ಹೊಸದುರ್ಗ
ಶ್ರೀಲಕ್ಷ್ಮೀದೇವಿ ಜಾತ್ರೆಗೆ 23 ವರ್ಷಗಳ ನಂತರ ಅಪ್ಪಣೆ

CHITRADURGA NEWS | 15 APRIL 2024
ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಹೋಬಳಿಯಲ್ಲಿರುವ ಹರೇನಹಳ್ಳಿ ಶ್ರೀ ಲಕ್ಷ್ಮೀದೇವಿ ತಾಯಿ ಜಾತ್ರೆ ನಡೆಸಲು ಬರೋಬ್ಬರಿ 23 ವರ್ಷಗಳ ನಂತರ ಅನುಮತಿ ನೀಡಿರುವ ಅಪರೂಪದ ಸುದ್ದಿ ಇದಾಗಿದೆ.
ಗ್ರಾಮದಲ್ಲಿ ನೆಲೆಸಿರುವ ಶ್ರೀ ಲಕ್ಷ್ಮೀದೇವಿ ಜಾತ್ರೆ 2001ರಲ್ಲಿ ನಡೆದಿತ್ತು. ಇದಾದ ನಂತರ ಜಾತ್ರೆಗೆ ಅಪ್ಪಣೆ ದೊರೆತಿರಲಿಲ್ಲ. ಈಚೆಗೆ ಗ್ರಾಮದ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವರ ಪೂಜೆ ಮಾಡಿ ಅಪ್ಪಣೆ ಕೇಳಿದಾಗ ದೇವಿಯ ಜಾತ್ರೆ ನಡೆಸಲು ಅನುಮತಿ ದೊರೆತಿದೆ.
ಇದನ್ನೂ ಓದಿ: ಶ್ರೀರಾಮನ ಕೃಪೆಯಿಂದ ಬದಲಾಗಲಿದೆ ಅದೃಷ್ಟ | ಇನ್ಮುಂದೆ ಈ ರಾಶಿಯವರಿಗೆ ಎಲ್ಲವೂ ಶುಭ
ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನೆಲೆನಿಂತಿರುವ ಶ್ರೀ ಲಕ್ಷ್ಮೀದೇವಿ ತಾಯಿ ಜಾತ್ರೆಗೆ ಅಪ್ಪಣೆ ದೊರೆತ ಹಿನ್ನೆಲೆಯಲ್ಲಿ ಹರೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಏಪ್ರಿಲ್ 18 ಗುರುವಾರ ದೇವಿಯ ನಡೆಮುಡಿ ಮತ್ತು ಹೊಳೆಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 6 ಗಂಟೆಗೆ ಹರೇನಹಳ್ಳಿ ಶ್ರೀ ಲಕ್ಷ್ಮೀರಂಗನಾಥಸ್ವಾಮಿ, ಮಾವಿನಕಣಿವೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ, ಕರಿಯಮ್ಮ ದೇವಿ, ಚಿಕ್ಕಹುಲ್ಲೇನಹಳ್ಳಿ ಶ್ರೀ ವರಬೇಟೆ ಲಕ್ಷ್ಮೀರಂಗನಾಥಸ್ವಾಮಿ, ಬೇವಿನಹಳ್ಳಮ್ಮ ದೇವಿಯರ ಆಗಮನ ಮತ್ತು ಕೂಡುಭೇಟಿ ನಡೆಯಲಿದೆ. ಈ ಎಲ್ಲಾ ದೇವರುಗಳು ಸೇರಿ ರಾತ್ರಿ 10 ಗಂಟೆಗೆ ವಜ್ರಕ್ಕೆ ತೆರಳಿ ಗಂಗಾ ಪೂಜೆ ನೆರವೇರಲಿದೆ.
ಇದನ್ನೂ ಓದಿ: ಹಿರಿಯೂರಿನಲ್ಲಿ ಗೋವಿಂದ ಎಂ.ಕಾರಜೋಳ ರೋಡ್ ಶೋ | ಕಾರ್ಯಕರ್ತರಲ್ಲಿ ಹೆಚ್ಚಿದ ಉತ್ಸಾಹ
ಏಪ್ರಿಲ್ 19 ರಂದು ಬೆಳಗಿನ ಜಾವ 4 ಗಂಟೆಗೆ ಚಿಕ್ಕಹುಲ್ಲೇನಹಳ್ಳಿಯ ಶ್ರೀ ಲಕ್ಷ್ಮೀದೇವಿಯವರ ದೇವಸ್ಥಾನದಿಂದ ಹೊಳೆಪೂಜೆ ಮತ್ತು ನಡೆಮುಡಿಯಿಂದ ಹರೇನಹಳ್ಳಿ ಗ್ರಾಮದ ಲಕ್ಷ್ಮೀದೇವಸ್ಥಾನಕ್ಕೆ ಆಗಮನವಾಗಲಿದೆ. ನಂತರ ಪೂಣ್ಯಮ ಪಂಚಕಳಶಾಭಿಷೇಕ, ಕುಂಕುಮಾರ್ಚನೆ, ಹೋಮ, ಶಾಂತಿಹೋಮ ಮತ್ತಿತರೆ ಪೂಜಾ ಕಾರ್ಯಗಳು ಜರುಗಲಿವೆ. ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸದುರ್ಗ ಆರ್.ಪಿ.ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ
