ಮುಖ್ಯ ಸುದ್ದಿ
ಮುರುಘಾಮಠದಿಂದ ಸಸಿ ನೆಡುವ ಸಪ್ತಾಹಕ್ಕೆ ಚಾಲನೆ | ಸಂಸ್ಥೆ ಮುಖ್ಯಸ್ಥರಿಗೆ ಸಸಿಗಳ ಪೋಷಣೆ ಹೊಣೆ

CHITRADURGA NEWS | 30 MAY 2024
ಚಿತ್ರದುರ್ಗ: ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಸಿಲ ಝಳಕ್ಕೆ ಜೀವರಾಶಿ ತಲ್ಲಣಿಸಿತ್ತು. ಆದರೆ ಕಳೆದ ಹದಿನೈದು ದಿನದಿಂದ ಉತ್ತಮ ಮಳೆಯಾಗಿ ಸಸ್ಯರಾಶಿಗೆ ಜೀವ ಕಳೆ ಬಂದಿದೆ. ಇಂತಹ ಸಂದರ್ಭದಲ್ಲಿ ನಗರದ ಮುರುಘ ರಾಜೇಂದ್ರ ಬೃಹನ್ಮಠದಿಂದ ಸಸಿ ನೆಡುವ ಸಪ್ತಾಹಕ್ಕೆ ಗುರುವಾರ ವಿದ್ಯುಕ್ತ ಚಾಲನೆ ನೀಡಲಾಯಿತು.
ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ ಮತ್ತು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಅಕ್ಷರಶಃ ಸಂಭ್ರಮ ಮನೆ ಮಾಡಿತ್ತು. ನಿಗಧಿತ ಸಮಯಕ್ಕೆ ಶಾಲಾ-ಕಾಲೇಜುಗಳ ಸಿಬ್ಬಂದಿ ವಿದ್ಯಾರ್ಥಿಗಳು ಸಸಿ ನೆಟ್ಟು ಸಂಭ್ರಮಿಸಿದರು.
ಎಸ್‌ಜೆಎಂ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ‘ಯಾವುದೇ ವಿಶೇಷ ದಿನಗಳನ್ನು ಯಾಂತ್ರಿಕವಾಗಿ ಆಚರಿಸುವುದು ಒಂದು ರೀತಿಯಾದರೆ, ಪರಿಣಾಮಕಾರಿಯಾಗಿ ಆಚರಿಸಿ ಅದನ್ನು ಸಮಾಜಕ್ಕೆ ಕೊಡುಗೆಯಾಗುವ ರೀತಿ ಅನುಷ್ಠಾನಕ್ಕೆ ತರುವುದು ಇನ್ನೊಂದು ಬಗೆ. ಏಳು ದಿನಗಳ ಸಸಿ ನೆಡುವ ಸಪ್ತಾಹ ಕೇವಲ ಆಚರಣೆಗೆ ಸೀಮಿತವಾಗಬಾರದು’ ಎಂದರು.

ಕ್ಲಿಕ್ ಮಾಡಿ ಓದಿ: ಪತ್ರಿಕೆ ವಿತರಕರ ನಡಿಗೆ ಕೋಟೆ ನಗರಿ ಕಡೆಗೆ | ಸೆಪ್ಟೆಂಬರ್ 8 ರಂದು ರಾಜ್ಯ ಸಮ್ಮೇಳನ
‘ಈ ಆಚರಣೆ ವಿದ್ಯಾರ್ಥಿ, ಯುವ ಸಮೂಹಕ್ಕೆ ಮಾದರಿಯಾಗಬೇಕು. ಸರ್ಕಾರದ ಯಾವುದೇ ಯೋಜನೆ ಕಾರ್ಯಗತವಾಗಿ ಫಲಪ್ರದವಾಗಲು ಸಾರ್ವಜನಿಕರ ಸಹಭಾಗಿತ್ವ ಮತ್ತು ಅನುಷ್ಠಾನ ಅಗತ್ಯ. ಕಾಲೇಜು ಆವರಣದಲ್ಲಿ ಕನಿಷ್ಠ ಒಂದು ಸಾವಿರ ಸಸಿ ನೆಡಲಾಗುತ್ತಿದೆ. ಇಲ್ಲಿರುವ ಎಲ್ಲ ಪ್ರಾಚಾರ್ಯರು ಮತ್ತು ಸಿಬ್ಬಂದಿ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದು ತಿಳಿಸಿದರು.
‘ಒಂದು ಸಾವಿರ ಸಸಿಗಳ ಪೋಷಣೆಯ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೆ ಮಾಡಿಕೊಳ್ಳಬೇಕು. ಮುಖ್ಯಸ್ಥರು ಕಾಲೇಜಿನ ಒಳಗೆ ಹೆಜ್ಜೆ ಇಡುವ ಮುನ್ನ ಗಿಡಗಳನ್ನು ಒಮ್ಮೆ ನೋಡಿ ಆಮೇಲೆ ಒಳಗೆ ಹೋಗಬೇಕು’ ಎಂದು ಸಲಹೆ ನೀಡಿದರು.
