬಂದು ಊರು ಕಟ್ಟಿದೀವಿ. ನಮ್ಮ ಯಜಮಾನುಗಳು ಇಲ್ಲಿಗೆ ಬಂದು ಊರು ಕಟ್ಟಿದ ಮ್ಯಾಲೆ, ಅವಾಗಿಂದ ತಿಂಗಳಿಗೆ ಎಳ್ಳು ತಿಂಗಳಿಗೆ ಒಂದೊ ಎಲ್ಲೊ ಕುಟುಂಬದೋರು ಬಂದು ಬಂದು ಮನೆ ಕಟ್ಟಿಗೊಂಡು, ಜಮೀನು ಮಾಡ್ಕಂಡು ಗೆಯ್ದು, ಬಿತ್ತಿ ಬೆಳಕಂಡು ಜೀವ ಮಾಡ್ತಿದಾರೆ. ಹೊರಗಡೆ ಪ್ರಪಂಚ ಹೆಂಗೈತೋ ನಾವ್ ಬ್ಯಾರೆ ಕಂಡಿಲ್ಲ. ಇದ್ದಿದ್ರಾಗೇ ಸುಖವಾಗೈದೀವಿ. ಹೊರಗಿಂದ ಜನ ಇಲ್ಲಿಗೆ ಬರೋದು ನಿಂತೇ ಇಲ್ಲ”. ಮನೆಯ ಹಿರಿಯಾತನೂ ಇದ್ದ ವಿಚಾರವನ್ನು ಹೇಳಿಕೊಂಡ.

“ಇವತ್ ರಾತ್ರಿ ಕಳೀಲಿ ನಾಳೆ ಬೆಳಿಗ್ಗೆ ನಮ್ಮ ಕುಲಸ್ತನ್ನೆಲ್ಲಾ ಕರು ಮಾತಾಡನಾ. ಊರಿಗೆ ಜಂಗಮರು ಬಂದಿದೀರಾ, ನಮಿಗೂ ಆಚಾರ ವಿಚಾರಕ್ಕೆ ಅನುಕೂಲ ಆಗುತ್ತೆ”. ಮನೆಯ ಯಜಮಾನರು ತಮ್ಮ ಅಭಿಪ್ರಾಯ ತಿಳಿಸಿದ್ದರು. “ಹಂಗೇ ಆಗಲಿ ಯಜಮಾನೇ, ನೀವು ಮಾಡೋ ಅಡಿಗೇನೇ ನಾವು ಊಟ ಮಡ್ತೀವಿ. ಶಿವಪೂಜೆಗೆ ಒಂದಿಷ್ಟು ಹೂವು ಪತ್ರೆ ಇಲ್ಲದಿದ್ರೆ ತರಿಸ್‌ಬಿಡ್ರಿ”. ಮಳಿಯಪ್ಪಯ್ಯ ಸೂಚಿಸಿದ್ದರು. “ಎಲ್ಲಾ ಐತೆ, ನೀವು ಮೈ ತೊಳಿಯಂಗಿದ್ರೆ ಎದ್ದು ತೊಳಕಳಿ, ಹಿಂದೆ. ಹಿತ್ತಿಲಾಗೆ ಬಚ್ಚಲೈತೆ” ಅಂತ ಯಜಮಾನರು ಸೂಚಿಸಿದ್ದರು. ಕೂಡಲೇ ಜಂಗಮಯ್ಯರು ಎದ್ದು ತಮ್ಮ ಬಟ್ಟೆಗಳನ್ನು ಕಳಚಿ ಸ್ನಾನ ಮಾಡಲು ಸಿದ್ಧರಾದರು.

ಹಿಂದಿನ‌ ಸಂಚಿಕೆ: 3. ಎಲ್ಲರೂ ಲಿಂಗವಂತರಾದರು

“ನಮಿಗೆ ಬೆಳಗಿನೊತ್ತಿನಾಗ ಮೈ ತೊಳಿಯಾಕೆ ಸಜ್ಜಾಗಲ್ಲ, ಕಸ ಬಳೀಬೇಕು, ನೀರ್ ತರಬೇಕು. ಮತ್ತೆ ಹೊತ್ತಿಗೆ ಮುಂಚೆ ಬ್ಯಾಸಾಯಕ್ಕೋಗಬೇಕು. ಅದಕೆ ನಾವೆಲ್ಲಾ ಸಂಜೇಲಿ ಮೈತೊಳಕಳ್ತಿವಿ. ಮೈದಣಿದಿರುತ್ತೆ. ಬಿಸಿ ನೀರು ಹಾಕ್ಯಂಡ್ರೆ ಮೈ ಅಳಾರಾಗುತ್ತೆ. ಸುಖವಾಗಿ ನಿದ್ದೆ ಮಾಡಬೌದು” ಅಂತ ಯಜಮಾನರು ವಿವರಣೆ ನೀಡಿ “ಇವರಿಗೆ ಮೈ ತೊಳಿಯಾಕೆ ಬಿಸಿ ನೀರ್ ತೋಡಿಡಿರಮ್ಮಾ”, ಹೆಣ್ಣು ಮಕ್ಕಳಿಗೆ ಸೂಚಿಸಿದರು. ಜಂಗಮಯ್ಯರು ಒಬ್ಬರಾಗುತ್ತೂ ಇನ್ನೊಬ್ಬರಂತೆ ಒತ್ತಿಲಲ್ಲಿದ್ದ ಬಚ್ಚಲಿನಲ್ಲಿ ಮೈ ತೊಳೆದರು. “ನೀವೂ ತೊಳಕಭ್ರಮ್ಮಾ ನೀರು ಕಾದದೈದಾವೆ” ಎಂದು ಮಳಿಯಪ್ಪಯ್ಯರ ಜತೆ ಬಂದಿದ್ದ ಹೆಣ್ಣು ಮಕ್ಕಳನ್ನೂ ಕರೆದರು.

ಅವರಿಬ್ಬರು ಕಿಮಕ್ಕೆನ್ನದೆ ಬಚ್ಚಲಿಗೆ ಹೋಗಿ ಬಿಸಿ ನೀರಲ್ಲಿ ಮಿಂದು ಮೈದಣಿವನ್ನು ಕಳೆದುಕೊಂಡರು. ಅಡಿಗೆ ಕೋಣೆಯ ಬಾಗಿಲ ಬಳಿ ಅಡ್ಡಣಿಗೆಯ ಮೇಲೆ ದೀಪ ಹಚ್ಚಿಟ್ಟು ಶಿವಪೂಜೆಗೆ ಅಣಿಗೊಳಿಸಲಾಯಿತು. ಮೂವರು ಜಂಗಮಯ್ಯರು ಸುತ್ತಾ ಕುಳಿತು ಮಂತ್ರೋಚ್ಚಾರಣೆ ಮಾಡುತ್ತಾ ಪೂಜೆ ಮಾಡಿದರು. ಇಷ್ಟಲಿಂಗಗಳನ್ನು ಕಣ್ಣಿಗೊತ್ತಿಕೊಂಡು ಕರಡಿಗೆಗಳಲ್ಲಿಟ್ಟು ಎದ್ದು ಪಕ್ಕಕ್ಕೆ ಸರಿದರು.

ಈಗ ಹೆಣ್ಣು ಮಕ್ಕಳ ಸರದಿ ಅವರು ದೀಪದ ಮುಂದೆ ಕುಳಿತು ತಲೆ ಮೇಲೆ ಸೆರಗು ಹೊದ್ದು ಕೈ ಮುಗಿದು ಕರಡಿಗೆಗಳನ್ನು ತೆರೆದು ಇಷ್ಟಲಿಂಗಗಳನ್ನು ಎಡ ಅಂಗೈಯಲ್ಲಿಟ್ಟು, ನೀರಿನಲ್ಲಿ ತೊಳೆದು ಲಿಂಗಗಳನ್ನು ಕಣ್ಣಿಗೊತ್ತಿಕೊಂಡು, ಅನಂತರ ಎಡ ಅಂಗೈಯಲ್ಲಿ ಲಿಂಗವನ್ನು ಇಟ್ಟುಕೊಂಡು ವಿಭೂತಿ, ಹೂವು ಪತ್ರೆಗಳಿಂದ ಅಲಂಕರಿಸಿ ಊದುಬತ್ತಿಯಿಂದ ಲಿಂಗಕ್ಕೆ ಬೆಳಗಿ, ಪತ್ರೆ ಉದುರಿಸಿ ಮತ್ತೊಮ್ಮೆ ಲಿಂಗವನ್ನು ಕಣ್ಣಿಗೊತ್ತಿಕೊಂಡು ಕರಡಿಗೆಗಳಲ್ಲಿಟ್ಟು ಎದ್ದು ಈಚೆ ಕಡೆ ಬಂದರು. ಮನೆಯ ಯಜಮಾನರು, ಹಿರಿಕಿರಿ ಗಂಡಸರು ಜಂಗಮಯ್ಯಗಳು ಶಿವಪೂಜೆ ಮಾಡಿದ ರೀತಿಯಲ್ಲೇ ಅವರು ತಮ್ಮ ಇಷ್ಟಲಿಂಗ ಪೂಜೆ ಮಾಡಿ ಮೇಲೆದ್ದರು.

