
CHITRADURGA NEWS | 13 NOVEMBER 2025
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ (ಸರ್ಕಾರಿ ವಿಜ್ಞಾನ ಕಾಲೇಜು) ಕ್ರೀಡಾಂಗನದಲ್ಲಿ ಮಾಯಾ ಲೋಕವೇ ತಲೆ ಎತ್ತಿದೆ.
ಇದು ಕಾಲೇಜು ಮೈದಾನವೇ ಎನ್ನುವುದು ಮರೆತು ಹೋಗುವಂತೆ ಆಯೋಜಕರು ಸುಂದರ ವಾತಾವರಣ ಸೃಷ್ಟಿ ಮಾಡಿದ್ದಾರೆ.

ಸ್ವದೇಶಿ ಜಾಗರಣಾ ಮಂಚ್ ಕರ್ನಾಟಕ ವತಿಯಿಂದ ನವೆಂಬರ್ 12 ರಿಂದ 15 ರವರೆಗೆ ಸ್ವದೇಶಿ ಮೇಳ ಆಯೋಜಿಸಿದ್ದು, ಕಣ್ಮನ ಸೂರೆಗೊಳ್ಳುತ್ತಿದೆ.
ದೇಶಿ ಶೈಲಿಯ ಅಲಂಕಾರದ ಬುಟ್ಟಿಗಳು ರಸ್ತೆಯಿಂದಲೇ ನಮ್ಮನ್ನು ಆಕರ್ಷಣೆ ಮಾಡುತ್ತವೆ.

ಮೈದಾನ ಪ್ರವೇಶ ಮಾಡುತ್ತಲೇ ಬೃಹದಾಕಾರದ ಸುಂದರ ರಂಗವಲ್ಲಿಯ ಮುಂಭಾಗದಲ್ಲಿ ಭಾರತ ಮಾತೆಯ ಭವ್ಯ ಪ್ರತಿರೂಪ ಸೆಳೆಯುತ್ತದೆ. ಅಲ್ಲಿ ಕೈ ಮುಗಿದು ಎಡಕ್ಕೆ ತಿರುಗಿದರೆ ದೇಸಿ ತಳಿಯ ಹತ್ತಾರು ಗೋವುಗಳ ದರ್ಶನ ಸಿಗುತ್ತದೆ.

ಮುಂದೆ 200 ಮಳಿಗೆಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಬೃಹತ್ ಟೆಂಟ್ ಪ್ರವೇಶ ದ್ವಾರ. ಪ್ರವೇಶ ದ್ವಾರದ ಒಂದು ಬದಿಯಲ್ಲಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳು ಮತ್ತೊಂದು ಬದಿಯಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ದಿವ್ಯ ದರ್ಶನವಾಗುತ್ತದೆ.

ಇಲ್ಲೇ ಸ್ವಲ್ಪ ಮುಂಭಾಗದ ಸಣ್ಣ ಗುಡಿಸಲಿನಾಕಾರದ ಜಾಗದಲ್ಲಿ ಸರಳತೆಯ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಗಳ ದರ್ಶನವೂ ಸಿಗುತ್ತದೆ.
ಸಿದ್ದೇಶ್ವರ ಶ್ರೀಗಳ ದರ್ಶನದ ಜೊತೆಗೆ ಅಲ್ಲೇ ಇರುವ ರಾಗಿ ಕಣ ಅಥವಾ ರೈತರು ಸುಗ್ಗಿ ಕಾಲದಲ್ಲಿ ಬಳಸುವ ಒಕ್ಕಣೆ ಕಣದ ಸುಂದರ ದೃಶ್ಯವಿದೆ.

ಟೆಂಟ್ ಒಳಗೆ ಪ್ರವೇಶಿಸುತ್ತಿದ್ದಂತೆ ನೂರಾರು ಮಳಿಗೆಗಳಲ್ಲಿ ತರೆಹೇವಾರಿ ಉತ್ಪನ್ನಗಳ ದರ್ಶನ, ಟೆಂಟ್ ಮೇಲೆ ಬೀಸುವ ಬೃಹತ್ ಗಾತ್ರದ ಫ್ಯಾನುಗಳು ಹೊಸ ಲೋಕಕ್ಕೆ ಕರೆದೊಯ್ಯುತ್ತವೆ.

