
ಚಿತ್ರದುರ್ಗನ್ಯೂಸ್.ಕಾಂ
ಜಿಲ್ಲೆಯ ರೈತರನ್ನು ಈಗಾಗಲೇ ಕಂಗೆಡಿಸಿರುವ ಮಳೆರಾಯ, ಈಗ ಧೋ ಎಂದು ಸುರಿದು ಸಂಕಟಕ್ಕೆ ಸಿಲುಕಿಸುತ್ತಿದ್ದಾನೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಶುಕ್ರವಾರ ಮಧ್ಯಾಹ್ನ ಹಾಗೂ ರಾತ್ರಿ ಸುರಿದ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಪರದಾಡುವ ಸ್ಥಿತಿ ನಿರ್ಮಾಣವಾದರೆ, ರಸ್ತೆಗಳೆಲ್ಲಾ ನದಿಗಳಂತಾಗಿ ವಾಹನ ಸವಾರರು ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು ಒಂದೂವರೆ ಗಂಟೆ ಕಾಲ ಬಿಟ್ಟೂ ಬಿಡದೇ ಸುರಿದ ಮಳೆಯಿಂದ ವಾಹನ ಸವಾರರು, ಮನೆಯಿಂದ ಹೊರಗೆ ಹೋಗಿದ್ದವರು ಮನೆ ಸೇರುವುದು ಕಷ್ಟವಾಗಿತ್ತು. ಇನ್ನೇನು ಮಳೆ ಬಿಟ್ಟಿದೆ ಮನೆಗೆ ಹೋಗೋಣ ಎಂದು ಹೊರಟಗರೆ ರಸ್ತೆಗಳೆಲ್ಲಾ ನದಿಗಳಾಗಿದ್ದವು. ರಸ್ತೆಯಲ್ಲಿ ತುಂಬಿದ್ದ ನೀರಿನಿಂದ ತುರುವನೂರು ರಸ್ತೆ, ರೈಲ್ವೇ ಅಂಡರ್ಪಾಸ್, ಜೆಸಿಆರ್ ಸರ್ವೀಸ್ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ರಾತ್ರಿ ವಾಹನ ಸವಾರರು ಅಕ್ಷರಶಃ ಪರದಾಡಿದರು.
ಮುಂಗಾರು ಹಂಗಾಮು ವಿಳಂಬವಾಗಿ ಶುರುವಾಗಿದ್ದರಿಂದ ಬಿತ್ತನೆ ಕೂಡ ತಡವಾಗಿತ್ತು. ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ತೀರಾ ಕಡಿಮೆ ಮಳೆಯಾಗಿತ್ತು. ಶೇಂಗಾ, ಮೆಕ್ಕೆಜೋಳ, ರಾಗಿ ಸೇರಿ ಹಲವು ಬೆಳೆಗಳು ಬಾಡಿದ್ದವು. ಗುರುವಾರ ರಾತ್ರಿಯಿಂದ ಜಿಲ್ಲೆಯ ಕೆಲವೆಡೆ ಮಳೆ ಸುರಿಯುತ್ತಿರುವುದು ರೈತರಲ್ಲಿ ಭರವಸೆ ಮೂಡಿಸಿದೆ.
ಮಲ್ಲಾಪುರ ಕೆರೆ ಅವಾಂತರ, ಮನೆಗಳಿಗೆ ನೀರು:
ಇನ್ನೂ ನಗರಕ್ಕೆ ಹೊಂದಿಕೊಂಡಿರುವ ಮಲ್ಲಾಪುರ ಕೆರೆಯ ಬಳಿ ನೀರು ಏಕಾಏಕಿ ಹೆಚ್ಚಾಗಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ರಾತ್ರಿ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರ ಹಾಕುವುದೇ ಸವಾಲಾಗಿತ್ತು. ಚಿತ್ರದುರ್ಗ ನಗರದ ನೀರೆಲ್ಲಾ ಮಲ್ಲಾಪುರ ಕೆರೆಗೆ ಸೇರುವುದರಿಂದ ಇಡೀ ಕೆರೆ ಕೆಟ್ಟ ವಾಸನೆ ಬರುತ್ತಿತ್ತು. ಇಲ್ಲಿನ ನಿವಾಸಿಗಳು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದರು.
ಇನ್ನೂ ಪಿಳ್ಳೇಕೆರನಹಳ್ಳಿ ಸಮೀಪದ ತೋಟಗಳಿಗೂ ನೀರು ನುಗ್ಗುತ್ತಿದ್ದು, ತೋಟಗಾರಿಕೆ ಬೆಳೆಗಳಿಗೆ ತೊಂದರೆಯಾಗಿದೆ.
ಈ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಅವರ ಸೂಚನೆಯಂತೆ ಜೆಸಿಬಿ ಯಂತ್ರಗಳ ಮೂಲಕ ಕೆರೆಯ ದಡ ಹಾಗೂ ಸುತ್ತಮುತ್ತಾ ಇರುವ ಗಿಡಗೆಂಟಗಳನ್ನು ತೆರವು ಮಾಡುವ ಕೆಲಸ ನಡೆಯಿತು.
ಚಿತ್ರದುರ್ಗದಲ್ಲಿ 57.6 ಮಿ.ಮೀ ಮಳೆ
ಶುಕ್ರವಾರ ರಾತ್ರಿ ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 57.6 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ. ಚಿತ್ರದುರ್ಗ-2 ರಲ್ಲಿ 44.6 ಮಿ.ಮೀ, ತುರುವನೂರು 5.4 ಮಿ.ಮೀ, ಐನಹಳ್ಳಿ 6.4 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ರಾಂಪುರದಲ್ಲಿ 24.1 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿ 5.4 ಮಿ.ಮೀ, ಹೆಚ್.ಡಿ.ಪುರ 20.8 ಮಿ.ಮೀ, ತಾಳ್ಯ 24.4 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 10.4 ಮಿ.ಮೀ, ಬಾಗೂರು 18.2 ಮಿ.ಮೀ, ಶ್ರೀರಾಂಪುರ 12 ಮಿ.ಮೀ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 2 ಮಿ.ಮೀ, ನಾಯಕನಹಟ್ಟಿಯಲ್ಲಿ 14.2 ಮಿ.ಮೀ ಮಳೆಯಾಗಿದೆ.
ಜಿಲ್ಲೆಯಾದ್ಯಂತ 7 ಮನೆಗಳಿಗೆ ಹಾನಿ:
ಶುಕ್ರವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ 7 ಮನೆಗಳು ಭಾಗಶಃ ಹಾನಿಯಾಗಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 3 ಮನೆಗಳು, ಹಿರಿಯೂರು ತಾಲ್ಲೂಕಿನಲ್ಲಿ 3 ಮನೆಗಳು ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
