CHITRADURGA NEWS | 01 AUGUST 2026
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಗ್ರಾಮದ ಕೆರೆಯ ಪಕ್ಕದ ಹೊಲವೊಂದರಲ್ಲಿ ಉಳುಮೆ ಮಾಡುವಾಗ ಚಿತ್ರದುರ್ಗದ ಪಾಳೇಗಾರ ಅರಸರ ಕಾಲಘಟ್ಟಕ್ಕೆ ಸೇರಿದ ಶಾಸನವೊಂದು ಪತ್ತೆಯಾಗಿದೆ. ಪ್ರಸ್ತುತ ಈ ಶಾಸನವನ್ನು ಚಿತ್ರದುರ್ಗದ ರಂಗಯ್ಯನ ಬಾಗಿಲಿನಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಸಭೆಯಲ್ಲಿ ಗೊಂದಲ ಸೃಷ್ಟಿಸಿದ ಆರೋಪ -3 ಜನರಿಗೆ ಕಾರಣ ಕೇಳಿ ನೋಟಿಸ್
ಕರಿಕಲ್ಲಿನಲ್ಲಿ ಕೆತ್ತಲಾದ ಈ ಶಾಸನವು ಒಟ್ಟು 17 ಸಾಲುಗಳನ್ನು ಒಳಗೊಂಡಿದ್ದು, ಕನ್ನಡ ಲಿಪಿ ಹಾಗೂ ಭಾಷೆಯಲ್ಲಿದೆ. ಕಾಮಗೇತಿ ಇಮ್ಮಡಿ ಚಿಕ್ಕಣ್ಣ ನಾಯಕರ (ಕ್ರಿ.ಶ. 1575-1586) ಆಳ್ವಿಕೆಯ ಅವಧಿಯಲ್ಲಿ ಇದು ರಚನೆಯಾಗಿದೆ ಎಂದು ಗುರುತಿಸಲಾಗಿದೆ.
ಕಾಮಗೇತಿ ಇಮ್ಮಡಿ ಚಿಕ್ಕಣ್ಣ ಅರಸನ ಅಧೀನ ಅಧಿಕಾರಿಯಾಗಿದ್ದ ಲಕ್ಕಜೀಯನ ಮಗ ದೊಡ್ಡಗೌಡ ಎಂಬುವವರು ಜವಗೊಂಡನಹಳ್ಳಿಯಲ್ಲಿ ಜನೋಪಕಾರಕ್ಕಾಗಿ ಕೆರೆಯೊಂದನ್ನು ಕಟ್ಟಿಸಿದ್ದರು. ಈ ಕಾರ್ಯಕ್ಕೆ ಮೆಚ್ಚಿದ ಅರಸರು ದೊಡ್ಡಗೌಡನಿಗೆ ‘ಉಂಬಳಿ ಭೂಮಿ’ಯನ್ನು ಕೊಡುಗೆಯಾಗಿ ನೀಡಿರುವುದೇ ಈ ಶಾಸನದ ಮುಖ್ಯ ವಿಷಯವಾಗಿದೆ.
ಲಿಪಿಕಾರ ಅಥವಾ ಖಂಡರಣೆಕಾರನ ಪ್ರಮಾದದಿಂದಾಗಿ ಶಾಸನದಲ್ಲಿ ಅಲ್ಲಲ್ಲಿ ವ್ಯಾಕರಣ ದೋಷಗಳು ನುಸುಳಿವೆ. ‘ಕಾರ್ತಿಕ ಶುದ್ಧ 10 ಗುರುವಾರ’ದಂದು ಇದು ರಚನೆಯಾಗಿದ್ದು, ಶಕವರ್ಷ ಹಾಗೂ ಸಂವತ್ಸರವನ್ನು ಗುರುತಿಸುವ ಅಕ್ಷರಗಳು ಅಸ್ಪಷ್ಟವಾಗಿವೆ.
ಇದನ್ನೂ ಓದಿ: ನಿಮ್ಮ ವಾಹನದ ಮೇಲೆ ‘PRESS’ ಸ್ಟಿಕ್ಕರ್ ಅಂಟಿಸಿದ್ದರೆ ದಂಡ ಗ್ಯಾರೆಂಟಿ | ಜಿಲ್ಲಾ ಪೊಲೀಸರಿಂದ ಎಚ್ಚರಿಕೆ
ಶಾಸನದ ಕೊನೆಯಲ್ಲಿಶಾಪಾಶಯವಿದ್ದು, ಈ ದಾನ ಭೂಮಿಯನ್ನು ದೊಡ್ಡಗೌಡರ ಕುಟುಂಬದವರು ಸೂರ್ಯ-ಚಂದ್ರರಿರುವವರೆಗೂ ಸುಖವಾಗಿ ಅನುಭವಿಸತಕ್ಕದ್ದು. ಯಾರಾದರೂ ಈ ಭೂಮಿಯನ್ನು ಅಪಹರಿಸಿದರೆ ಕಾಶಿಯಲ್ಲಿ ಆಕಳನ್ನು ಕೊಂದ ಪಾಪಕ್ಕೆ ಈಡಾಗುವರು ಎಂದು ಎಚ್ಚರಿಸಲಾಗಿದೆ. ಶಾಸನವು ಅಲ್ಲಲ್ಲಿ ತ್ರುಟಿತವಾಗಿದ್ದು, ಇನ್ನಷ್ಟು ಹೆಚ್ಚಿನ ಅಧ್ಯಯನದ ಅಗತ್ಯವಿದೆ.
ಶಾಸನ ದೊರೆತ ಸ್ಥಳಕ್ಕೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಪ್ರಹ್ಲಾದ್ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.
ಶಾಸನವನ್ನು ಓದಿ ವಿಶ್ಲೇಷಿಸಲು ಡಾ. ರವಿಕುಮಾರ ಕೆ. ನವಲಗುಂದ ಸಹಕರಿಸಿದ್ದಾರೆ.
ಇದನ್ನೂ ಓದಿ: ಸಾಮಾನ್ಯ ವರ್ಗದ ಪುರುಷರು/ಮಹಿಳೆಯರಿಗೆ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮ | ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಜವನಗೊಂಡನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಮಹಾಂತೇಶ್, ಗ್ರಾಮದ ಮುಖಂಡರಾದ ಜಿ. ಹನುಮಂತೇಗೌಡ, ಕೆ.ಎಚ್. ಚಿತ್ರಲಿಂಗಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

