ಮುಖ್ಯ ಸುದ್ದಿ
Novel: ನಾಳೆಯಿಂದ ನಿಮ್ಮ ಮುಂದೆ | ಹಬ್ಬಿದಾ ಮಲೆ ಮಧ್ಯದೊಳಗೆ | ಬಯಲು ಸೀಮೆಯ ಮಹಾಕಾದಂಬರಿ

CHITRADURGA NEWS | 31 AUGUST 2024
ಚಿತ್ರದುರ್ಗ ನ್ಯೂಸ್ ಆರಂಭವಾಗಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದ ಅವಧಿಯಲ್ಲಿ ನಮ್ಮ ನಿರೀಕ್ಷೆ ಮೀರಿದ ಸ್ಪಂಧನೆ ಓದುಗರಿಂದ ಸಿಕ್ಕಿದೆ. ಈ ಪ್ರೀತಿಗೆ ನಾವು ಆಭಾರಿಗಳು. ಪ್ರತಿ ಕ್ಷಣವೂ ಹೊಸತನಕ್ಕೆ ತುಡಿಯುವ ಮೂಲಕ, ದುರ್ಗದ ಜನರ ವಿಶ್ವಾಸಾರ್ಹ ಡಿಜಿಟಲ್ ಮಾಧ್ಯಮವಾಗಿ ಚಿತ್ರದುರ್ಗ ನ್ಯೂಸ್ ಮುನ್ನುಗ್ಗುತ್ತಿದೆ. ಈಗ ನಮ್ಮ ಮತ್ತೊಂದು ಪ್ರಯೋಗವಾಗಿ ಹಿರಿಯ ಪತ್ರಕರ್ತರು, ಲೇಖಕರೂ ಆಗಿರುವ ಜಿ.ಎಸ್.ಉಜ್ಜನಪ್ಪ ಅವರು ರಚಿಸಿರುವ ಬಯಲು ಸೀಮೆಯ ಮಹಾಕಾದಂಬರಿ (Novel) ಹಬ್ಬಿದ ಮಲೆ ಮಧ್ಯೆದೊಳಗೆ ಕಾದಂಬರಿಯನ್ನು ಪ್ರತಿ ಭಾನುವಾರ ಪ್ರಕಟಿಸುವ ಮೂಲಕ ಓದುಗರಿಗೆ ಹೊಸ ಅಭಿರುಚಿ ಉಣಬಡಿಸುವ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಈ ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರ ಇರಲಿ. ಓದಿ, ಪ್ರತಿಕ್ರಿಯಿಸಿ, ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ.
ಓದುಗರಲ್ಲಿ ಲೇಖಕ ಜಿ.ಎಸ್.ಉಜ್ಜನಪ್ಪ ಅವರ ನಿವೇದನೆ:
ಪ್ರಿಯ ಓದುಗರೆ,
ನೀವು ಓದಲಿರುವ ಈ ಕೃತಿ ನನ್ನ ಹದಿನಾರನೇ ಬರಹ. ನನ್ನ ಹುಟ್ಟೂರು ಗೌನಹಳ್ಳಿಯ ದಾಖಲಾಗದೇ ಇದ್ದ ಕೆಲವು ಪ್ರಸಂಗ, ಘಟನೆಗಳು ನನ್ನ ತಲೆಯಲ್ಲಿ ಗುಂಯ್‍ಗುಡುತ್ತಿದ್ದವು. ಇವನ್ನ ಕಣ್ಣಿಗೆ ಕಟ್ಟುವಂತೆ ಹೇಳಿದ್ದ ನನ್ನ ತಾತ ಗೊಂಚಿಕಾರ ಬಸಯ್ಯ (ಶತಾಯುಷಿಯಾಗಿದ್ದ ಇವರು ತೀರಿಕೊಂಡಾಗ ನನಗೆ ಐದಾರು ವರ್ಷ ವಯಸ್ಸು. ಅವರೇ ನನ್ನನ್ನು ಪ್ರಾಥಮಿಕ ಶಾಲೆಗೆ ದಾಖಲಿಸಿದ್ದವರು), ಮಾವಂದಿರಾದ ಮತ್ತು ದೇಶ ಸ್ವಾತಂತ್ರ್ಯ ಪಡೆಯುವುದಕ್ಕೆ ಮುಂಚೆ ದಶಕಗಳ ಕಾಲ ಊರಿನ ಎಲ್ಲಾ ಆಗು ಹೋಗುಗಳನ್ನು ದಾಖಲಿಸುತ್ತಿದ್ದ ಪಟೇಲ್ ಸಿದ್ದಯ್ಯನವರು, ಅವರು ತಮ್ಮ ಅತ್ತೆಯ ಮಗನಾಗಿದ್ದ ನನ್ನ ತಂದೆ (ತಾಯಿಯ ಮರಣಾನಂತರ ತಮ್ಮ ಪ್ರೀತಿಯ ರಕ್ಷಣೆಯಲ್ಲಿ ಸಾಕಿ ಸಲಹಿದ್ದವರು ಪಟೇಲರೆ) ಮತ್ತು ಹುಟ್ಟು ಕಥೆಗಾರ್ತಿಯಾಗಿ ಪಟೇಲರ ರಕ್ಷಣೆಯಲ್ಲೇ ಬೆಳೆದಿದ್ದ (ಆಕೆ ಚಿಕ್ಕ ಹುಡುಗಿಯಗಿದ್ದಾಗಲೇ ತಂದೆ ದುರ್ಮರಣಕ್ಕೀಡಾಗಿದ್ದರು) ನನ್ನ ತಾಯಿ ಲಿಂಗಮ್ಮ ಇವರು ಈ ಕೃತಿಯ ಎಲ್ಲಾ ಪ್ರಸಂಗ ಸಂಗತಿಗಳನ್ನು ಕಾಲಕಾಲದಲ್ಲಿ ನನಗೆ ತಿಳಿಸಿ ಉಪಕರಿಸಿದ್ದಾರೆ. ಆದ್ದರಿಂದ ಇವರುಗಳಿಗೆ ಈ ಕೃತಿಯನ್ನು ಅರ್ಪಿಸುವುದರ ಮೂಲಕ ನನ್ನ ಕೃತಜ್ಞತೆಗಳನ್ನು ಸಲ್ಲಿಸಿದ್ದೇನೆ.

ಯಾವುದೇ ದೇಶದ ಹಳ್ಳಿ, ಪಟ್ಟಣ ಮತ್ತಿತರ ಸ್ಥಳಗಳಿಗೆ ತಮ್ಮದೇ ಆದ ಇತಿಹಾಸ ಇದ್ದೇ ಇರುತ್ತದೆ. ಅವನ್ನು ದಾಖಲಿಸುವ ಉದಾರಿಗಳು ಅಪರೂಪ.
ಎರಡು ಗುಡ್ಡಗಳ ಸಾಲಿನ ನಡುವೆ, ಜೀವಸೆಲೆಯಂತೆ ಹರಿಯುತ್ತಿದ್ದ ಬಸವನ ಹೊಳೆಹಳ್ಳದ ಮಗ್ಗುಲಲ್ಲಿ ಕಟ್ಟಿಕೊಂಡಿರುವ ಗೌನಹಳ್ಳಿಯ ಇತಿಹಾಸವನ್ನು ನನ್ನ ‘ಗೌನಳ್ಳೇರು’ (ಪ್ರಕಾಶಕರು ಮೆ। ಸಿವಿಜಿ ಇಂಡಿಯಾ ಬೆಂಗಳೂರು-2011 ಮತ್ತು 2013): ‘ಗೌನಳ್ಳಿ ಎಂಬ ಗ್ರಾಮ ಭಾರತ’ (ಪ್ರಕಾಶಕರು ಮೆಃ ರೋಸ್ ಇಂಡಿಯಾ ಬೆಂಗಳೂರು -2020 ಮತ್ತು ಈ ‘ಹಬ್ಬಿದಾ ಮಲೆ ಮಧ್ಯದೊಳಗೆ’ ಕೃತಿಗಳಲ್ಲಿ ಯಾವ ಕೃತಕತೆ ಇಲ್ಲದೆ ದಾಖಲಿಸಿದ್ದೇನೆ.
