CHITRADURGA NEWS | 17 SEPTEMBER 2026
ಚಿತ್ರದುರ್ಗ: ಸಮಾಜಮುಖಿ ಹಾಗೂ ಗುಣಮಟ್ಟದ ಶಿಕ್ಷಣದೊಂದಿಗೆ ಚಾರಿತ್ರ್ಯವಂತ, ಸಾಮಾಜಿಕ ಬದ್ಧತೆ ಮತ್ತು ರಾಷ್ಟ್ರಪ್ರೇಮ ಹೊಂದಿರುವ ಶ್ರೇಷ್ಠ ನಾಗರಿಕರನ್ನು ರೂಪಿಸುವ ಉದ್ದೇಶದಿಂದ ಚಿತ್ರದುರ್ಗದಲ್ಲಿ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಮಾದರಿ ಸಿಬಿಎಸ್‌ಇ ಶಾಲೆ ನಿರ್ಮಿಸಲಾಗುತ್ತಿದೆ ಎಂದು ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ತಿಳಿಸಿದರು.
ಇದನ್ನೂ ಓದಿ: ನರೇಂದ್ರ ಮೋದಿ ಜನ್ಮದಿನ | ನೀಲಕಂಠೇಶ್ವರ ದೇವಸ್ಥಾನದಲ್ಲಿ ಬಿಜೆಪಿ ವಿಶೇಷ ಪೂಜೆ
ಶಿವಮೊಗ್ಗ ರಸ್ತೆಯ ಜಾನುಕೊಂಡದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಷ್ಟ್ರೋತ್ಥಾನ ಪರಿಷತ್ 1965ರಲ್ಲಿ ಆರಂಭವಾಗಿದ್ದು, ಗ್ರಾಮೀಣ ಭಾಗದ ಬಡ ಹಾಗೂ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ಉಚಿತ ವಸತಿ ಹಾಗೂ ತರಬೇತಿ ನೀಡುತ್ತಿದೆ. ‘ತಪಸ್ಸು’ ಮತ್ತು ‘ಸಾಧನಾ’ ಯೋಜನೆಗಳ ಮೂಲಕ ಉಚಿತ ಶಿಕ್ಷಣ ಪಡೆದ 145ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಸ್ತುತ ಐಐಟಿ ಮತ್ತು ಎನ್‌ಐಟಿಗಳಲ್ಲಿ ಹಾಗೂ 156ಕ್ಕೂ ಹೆಚ್ಚು ಹೆಣ್ಣುಮಕ್ಕಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಪ್ರಸ್ತುತ ರಾಷ್ಟ್ರೋತ್ಥಾನದ 20 ಸಿಬಿಎಸ್‌ಇ ಶಾಲೆಗಳಿದ್ದು, 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಒಟ್ಟು 30 ಶಾಲೆಗಳನ್ನು ಆರಂಭಿಸಿ, 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದರು.
ಇದನ್ನೂ ಓದಿ: ರೈಲು ಸಂಚಾರದಲ್ಲಿ ಬದಲಾವಣೆ | ನೇರ ರೈಲು ಮಾರ್ಗದ ಕಾಮಗಾರಿ ಹಿನ್ನೆಲೆ
ಚಿತ್ರದುರ್ಗದಲ್ಲಿ ಕಳೆದ 30-35 ವರ್ಷಗಳಿಂದ ಜ್ಞಾನಭಾರತಿ ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದು, ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಸಿಬಿಎಸ್‌ಇ ಮಾದರಿ ಶಾಲೆ ಆರಂಭಿಸಲಾಗುತ್ತಿದೆ. ಸುಮಾರು 3 ಎಕರೆ ಪ್ರದೇಶದಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗಲಿದ್ದು, ಮೊದಲ ಹಂತದಲ್ಲಿ 45 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ 24 ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಹಾಗೂ ಆಟದ ಮೈದಾನ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಶಾಲೆಯು 750ರಿಂದ 1,000 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ಭಗೀರಥ ಕನ್‌ಸ್ಟ್ರಕ್ಷನ್ ಸಂಸ್ಥೆಯ ಅತುಲ್ ಗೋಪಿನಾಥ್ ಅವರಿಗೆ ಕಟ್ಟಡ ನಿರ್ಮಾಣದ ಗುತ್ತಿಗೆ ನೀಡಲಾಗಿದ್ದು, 6ರಿಂದ 7 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ 2027-28ನೇ ಶೈಕ್ಷಣಿಕ ಸಾಲಿನಿಂದ ಶಾಲೆ ಆರಂಭಿಸುವ ಗುರಿ ಹೊಂದಲಾಗಿದೆ. ಶಿಕ್ಷಣದಲ್ಲಿ ಭಾರತೀಯತೆ, ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರೀಯ ಚಿಂತನೆಗಳನ್ನು ಬೆಳೆಸುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಎನ್‌ಇಪಿ ರದ್ದತಿಗೆ ಕಾರಜೋಳ ಆಕ್ಷೇಪ
ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಬಡವರು ಹಾಗೂ ಶ್ರೀಮಂತರ ಮಕ್ಕಳಿಗೆ ಸಮಾನ ಶಿಕ್ಷಣಾವಕಾಶ ಕಲ್ಪಿಸುವ ಉದ್ದೇಶದಿಂದ ದೇಶಾದ್ಯಂತ ಜಾರಿಗೆ ತರಲಾಗಿದ್ದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 17 | ಹತ್ತಿ ರೇಟ್ ಎಷ್ಟಿದೆ?