ಎಲ್ಲರಿಗೂ ಸಾಲಾಗಿ ಪಂಕ್ತಿ ಚಾಪೆ ಹಾಕಿ ಊಟಕ್ಕೆ ಸಿದ್ಧಪಡಿಸಲಾಗಿತ್ತು. ಜಂಗಮಯ್ಯರು ಮತ್ತು ಅವರ ಹೆಣ್ಣು ಮಕ್ಕಳು ಗೋಡೆ ಬದಿ ಸಾಲಾಗಿ ಕುಳಿತರೆ, ಮನೆ ಮಂದಿ ಅವರ ಎದುರು ಕುಳಿತರು. ಎಲ್ಲಾರಿಗೂ ಒಂದೊಂದು ರಾಗಿ ಮುದ್ದೆ ಪಡವಲಕಾಯಿ ಸೀಪದಾರ್ಥವನ್ನು ನೀಡಲಾಯಿತು. ರುಚಿಯಾಗಿದ್ದ ಸೀಪದಾರ್ಥವನ್ನು ಮೆಚ್ಚಿಕೊಂಡು ಉಂಡ ಜಂಗಮಯ್ಯರು “ಇನ್ನಾರ್ಥ ಮುದ್ದೆ ನೀಡಿರಮ್ಮ. ಅನ್ನ ಬೇಡ ಸಾರು ತುಂಬಾ ರುಚಿಯಾಗಿದೆ” ಎಂದು ಅರ್ಧಧ್ರ ರಾಗಿ ಮುದ್ದೆ ಉಂಡರೆ, ಹೆಂಗಸರು ಒಂದೊಂದು ರಾಗಿ ಮುದ್ದೆ, ಸ್ವಲ್ಪಸ್ವಲ್ಪ ನವಣೆ ಅನ್ನ ಸಾರು ಉಂಡಿದ್ದರು.

ಮನೆಯ ಮಂದಿಯೂ ಒಂದೊಂದು ಮುದ್ದೆ ಅನ್ನ ಸಾರು ಉಂಡಿದ್ದರು. ಮನೆಯ ಹೆಣ್ಣು ಮಕ್ಕಳಿಗೆ ಸೀಪದಾರ್ಥ ಸಾಲದೆ ಬಂದಿತ್ತು. ಅವರು ಬದನೆಕಾಯಿ ಹಸಿರು ಮೆಣಸಿನ ಕಾಯಿಗಳನ್ನು ಬೆಂಕಿಯಲ್ಲಿ ಸುಟ್ಟು ಬೆಳ್ಳುಳ್ಳಿ ಸೇರಿಸಿ ಗೊಜ್ಜು ಮಾಡಿಕೊಂಡು ಉಂಡಿದ್ದರು.

ಹಿಂದಿನ‌ ಸಂಚಿಕೆ: 4. ಮೈಲಾರಲಿಂಗಸ್ವಾಮಿ ಗುಡಿ ನಿರಾಣ

ಮನೆ ಮುಂದಿನ ಚಪ್ಪರದಡಿಯ ಜಗಲಿ ಕಟ್ಟೆಯ ಮೇಲೆ ದೊಡ್ಡ ಕಂಬಳಿ ಜಮಖಾನಗಳನ್ನು ಹಾಸಿಕೊಡಲಾಗಿತ್ತು. ಜಂಗಮಯ್ಯರು ಅವರ ಹೆಣ್ಣ ಮಕ್ಕಳು ಅದರ ಮೇಲೆ ಅಡ್ಡಾಗುತ್ತಲೇ ಗೊರಕೆ ಹೊಡೆಯಲು ಸುರು ಮಾಡಿದ್ದರು. “ಪಾಪ ಎಷ್ಟು ದೂರದಿಂದ ನಡೆದು ಬಂದಿದ್ದರೋ, ಬಿಸಿನೀರಲ್ಲಿ ಮೈ ತೊಳಕಂಡು ಅಳಾರಾಗಿ ಮಲಗಿದ್ದಾರೆ” ಅಂತ ಹಿರಿಯ ಯಜಮಾನರು ಅಂದುಕೊಂಡಿದ್ದರು.

ಹಳ್ಳಿಯ ಜನ ನಸಿಗ್ಗೆಲೆ ಎದ್ದು ತಮ್ಮ ಕಾವ್ಯಗಳಲ್ಲಿ ತೊಡಗಿದ್ದರೆ ಜಂಗಮಯ್ಯರು ಸವಿನಿದ್ದೆಯಲ್ಲಿದ್ದರು. ಅವರ ಹೆಣ್ಣು ಮಕ್ಕಳು ಎದ್ದು ಮನೆಯ ಹೆಂಗಸರ ಜತೆ ಬಹಿರ್ದೆಸೆಗೆ ಹೋಗಿ ಬಂದು ಮುಖ ತೊಳೆದುಕೊಂಡು ಶಿವಪೂಜೆ ಮಾಡಿದ್ದರು. ಮನೆಯ ಹೆಂಗಸರಿಗೆ ತರಕಾರಿ ಹೆಚ್ಚಿಕೊಡಲು ಇವರು ಮುಂದಾದಾಗ “ಬ್ಯಾಡ ಬಿಡ್ರಮ್ಮ ನಾವು ಹೆಚ್ಚಿಗಳ್ತಿವಿ” ಎಂದು ಬಿಡಿಸಿದ್ದರು. ಅವರು ಪಡಸಾಲೆಯಲ್ಲಿ ಕುಳಿತು ಮನೆ ಮಂದಿ ಕೆಲಸ ಮಾಡುತ್ತಿದ್ದುದನ್ನು ಗಮನಿಸುತ್ತಿದ್ದರು.

ತಡವಾಗಿ ಎದ್ದ ಜಂಗಮಯ್ಯರಿಗೆ ಹಳ್ಳದ ದಾರಿಯನ್ನು ತೋರಿಸಲಾಗಿತ್ತು. ಅವರು ಅತ್ತ ಹೋಗುವಾಗ ಮತ್ತು ಹಿಂತಿರುಗುವಾಗ ಕಾರನಿರತ ಗೌನಳ್ಳಿ ಮಂದಿಯನ್ನು ಗಮನಿಸಿದ್ದರು. ಕೆಲವರು ಹಳ್ಳದಿಂದ ನೀರು ಹೊರುತ್ತಿದ್ದರೆ ಮತ್ತೆ ಕೆಲವು ಗಂಡಸರು ಹೆಂಗಸರು ಹಸಿರು ಹುಲ್ಲಿನ ಹೊರೆ ಹೊತ್ತು ತಮ್ಮಗಳ ಮನೆ ಕಡೆ ನಡೆಯುತ್ತಿದ್ದರು. ‘ಇವರು ಇಷ್ಟೊತ್ತಿಗೇ ಹಸಿರು ಹುಲ್ಲಿನ ಹೊರೆ ಹೊತ್ತು ತರಬೇಕಾದರೆ ಎಷ್ಟೊತ್ತಿಗೆ ಹೋಗಿದ್ದಿರಬೌದು?’ ಎಂಬ ಪ್ರಶ್ನೆ ಕಾಡಿತ್ತು.

ಈ ಊರ ಜನ ತುಂಬಾ ಕಷ್ಟಧಾರಿಗಳು. ನಮ್ಮ ಕಡೆ ಮಾಡಲು ಕೆಲಸವೇ ಇಲ್ಲದೆ ಜನ ಸೋಮಾರಿಗಳಾಗಿರುವಾಗ ಈ ಜನ ಎಷ್ಟು ಕಾರ್ಯನಿಷ್ಠರಾಗಿದ್ದಾರೆ ಎಂಬ ವಿಚಾರ ಜಂಗಮಯ್ಯರನ್ನು ಕೆಣಕಿತ್ತು. ಊರ ಕೇರಿಗಳಲ್ಲಿ ಅಡ್ಡಾಡಿ- ಕೊಂಡು ತಾವು ರಾತ್ರಿ ತಂಗಿದ್ದ ಮನೆಗೆ ಬಂದರು.
ಮನೆಯ ಯಜಮಾನರು “ಸ್ವಾಮಿ ಚಿಕ್ಕುಂಬೊತ್ತಾಗಿದೆ. ನಮ್ಮನೆ ನದ ಕೂಲದ ಕೆಲಸಕ್ಕೆ ಇನ್ನೇನು ಉಂಡು ಹೊರಡುತ್ತಾರೆ. ನೀವು ಮೈ ತೊಳಿಬೇಕಾ ಹೆಂಗೆ? ತೊಳಿಯಂಗಿದ್ರೆ ನೀರು ಕಾದೈದಾವೆ.

ತೊಳಕಂಡ ಬಿಡ್ರಿ”. ಜಂಗಮಯ್ಯರನ್ನು ವಿಚಾರಿಸಿದ್ದರು. ಐಗಳು ಮುಖಮುಖಾ ನೋಡಿಕೊಂಡು “ಏನೂ ಆತುರ ಇಲ್ಲ. ಮನೆ ಮಂದಿ ಎಲ್ಲೂ ಜಮೀನಿಗೆ ಹೋಗೀರಾ” ಅಂತ ಯಜಮಾನರಿಗೆ ಮರು ಪ್ರಶ್ನೆ ಹಾಕಿದ್ದರು. “ಇಲ್ಲ ಇಲ್ಲಾ ಗಂಡಾಳುಗಳು ಹೋಗ್ತಾರೆ. ಸೊಸೆದೀರೂ, ಮಕ್ಕು ನಾನೂ ಇದ್ದೀವಿ. ಆಮೇಲೆ ಇಬ್ರು, ಮೂವರು ಯಜಮಾನು ಬಾರೆ. ಅವರ ಸಂಗಡ ಮಾತಾಡನಾ” ಯಜಮಾನರು ವಿಶದಪಡಿಸಿದ್ದರು.