ಈ ಊರಿನ ಪರಿಸರವೇ ಚೇತೋಹಾರಿಯಾದುದು. ಬಡಗಲು-ತೆಂಕಲಿಗೆ ಹಬ್ಬಿರುವ ಎರಡು ಗುಡ್ಡಗಳ ಸಾಲಿನ ತಪ್ಪಲಿನಲ್ಲಿ ಕಟ್ಟಿಕೊಂಡಿರುವ ಗೌನಳ್ಳಿ ಹೊರಜಗತ್ತಿಗೆ ಅಡವಿಯಂತೆಯೇ ಕಾಣಿಸುತ್ತಿದೆ. ಪಡುವಲ ಗುಡ್ಡದಾಚೆಗೆ ಹೊಂದಿಕೊಂಡಿರುವ ಸಾವಿರಾರು ಎಕರೆ ರಕ್ಷಿತಾರಣ್ಯದಂತೆ ಕಾಣುವ ಗಿಡ. ಮರಗಳು ಇತ್ತೀಚೆಗೆ ಹಳ್ಳಿಯ ರೈತರು ಸಾಕಿರುವ ಸಾವಿರಾರು ಅಡಿಕೆ, ತೆಂಗು, ಬಾಳೆಯಲ್ಲದೆ, ಕಟ್ಟೆ ಸಾಲಿನಲ್ಲಿರುವ ಮಾವು, ಹಲಸು ಮತ್ತು ಬೇವಿನ ಮರಗಳ ಮಧ್ಯೆ ಊರು ಇದೆಯಾ ಎಂಬ ಅನುಮಾನ ಮೂಡುವುದು ಸಹಜವೇ ಆಗಿದೆ.
ಒಂದು ಕಾಲದಲ್ಲಿ ಅಲೆಮಾರಿಗಳಾಗಿ ತಮ್ಮ ಸಾಕು ಪ್ರಾಣಿಗಳಿಗೆ ಹುಲ್ಲು ನೀರು ಹುಡುಕುತ್ತಾ ಬರುತ್ತಿರುವವರಿಗೆ ಎಲ್ಲೋ ಮಳೆ ಸುರಿದು ಇಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದ ನೀರನ್ನು ಕಂಡು ಇದು ಜೀವನದಿಯೇ ಇರಬೇಕು ಎಂದು ಊಹಿಸಿ ಹಳ್ಳದ ನೀರು ಇಳಿಮುಖವಾದಾಗ ಹಳ್ಳವನ್ನು ದಾಟಿ ದಿನ್ನೆಯಲ್ಲಿ ತಮ್ಮ ಪಶು ಮಂದೆಯನ್ನು ತರುವ ನಿದ್ದೆ ಹೋದವರಿಗೆ ಸುಖದ ನಿದ್ದೆ ಆವರಿಸುತಿತ್ತು. ದನಕರುಗಳು ಬೆಳಕು ಹರಿದರೂ ಸುಖವಾಗಿ ಮಲಗಿ ಮೆಲುಕು ಹಾಕುತ್ತಿದ್ದವು. ಇದರಿಂದ ಈ ಸ್ಥಳ ‘ನೆಮ್ಮದಿಯ ತಾಣ’ವೆಂದು ಬಗೆದು ಕರವುಗಲ್ಲು ನೆಟ್ಟು ಊರು ಕಟ್ಟಿಕೊಂಡು ಒಂದೆಡೆ ನೆಲೆ ಕಂಡುಕೊಂಡವರು ಈ ಊರ ನಿವಾಸಿಗಳು.