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಎನ್‌ಇಪಿ ಜಾರಿಗೆ ತಂದಿದ್ದರು. ಆದರೆ 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎನ್‌ಇಪಿಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುವುದಾಗಿ ಘೋಷಿಸಿತು. ಇದರಿಂದ ಕಳೆದ ಎರಡು ವರ್ಷಗಳಿಂದ ಎನ್‌ಇಪಿ ಅಡಿಯಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಿದರು.
ಎನ್‌ಇಪಿಯಲ್ಲಿ ತ್ರಿಭಾಷಾ ಸೂತ್ರ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸ್ಪರ್ಧಾತ್ಮಕ ಬೆಳವಣಿಗೆಗೆ ಪೂರಕವಾದ ಅಂಶಗಳಿವೆ. ಬಡ ಮಕ್ಕಳೂ ಉನ್ನತ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ರಾಷ್ಟ್ರೋತ್ಥಾನದಂತಹ ಸಂಸ್ಥೆಗಳು ಸಿಬಿಎಸ್‌ಇ ಶಿಕ್ಷಣವನ್ನು ಕೈಗೆಟುಕುವ ವೆಚ್ಚದಲ್ಲಿ ನೀಡುತ್ತಿರುವುದು ಮಹತ್ವದ್ದಾಗಿದೆ. ಇಂತಹ ಸಂಸ್ಥೆಗಳ ಮೂಲಕ ನೂರಾರು ವಿದ್ಯಾರ್ಥಿಗಳು ಐಐಟಿ, ಏಮ್ಸ್ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸೂಕ್ತ ಮೂಲಸೌಕರ್ಯ ಹಾಗೂ ಶಿಕ್ಷಕರ ಕೊರತೆಯಿಂದಾಗಿ 3,000ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಲ್ಪಟ್ಟಿವೆ ಎಂದು ಹೇಳಿದ ಅವರು, ಶಿಕ್ಷಣದ ಜತೆಗೆ ಸಂಸ್ಕಾರ ಮತ್ತು ಮೌಲ್ಯಗಳನ್ನು ಬೆಳೆಸುವ ರಾಷ್ಟ್ರೋತ್ಥಾನದ ಕಾರ್ಯಕ್ಕೆ ಸಮಾಜ ಸಹಕಾರ ನೀಡಬೇಕು. ರಾಜ್ಯದ ಪ್ರತಿಯೊಂದು ತಾಲೂಕಿನಲ್ಲಿಯೂ ಇಂತಹ ಸಿಬಿಎಸ್‌ಇ ಶಾಲೆಗಳು ಆರಂಭವಾಗುವಂತಾಗಬೇಕು ಎಂದು ಆಶಿಸಿದರು.
ಇದನ್ನೂ ಓದಿ: ಭೋವಿ ಯುವಕ-ಯುವತಿಯರಿಗೆ ಉಚಿತ ಟೈಲರಿಂಗ್ ತರಬೇತಿ | ಅರ್ಜಿ ಆಹ್ವಾನ
ಬಡ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಶಿವಲಿಂಗಾನಂದ ಸ್ವಾಮೀಜಿ
ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಬಡ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ರಾಷ್ಟ್ರೋತ್ಥಾನ ಪರಿಷತ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು.
ಬಡ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸತ್ಸಂಸ್ಕಾರಕ್ಕಾಗಿ ಸಂಸ್ಥೆ ಕೈಗೊಂಡಿರುವ ಈ ಪ್ರಯತ್ನಕ್ಕೆ ಚಿತ್ರದುರ್ಗ ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕು. ಜಿಲ್ಲೆಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ರಾಷ್ಟ್ರಮಟ್ಟದ ನಾಯಕತ್ವ ಬೆಳೆಸಿಕೊಳ್ಳುವಂತೆ ಸಂಸ್ಥೆಯ ಶಿಕ್ಷಣ ವ್ಯವಸ್ಥೆ ರೂಪುಗೊಳ್ಳಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಾದಾರ ಗುರುಪೀಠದ ಮಾದಾರ ಚನ್ನಯ್ಯ ಶ್ರೀಗಳು, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಶ್ರೀಗಳು, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಮುಖಂಡರಾದ ಅನಿತ್ ಕುಮಾರ್, ಜ್ಞಾನಭಾರತಿ ವಿದ್ಯಾಮಂದಿರದ ಕಾರ್ಯದರ್ಶಿ ರಾಜೀವ ಲೋಚನ ಸೇರಿದಂತೆ ರಾಷ್ಟ್ರೋತ್ಥಾನ ಪರಿಷತ್ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: ವಿ.ವಿ.ಸಾಗರದಿಂದ ಸುವರ್ಣಮುಖಿ ನದಿಗೆ ನೀರು | ಸಾರ್ವಜನಿಕರಿಗೆ ಎಚ್ಚರಿಕೆ
ಅಶೋಕ ಗೂರೂಜಿ ಪ್ರಾರ್ಥಿಸಿದರು. ಅಮೃತ್ ಹೀರೇಮಠ್ ಕಾರ್ಯಕ್ರಮ ನಿರೂಪಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