ಏಳು ಸುತ್ತಿನ ಕೋಟೆಯಂತೆ ಭಾಸವಾಗುವ ಟೆಂಟ್ ಒಳಗಿನಿಂದ ಹೊರಗೆ ಬರುತ್ತಿದ್ದಂತೆ ಬಲ ಬದಿಗೆ ಗುಡಿಸಲು ನಿರ್ಮಾಣ ಮಾಡಿದ್ದು, ಅದರ ಮುಂಭಾಗದಲ್ಲಿ ಕಾಂತಾರ ಸಿನಿಮಾದಲ್ಲಿ ರಿಷಬ್ ಧರಿಸಿದ್ದ ದೈವದ ಪ್ರತಿಕೃತಿ ನಿರ್ಮಿಸಿದ್ದು, ಆಕರ್ಷಣೆಯ ಕೇಂದ್ರವಾಗಿದೆ.

ಇಲ್ಲಿಂದ ನಾಲ್ಕೆ ಹೆಜ್ಜೆ ಮುಂದೆ ಸಾಗಿದರೆ ಆಟೋಟಗಳಿಗೆ ಮೀಸಲಿಟ್ಟ ಜಾಗ, ಅಲ್ಲಿ ಆಟವಾಡುವ ಮಕ್ಕಳ ಪಡೆ ಸಿಗುತ್ತದೆ.
ಆಟದ ಮೈದಾನದ ಎದುರು ಭಾಗದಲ್ಲಿ ವಿಶಾಲವಾದ ವೇದಿಕೆಯಿದ್ದು, ದಿನವೂ ಸಾಂಸ್ಕೃತಿಕ ಕಾರ್ಯಕ್ರಮ, ಚಿಂತನ, ಮಂಥನಕ್ಕೆ ವೇದಿಕೆ ಕಲ್ಪಿಸಲಾಗಿದೆ.

ವೇದಿಕೆಯ ಎಡ ಭಾಗದಲ್ಲಿ ಕೌಶಲಗಳ ತರಬೇತಿಗೆ ಕಾರ್ಯಾಗಾರ ನಿರ್ಮಾಣ, ಅದರ ಪಕ್ಕದಲ್ಲಿ ಅತಿಥಿಗಳ ಉಪಚಾರ, ವಿಶ್ರಾಂತಿಗೆ ಗ್ರೀನ್‌ಹೌಸ್ ಇದೆ.
ಎಲ್ಲವನ್ನೂ ನೋಡಿ ಮುಗಿದ ಮೇಲೆ ವೇದಿಕೆ ಬಲ ಭಾಗದಲ್ಲಿ ಎಲ್ಲರ ಅಚ್ಚುಮೆಚ್ಚಿನ ಫುಡ್ ಕಾರ್ನರ್ ಇದೆ.

ರಾಜ್ಯದ ಬೇರೆ ಬೇರೆ ಭಾಗದ ದೇಸಿ ತಳಿಯ ಆಹಾರಗಳು ಘಮ್ ಎಂದು ನಮ್ಮನ್ನು ಆಹ್ವಾನಿಸುತ್ತವೆ.
ಯಾವುದೋ ರೆಸಾರ್ಟ್‌ನಲ್ಲಿ ಕುಳಿತಂತೆ ಭಾಸವಾಗುವ ಈ ಭಾಗದಲ್ಲಿ ಸಂಜೆ ಹೊತ್ತಿನ ಸೂರ್ಯಾಸ್ತ ನೋಡುತ್ತಾ, ಸ್ನೇಹಿತರು, ಕುಟುಂಬದ ಜೊತೆಗೆ ಇಷ್ಟವಾದ ತಿಂಡಿ, ತಿನಿಸು, ಐಸ್ಕ್ರೀಂ, ಜ್ಯೂಸ್ ಕುಡಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು..
ಇಷ್ಟೆಲ್ಲಾ ಒಂದು ಮೈದಾನದಲ್ಲಿದೆ, ಧೂಳು ಅಲರ್ಜಿ ಎನ್ನುವಂತಿಲ್ಲ. ಇಡೀ ಮೈದಾನಕ್ಕೆ ಹೊದಿಕೆ ಹಾಕಲಾಗಿದೆ. ಶಿಸ್ತುಬದ್ಧವಾಗಿದೆ. ಎಲ್ಲಿಯೂ ಧೂಳು, ಕಸ, ಕಡ್ಡಿ ಕಾಣದಂತೆ ವ್ಯವಸ್ಥಾಪಕರು ನಿರ್ವಹಣೆ ಮಾಡುತ್ತಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
