
CHITRADURGA NEWS | 21 DECEMBER 2025
ಚಿತ್ರದುರ್ಗ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಆಲದ ಮರ ಇದ್ದಂತೆ. ಇದರ ನೆರಳಲ್ಲಿ ನಮ್ಮ ಲಿಂಗಾಯತ ಒಳ ಪಂಗಡಗಳಿವೆ. ಮಹಾಸಭಾ ಕರೆ ಕೊಟ್ಟರೆ ಎಲ್ಲಒಳಪಂಗಡಗಳು ಸೇರಿ ಒಗ್ಗಟ್ಟು ಪ್ರದರ್ಶಿಸಬೇಕು. ಒಳಪಂಗಡಗಳ ಜೊತೆಗೆ ಮಹಾಸಭಾ ಕೂಡಾ ಮುಖ್ಯ ಎನ್ನುವುದನ್ನು ಮರೆಯಬಾರದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.
ಇದನ್ನೂ ಓದಿ: ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ | ಅರ್ಥಪೂರ್ಣ, ವಿಜೃಂಭಣೆ ಆಚರಣೆ | AC

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿತ್ರದುರ್ಗ ತಾಲ್ಲೂಕು ಘಟಕದಿಂದ ನಗರದ ಜಗಳೂರು ಮಹಾಲಿಂಗಪ್ಪ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಸಮಾವೇಶ, ಸೇವಾ ದೀಕ್ಷಾ ಕಾರ್ಯಕ್ರಮ, ಸದಸ್ಯತ್ವ ಅಭಿಯಾನ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಶ್ರದ್ದಾಂಜಲಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವೀರಶೈವ – ಲಿಂಗಾಯತ ಸಮುದಾಯದಲ್ಲಿನ ಒಳ ಪಂಗಡದವರು ತಮ್ಮ ಕಾರ್ಯಕ್ರಮಗಳನ್ನು ತುಂಬಾ ಚನ್ನಾಗಿ ಮಾಡುತ್ತಾರೆ. ಆದರೆ, ಬಸವಣ್ಣನವರ ಜಯಂತಿ, ಅಕ್ಕ ಮಹಾದೇವಿ ಜಯಂತಿ, ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಮಾಡೋಣ ಬನ್ನಿ ಎಂದರೆ ಬರುವವರ ಸಂಖ್ಯೆ ಕಡಿಮೆಯಿದೆ. ನಮ್ಮ ಒಳ ಪಂಗಡಗಳ ಕಾರ್ಯಕ್ರಮ ಮಾಡುವುದು ತಪ್ಪಲ್ಲ. ಆದರೆ, ಮಹಾಸಭಾ ಕರೆಗೂ ಸ್ಪಂಧಿಸಬೇಕು ಎಂದರು.
ಸರ್ಕಾದ ಸೌಲಭ್ಯ ಪಡೆಯಬೇಕಾದರೆ ಸಂಘಟನೆ, ಒಗ್ಗಟು ಅಗತ್ಯ. ಒಬ್ಬರಾಗಿ ಹೋದರೆ ಏನು ಸಿಗುವುದಿಲ್ಲ. ಬದಲಾಗಿ ಒಟ್ಟಾಗಿ ಹೋರಾಟ ಮಾಡಿದರೆ ಜಯ ನಿಶ್ಚಿತ. ಇತ್ತೀಚೆಗೆ ಸಮುದಾಯದಲ್ಲಿಯೂ ಒಡಕು ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಅಂಥವರ ಬಗ್ಗೆ ಎಚ್ಚರದಿಂದ ಇರಬೇಕು. ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಕಣ್ಮನ ಸೆಳೆದ ಮಕ್ಕಳ ಸಂತೆ | ಬೀದಿಯಲ್ಲಿ ಕುಳಿತು ತರಕಾರಿ ಮಾರಿ ಲೆಕ್ಕ ಕಲಿತ ಪೋರರು
ನಮ್ಮ ಮಠ ಮಾನ್ಯಗಳು ಬಹಳ ಹಿಂದಿನಿಂದಲೇ ಎಲ್ಲ ಸಮುದಾಯದವರಿಗೂ ಜಾತ್ಯಾತೀತವಾಗಿ ಶಿಕ್ಷಣ, ದಾಸೋಹ ಮಾಡುತ್ತಾ ಬಂದಿವೆ. ಸಣ್ಣ ಪುಟ್ಟ ಸಮುದಾಯಗಳು ಕೂಡಾ ಮುಂಚೂಣಿಗೆ ಬರಲು ಸಮುದಾಯ ಹಾಗೂ ಮಠಗಳ ಪಾತ್ರ ಅಗಾಧವಾಗಿದೆ. ನಾವು ವ್ಯಕ್ತಿಗತವಾಗಿ ಸಮಾಜದಿಂದ ನಮಗೆ ಲಾಭವಿಲ್ಲ ಎಂದು ಮಾತನಾಡುವುದಕ್ಕಿಂತ, ನಮ್ಮಿಂದ ಸಮಾಜಕ್ಕೆ ಏನಾಗಿದೆ ಎನ್ನುವುದನ್ನು ಆಲೋಚನೆ ಮಾಡಬೇಕು ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸನ್ನ ಮಾತನಾಡಿ, ಡಾ.ಶಾಮನೂರು ಶಿವಶಂಕರಪ್ಪ ಅವರು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ರಾಜ್ಯದ ಎಲ್ಲಾ ಲಿಂಗಾಯತ ಸಮುದಾಯಕ್ಕೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಮುನ್ನಡೆಸಿದ್ದಾರೆ ಎಂದು ಸ್ಮರಿಸಿದರು.
ಶಾಮನೂರು ಶಿವಶಂಕರಪ್ಪ ಅವರಂತಹ ನಾಯಕರು ಮುಂದೆ ಸಿಗುವುದು ಕಷ್ಟ. ಅವರಿದ್ದ ಕಾಲದಲ್ಲಿ ಸಮಾಜಕ್ಕೆ ಅನ್ಯಾಯವಾದಾಗ ಅದನ್ನು ಪ್ರತಿಭಟಿಸುತ್ತಿದ್ದರು. ಇಂದು ಸಮಾಜ ಕವಲು ದಾರಿಯಲ್ಲಿದೆ. ಎಲ್ಲರೂ ಆತ್ಮಾವಲೋಕನ ಮಾಡಿಕೊಂಡು ಸರಿಯಾದ ದಾರಿಯಲ್ಲಿ ಸಾಗುವ ನಿಟ್ಟಿನಲ್ಲಿ ಆಲೋಚನೆ ಮಾಡುವ ಅನಿವಾರ್ಯತೆ ಇದೆ. ಸೇವಾ ದೀಕ್ಷೆಯನ್ನು ಪಡೆದವರು ಮಹಾಸಭಾ ನಿಯಮಗಳು, ನಿಲುವುಗಳು, ನೀತಿಗಳು ನಿಬಂಧನೆಗಳ ಬಗ್ಗೆ ಅರಿಯಬೇಕು ಎಂದರು.
ಇದನ್ನೂ ಓದಿ: ಜನವರಿ 26ಕ್ಕೆ ದುರ್ಗಕ್ಕೆ ಭದ್ರಾ ನೀರು | ಕೆರೆಗಳಿಗೆ ಹರಿಯಲಿದ್ದಾಳೆ ಭದ್ರೆ
ಮುಖಂಡರಾದ ಹನುಮಲಿ ಷಣ್ಮುಖಪ್ಪ, ಜಿ.ಎಸ್.ಅನಿತ್ ಕುಮಾರ್, ಪಟೇಲ್ ಶಿವಕುಮಾರ್, ಎಚ್.ಎಂ.ತಿಪ್ಪೇಸ್ವಾಮಿ, ಎಸ್.ಆರ್.ಗಿರೀಶ್, ಜಿ.ಎಸ್.ಮಂಜುನಾಥ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ತಾಲೂಕು ಅಧ್ಯಕ್ಷ ಸಿದ್ದಪ್ಪ, ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ರಾಷ್ಟ್ರೀಯ ಅಧ್ಯಕ್ಷ ಉಮೇಶ್ ಪಾಟೀಲ್, ಆರತಿ, ಕೆ.ಎಂ.ವಿರೇಶ್, ಶಶಿಕಲಾ ರವಿಶಂಕರ್, ಮಂಜುಳಾ, ಶಶಿಧರ್ ಬಾಬು, ನಾಗರಾಜ್ ಸಂಗಂ, ರಾಜೇಶ್ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
