
ಚಿತ್ರದುರ್ಗ ನ್ಯೂಸ್.ಕಾಂ
ಐತಿಹಾಸಿಕ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವ ನಾಯಕನಹಟ್ಟಿಯಲ್ಲಿ ಶುಕ್ರವಾರ ವೈಭವದಿಂದ ನೆರವೇರಿತು. ಸಂಪ್ರದಾಯದಂತೆ ರಥವನ್ನು ಬಣ್ಣ ಬಣ್ಣದ ಬಾವುಟಗಳಿಂದ ಸಿಂಗರಿಸಲಾಗಿತ್ತು.
ಮಧ್ಯಾಹ್ನ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸುತ್ತಿದ್ದಂತೆ ಜಯ ಘೋಷ ಮೊಳಗಿದವು. ರಥ ಸಾಗುವ ದಾರಿಯುದ್ದಕ್ಕೂ ಮಹಿಳೆಯರು ಮಕ್ಕಳು ಬಾಳೆಹಣ್ಣು, ಕಾಳುಮೆಣಸು, ಬೆಲ್ಲದ ಚೂರನ್ನು ಅರ್ಪಿಸಿ ಹರಕೆ ಸಲ್ಲಿಸಿದರು. ಜನಪದ ಕಲಾತಂಡಗಳಾದ ಕೋಲಾಟ, ಬೊಂಬೆ ಕುಣಿತ, ಪುರಂತರ ವೀರನಾಟ್ಯ, ವೀರಭದ್ರನ ಕುಣಿತ, ವೀರಗಾಸೆ ನೃತ್ಯ ಉತ್ಸವಕ್ಕೆ ಮೆರಗು ತಂದವು.
ಇದನ್ನೂ ಓದಿ: ಕೌಟುಂಬಿಕ ಕಲಹ; ನದಿಗೆ ಹಾರಿ ಆತ್ಮಹತ್ಯೆ
ಹರಕೆ ಹೊತ್ತ ನೂರಾರು ಯುವಕರು ಬೆಳಿಗ್ಗೆಯಿಂದಲೇ ಉಪವಾಸ ವ್ರತ ಕೈಗೊಂಡಿದ್ದರು. ಪಂಚಲೋಹದ ಚೂಪಾದ ಕಡ್ಡಿಗಳನ್ನು ಬಾಯಿಗೆ ಸಿಕ್ಕಿಸಿಕೊಂಡು ಆಕರ್ಷಕ ವೀರಭದ್ರ ಕುಣಿತ ಪ್ರದರ್ಶಿಸಿದರು. ಸಂಜೆ ದೇವರನ್ನು ಗುಡಿದುಂಬಿಸಲಾಯಿತು.
ಕಾರ್ತಿಕ ಮಾಸದ ಪ್ರಯುಕ್ತ ಗುರುವಾರ ಸಂಜೆ ಲಕ್ಷದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಸಂಜೆ 6.30ಕ್ಕೆ ಆಕಾಶ ದೀಪವನ್ನು ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ದೀಪೋತ್ಸವದಲ್ಲಿ ಸುಮಾರು 1ಲಕ್ಷ ದೀಪಗಳನ್ನು ಭಕ್ತರು ಬೆಳಗಿಸಿದರು. ತಲಾ 108 ಹಣತೆಗಳಿರುವ 240 ದೀಪಸ್ತಂಭಗಳನ್ನು ಈ ಭಾರಿ ವ್ಯವಸ್ಥೆ ಮಾಡಲಾಗಿತ್ತು.
ಒಳಮಠ, ಹೊರಮಠ, ಈಶ್ವರ ದೇವಾಲಯ, ಏಕಾಂತಮಠದ ಗೋಪುರಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ರಾತ್ರಿ 8ಕ್ಕೆ ದೇವಾಲಯದ ಆವರಣದಲ್ಲಿ ಬೆಳ್ಳಿ ರಥೋತ್ಸವ ನೆರವೇರಿಸಲಾಯಿತು. ದೇವಾಲಯದ ಮುಂಭಾಗದಲ್ಲಿ ಚಳ್ಳಕೆರೆಯ ನೃತ್ಯನಿಕೇತನ ಶಾಲೆಯಿಂದ ಮಕ್ಕಳ ಆಕರ್ಷಕ ಭರತನಾಟ್ಯ ಪ್ರದರ್ಶಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