ಹಿಂದಿನ‌ ಸಂಚಿಕೆ: 5. ಕೆನ್ನಳ್ಳಿಯ ದುರಂತ

ಮನೆಯ ಗಂಡಸರು, ಯುವಕರಂಥವರು ಎತ್ತು, ಮುಟ್ಟಿನ ಸಹಿತ ಜಮೀನಿಗೆ ಕೆಲಸಕ್ಕೆ ತೆರಳಿದ ಬಳಿಕ, ಮನೆಯ ಯಜಮಾನರು ಮೈತೊಳೆದ ಶಾಸ್ತ್ರ ಮಾಡಿ “ರ್ಬ ಸ್ವಾಮಿ ಮೈತೊಳಕಾ ಬರಿ” ಎಂದು ಜಂಗಮಯ್ಯರನ್ನು ಕರೆದರು. ಇವರು ಬಚ್ಚಲಿಗಿಳಿದು ನಾಕೈದು ತಂಬಿಗೆ ಬಿಸಿ ನೀರಿನಲ್ಲಿ ಸ್ನಾನದ ಶಾಸ್ತ್ರ ಮಾಡಿ ಮುಗಿಸಿದ್ದರು. ಅವರ ಹೆಣ್ಣು ಮಕ್ಕಳೂ ಕೂಡಾ ಹೀಗೇ ಮಾಡಿದ್ದರು. ಶಿವಪೂಜಾ ವಿಧಿಗಳು ಮುಗಿದ ಕೂಡಲೇ ಊಟ ಬಡಿಸಲು ಮನೆಯ ಹೆಣ್ಣುಮಕ್ಕಳು ಪಂಕ್ತಿ ಚಾಪೆ ಹಾಸಿ, ಊಟದ ತಟ್ಟೆ ನೀರಿನ ಚೊಂಬು ಮುಂತಾದುವನ್ನು ಸಾಲಾಗಿ ಜೋಡಿಸಿಟ್ಟಿದ್ದರು.

ಜಂಗಮೈಗಳು ಮತ್ತು ಅವರ ಹೆಣ್ಣು ಮಕ್ಕಳು ಕುಳಿತು ಬಿಸಿಬಿಸಿ ರಾಗಿ ಮುದ್ದೆ, ಮೊಳಕೆ ಹುರುಳಿಕಾಳು ಸಾರು ಮತ್ತು ಬೆಣ್ಣೆಯ ಊಟವನ್ನು ಸವಿದರು. ಊಟಕ್ಕೆ ಬೆಣ್ಣೆ ಬಡಿಸಿದ್ದು ಅವರ ಪುಣ್ಯವೇ ಅಂದುಕೊಂಡಿದ್ದರು ಎಲ್ಲರೂ.

ಊಟ ಮಾಡಿ ಹಜಾರಕ್ಕೆ ಬಂದರೆ ಮೂರು ಜನ ಯಜಮಾನರು ಇಬ್ಬರು ವಯಸ್ಕರು ಆಗಮಿಸಿದರು. ಬಂದವರೆಲ್ಲಾ ಇವರೇ ಜಂಗಮಯ್ಯರಿರಬೇಕೆಂದು “ನಮಸ್ಕಾರ” ಅನ್ನುತ್ತಲೇ ಚಪ್ಪರದಡಿ ಆಗಮಿಸಿದ್ದರು. ಇವರೂ ಕೂಡ “ನಮಸ್ಕಾರ, ಕೂಡ ಬರಿ” ಎಂದು ಆಹ್ವಾನಿಸಿದ್ದರು. ಇನ್ನೂ ಊಟ ಮಾಡುತ್ತಿದ್ದ ಮನೆಯ ಯಜಮಾನರು “ಬರೆಪ್ಪಾ ಊಟ ಮಾಡನಾ” ಎಂದು ಮನೆಯಯೊಳಗಿಂದಲೇ ಆಮಂತ್ರಿಸಿದ್ದರು. “ಉಂಡು ಬಂದೈದೀವಿ ನಿಧಾನಕ್ಕೆ ಉಂಡು ಬಾರಪ್ಪಾ” ಅಂತ ಮನೆಯ ಯಜಮಾನರ ಮಾತಿಗೆ ಇವರು ಪ್ರತಿಕ್ರಿಯಿಸಿದ್ದರು. ಹಳ್ಳಿಗರು ಆಗಮಿಸುತ್ತಲೇ ಐಗಳ ಹೆಣ್ಣು ಮಕ್ಕಳು ಎದ್ದು ಒಳ ನಡೆದಿದ್ದರು. ಜಂಗಮಯ್ಯರು ಮತ್ತು ಊರಿನವರು ಪರಸ್ಪರ ಮುಖ ಮುಖ ನೋಡಿಕೊಂಡು ಮುಗುಳ್ಳಕ್ಕಿದ್ದರು.

ಅಷ್ಟೊತ್ತಿಗೆ ಊಟ ಮುಗಿಸಿ ಹೊರಗೆ ಬಂದ ಮನೆಯ ಯಜಮಾನರು “ಇಗಳಪ್ಪಾ ಇವರೇ ಗುಬ್ಬಿ ಕಡೇಲಿಂದ ಬಂದಿರೋ ಐಗಳು. ನಮ್ಮೂರಾಗೇ ವಾಸ ಮಾಡಬೇಕು ಬಂದಿದಾರೆ” ಎಂದು ಊರವರಿಗೆ ಪರಿಚಯಿಸಿ “ಸ್ವಾಮಿ ಇವರೆಲ್ಲಾ ನಮ್ಮ ಕುಲಸ್ತರು. ಇವರು ದೊಡ್ಡಸಿದ್ದಪ್ಪ, ಈತ ಬಸಣ್ಣ. ಈ ಕಡೇ ಇರೋನು ಕರಿಯಣ್ಣ. ಆಯಪ್ಪ ಸಿದ್ರಾಮಣ್ಣ, ಆಚೆ ಕಡೆ ಕುಂತಿರೋನು ಚೆಂಬಸಣ್ಣ” ಎಂದು ಐದು ಜನರನ್ನು ಪರಿಚಯಿಸಿದರು. “ನಾನು ಮಳಿಯಪ್ಪಯ್ಯ, ಇವು ಮರುಳಯ್ಯ, ಮತ್ತಿವು ಶಿವಲಿಂಗಯ್ಯ” ಎಂದು ಐಗಳು ತಮ್ಮ ಪರಿಚಯ ಹೇಳಿಕೊಂಡು “ನಮ್ಮೂರು ಗುಬ್ಬಿಹತ್ರ ಮೂಗನಾಯ್ಕನ ಕೋಟೆ, ಬೆಟ್ಟದಳ್ಳಿ, ನಂಮಕಡೆ ಈಗ ಮೂರು ವರ್ಷದಿಂದ ಬರ ಬಂದು ಮನುಷ್ಯ ಮಕ್ಕೂ ಊರ ಬಿಡೋ ಹಂಗಾಗೈತೆ.

ಮೇವಿಲ್ಲೆ ಅರ್ಧಕರ್ಧ ದನ ಎಲ್ಲಾ ಸತ್ತು. ಇಂಥಾ ಕಾಲದಾಗೆ ನಿಮ್ಮೂರೋರು ವರ್ಷದಾಗೆ ಆರು ಎತ್ತಿನ ಬಂಡಿ ಮಾಡ್ತಿದೀರಾ ಗುಬ್ಬಿ ಬಡಗೀರತ್ರ. ಇದು ನಮಿಗೆಲ್ಲಾ ಹಾಚ್ಚಯ್ಯ ಅಂದ್ರೆ ಹಾಚ್ಚರ. ನಮಗೇ ಅಲ್ಲ, ಅಕ್ಕಪಕ್ಕದ ಊರಾಗೆಲ್ಲಾ ಜನ ಇದನ್ನೇ ಮಾತಾಡ್ತಾರೆ. ವರ್ಷದಾಗೆ ಆರು ಬಂಡಿ ಮಾಡ್ತಿದಾರೆ ಅಂದ್ರೆ ಆ ಊರು ಹೆಂಗಿರಬೌದು. ಆ ಊರಿಗೆ ಸಮುದ್ರದಂಥಾ ಕೆರೆ ಏನಾರ ಇರಬೌದು ಅಂತ ಅಂದ್ಮಂಡೋರೇ ಎಲ್ಲಾ”. ಸಂಕ್ಷಿಪ್ತವಾಗಿ ತಮ್ಮ ಪರಿಸ್ಥಿತಿಯನ್ನು ಮಳಿಯಪ್ಪಯ್ಯ ತಿಳಿಸಿದ್ದರು.

ಹಿಂದಿನ‌ ಸಂಚಿಕೆ: 6. ಎಲ್ಲೆಲ್ಲಿಂದಲೋ ಬಂದರು

ಊರಜನ ಮುಖಮುಖ ನೋಡಿಕೊಂಡು ಮನೆಯ ಯಜಮಾನನತ್ತ ದಿಟ್ಟಿ ಹರಿಸಿದ್ದರು. “ಎಲ್ಲೆಲ್ಲಿಂದ್ದೊ ಜನ ಗೌನಳ್ಳಿಗೆ ಬರಲೇ ಐದಾರೆ. ನಾವ್ಯಾರೂ ಪ್ರಶ್ನೆ ಮಾಡಿಲ್ಲ. ಬಂದೋರು ಊರಾಗೆ ಗುಡ್ಲು ಕಟ್ಟಿಗೆತ್ತಾರೆ. ಅಡವಿಯಾಗೆ ಗಿಡ ಕಡಿದು ಜಮೀನು ಹಸನು ಮಾಡ್ಕಂಡು ಗೆಯ್ದು ಬಿತ್ತಿ ಬೆಳೀತಾರೆ. ನೀವು ಜಂಗಮೈಗಳು ಹೊಲಗೆಯ್ತಿರಾ? ಶಾಸ್ತ್ರ, ಪುರಾಣ ಹಳ್ಳಿನಾಗೆ ಬಾಳದಿನ ನಡಿಯದಿಲ್ಲಾ”. ಯಜಮಾನರು ನಿಧಾನವಾಗಿ ಮಾತಾಡಿದ್ದರು.

