CHITRADURGA NEWS | 06 APRIL 2026
ಚಿತ್ರದುರ್ಗ: ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿರುವ ಮರ-ಗಿಡಗಳನ್ನು ಕಡಿದು ಅಲ್ಲಿ ಕಟ್ಟಡಗಳನ್ನು ಕಟ್ಟಲು ಅಧಿಕಾರಿಗಳು ಉದ್ಧಟತನ ತೋರಿದರೆ ಒಂದು ಇಟ್ಟಿಗೆ ಇಡಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಎಚ್ಚರಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆಯಲ್ಲಿ ಕೊಂಚ ಏರಿಕೆ
ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗ ಹಾಗೂ ತೋಟಗಾರಿಕೆ ಇಲಾಖೆ ಆವರಣದಲ್ಲಿ ಮರ-ಗಿಡಗಳನ್ನು ಕಡಿದು ಪರಿಸರ ನಾಶಪಡಿಸುತ್ತಿರುವುದರ ವಿರುದ್ದ ಜಿಲ್ಲೆಯ ವಿವಿಧ ಪರಿಸರ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಸೋಮವಾರ ನಡೆದ ಒಂದು ದಿನದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ 200 ಕ್ಕೂ ಹೆಚ್ಚು ಮರ-ಗಿಡಗಳನ್ನು ಕಡಿದು ಮಹಿಳಾ ಕಾಲೇಜು ಕಟ್ಟಡ ಹಾಗೂ ತೋಟಗಾರಿಕೆ ಇಲಾಖೆ ಆವರಣದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಗಿಡ-ಮರಗಳ ಮಾರಣ ಹೋಮ ನಡೆಸಿ ಜಿಲ್ಲಾಧಿಕಾರಿ ಕಚೇರಿ ನೂತನ ಕಟ್ಟಡ ಕಟ್ಟಡ ಕಟ್ಟಲು ಹೊರಟಿರುವುದನ್ನು ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ವಿರೋಧಿಸುತ್ತಿರುವುದನ್ನು ಲೆಕ್ಕಿಸದೆ ಅಧಿಕಾರಿಗಳು ಹದ್ದುಮೀರಿ ವರ್ತಿಸುತ್ತಿರುವುದನ್ನು ಸಹಿಸುವುದಿಲ್ಲ.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ತರಲಾಗಿದೆ. ಯಾರಿಗೂ ಕಿಮ್ಮತ್ತು ನೀಡುತ್ತಿಲ್ಲ ಎಂದು ಕಿಡಿ ಕಾರಿದರು.
ಇದನ್ನೂ ಓದಿ: 114 ಕೋಟಿ ವೆಚ್ಚದಲ್ಲಿ 180 ಹಾಸಿಗೆಗಳ ಸುಸಜ್ಜಿತ ಹೊಸ ಆಸ್ಪತ್ರೆ | ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ
ಸರ್ಕಾರಿ ವಿಜ್ಞಾನ ಕಾಲೇಜು ಎದುರು ಮಹಿಳಾ ಕಾಲೇಜು ನಿರ್ಮಾಣಕ್ಕೆ ಸರ್ಕಾರದಿಂದ ಆದೇಶಿಸಿ 20 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಆದರೆ, ಹಣ ಇನ್ನು ಬಿಡುಗಡೆಯಾಗಿಲ್ಲ. ನಗರಸಭೆಗೆ ಸೇರಿದ ಜಾಗ ಎಂದು ತಡೆಹಿಡಿಯಲಾಗಿದೆ. ಉನ್ನತ ಶಿಕ್ಷಣ ಇಲಾಖೆಗೆ ಜಾಗವನ್ನು ಸೇರಿಸಿ ಮಹಿಳಾ ಕಾಲೇಜು ನಿರ್ಮಿಸುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ, ಇಲ್ಲಿ ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕಿಯರ ವಿಶ್ರಾಂತಿಗಾಗಿ ಲಾಂಜ್ ನಿರ್ಮಿಸಲು ನಿರ್ಣಯಿಸಲಾಗಿದೆ.
ಕಾಲೇಜು ಕಟ್ಟಡ ಒಂದು ಕಡೆ ಮತ್ತೊಂದು ಕಡೆ ಲಾಂಜ್ ಇರಬಾರದೆಂಬ ನಿಯಮವಿದೆ. ಯಾರ ಮಾತಿಗೂ ಮನ್ನಣೆ ನೀಡದೆ ತಡೆಯಲು ಬಂದವರ ಮೇಲೆ ಕೇಸ್ ದಾಖಲಿಸಿ ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ. ಅಧಿಕಾರಿಗಳ ಹಠಮಾರಿ ಧೋರಣೆ ಏಕೆ ಎಂದು ಕೆ.ಎಸ್.ನವೀನ್ ಖಾರವಾಗಿ ಪ್ರಶ್ನಿಸಿದರು.