ಕೆಲ ಕಾಲಾನಂತರ ಆಗಿನ ಕಾಲದಲ್ಲಿ ಧಕ್ಕೆ ಪ್ರಸಾರಕ್ಕೆ ಊರಿಂದೂರಿಗೆ ಸರ್ಕಿಟು ಹೋಗುತ್ತಿದ್ದ ಪಂಚ ಪೀಠಗಳಲ್ಲೊಂದಾದ ಶ್ರೀಶೈಲದ ಶ್ರೀಮರ್ ಗಿರಿರಾಜ ಸೂರ್ಯಸಿಂಹಾಸನಾಧೀಶರಾದ ಸ್ವಾಮಾಜಿಯವರಿಂದ ಲಿಂಗದೀಕ್ಷೆ ಪಡೆದು ಲಿಂಗವಂತರಾಗಿ ನಿμÉ್ಠಯಿಂದ ಬಾಳಿದವರು ಊರು ಕಟ್ಟಿದ ಜನ ಕೆಲ ಕಾಲಾನಂತರದಲ್ಲಿ ಹೇಳಿ ಕರೆಸಿಕೊಂಡರೇನೋ ಅನ್ನುವ ರೀತಿಯಲ್ಲಿ ಎಲ್ಲೆಲ್ಲಿಂದಲೋ, ಮಹಾರಾಷ್ಟ್ರದಿಂದ ಮೊದಲು ಕಮ್ಮಾರರು ಅನಂತರ ಮಾದಿಗರು, ತೆಲುಗು ಮಾತಾಡುವ ಮಡಿವಾಳರು, ಮಣ್ಣು ಒಡ್ಡರು ಚಿತ್ರಮರ್ಗ ಬಳೆಯಿಂದ ಕ್ಷೌರಿಕರು, ಚಿಕ್ಕನಾಯ್ಕನಹಳ್ಳಿ ಕಡೇಲಿಂದ ಅಕ್ಕಸಾಲಿಗಳು ಕುಣಿಗಲ್ ಬೆಟ್ಟಹಳ್ಳಿಯಿಂದ ಜಂಗಮಯ್ಯರು ಕಾಲಾನಂತರದಲ್ಲಿ ಸೌವಳ್ಳಿಗೆ ಬಂದು ಬದುಕು ಕಟ್ಟಿಕೊಂಡ ಬಗೆ ಅಂತಃಕರಣವನ್ನು ಮಿಡಿಯುತ್ತದೆ.
ಹೊರಗಿನಿಂದ ಬಂದವರೆಲ್ಲಾ ಊರಿನ ರೈತರಿಗೆ ಒಂದಿಲ್ಲೊಂದು ಕಾವ್ಯದಲ್ಲಿ ಸಹಾಯಕರಾಗಿದ್ದುದು, ಊರವರಾರೂ ಇವರ ತಂಟೆಗೆ ಹೋಗದೆ ತಮ್ಮ ಉತ್ತು ಬಿತ್ತಿ ಬೆಳೆಯುವ ಕಸುಬಿನಲ್ಲಿ ನಿರತರಾಗಿ ಮತ್ತು ಎಲ್ಲರೂ ನಿರುಮ್ಮಳವಾಗಿ ಬದುಕಿದ್ದುದು ಅಪರೂಪದ ವಿಚಾರವೇ.
ಇಂತಹ ಒಳನಾಡಿನ ಕುಗ್ರಾಮ ಬದಲಾವಣೆಗೆ ಕ್ರಮೇಣ ಒಪ್ಪಿಕೊಂಡಿದ್ದು ಮಹತ್ವದ ಸಂಗತಿ. ನನ್ನ ಮೊದಲಿನೆರಡು ಕೃತಿಗಳಲ್ಲಿ ಪ್ರಸಂಗಗಳ ಮೂಲಕ ಗುಡ್ಡದೊಳಗಿನ ಗೌನಳ್ಳಿ ಜನರ ಬದುಕು ಇಪ್ಪತ್ತನೇ ಶತಮಾನದ ಮಧ್ಯ ಭಾಗದ ತನಕ ಹೇಗಿತ್ತು, ಆನಂತರ ಜೋರಾಗಿ ಬೀಸಿದ ಬದಲಾವಣೆ ನಾಳಿಗೆ ಹೇಗೆ ಹೊಂದಿಕೊಂಡಿತು ಅನ್ನುವುದರ ಚಿತ್ರಣವನ್ನು ಯಥಾವತ್ತಾಗಿ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಕೆಲವು ಘಟನೆಗಳು ‘ಗೌನಳ್ಳೇರು’ ಕೃತಿಯಲ್ಲಿ ದಾಖಲಾಗಿವೆ.
ರಾಜಕೀಯದ ಪ್ರವೇಶದಿಂದ ಹಳ್ಳಿಗಳ ಸಾಮರಸ್ಯದ ಬದುಕು ಎಷ್ಟು ತ್ವರಿತಗತಿಯಲ್ಲಿ ಬದಲಾಗುತ್ತಿರುವುದು ಗೌನಳ್ಳಿಯನ್ನೂ ತಲುಪಿದೆ. ಕೇಳರಿಯದಿದ್ದ ಜಾತಿ ವೈಷಮ್ಯದಿಂದ ಈ ಹಳ್ಳಿಗರು ಬದುಕು ಚೇತರಿಸಿಕೊಳ್ಳಲಾಗದಂಥ ಪೆಟ್ಟನ್ನು ಅನುಭವಿಸಿದೆ.
ಈ ಹಳ್ಳಿಯ ಬದುಕನ್ನು ಮುಂದೆ ಅಭ್ಯಸಿಸುವ ಮಹನೀಯರಿಗೆ ಈ ಕೃತಿಗಳು ಅಲ್ಪ ಹಿನ್ನೆಲೆಯೊದಗಿಸಿದರೆ ನನ್ನ ಪ್ರಯತ್ನ ಸಾರ್ಥಕವೆಂದು ಭಾವಿಸುತ್ತೇನೆ.
ಲೇಖಕರ ಪರಿಚಯ:
ಜಿ.ಎಸ್. ಉಜ್ಜನಪ್ಪ, ಜನಿಸಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಗೌನಹಳ್ಳಿಯ ಕೃಷಿಕ ದಂಪತಿ ಗೊಂಚಿಕಾರ್ ಸಿದ್ದಯ್ಯ ಮತ್ತು ಲಿಂಗಮ್ಮನವರ ಹಿರಿಯ ಮಗನಾಗಿ ಅಕ್ಟೋಬರ್ 30, 1939ರಂದು (ದಾಖಲೆಗಳಲ್ಲಿ 18-5-1939) ಜನನ. ಮೈಸೂರು ವಿ.ವಿ. ಯಿಂದ ಬಿ.ಎ., (1962), ಬೆಂಗಳೂರಿನ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‍ನಿಂದ ಸ್ನಾತಕೋತ್ತರ ಡಿ.ಎಸ್.ಎಸ್.ಎ., (1965).
ಗುಲ್ಬರ್ಗಾದ ‘ನವಕಲ್ಯಾಣ’ ವಾರಪತ್ರಿಕೆ ಜತೆ ಸಂಪರ್ಕ (ಆರಂಭ-1966), ಚಿತ್ರದುರ್ಗ ಬೃಹನ್ಮಠದ ಕನ್ನಡ ತ್ರೈಮಾಸಿಕ ‘ಗುರುಕುಲ’ದ ಸಂಪಾದಕ (ಆರಂಭ-1969).
‘ಸೋಬಾನೆ ಸಿದ್ಧಮ್ಮ- ನೀಲಮ್ಮರ ಆತ್ಮಕಥನ’ ರಾಜ್ಯ ಜಾನಪದ ಅಕಾಡೆಮಿಯಿಂದ ಪ್ರಕಟಿತ ಕೃತಿ ‘ಮನದಾಳದ ಕನಸುಗಳು’ ಸಂಕಲನದಲ್ಲಿನ ಕಥೆ ‘ಕೆಂಪಕ್ಕಳ ಬಾದ್ದೂರ’ಕ್ಕೆ ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ, ಹಾಗೂ 2017ರ ಸಾಲಿನ ಡಾ. ಮೀರಾಸಾಬಿಹಳ್ಳಿ ಶಿವಣ್ಣನವರ ‘ಸಾಹಿತ್ಯಶ್ರೀ’ ಪ್ರಶಸ್ತಿ.