ಇವರಾಡಿದ ಮಾತುಗಳು ಜಂಗಮೈಯ್ಯರನ್ನು ಅಧೀರಗೊಳಿಸಿರಲಿಲ್ಲ. ತಮ್ಮೂರಲ್ಲಿ “ಜಮೀನು ಕೋರಿಗೆ ಮಾಡುವ ಜನ ಸಿಗುತ್ತಿರಲಿಲ್ಲ. ಯಜಮಾನರು ತಿಳಿಸಿದಂತೆ ನಾವೂ ಜಮೀನು ಮಾಡಿಕೊಂಡರೆ ಕೋರಿಗೆ ಗೆಯ ಮಾಡುವವರು ಸಿಕ್ಕಬಹುದೇನೋ” ಎಂಬ ಆಶಾಕಿರಣ ಮಳಿಯಪ್ಪಯ್ಯರಲ್ಲಿ ಮೂಡಿತ್ತು.

ದೊಡ್ಡಸಿದ್ದಪ್ಪ ಮಾತಾಡಿದರು “ಅಣ್ಣಯ್ಯ ಹೇಳಿದಂಗೆ ಜಮೀನು ಮಾಡ್ಕಂಡು ಜೀವಣಾ ಮಾಡಬೌದು. ಇನ್ನೂ ಲಿಂಗಧಾರಣೆ, ಲಗ್ನ ಕಟ್ಟೋದು ಇವು ಯಾವಾಗಲೋ ಒಂದಳು ನಡೀತಾವೆ. ಅದರಾಗೆಲ್ಲ ಏನು ಗಿಟ್ಟುತ್ತೆ? ಸ್ವಾಮಿ ನೀವು ಧೈಯ್ಯ ಮಾಡಬೇಕು. ಅಷ್ಟು ದೂರದಿಂದ ಬಂದಿದೀರಾ. ನಿಮ್ಮನ್ನ ವಾಪಾಸ್ ಕಳ್ಳೋದು ನಮಿಗೆ ಒಂದ್ ತರ ಅವಮಾನ, ಏನಮ್ಮಿರಪ್ಪಾ ” ಎಂದು ಉಳಿದವರ ಕಡೆ ನೋಡಿದ. ಉಳಿದವರು ತಲೆಯಾಡಿಸಿದ್ದರು.

“ಹೌದಪ್ಪಾ ನೀನೇಳಿದಂಗೆ ಬ್ಯಾಸಾಯ ಮಾಡ್ಕಂಡು ಗಂಜಿ ಕುಡೀಬೌದು. ಇವರತ್ರ ಎತ್ತಿಲ್ಲ. ಕರಾ ಅಂತೂ ಮೊದ್ದೇ ಇಲ್ಲ. ಅವರ ಸಾಮಾನು ಸರಂಜಾಮು ಹೊತ್ಕಂಡು ದಿನಗಟ್ಟೆ ನಡೆದು ಬಂದೌರೆ. ಪಾಪ ಹೆಂಗ್ ಮಾಡಬೌದು”. ಮನೆಯ ಯಜಮಾನು ಮಾತಾಡಿ ಉತ್ತರಕ್ಕಾಗಿ ತಡಕಾಡಿದರು. “ನೋಡಿ ನಾವು ಹೇಳಿಕೇಳಿ ಜಂಗಮರು, ನೀವು ಸಹಾಯ ಮಾಡಿ ಎರಡು ಗುಡಿಸಲು ಕಟ್ಟಿಕೊಡಿ. ನಮಿಗೆ ಶಿವಕೊಟ್ಟ ಜೋಳಿಗೆ ಇದೆ. ಸ್ವಲ್ಪದಿನ ಕಂತೆ ಭಿಕ್ಷಾ ಮಾಡತೀವಿ. ಒಬ್ಬರಿಗೆ ಹೊರೆಯಾಗಬಾರು. ನೀವು ಹೇಳಿದ ಕಡೆ ಗಿಡ ಕಡಿದು ಜಮೀನು ನ್ಯಾರಾ ಮಾಡಿಕೊಳ್ತಿವಿ. ನಮ್ಮತ್ರ ಎತ್ತು ಕರಾ ಇಲ್ಲ. ನೀವೇ ಯಾರಿಗಾದ್ರೂ ಹೇಳಿ ಹೊಲ ಕೋರೀಗ್ ಮಾಡ್ಲಿ ಕೊಟ್ರೆ, ನಮ್ ನಮ್ ಸಂಸಾರ ಸಸಾರ ಆಗುತ್ತೆ”. ಮಳಿಯಪ್ಪಯ್ಯ ನಿಧಾನವಾಗಿ ಎಲ್ಲರೂ ಒಪ್ಪುವಂತೆ ಮಾತಾಡಿದರು.

ಈಗ ಎಲ್ಲರೂ ಗಂಭೀರರಾದರು. “ಈ ಐದು ಜನ ಐಗಳನ್ನ ಸಾಕೋದೇನೂ ದೊಡ್ ಮಾತಲ್ಲ. ಈಗ ಅವರೆ ಕಂತೆ ಬಿಕ್ಷಾ ಮಾಡತೀವಿ ಅಂದಿದಾರೆ, ಆಗಬೌದು. ಮೊದ್ಲು ಇವರಿಗೆ ವಾಸಕ್ಕೆ ಎಲ್ಡ್ ಗುಡ್ಡು ಕಟ್ಟಿ- ಕೊಟ್ರೆ ಮುಂದಿಂದು ನಿಧಾನಕ್ಕೆ ಸರಿಹೋಗುತ್ತೆ” ಎಂದು ದೊಡ್ಡ ಸಿದ್ದಪ್ಪ ಯೋಚಿಸ್ತಿದ್ರು. ಆಗ ಕರಿಯಣ್ಣ ಉಳಿದವರ ಮುಖಾ ನೋಡುತ್ತಾ “ಈಗ ಮೊದ್ಲು ಎಲ್ಡ್ ಗುಡ್ಲಾಕ್ಕೊಡನಾ.

ಅವರು ಅದರಾಗೆ ವಾಸ ಮಾಡಾದ್ ರೂಢಿ ಮಾಡಿಕೊಂಡ್ರೆ, ಮುಂದಿಂದು ನಿಧಾನಕ್ಕೆ ಕೂಡಿಬರುತ್ತೆ” ಅಂದ. ಕೂಡಲೆ ದೊಡ್ಡ ಸಿದ್ದಪ್ಪ “ನಾನು ಇಂಗೇ ಯೋಚೆ ಮಾಡತಿದ್ದೆ. ನಿನ್ನ ಬಾಯಾಗೆ ದೇವು ಆಡಿಸ್ ಬಿಟ್ಟ ಮಾತ್ರ. ಇದಕ್ಕೆ ನಿಮಿಗೆ ಒಪ್ಪೆ ಏನ್ ಸ್ವಾಮಿ, ನಿಮಿಗೆ ಒಪ್ಪೆ ಆದ್ರೆ ಎದ್ದಳೋ ಜಾಗ ನೋಡಿ ಗುಡ್ಡು ಕಟ್ಟಾಕೆ ಏರ್ಪಾಟ್ ಮಾಡಾನ” ಅಂದು ಎಲ್ಲರ ಮುಖಾ ನೋಡಿದ. ಹಳ್ಳಿಗರು ಜಂಗಮಯ್ಯಗಳ ಮುಖ ನೋಡಿದರೆ ಅವರು ಅವರ ಮುಖ ನೋಡಿದರು. ಸ್ವಲ್ಪ ಹೊತ್ತು. ಮಳಿಯಪ್ಪಯ್ಯರು “ಹೊಸಾ ಜೀವನ ಮಾಡಬೇಕು ಅಂತಲೇ ಸ್ವಂತ ಊರು ಬಿಟ್ಟು ಬಂದಿದ್ದೀವಿ. ‘ಪರಸ್ಥಳ ಪರಮಕಷ್ಟ’ ಅಂತ ಗಾದೇನೇ ಇದೆ.

ಹಿಂದಿನ‌ ಸಂಚಿಕೆ: 7. ಊರು ತೊರೆದು ಬಂದವರು

ಈ ಊರಿನೋರು ಎಂಥಾ ಬಾವುಣಿಕೆಯಿಂದ ನಮ್ಮನ್ನ ಕಂಡಿದಾರೆ. ಇವರು ಆಡೋ ಮಾತಲ್ಲಿ ಎಳ್ಳಷ್ಟೂ ಅನುಮಾನ ಪಡಬಾರು” ಅಂದುಕೊಂಡು “ಯಜಮಾನೇ, ಅಣ್ಣಯ್ಯಗಳೇ ನಮ್ಮ ಬಗ್ಗೆ ನೀವು ತೋರಿರೋ ಪ್ರೀತಿಯಿಂದ ನಮಿಗೆ ಏನ್ ಹೇಳಾಕೂ ಮಾತೇ ಹೊಳಲ್ಲ. ನೀವು ಇಷ್ಟು ಕಕುಲಾತಿಯಿಂದ ನಮ್ಮನ್ನ ಕಾಗೇರಿ ಅಂದ್ರೆ ಮುಂದೆ ಒಳ್ಳೇದೇ ಆಗುತ್ತೆ. ನಡೀರಿ ಗುಡ್ಲು ಜಾಗ ನೋಡಾನ” ಅನ್ನುತ್ತ ಮೇಲೆದ್ದರು. ಕೂಡಲೇ ಎಲ್ಲರೂ ಎದ್ದು ಊರೊಳಗೆ ನಡೆದರು.

ಊರೊಳಗೆ ಅಡ್ಡಾಡಿ ಕೊನೆಗೆ ಊರಿನ ವಾರಜಪ್ಪರ ಹಾಕಿಕೊಡಲು ತೀರಾನಿಸಿದರು. “ಸ್ವಾಮಿ ಈ ಜಾಗ ಹೊಂದಿಕೆಯಾಗುತ್ತೆ. ಊರಮಕನಾಗಿ ಬಾಗಿಲು ಮಾಡಿ, ಗೋಡೆಗೆ ಆನಿಸಿ ಚಪ್ಪರದಂಗೆ ಕಟ್ಟಾನ. ಒಂದು ಮಗ್ಗುಲಿಗೆ ಗೌಡ್ರಮನೆ ಗೋಡೆ ಇರುತ್ತೆ. ಸುತ್ತ ಎದೆ ಮಟ್ಟ ಗೋಡೆ ಕಟೀವಿ.

ಚಳಿಗಾಲದಾಗೆ ಚಳಪಳಿ ಏನೂ ಆಗಲ್ಲ” ಅಂದ ದೊಡ್ಡಸಿದ್ದಪ್ಪನ ಮಾತಿಗೆ ಎಲ್ಲರೂ ಒಪ್ಪಿಗೆ ಸೂಚಿಸಿದರು. ಈ ತನಕ ಸುಮ್ಮನೆ ಎಲ್ಲರ ಮಾತುಗಳೂ ಆಲಿಸಿದ್ದ ಬಸಣ್ಣ “ಗುರುಗಳೇ ಇದು ಈ ಸದ್ಯಕ್ಕೆ ಯಾರಿಗೊತ್ತು ಕಾಲ ಕೂಡಿ

ಬಂದ್ರೆ ಮುಂದೆ ಮಾಳಿಗೆ ಮನೇನೇ ಕಟ್‌ಬೌದು” ಅಂದು ಧೈಯ್ಯ ತುಂಬಿದ. “ಅಂಥಾ ಕಾಲ ಕೂಡಿ ಬರಪ್ಪಾ” ದೊಡ್ಡಸಿದ್ದಪ್ಪ ಮತ್ತು ಯಜಮಾನರು ಮುಗುಳ್ಳಗೆಯಿಂದ ಪ್ರತಿಕ್ರಿಯಿಸಿದ್ದರು. ಇದನ್ನೆಲ್ಲಾ ನೋಡಿದ ಜಂಗಮಯ್ಯರು ಮೂಕ ವಿಸ್ಮಿತರಾಗಿದ್ದರು. “ಸ್ವಾಮೇರೇ ಮೊದ್ಲು ಒಂದು ಗುಡ್ಲು ಕಟ್ಟಾನಾ, ಇದರಾಗೆ ಇಳಕಳಿ, ಆಮೇಲೆ ಇನ್ನೊಂದ್ ಕಟ್ಟನಾ”. ದೊಡ್ಡಸಿದ್ದಪ್ಪ ಸೂಚಿಸಿದ್ದರು.

“ಇವೊತ್ತು ಏನೂ ಕಲ್ಲಾ ಇಲ್ಲ. ಮದ್ಯಾಹ್ನದ ಮ್ಯಾಲೆ ಸ್ನಾಡ ಕಟ್ಟಾಕೆ ಒಂದೀಟು ತರ ತೋಡನಾ. ಹಗಲೂಟ ಉಂಡು ಇಲ್ಲಿಗೇ ಬಂದು ಪತ್ರಿ ಸ್ವಾಮೇರೇ, ನೀವು ಆಳತೆ ಮಾಡಿ ಗೀಟಾಕಿ ಕೊಡ್ರಿ” ಎಂದು ಬಸಾ ವಿನಂತಿಸಿದ. ಜಂಗಮೈಗಳು ನೆತ್ತಿಬಿಟ್ಟು ವಾಲುತ್ತಿರುವ ಸೂರದೇವನನ್ನು ಮತ್ತು ಎಲ್ಲಾ ದಿಕ್ಕುಗಳನ್ನು ನೋಡಿ ದೇವಮೂಲೆಯಿಂದ ಮೊಳದ ಕಡ್ಡಿಯಿಂದ ಆಳೆದರು. ವೃಷಭಾಯದಂತೆ ನಾಲ್ಕು ಮೂಲೆಗಳನ್ನು ಗುರುತಿಸಿ ತರ ಪೂಜೆಗೆ ದೇವಮೂಲೆಯಲ್ಲಿ ನೆಲವನ್ನು ಮೊಳ ಘಾತ ಆಗೆಯಲು ಕೂಡ ಗುರುತು ಮಾಡಿದರು. “ಸಿದ್ರಾಮಣ್ಣ ಬಸಣ್ಣ ನೀವಿಬ್ರೂ ಹಗಲೂಟ ಉಂಡು ಬಂದು ಟೆಂಕಡಿಕೆ ಒಂದು ಗಜ ಬಡಗ್ಗಡಿಕೆ ಒಂದು ಗಜ ಆಗಿತೀರೇನಪ್ಪಾ” ಯಜಮಾನರು ಸೂಚಿಸಿದರು.

‘ಹಗಲೂಟ ಪಗಲೂಟ ಯಾತ್ತೂ ಬ್ಯಾಡ ಮನಿಗೋಗಿ ಹಾರೆ ಸಲಿಕೆ ತಗಂಡ್ ಬತ್ತೀವಿ” ಎಂದು ಹೇಳುತ್ತಾ ಅವರಿಬ್ಬರೂ ತಮ್ಮ ಮನೆಯಕಡೆ ನಡೆದರು. “ಸ್ವಾಮಿ ರ್ಬ ಹಗಲೂಟ ಉಂಡು ಬರಣಾಂತೆ”, ಯಜಮಾನರು ಜಂಗಮಯ್ಯರನ್ನು ಮನೆಗೆ ಕರೆದರು. ಮಳಿಯಪ್ಪಯ್ಯ, ಮರುಳಯ್ಯ ಇಬ್ಬರೂ “ನಮಿಗೆ ಹಗಲೂಟ ಉಂಡು ರೂಢಿ ಇಲ್ಲ. ನೀವು ಹೋಗಿ ಬನ್ನಿ ನಾವು ಇಲ್ಲೇ ಇರತೀವಿ. ಈ ಗಿಡಪಡ ಕೀಳೀವಿ” ಎಂದು ಉಳಿದವರನ್ನು ಸಾಗ ಹಾಕಿದರು.

ಹಿಂದಿನ‌ ಸಂಚಿಕೆ: 8. ಮೋಜಣಿಕೆ ಮಾಡಿದರು

ಸಂಜೆ ಯಜಮಾನಪ್ಪ ಗುಬ್ಬಿ ಕಡೇಲಿಂದ ಜಂಗಮಯ್ಯರು ಊರಿಗೆ ಬಂದಿರುವ ಮತ್ತು ಅವರು ನಮ್ಮೂರಿನಲ್ಲೇ ನೆಲಸಲು ಇಷ್ಟಪಟ್ಟಿರುವುದರಿಂದ ಅವರಿಗೊಂದು ನೆಲೆಯಾಗಿ ಗೌಡರ ಆಕಳು ತರುಬುವ ಮನೆಗೆ ಆನಿಸಿ ಒಂದು ಗುಡಿಸಲು ಕಟ್ಟಿಕೊಡುವ ಇರಾದೆಯನ್ನು ಊರಿನ ಲಿಂಗಾಯ್ತರಲ್ಲಿ ಪ್ರಚುರಪಡಿಸಿದ್ದರು. ಬೇಸಾಯಕ್ಕೆ ಹೋಗಿದ್ದವರು ದಣಿವಾರಿಸಿಕೊಳ್ಳಲು ಸಂಜೆ ಬಿಸಿನೀರಲ್ಲಿ ಮೈತೊಳೆದುಕೊಂಡು ಉಂಡು ಮಲಗುವುದನ್ನು ರೂಢಿಸಿಕೊಂಡಿದ್ದ ಹಳ್ಳಿಗರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.

ಬೆಳಿಗ್ಗೆ ಗೌಡ್ರು ಮತ್ತು ಗೊಂಚಿಕಾರರ ಹಿರಿಯರು, ಜಂಗಮಯ್ಯರು ತಂಗಿದ್ದ ಯಜಮಾನಪ್ಪರ ಮನೆಗೆ ಆಗಮಿಸಿ ಅವರನ್ನು ಕಂಡು ಪರಿಚಯಿಸಿಕೊಂಡು ಮಾತನಾಡಿದ್ದರು. ಮಳಿಯಪ್ಪಯ್ಯ ತಮ್ಮ ಪರಿಸ್ಥಿತಿಯನ್ನು ಮತ್ತು ಗೌನಳ್ಳಿ ಹುಡಿಕಿಕೊಂಡು ಬರಲು ಮುಖ್ಯ ಕಾರಣವಾಗಿದ್ದ ‘ಒಂದೇ ವರ್ಷದಲ್ಲಿ ಗುಬ್ಬಿ ಬಡಗೀರ ಕೈಯಿಂದ ಆರು ಎತ್ತಿನ ಬಂಡಿಗಳನ್ನು ಮಾಡಿಸಿರುವುದನ್ನು ತಿಳಿಸಿ’, ‘ಬಹುಶಃ ನಿಮ್ಮೂರು ಸಮೃದ್ಧವಾಗಿರಬೇಕು ಮತ್ತು ಈ ಊರಿನ ಜನ ಯಾರು ಬಂದರೂ ಒಳಗೊಳ್ಳುತ್ತಾರೆ ಅಂಥಾ ದೊಡ್‌ನುಸರು ಅಂಬೋ ವಿಚಾರ ಕೇಳಿ ದಿನಗಟ್ಟೆ ನಡಕಂಡ್ ಬಂದ್ವಿ.

ಇಲ್ಲಿಗೆ ಬಂದ್ ಮ್ಯಾಲೆ ಈ ಯಜಮಾನು ಎಷ್ಟು ಕರುಣೆಯಿಂದ ನಮ್ಮನ್ನೆಲ್ಲಾ ಕಂಡಿದಾರೆ ಅಂದ್ರೆ ನಮಿಗೆ ಮುಂದಕೆ ಮಾತೇ ಹೊಳ್ಳಲಿಲ್ಲ. ಈ ಮನೆ ಹೆಣ್ ಮಕ್ಕೂ ಅಷ್ಟೆ ನಮ್ಮನ್ನು ಹೊರಗಿನೋರಂಗೆ ಕಂಡಿಲ್ಲ. ನಿನ್ನೆ ನಾಕೈದು ಜನ ಬಂದಿದ್ರು, ಅವರೂ ಕೂಡಾ ಮನೆ ಮನುಷರಂಗೆ ನಡಕಂಡ್ರು ಈ ಮನುಷ್ಯತ್ವದ ವಿಚಾರದಾಗೆ ನಿಮ್ಮೂರು ಸಮೃದ್ದೀನೆ” ಅಂದು ತಾವು ಕಂಡ ವಿಷಯಗಳನ್ನು ನಿಧ್ವಂಚನೆಯಿಂದ ಹೇಳಿಕೊಂಡರು.

“ಒಂದೇ ದಿವೃದಾಗೇ ನೀವು ನಮ್ಮ ಜನನಾ ಹೆಂಗ್ ಕಂಡ್‌ ಕಂಡಿದೀರಿ ಸಂತೋಷ. ಈ ಊರು ಅಂದ್ರೆ ಎಲ್ಲಾರಿಗೂ ಒಂದ್‌ತರ ಸಲೀಸು. ಯಾರಾರೋ ಎಲ್ಲೆಲ್ಲಿಂದ್ದೋ ಬಂದು ಗುಡ್ಡು ಕಟ್ಟಿಕೆಂಡ್ ಜೀವನಾ ಮಾಡ್ತಿದಾರೆ. ಬರೋರಿಗೆಲ್ಲಾ ಇಲ್ಲಿ ಕೈ ತುಂಬಾ ಕೆಲ್ಲ ಸಿಗುತ್ತೆ. ಮದ್ದಿಗೇ ಕೊಲ್ಲಾಪುರುದೋರಂತೆ, ಅಲ್ಲಿಂದ ಮಣೆಗಾರು. ಆಮ್ಯಾಲೇ ಕಮ್ಮಾರು ಬಂದ್ರು, ಬೋವಿಗಳು ಬಂದು ಇದ್ದಬದ್ದ ಹೊಲ್ದಾಗೆಲ್ಲಾ ಏರಿ ಕಟ್ಟಿಕಟ್ಟಿಕೊಟ್ರು, ಮಣೆಗಾರು, ಕ್ಷೌರದೋರೂ ಇವರೆಲ್ಲಾ ನಾವು ಹೇಳಿಕಳಿಸಿದ್ದೇನೋ ಅಂಬಂಗೆ ಬಂದು ಬಂದು ನಮ್ಮೂರಿಗೆ ಒಗ್ಗಿಕಂಡಿದಾರೆ.

ಆಮೇಲೆ ನಿಮ್ ದೇಶದೋನೆ ಗುಂಡಾಚಾರಿ ಅಮ್ಮ ಅಕ್ಕಸಾಲಿ ಬಂದೈದಾನೆ. ಇವನ ಕೈ ಬಾಳ ಚುರುಕು, ಮತ್ತೆ ಸೂಕ್ಷ್ಮ. ಎಂತೆಂಥಾ ಒಡವೆ, ದೇವರ ಮುಖಪದ್ಮ ಮಾಡಿದಾನೆ. ಅಂದ್ರೆ ಅವನ್ನ ನೋಡೇ ತಿಳಕಾಬೇಕು”.

“ಶ್ರೀಶೈಲದ ಗುರುಗಳು ನಮ್ಮ ತಾತ ಮುತ್ತಾತರಿಗೆಲ್ಲಾ ಲಿಂಗದೀಕ್ಷೆ ನೀಡಿದ್ದಾರೆ. ಅವಾಗಿಂದ ಶಿವಪೂಜೆ ಮಾಡದೆಲೆ ಒಂದ್ ತೊಟ್ಟು ನೀರು ಸೈತಾ ಕುಡಿಯಲ್ಲ, ಎಲ್ಲೊತ್ತೂ ಶಿವಪೂಜೆ ಅಂದ್ರೆ, ಇಷ್ಟಲಿಂಗದ ಪೂಜೆ ಮಾಡ್ತೀವಿ. ನಮ್ ಹೆಣ್ ಮಕ್ಕೂ ಅಷ್ಟೆ, ಅವೂ ಲಿಂಗಪೂಜೆ ಮಾಡದಲೆ ಯಾವ ಕೆಲಸಾನೂ ಮಾಡಲ್ಲ. ನಮಿಗೆ ಮಕ್ಕಳಿಗೆ ಲಿಂಗಧಾರಣೆ ಮಾಡಾದೂ, ಬೆಳೆದ ಮಕ್ಕಳಿಗೆ ಲಗ್ನ ಮಾಡಬೇಕಾದ್ರೆ ‘ಸುಲಗ್ನಾ ಸಾವಧಾನ’ ಅಂತ ಮಂತ್ರ ಹೇಳೋರು, ಆಮೇಲೆ ಯಾರಾನ ಶಿವಾಧೀನ ಆದ್ರೆ ಅವಾಗ ಸಗ್ಗದ ಬಟ್ಟೆ ಜತೀಗೆ ಸಮಾಧಿ ಮಾಡೋ ಜಂಗಮರು ಇಲ್ಲಿಲ್ಲ. ಗೊಂಚಿಗಾರು ಐಗಳಟ್ಟಿ ಜಂಗಮರತ್ರ ಇವುನ್ನೆಲ್ಲಾ ಮಾಡೋಕೆ ಒಪ್ಪಿಸಿಗೆಂಡಿದ್ದಾರೆ”. ಗೌಡರ ಹಿರಿಯರು ನಿಧಾನವಾಗಿ ಹೇಳಿಕೊಂಡಿದ್ದರು.

ಹಿಂದಿನ‌ ಸಂಚಿಕೆ: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ

“ಇದೆಲ್ಲ ಆಮೇಲೆ ಮಾತಾಡನಾ ಈವಾಗ ತರ ಪೂಜೆ ಎಷ್ಟೊತ್ತಿಗೆ? ಉಂಡು ಬರಬೇಕೋ ಎಂಗೆ” ಗೌಡ್ರು ವಿಚಾರಿಸಿದ್ದರು. ಯಜಮಾನರಿಗೆ ಮತ್ತು ಗೊಂಚಿಕಾರಿಗೆ ಗೌಡರ ಮಾತುಗಳು ತುಂಬಾ ಹಿಡಿಸಿದವು. ಮಳಿಯಪ್ಪಯ್ಯರಿಗೆ ನಿನ್ನೆ ಬಂದವರೂ ಇವೇ ಮಾತುಗಳನ್ನ ಆಡಿದ್ದರು. ಅವರಿಗೆ ಈ “ಈ ಊರ ಜನ ಬಾಳ ಸತ್ಯವಂತರು” ಎಂದು ಅರಿವಾಗಿತ್ತು. “ಎಲ್ಲೂ ಊಟ ಮಾಡಿ ಬಂದ್ ಬಿಡಿ, ತರಪೂಜೆ ಮಾಡನ. ಎಳ್ ತೆಂಗಿನಕಾಯಿ, ಒಂದು ವಸ್ತ್ರ ಬೇಕು. ನಮ್ಮತ್ರ ಒಂದಿದೆ, ಅದೇ ಸಾಕಾಗುತ್ತೆ” ಅಂತ ತಿಳಿಸಿ ಗೌಡ್ರಿಗೆ ಮತ್ತು ಗೊಂಚಿಕಾರರಿಗೆ ನಮಸ್ಕರಿಸಿ ಬೀಳ್ಕೊಟ್ಟಿದ್ದರು.

“ಸ್ವಾಮಿಗಳೆ ನೀವು ಮೈ ತೊಳಕಳಿ, ಉಂಡು ತರಪೂಜೆ ಮಾಡಬೌದಾ ಹೆಂಗೆ” ಯಜಮಾನರು ವಿಚಾರಿಸಿದ್ದರು. “ನಾವು ಆಮೇಲೆ ಊಟ ಮಾಡ್ತೀವಿ, ನೀವು ಉಂಡುಬಿಡಿ” ಎಂದು ತಿಳಿಸಿ ಸ್ನಾನ ಮಾಡಲು ಎದ್ದರು. ಜಂಗಮೈಗಳ ಮನೆಯ ತರ ಪೂಜೆಗೆ ಗೌನಳ್ಳಿಯ ಇಪ್ಪತ್ತು ಜನ ಆಗಮಿಸಿದ್ದರು. ಗೌಡರು, ಗೊಂಚಿಕಾರರು, ದೊಡ್ಡಸಿದ್ದಪ್ಪ, ಕರಿಯಣ್ಣ, ಚೆಂಬಸಣ್ಣ, ಬಸಣ್ಣ ಮತ್ತು ಸಿದ್ರಾಮಣ್ಣರ ಜತೆಗೆ ಗುಂಡಾಚಾರಿ ಕೂಡಾ ಆಗಮಿಸಿದ್ದರು.

ಐಗಳು ತರದ ಗುಂಡಿಯಲ್ಲಿಳಿದು ನಾಕೈದು ಕಲ್ಲುಗಳನ್ನು ಗೋಡೆ ಕಟ್ಟಡದಂತೆ ಜೋಡಿಸಿ ಪೂಜೆ ಮಾಡುತ್ತಿರುವಾಗ, ಗುಂಡಾಚಾರಿ ಒಂದು ಮುತ್ತು ಬೆಳ್ಳಿ ಬಂಗಾರದ ರೇಖು ಇದ್ದ ಒಂದು ಕಾಗದದ ಪಾಕೀಟನ್ನು ಐಗಳ ಕೈಗೆ ನೀಡಿ “ಕಲ್ಲು ಸಂದಿಗಿಡ್ರಿ ಇದನ್ನ” ಅಂದು “ಎಲ್ಲಾ ಗ್ರಹಗಳು ಶಾಂತವಾಗಿತ್ತವೆ” ಅಂದ. ಐಗಳು ಅವನು ನೀಡಿದ ಪಾಕೀಟನ್ನು ಕಲ್ಲು ಸಂದಿಗಿಟ್ಟು ತೆಂಗಿನಕಾಯಿ ಒಡೆದು ಪೂಜೆ ಮಾಡಿದರು. ಉಳಿದ ಐಗಳು ಅವರ ಹೆಂಗಸರು ಬೆಳಗಿದ ಬಳಿಕ ಯಜಮಾನರು, ಗೌಡ್ರು, ಗೊಂಚಿಕಾರರು ಮತ್ತೆಲ್ಲರೂ ಬೆಳಗಿ ಮೇಲಕ್ಕೆ ಹತ್ತಿದರು.

ಬಸಣ್ಣ ಸಿದ್ರಾಮಣ್ಣ ಮತ್ತಿಬ್ಬರು ಹಾರೆ ಸಲಿಕೆ ಸಮೇತ ಆಗಮಿಸಿದ್ದರು. ಫಲಾಹಾರ ಹಂಚಿದ ಬಳಿಕ “ನೀವು ತರ ತೋಡ್ತಾ ಇರಿ ಐನೋರು ಉಂಡು ಬಾರೆ” ಯಜಮಾನಪ್ಪ ಸೂಚಿಸಿದರು. ಜಂಗಮಯ್ಯರು ಗುಂಡಾಚಾರಿಯ ವೃತ್ತಾಂತವನ್ನು ಕೇಳಿ ತಿಳಿದುಕೊಂಡರು. ಆತನೂ ಚಿಗನಾಯ್ಕನಹಳ್ಳಿ ಪಕ್ಕದ ಊರಿಂದ ಬಂದವನಾಗಿದ್ದ. “ಈ ಊರಜನ ತಮ್ಮ ತಮ್ಮ ಬೇಸಾಯದ ಬದುಕಿನಲ್ಲಿ ನಿರತರಾಗಿ ಯಾರ ಉಸಾಬರಿಯನ್ನು ಹಚ್ಚಿಕೊಳ್ಳುತ್ತಿಲ್ಲ.

ನಾನೊಬ್ಬನೇ ಅಲ್ಲಿ ಬೇರೆ ಊರುಗಳಿಂದ ಬಂದು ಇಲ್ಲಿ ವಾಸಿಸುತ್ತಿರುವ ಬೇರೆ ಜನಗಳೂ ಸುಖವಾಗಿದ್ದಾರೆ” ಎಂದು ತಿಳಿಸಿದ್ದ. ಜಂಗಮಯ್ಯರು ಯಜಮಾನರ ಮನೆಕಡೆ ತೆರಳುವಾಗ ಗುಂಡಾಚಾರಿಯ ಗುಡಿಸಲು ಮತ್ತು ಕೆಲಸದ ಚಪ್ಪರವನ್ನೂ ನೋಡಿ ಹೋಗಿದ್ದರು.

ಹಿಂದಿನ‌ ಸಂಚಿಕೆ: 10. ಹೊಸ ಬಂಡಿಗಳ ಆಗಮನ

ಗೌಡರು ಮತ್ತು ಗೊಂಚಿಕಾರರು ತಂದಿದ್ದ ಹೊಸಾ ಗಾಡಿಗಳಲ್ಲಿ ಇದುವರೆಗೆ ಕಲ್ಲು ಮಣ್ಣು ಹೇರಿರಲಿಲ್ಲ. ಈಗ ಜಂಗಮೈಗಳ ಮನೆ ನಿರಾಣದಲ್ಲಿ ಪಾಲ್ಗೊಂಡು ಗೋಡೆ ನಿರಾಣಕ್ಕೆ ಕಲ್ಲುಗುಂಡುಗಳು ಮತ್ತು ಕೆಸರಿನ ಮಣ್ಣು ಹೇರಿಕೊಟ್ಟಿದ್ದರು. ಮೂರು ಜನ ಬೋವಿಗಳನ್ನು ಕರೆಸಿ ಗೋಡೆ ನಿನ್ನಿಸಲು ತೊಡಗಿಸಿದ್ದರು. ಬಸಣ್ಣ ಸಿದ್ರಾಮಣ್ಣರಲ್ಲದೆ ಮತ್ತಿಬ್ಬರು ಯುವಕರು ಜತೆಯಾಗಿ, ಗುಡಿಸಲಿಗೆ ಗಳು, ಗೂಟ ಮುಂತಾದುವನ್ನು ಸಿಕ್ಕ ಕಡೆಯಿಂದ ಹೊತ್ತು ತಂದು ಹಾಕಿದ್ದರು.

ಎರಡು ದಿನದಲ್ಲಿ ಎದೆ ಮಟ್ಟದ ಕಲ್ಲಿನ ಗೋಡೆ ನಿರಾಣವಾಗಿತ್ತು. ಜಂಗಮಯ್ಯರಿಗೆ ಮನೆ ಕಟ್ಟುವ ಅನುಭವ ಇರಲಿಲ್ಲ. ಇವರಿಂದ ಯಾಕೆ ಕೆಲಸ ಮಾಡಿಸಬೇಕು ಎಂಬ ಉದ್ದೇಶದಿಂದ ಎಲ್ಲಾ ಕೆಲಸಗಳನ್ನು ಊರ ಜನರೇ ಮಾಡಿದ್ದರು. ಯಜಮಾನರು ಮತ್ತು ಗುಂಡಾಚಾರಿ ಕಾಳಜಿಯಿಂದ ಎರಡು ಮೂರು ಬಾರಿ ಅಲ್ಲಿಗೆ ಬಂದು ಸಮಾಧಾನ ವ್ಯಕ್ತಪಡಿಸಿದ್ದರು.

ಸಂಜೆಗೆ ಆಗಮಿಸಿದ್ದ ಗೌಡರು ಮತ್ತು ಗೊಂಚಿಕಾರರು ಕೆಲವು ಸಲಹೆ ಸೂಚನೆ ನೀಡಿದ್ದರು. ಹುಣಿಸೆ ಕಣಿವೆ ಆಚೆಕಡೆ ಉದ್ದ ಮತ್ತು ಅಗಲದ ಕಲ್ಲು ಬಂಡೆ ದೊರೆಯುತ್ತವೆ ಎಂದು ಯಾರೋ ತಿಳಿಸಿದ್ದರಿಂದ ಗೌಡರ ಮತ್ತು ಗೊಂಚಿಕಾರರ ಎತ್ತಿನ ಬಂಡಿಗಳನ್ನು ಅಲ್ಲಿಗೊಯ್ದು ನಾಕೈದು ತೆಳ್ಳನೆಯ ಬಂಡೆಗಳನ್ನು ತಂದು ಗುಡಿಸಲೊಳಗೆ ಕಲ್ಲು ಗೂಟಗಳ ಮೇಲೆ ಹಾಸಿ ಮಂಚಗಳಂತೆ ಮಾಡಿದ್ದರು. ಒಂದು ಬಂಡೆಯನ್ನು ಬಾಗಿಲ ಹೊರಗೆ ಕಾಲಿಳೆಬಿಟ್ಟುಕೊಂಡು ಕುಳಿತುಕೊಳ್ಳಲು ಮಾಡಿಕೊಟ್ಟಿದ್ದರು.

ಮೂರನೇ ದಿನದಲ್ಲಿ ಜಂಗಮಯ್ಯರ ಗುಡಿಸಲು ಸಿದ್ದವಾಗಿತ್ತು. ಗೌಡರು ದಿನಾಲೂ ಬೆಳಿಗ್ಗೆ ಆಕಳು ಎಮ್ಮೆಗಳಿಂದ ಹಾಲು ಹಿಂಡಿಕೊಳ್ಳುವಾಗ ಒಂದು ತಂಬಿಗೆ ತುಂಬಾ ನೊರೆಹಾಲು ನೀಡಿದ್ದರು. ಜಂಗಮಯ್ಯರು ಅದೇ ಹಾಲನ್ನು ಒಲೆಹ ಹಾಲುಕ್ಕಿಸಲು ಬಳಸಿಕೊಂಡಿದ್ದರು. ಗೌಡರ ಮನೆಯವರು ಐದಾರು ವರ್ಷ ಪ್ರತಿದಿನ ಬೆಳಿಗ್ಗೆ ಒಂದು ತಂಬಿಗೆ ತುಂಬಾ ನೊರೆ ಹಾಲನ್ನು ಜಂಗಮರಿಗೆ, ಉಚಿತವಾಗಿ ನೀಡುತ್ತಿದ್ದರು.

ಜಂಗಮೈಗಳ ಕಂತೆಭಿಕ್ಷೆ: ಹಾಲುಕ್ಕಿಸಿದ ದಿನದಿಂದ ಜಂಗಮೈಗಳು ಸ ಮನೆಯಲ್ಲಿ ವಾಸಿಸಲು ಶುರು ಮಾಡಿದ್ದರು. ಗೌಡ್ರು, ಗೊಂಚಿಕಾರರು ನಾಕೈಯ ಹೊಸಾ ಮಡಕೆಗಳನ್ನು ಐಗಳಿಗೆ ನೀಡಿದ್ದರು. ಆರಂಭದಲ್ಲಿ ಐಗಳ ಹೆಣ್ಣು ಮಕ್ಕಳು ಊರ ಮುಂದಲ ಹಳ್ಳಕ್ಕೆ ಹೋಗಿ ನೀರು ತರಲು ನಾಚಿಗೆ ಪಟ್ಟಿದ್ದರು, ದಿನಗಳೆದಂತೆ ಅವರು ಊರಿನ ಇತರೆ ಹೆಂಗಸರಂತೆ ಹಳ್ಳದಿಂದ ನೀರು ತರುವುದು, ಸೌದೆ ಪುಳ್ಳೆ ಆಯುವುದನ್ನು ರೂಢಿಸಿಕೊಂಡಿದ್ದರು.

ಹಿಂದಿನ‌ ಸಂಚಿಕೆ: 11. ಬಂಡಿ ತಂದ ಬದಲಾವಣೆ

ಮಳಿಯಪ್ಪಯ್ಯ ಮತ್ತು ಮರುಳಯ್ಯರು ಸ್ನಾನ ಮಾಡಿ ಸೊಂಟಕ್ಕೊಂದು ವಸ್ತ್ರ ಸುತ್ತಿಕೊಂಡು ಮೈಮೇಲೊಂದು ವಸ್ತ್ರವನ್ನು ಹೊದ್ದು ಜೋಳಿಗೆ ಹಿಡಿದು ಲಿಂಗಾಯ್ತರ ಮನೆಗಳಿಗೆ ಕಂತೆ ಭಿಕ್ಷಕ್ಕೆ ಹೊರಟಿದ್ದರು. ಇದನ್ನು ಕಂಡ ಅವರ ಹೆಣ್ಣು ಮಕ್ಕಳು ಕಣ್ಣುಂಬಾ ನೀರು ತುಂಬಿಕೊಂಡು ಮರುಗಿದ್ದರು. ತಲಾ ನಾಕೈದು ಮನೆಗಳಿಗೆ ಹೋಗಿ ಮನೆಗಳವರು ನೀಡಿದ್ದ ಬಿಸಿ ಬಿಸಿ ಮುದ್ದೆ, ಸಾರು, ಮಜ್ಜಿಗೆ, ಬೆಣ್ಣೆ ಮುಂತಾದುವನ್ನು ತಮ್ಮ ಮನೆಗೊಯ್ದು, ಮನೆ ಮಂದಿಯೆಲ್ಲಾ ಹಂಚಿ ಉಂಡಿದ್ದರು. ಇದು ಬೆಳಿಗ್ಗೆ ಉಂಬೊತ್ತಿಗೆ ಮತ್ತು ರಾತ್ರಿ ಉಂಬೊತ್ತಿಗೆ ಹೋಗಿ ತರುವುದು ರೂಢಿಯಾಯಿತು.

ಈ ಮಧ್ಯೆ ಜಂಗಮಯ್ಯರಿಗೆ ಜಮೀನು ಹಸನು ಮಾಡಿಕೊಡಬೇಕೆಂದು ಕೆಲವರು ಯೋಚಿಸಿದ್ದರು. ‘ಕಂತೆ ಭಿಕ್ಷಾ ಮಾಡೋರು ಭೂಮಿ ಗೆಯ್ಯೋದು ಬದ್ಧವಾ’ ಎಂದು ಕೆಲವರು ಅನುಮಾನಪಟ್ಟರೆ ಮತ್ತೆ ಕೆಲವರು “ಅವರಿಗೆ ಮಕ್ಕೂ ಮರಿ ಆದ ಮ್ಯಾಗೆ ಕಂತೇ ಭಿಕ್ಷದಾಗೆ ಸಾಕಕಾದೀತೆ?” ಕೋರಿಗೆ ಪಾರಿಗೆ ಕೊಟ್ಟಕಂಡ್ ಬೆಳಕಯ್ತಾರೆ” ಎಂದು ಕೂಡಾ ಯೋಚಿಸಿದ್ದರು.

ಗೌಡ್ರು, ಗೊಂಚಿಕಾರೂ ಮತ್ತೆ ಯಜಮಾನಪ್ಪಾರೂ ಒಂದು ಸಂಜೆ ಐಗಳ ಗುಡಿಸಲಿಗೋಗಿ “ಸ್ವಾಮೇರೇ ನಿಮಿಗೆ ಬ್ಯಾಸಾಯದ ಅನುಭವ ಐತಾ. ನಮ್ ಕಡೆ ಭೂಮಿ ಬರೀ ಮಣ್ಣಿನವು, ಏಟು ಗೆಯ್ದರೂ ಸಾಲ್ವು, ಒಂದ್ ಸಲ ಬೆಳೆ ಕುಂತು ಅಂದ್ರೆ ದಿನಕೀಟು ದಿನಕೀಟು ಕಣ್ಣಿಗೆ ಹಬ್ಬ, ಅಂಗೆ ಬೆಳೀತಾವೆ.
ಆದ್ರೆ ಅಂಗೇ ತಾಕಥ್ ಮಾಡಬೇಕು. ನಿಮ್ಮತ್ರ ಎತ್ತಿಲ್ಲ ಕರಾ ಇಲ್ಲ. ಕೋರೀಗ್ ಮಾಡಾರು ಸಿಕ್ರೆ ನಿಮ್ಮ ಪುಣ್ಯ. ಯಾಕಂದ್ರೆ ಎಲ್ಲಾರೂ ಈಟೀಟು ಜಮೀನು ಮಾಡ್ಕಂಡಿದಾರೆ”, ಪ್ರಸ್ತಾಪ ಮಾಡಿದ್ದರು.

“ನೋಡ್ರಿ ಗೌಡ್ರೆ, ಗೊಂಚಿಕಾಯಿ, ಯಜಮಾನಪ್ಪಾರೆ. ನಮ್ಮು ಅಂತ ಒಂದ್ ಜಮೀನು ಇರಬೇಕು. ಇವತ್ತಿನ ಪರಿಸ್ಥಿತಿ ಮುಂದೆ ಬದಲಾಗ್ ಬೌದು. ಜಮೀನು ಮಾಡೊ ಮಕ್ಕು ಹುಟ್ಟಬೌದು. ಅದಕೆ ದಯಮಾಡಿ ಎಲ್ಲಿ ಭೂಮಿ ಐತೆ ತೋರಿಸ್‌ಕೊಟ್‌ಬಿಡಿ. ಗಿಡಕಡಿದು ಹಸನು ಮಾಡಿಕೊಳ್ತಿವಿ”. ಮಳಿಯಪ್ಪಯ್ಯ ಮತ್ತು ಮರುಳಯ್ಯ ಅತ್ಯಂತ ಪಿನೀತರಾಗಿ ಕೇಳಿಕೊಂಡಿದ್ದರು.

“ಆತು ಬಿಡ್ರಿ. ತಡಾ ಮಾಡಿದ್ರೆ ಈಗ ಸಿಗೋ ಭೂಮೀನೂ ಸಿಗದಂಗಾಗ್‌ತವೆ. ಊರಿಂದ ಪಡವಗಡಿಗೆ ಯಾರ ಕಣ್ಣೀಗೂ ಬೀಳೆ ಇರೋ ಭೂಮಿ ಒಂದೈತೆ. ಇನ್ನೊಂದು ಬಡಗ್ಗಡೀಕೆ ನಮ್ಮೂರ ಗಡಿಗಂಟೆಗಂಡ್ ಐತೆ, ಅವನ್ನ ಗಿಡಕಡಿದು ಹಸನು ಮಾಡಾನ” ಅಂತ ತೀರಾನ ಹೇಳಿದ್ದರು.

ಅದರಂತೆ ಮಾರನೇ ದಿನ ಐದಾರು ಜನ ಊರ ಪಡುವಲಿಗೆ ಮತ್ತೆ ಐದಾರು ಮಂದಿ ಬಡಗ್ಗಡೀಕೆ ಹೋಗಿ ಗಿಡ ಕಡಿಯಲು ಸುರುವಿಟ್ಟುಕೊಂಡಿದ್ದರು.

ಜಂಗಮಯ್ಯರು ಎರಡೂ ಕಡೆಗಳಿಗೆ ಓಡಾಡಿ ಕಡಿದ ಗಿಡಗಂಪೆಯನ್ನು ಹೊತ್ತು ಬೇಲಿಯ ಹಾಗೆ ಹಾಕಿಕೊಂಡಿದ್ದರು. ಮಾರನೇ ದಿನ ಕಂತೆ ಭಿಕ್ಷಾನ್ನ ಉಂಡವರು ಊರ ಸಮೀಪದ ಜಮೀನಿಗೆ ಮೂವರು, ಬಡಗ್ಗಡೆ ಜಮೀನಿಗೆ ಇಬ್ಬರು ಹೋಗಿ, ಉಳಿದಿದ್ದ ಗಿಡಗಳನ್ನು ಸವರಿ ಹಾಕಿದ್ದರು. ಸಂಜೆ ಹೊತ್ತಿಗೆ ಎರಡೂ ಜಮೀನುಗಳು ಗೆಯ್ದೆಗೆ ಹಸನಾಗಿ ಕಂಡಿದ್ದವು.

Click to comment

Leave a Reply

Your email address will not be published. Required fields are marked *

More in ಸಂಡೆ ಸ್ಪಷಲ್

To Top
Exit mobile version