ತೋಟಗಾರಿಕೆ ಇಲಾಖೆ ಪಕ್ಕದಲ್ಲಿರುವ ಹಳೆಯ ಕ್ವಾಟ್ರಸ್‍ಗಳನ್ನು ಕೆಡವಿ ಪಕ್ಕದಲ್ಲೆ ಇರುವ ವಿಶಾಲವಾದ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ನೂತನ ಕಟ್ಟಡ ಕಟ್ಟಬಹುದಲ್ಲವೇ. ಇವೆಲ್ಲಾ ಬಿಟ್ಟು ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿರುವ ಆರು ಕಾಲು ಎಕರೆ ಜಾಗದ ಮೇಲೆ ಅಧಿಕಾರಿಗಳಿಗೆ ಏಕೆ ಕಣ್ಣು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಏಪ್ರಿಲ್ 06 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
ಜಿಲ್ಲೆಯಲ್ಲಿ ಶೇ.33 ರಷ್ಟು ಅರಣ್ಯವಿರಬೇಕು. ಕೇವಲ ಶೇ.10 ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಇಂತಹ ಬರ ಪೀಡಿತ ಪ್ರದೇಶದಲ್ಲಿ ಇರುವ ಗಿಡ-ಮರಗಳನ್ನು ಕಡಿದರೆ ವಾತಾವರಣದಲ್ಲಿ ಏರುಪೇರಾಗಿ ತಾಪಮಾನ ಹೆಚ್ಚಿ ಸಕಲ ಜೀವರಾಶಿಗಳಿಗೂ ತೊಂದರೆಯಾಗುತ್ತದೆ ಎನ್ನುವುದನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಪರಿಸರವನ್ನು ಉಳಿಸಬೇಕಿದೆ. ಇಲ್ಲವಾದಲ್ಲಿ ಬೀದಿ ಹೋರಾಟಕ್ಕೆ ಸಿದ್ದವೆಂದು ಎಚ್ಚರಿಸಿದರು.
ಗಿಡ-ಮರ ಕಡಿದು ಪರಿಸರ ನಾಶ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ :
ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಹಾಗೂ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿರುವ ಗಿಡ-ಮರಗಳನ್ನು ಕಡಿದು ಪರಿಸರ ನಾಶ ಮಾಡುವುದನ್ನು ವಿರೋಧಿಸಿ ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳವರು ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಧರಣಿ ನಡೆಸಿ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಲಿಖಿತಾ ಆತ್ಮಹತ್ಯೆ ತನಿಖೆ ನಡೆಸಿ ನ್ಯಾಯ ಕೊಡಿಸಲು ಎಬಿವಿಪಿ ಒತ್ತಾಯ
ಸರ್ಕಾರಿ ವಿಜ್ಞಾನ ಕಾಲೇಜು ಎದುರಿನ ಆವರಣದಲ್ಲಿ ಮಹಿಳಾ ಕಾಲೇಜು ಕಟ್ಟುವುದಕ್ಕಾಗಿ ಕಡಿಯಲಾಗಿರುವ ಮರದ ಬೇರೊಂದನ್ನು ಧರಣಿಯ ಸ್ಥಳದಲ್ಲಿರಿಸಿ ಹುತಾತ್ಮ ಮರವೆಂದು ಪೂಜಿಸಿ ಪುಷ್ಪ ನಮನ ಗೈಯುವ ಮೂಲಕ ಗಿಡ-ಮರಗಳನ್ನು ಕಡಿಯದಂತೆ ಅಧಿಕಾರಿಗಳನ್ನು ಒತ್ತಾಯಿಸಿ ಧರಣಿನಿರತರು ಮನವಿ ಸಲ್ಲಿಸಿದರು.
ಪರಿಸರವಾದಿ ಹೆಚ್.ಎಸ್.ಕೆ.ಸ್ವಾಮಿ, ಕವಿತಾರೆಡ್ಡಿ, ಇನ್ನರ್‍ವೀಲ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷೆ ಜಾನ ಚಂದ್ರಕಲಾ, ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ನ್ಯಾಯವಾದಿ ದಿಲ್‍ಶಾದ್, ಅಪರಾಧಶಾಸ್ತ್ರ ವಿಶ್ರಾಂತ ಪ್ರಾಧ್ಯಾಪಕ ಡಾ.ನಟರಾಜ್, ನಾಗರಾಜ್‍ಬೇದ್ರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