ದಾವಣಗೆರೆ ವಿರಕ್ತ ಮಠ ಹಾಗೂ ಶಿವಯೋಗಾಶ್ರಮದ ಬಸವಪ್ರಭು ಸ್ವಾಮೀಜಿ ಮಾತನಾಡಿ,‘ಬೀದರ್, ಗುಲ್ಬರ್ಗ, ಬಳ್ಳಾರಿ, ರಾಯಚೂರು ಭಾಗದಲ್ಲಿ ಅತಿಯಾದ ತಾಪಮಾನ ಆಗುತ್ತದೆ ಅಂತ ತಿಳಿದಿದ್ದ ಮಧ್ಯ ಕರ್ನಾಟಕದವರಿಗೆ ಈ ಬಾರಿ ಬಿಸಿಲಿನ ಅನುಭವ ಆಗಿದೆ. ನಾವು ದಿನದ 24 ಗಂಟೆಯೂ ಸಹ ಪರಿಸರ ಜಾಗೃತಿ ಅಭಿಯಾನದ ಕಡೆಗೆ ಮುಖ ಮಾಡಿದರು ಕಡಿಮೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ
‘ಅಭಿವೃದ್ಧಿ ಹೆಸರಲ್ಲಿ ಪರಿಸರ ಹಾಳು ಮಾಡುವಂತಹ ಕ್ರಮಕ್ಕೆ ಕಡಿವಾಣ ಹಾಕಿ ಪರಿಸರಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವತ್ತ ನಮ್ಮ ಚಿತ್ತ ಹರಿಯಬೇಕು .ಆಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ | ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ
ಶಿವಶರಣ ಮಾದರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮಿಜಿ ಮಾತನಾಡಿ, ‘ಈ ಪರಿಸರ ದಿನ ಆಗಲಿ ಅಥವಾ ವನಮಹೋತ್ಸವ ಆಗಿರಬಹುದು, ಎಲ್ಲರ ಸಹಭಾಗಿತ್ವದಿಂದ ನಡೆಯಬೇಕು. ಈಗಿನ ಪರಿಸರದ ಗರಿಷ್ಠ ತಾಪಮಾನ ಕೇವಲ ನಮ್ಮ ದೇಶಕ್ಕಷ್ಟೇ ಅಲ್ಲ, ಇಡೀ ಜಗತ್ತನ್ನು ಆವರಿಸಿದೆ. ಇದರ ವ್ಯತ್ಯಯದಿಂದ ಋತುಮಾನ ಆಧರಿಸಿ ಬರಬೇಕಾದ ಮಳೆಗಳು ಹದ ತಪ್ಪಿ ಅಲ್ಲಿ ಬರಬೇಕಾದ ಮಳೆ ಇಲ್ಲಿ, ಇಲ್ಲಿ ಬರುವ ಮಳೆ ಮತ್ತೆಲ್ಲೋ ಬರುವಂತಹ ವಾತಾವರಣ ಸೃಷ್ಟಿ ಆಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಅಭಿವೃದ್ಧಿ ಹೆಸರಲ್ಲಿ ನಗರೀಕರಣ ಹೆಚ್ಚಾಗಿದೆ. ಅಮೂಲ್ಯ ಸಸ್ಯ ಸಂಪತ್ತು ಹಾಳಾಗಿ ಕಾಂಕ್ರೀಟ್ ಕಾಡು ತಲೆ ಎತ್ತಿ ಬೆಳೆದಿರುವುದು ಅನಾರೋಗ್ಯಕರ ಬೆಳವಣಿಗೆಗೆ ಒಂದು ನಿದರ್ಶನ. ಒಂದು ವರದಿಯ ಸಮೀಕ್ಷೆ ಪ್ರಕಾರ ರೈತರು ತಮ್ಮ ಹೊಲದಲ್ಲಿನ ಬದುವಿನಲ್ಲಿ ಇರುವ ಸುಮಾರು 50 ಲಕ್ಷಕ್ಕೂ ಹೆಚ್ಚು ಗಿಡಮರಗಳನ್ನು ಕಡಿದು ಹಾಕಿರುವ ಘಟನೆ ಆತಂಕ’ ಎಂದು ವಿಷಾದಿಸಿದರು.
‘ಗಿಡ ಮರ ಪೋಷಣೆ ಮಾಡೋದು ಮನುಷ್ಯನ ಒಳಿತಿಗಾಗಿ. ಆದರೆ ಗಿಡ ಮರಗಳ ಉಪಯೋಗಕ್ಕೆ ಅಲ್ಲ ಎಂಬುದನ್ನು ಅರಿತು ನಾವು ಆರೋಗ್ಯಕರ ಪರಿಸರದತ್ತ ಹೆಜ್ಜೆ ಹಾಕಬೇಕಾಗಿದೆ. ಈ ಪರಿಸರ ಕಾಳಜಿಯ ಕಾರ್ಯಕ್ರಮಗಳು ಕೇವಲ ಸಾಂಕೇತಿಕವಾಗಿರದೇ ಅದು ಪ್ರತಿಯೊಬ್ಬರ ಮನೆ ಮತ್ತು ಮನಸ್ಸಿನಲ್ಲಿ ಪ್ರಕೃತಿ ಧರ್ಮದ ಪಾಲನೆಯ ಧರ್ಮ ಆದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ’ ಎಂದು ಹೇಳಿದರು.
ಮುರುಘಾಮಠದ ಖಾಸಾ ಗುರುಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಆಡಳಿತ ಮಂಡಳಿಯ ಲೆಕ್ಕ ಪರಿಶೋಧನಾ ಸಮಿತಿ ಸದಸ್ಯ ಎಸ್.ಎನ್.ಚಂದ್ರಶೇಖರ್, ಪ್ರಾಂಶುಪಾಲರಾದ ಪಿ.ಬಿ.ಭರತ್, ನಾಗರಾಜ್, ಸವಿತಾ, ಎಸ್.ವಿ.ರವಿಶಂಕರ್, ಬೋರಯ್ಯ, ಅಧೀಕ್ಷಕ ಪ್ರಕಾಶ್, ಎಚ್‌ಡಿಎಫ್‌ಸಿ ಬ್ಯಾಂಕಿನ ಮುಖ್ಯಸ್ಥ ಕೆ.ಪ್ರಕಾಶ್ ಗಡಿಯಾರ್ ಇದ್ದರು.
