CHITRADURGA NEWS | 19 FEBRUARY 2026
ಚಿತ್ರದುರ್ಗ: ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಇದೇ ಫೆಬ್ರವರಿ 20 ರಿಂದ 22 ರವರೆಗೆ ಮೂರು ದಿನಗಳ ಕಾಲ 33ನೇ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.
ಇದನ್ನೂ ಓದಿ: ಆಕಾಶವಾಣಿಯಲ್ಲಿ ಅರೆಕಾಲಿಕ ವರದಿಗಾರರ ಹುದ್ದೆ | ಅರ್ಜಿ ಅಹ್ವಾನ
ನಗರದ ಜಿಲ್ಲಾ ತೋಟಗಾರಿಕೆ ಕಚೇರಿಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ 33ನೇ ಫಲ-ಪುಷ್ಪ ಪ್ರದರ್ಶನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ಹೊರಮಠ, ಒಳಮಠ ದೃಶ್ಯ ಹಾಗೂ ಶ್ರೀ ತಿಪ್ಪೇರುದ್ರಸ್ವಾಮಿಯವರ ಭವ್ಯ ಕಲಾಕೃತಿ, ಸಾಹಿತಿ ಬಿ.ಎಲ್. ವೇಣು, ಜಾನೂರ್ ಕಲಾಕೃತಿಗಳು, ಐತಿಹಾಸಿಕ ಕೋಟೆ, ಒಂಟಿಕಲ್ಲು ಬಸವಣ್ಣ ಹಾಗೂ ವೀರವನಿತೆ ಒನಕೆ ಓಬವ್ವರ ಮರಳು ಕಲೆ ಪ್ರದರ್ಶನ, ಜೇನು ನೊಣಗಳ ಪರಾಗಸ್ಪರ್ಶ ಕಲಾಕೃತಿ, ಸಾಲುಮರದ ತಿಮ್ಮಕ್ಕ ಕಲಾಕೃತಿಗಳು 33ನೇ ಫಲ-ಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷ ಆಕರ್ಷಣೆ ಆಗಲಿದೆ ಎಂದು ತಿಳಿಸಿದರು.
ಜಿಲ್ಲಾ ಫಲ-ಪುಷ್ಪ ಪ್ರದರ್ಶನವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು, ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನೂ ಸಹ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಫೆಬ್ರವರಿ 19 | ಹತ್ತಿ ರೇಟ್ ಎಷ್ಟಿದೆ?
ಜಟಕಾ ಬಂಡಿ (ಟಾಂಗಾ), ಹುಡುಗ, ಹುಡುಗಿ, ಟಾಂಗಾ ಹಾಗೂ ಕುದುರೆ ಕಲಾಕೃತಿಗಳಿಗೆ ಹೂವಿನಿಂದ ಅಲಂಕಾರ ಮಾಡಿ ವಿಶೇಷವಾಗಿ ಪ್ರದರ್ಶಿಸಲಾಗುವುದು. ಚಿತ್ರದುರ್ಗ ಕೋಟೆಯ ಆಕರ್ಷಣೆಗಳಲ್ಲಿ ಒಂದಾದ ಉಯ್ಯಾಲೆ ಕಂಬದ ಕಲಾಕೃತಿಯನ್ನು ವಿಶೇಷವಾಗಿ ಪ್ರದರ್ಶಿಸಲಾಗುವುದು.
ಕ್ರಿಕೆಟ್ ಪ್ರಿಯರಿಗೆ ಮನರಂಜನೆಗೋಸ್ಕರ ಪ್ರಸ್ತುತ ನಡೆಯುತ್ತಿರುವ ಟಿ-20 ವಲ್ರ್ಡ್ ಕಪ್‍ನಲ್ಲಿ ಆಡುತ್ತಿರುವ ನಮ್ಮ ಭಾರತ ತಂಡಕ್ಕೆ ಗೆಲುವು ಸಾಧಿಸಲು ಶುಭಾಷಯ ಕೋರುವ ಪರಿಕಲ್ಪನೆಯ ಉದ್ದೇಶದಿಂದ ತಂಡದ ಸದಸ್ಯರ ಮುಖಗಳ ಕಲಾಕೃತಿಗಳನ್ನು ಕಲ್ಲಂಗಡಿಯಲ್ಲಿ ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು.

ಜಿಲ್ಲೆಯ ರೈತರು ಬೆಳೆದಿರುವ ಹೂ, ತರಕಾರಿ, ಹಣ್ಣು, ಹಾಗೂ ಇತರೆ ವಿಶೇಷವಾದ ತೋಟಗಾರಿಕೆ ಉತ್ಪನ್ನಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಸುಮಾರು 500 ಕ್ಕೂ ಹೆಚ್ಚು ವಿವಿಧ ಜಾತಿಯ ಉತ್ಪನ್ನಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿರುತ್ತದೆ. ಉತ್ತಮವಾಗಿ ಬೆಳೆದ ರೈತರಿಗೆ ಬಹುಮಾನಗಳನ್ನು ಕೊಡುವುದರಿಂದ ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಇದನ್ನೂ ಓದಿ: ಬಸವ ಜಯಂತಿ ಆರಂಭಿಸಿದ ಹರ್ಡೇಕರ್ ಮಂಜಪ್ಪ | 140ನೇ ಜಯಂತಿ ಆಚರಣೆ
ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು 70 ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಹೂವಿನಗಿಡಗಳನ್ನು ಬೆಳಯಲಾಗಿದೆ.
ಮೆಲಾಪೋಡಿಯಂ, ಕ್ಲಿಯೋಂ (ಸ್ಪೈಡರ್), ಹಾಲಿಯಾಕ್, ಗಾಕ್ಸೀನಿಯ, ಕೆಲಂಚಾ, ಇಂಪೇಷನ್ಸ್ (ಮಿಕ್ಸ್‍ಡ್), ಡಾಲಿಯಾ, ಸಾಲ್ವಿಯಾ (ಕೆಂಪು, ನೀಲಿ, ಬಿಳಿ,) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಪೆಟೂನಿಯಾ (ಸಿಂಗಲ್ ಮತ್ತು ಡಬಲ್ ವರ್ಲ್), ಕಾಸ್‍ಮಾಸ್ ಮಿಕ್ಸ್ (ಡ್ವಾರ್ಫ್ ಮತ್ತು ಟಾಲ್), ಬಾಲ್ಸಂ, ಜಿರೇನಿಯಂ ಮಿಕ್ಸ್, ಆಂಟಿರಿನಮ್ ಮಿಕ್ಸ್ ಡಯಾಂತಸ್ ಮಿಕ್ಸ್, ಕ್ಯಾಲೊಂಡುಲಾ, ಗಜೇನಿಯ ಮಿಕ್ಸ್ , ಪೆಂಟಾಸ್ ಮಿಕ್ಸ್, ಯುಪೋರ್ಬಿಯ ಮಿಲ್ಲಿ, ಬಿಗೋನಿಯಾ, ವಿಂಕಾ, ವರ್‍ಬೆನಾ ಇತ್ಯಾದಿ ವಿವಿಧ ಪುಷ್ಪ ಸಸಿಗಳು, 70 ಕ್ಕೂ ಹೆಚ್ಚು ಬಗೆಯ ತಳಿಗಳು, ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನವು ಮುದ ನೀಡಲಿದೆ ಎಂದು ತಿಳಿಸಿದರು.
ಚಿತ್ರದುರ್ಗದ ಖ್ಯಾತ ಚಿತ್ರಕಲಾವಿದರಿಂದ ಅಕ್ರಾಲಿಕ್, ಜಲವರ್ಣ ಹಾಗೂ ಆಯಿಲ್ ಮಾಧ್ಯಮದ ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ನೀರು ಹರಿಯುವಂತೆ ಇರುವ ಜಲಪಾತಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಜಿಲ್ಲಾ ಬಂಜಾರ(ಲಂಬಾಣಿ) ಸಂಘದ ಪದಾಧಿಕಾರಿಗಳ ಆಯ್ಕೆ | ನಾಗೇಂದ್ರ ನಾಯ್ಕ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ
ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ತಮ್ಮ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರಿಂದ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ರೈತರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ದೊರೆಯುತ್ತದೆ. ಪ್ರದರ್ಶನದ ಅಂಗವಾಗಿ ನಗರದ ವಿವಿಧ ಶಾಲೆಗಳ ಶಾಲಾ ಮಕ್ಕಳಿಗೆ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಟರ್ಧೆ, ಪ್ರಬಂಧ ಸ್ಪರ್ಧೆ, ಹಣ್ಣು ಮತ್ತು ಹೂ ತರಕಾರಿಗಳನ್ನು ಬಳಸಿ ಪ್ಯಾನ್ಸಿ ಡ್ರಸ್ಸ್ ಸ್ಪರ್ಧೆ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತೇಜನ ನೀಡಲಾಗುವುದು.
ನಗರದ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ, ಮನೆಯ ಆವರಣದಲ್ಲಿ ವಿವಿಧ ಜಾತಿಯ ಅಲಂಕಾರಿಕ ಕುಂಡಗಳ ಜೋಡಣೆ ಮತ್ತು ಮನೆ, ಸಂಸ್ಥೆಗಳ ಆವರಣದಲ್ಲಿ ಉದ್ಯಾನವನಗಳನ್ನು ನಿರ್ಮಿಸಿದವರಿಗೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರೋಪದ ಸಮಾರಂಭದಲ್ಲಿ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಚಿತ್ರದುರ್ಗದ ಜನತೆ ಹಾಗೂ ಸುತ್ತಮುತ್ತಲಿನ ತಾಲ್ಲೂಕಿನ ಜನರು ತಮ್ಮ ಮಕ್ಕಳೊಂದಿಗೆ ವಾರಾಂತ್ಯದಲ್ಲಿ ಈ ಸುಂದರ ಫಲ-ಪುಷ್ಪ ಪ್ರದರ್ಶನ ವೀಕ್ಷಿಸಲು ಬರಬೇಕು ಎಂದು ಜಿ.ಪಂ ಸಿಇಒ ಡಾ. ಆಕಾಶ್ ಮನವಿ ಮಾಡಿದರು.
ಇದನ್ನೂ ಓದಿ: ಫೆ.21 ರಂದು ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ದಿಶಾ ಸಭೆ
ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕಿ ಜಿ.ಸವಿತಾ, ರಾಜ್ಯವಲಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ.ತೋಟಯ್ಯ, ಜಿಲ್ಲಾ ತೋಟಗಾರಿಕೆ ಸಂಘದ ಜಂಟಿ ಕಾರ್ಯದರ್ಶಿ ಗಿರೀಶ್, ಖಜಾಂಚಿ ನಾಗರಾಜ್ ಬೇದ್ರೆ, ಹಿರಿಯ ಸಲಹೆಗಾರ ಜಿ.ಎಸ್.ಉಜ್ಜೀನಪ್ಪ, ನಿರ್ದೇಶಕರಾದ ಸುಮನಾ ಅಂಗಡಿ, ಸತ್ಯನಾರಾಯಣ ನಾಯ್ಡು, ಶ್ವೇತಾ ವಿಶ್ವನಾಥ್, ರೀನಾ ವೀರಭದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು.
ನಾಳೆ ಉದ್ಘಾಟನಾ ಸಮಾರಂಭ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ ಸಂಯುಕ್ತಾಶ್ರಯದಲ್ಲಿ ಇದೇ ಫೆ.20 ರಿಂದ 22 ರವರೆಗೆ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಫೆ.20ರಂದು ಸಂಜೆ 6ಕ್ಕೆ ನಗರದ ವಿ.ಪಿ.ಬಡಾವಣೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ “33ನೇ ಫಲ-ಪುಷ್ಪ ಪ್ರದರ್ಶನದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
