ಮುಖ್ಯ ಸುದ್ದಿ
ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯ ರಥೋತ್ಸವ ವೈಭವ | ರಂಗಪ್ಪನಿಗೆ ಪೂಜೆ

CHITRADURGA NEWS | 24 APRIL 2024
ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಲೋಕದೊಳಲಿನಲ್ಲಿ ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ರಥದ ಪಕ್ಕದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಜನರ ಹರ್ಷೋದ್ಗಾರದ ನಡುವೆ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ದೇವರು ರಥವೇರುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.
ರಥದ ಮೇಲೆ ಪ್ರತಿಷ್ಠಾಪಿತವಾದ ರಂಗಪ್ಪನಿಗೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಪೂರ್ವಾಭಿಮುಖವಾಗಿರುವ ರಂಗನಾಥಸ್ವಾಮಿ ಬೆಟ್ಟದ ಕಡೆಗೆ ರಥ ಎಳೆದರು. ರಥ ಚಲಿಸುವಾಗ ಭಕ್ತರು ಕಳಶಕ್ಕೆ ಬಾಳೆ ಹಣ್ಣು ತೂರಿ ಭಕ್ತಿ ಸಮರ್ಪಿಸಿದರು.

ಕೇಸರಿ ಬಣ್ಣದ ಬಟ್ಟೆ, ಬಾವುಟ, ಬಾಳೆಕಂದು, ಕಂಚಿನ ಕಳಶದಿಂದ ರಥವನ್ನು ಅಲಂಕರಿಸಲಾಗಿತ್ತು. ರಥದ ನಾಲ್ಕೂ ದಿಕ್ಕುಗಳಲ್ಲಿ ಭಾರಿ ಗಾತ್ರದ ಹೂವಿನ ಹಾರಗಳನ್ನು ಹಾಕಲಾಗಿತ್ತು. ಚಿನ್ನದ ಆಭರಣಗಳಿಂದ ಅಲಂಕರಿಸಿದ್ದ ರಂಗನಾಥ ಸ್ವಾಮಿಯನ್ನು ಛತ್ರಿ, ಚಾಮರ, ಶಬ್ದವಾದ್ಯಗಳೊಂದಿಗೆ ದೇವಾಲಯದಿಂದ ರಥಬೀದಿವರೆಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಕ್ಲಿಕ್ ಮಾಡಿ ಓದಿ: ಗಡಿ ದಾಟಿದ್ರೂ ಮೂರು ದಿನ ‘ಎಣ್ಣೆ’ ಸಿಗಲ್ಲ | ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್
ಹೊಳಲ್ಕೆರೆಯ ಭಕ್ತ ನಾಗರಾಜ್ ಅವರು ₹ 1.02 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಪಡೆದರು. ಭಕ್ತರಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ರಥಕ್ಕೆ ತೆಂಗಿನಕಾಯಿ ಸೇವೆ, ಉಯ್ಯಾಲೋತ್ಸವಗಳು ನಡೆದವು. ರಥೋತ್ಸವದ ನಂತರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಮಣೇವು, ಉರುಳುಸೇವೆ, ಪಾನಕ ಪೂಜೆ ವಸಂತೋತ್ಸವ, ದೊಡ್ಡೆಡೆ ಸೇವೆ, ಸಿಂಹೋತ್ಸವ, ಅಶ್ವ ವಾಹನ ಪಾರ್ವಟೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
