CHITRADURGA NEWS | 26 SEPTEMBER 2025
ಚಿತ್ರದುರ್ಗ: ಐತಿಹಾಸಿಕ ಮುರುಘಾ ಮಠದಿಂದ ಪ್ರಕಾಶನಗೊಳ್ಳುವ ʼಸತ್ಯಶುದ್ಧ ಕಾಯಕʼ ತ್ರೈಮಾಸಿಕ ಪತ್ರಿಕೆಯನ್ನು ಶರಣ ಸಂಸ್ಕೃತಿ ಉತ್ಸವದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಇದನ್ನೂ ಓದಿ: ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಗೆ ಚಿತ್ರದುರ್ಗ
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಸಂಪಾದಕತ್ವದಲ್ಲಿ ಪುಸ್ತಕ ರೂಪದಲ್ಲಿ ಇನ್ನು ಮುಂದೆ ಪ್ರತಿ ಮೂರು ತಿಂಗಳಿಗೊಮ್ಮೆ ʼಸತ್ಯಶುದ್ಧ ಕಾಯಕʼ ಪ್ರಕಟವಾಗಲಿದೆ.
ಇದರೊಟ್ಟಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರವನ್ನು ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಉದ್ಘಾಟಿಸಲಾಯಿತು.
ಈ ವೇಳೆ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಮುರುಘಾ ಮಠದ ಕರ್ತೃಗಳಾದ ಮುರಿಗಿ ಶಾಂತವೀರ ಸ್ವಾಮಿಗಳು ಧರ್ಮ ಮತ್ತು ಸಾಹಿತ್ಯವನ್ನು ಜೊತೆಯಾಗಿ ತೆಗೆದುಕೊಂಡು ಹೋದವರು ಎಂದರು.
ಇಂದು ಅನೇಕ ವಿತಂಡ ವಾದಗಳ ಮೂಲಕ ಧರ್ಮ, ಸಾಹಿತ್ಯ ಬೇರೆ ಬೇರೆ ಎಂಬ ಭಾವನೆ ಇದೆ. ಇದೊಂದು ಅಪಾಯಕಾರಿ ನಡಿಗೆ. ಶರಣರು ಸಾಹಿತ್ಯದ ಮೂಲಕ ಆತ್ಮೋದ್ಧಾರದ ಕೆಲಸ ಮಾಡಿದವರು ಎಂದರು.
ಇದನ್ನೂ ಓದಿ: ಸರ್ಕಾರಿ ನೌಕರರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ಶ್ರೀಗಳು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದವರು. ತಮ್ಮ ಇಡೀ ಸಾಹಿತ್ಯದಲ್ಲಿ ವೀರಶೈವ ಕವಿಗಳ ಪರಂಪರೆಯನ್ನು ಸಾಗಿಸಿಕೊಂಡು ಬಂದವರು. ಮಧ್ಯಕಾಲಿನ ಸಹಸ್ರಾರು ಕವಿಗಳು ಉಪೇಕ್ಷೆ ಮಾಡಿದ ಸತ್ಯವನ್ನು ವಿಚಾರಗಳನ್ನು ಮುನ್ನೆಲೆಗೆ ತಂದ ಕ್ರಾಂತಿಕಾರಿ ಬರಹಗಾರರು.
ಕಟ್ಟಿಗೆಗೆ ಒಂದು ಮಹತ್ವದ ಸಂದೇಶ ಕೊಟ್ಟವರು. ಮಧ್ಯಕಾಲೀನ ಸಂದರ್ಭದಲ್ಲಿ ಶರಣರ ಕಾಣಿಕೆಯನ್ನು ಪರಿಭಾವಿಸಿಕೊಂಡು ನೋಡಿದ್ದಾರೆ. 16-17 ನೇ ಶತಮಾನದಲ್ಲಿ ಇದ್ದಂತಹ ಶ್ರೀಮಠದ ಸ್ವಾಮಿಗಳು ಪಂಡಿತರಿಗೂ ಜನಸಾಮಾನ್ಯರಿಗೂ ಸೇತುವೆಯಾಗಿದ್ದಾರೆ ಎಂದರು.
ಮಠಾಧೀಶರಲ್ಲಿ ಶಾಂತವೀರ ಮುರುಗಿ ಸ್ವಾಮಿಗಳ ಕೃತಿಗಳು ಉನ್ನತ ಮಟ್ಟದಲ್ಲಿ ಇದ್ದವು. ಅವರ ಅನೇಕ ಕೃತಿಗಳು ಇಂದು ಲಭ್ಯವಿಲ್ಲ ಅವುಗಳನ್ನು ಹುಡುಕುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಹಂಪಿ ಕನ್ನಡ ವಿವಿ ಪ್ರಾರಂಭವಾಗಿ 34 ವರ್ಷಗಳು ಕಳೆದಿವೆ. ಕನ್ನಡ ನಾಡು ನುಡಿಗಾಗಿ ವಿಶ್ವವಿದ್ಯಾಲಯವು ಶ್ರಮಿಸುತ್ತಿದೆ. ಸಂಶೋಧನಾ ಕ್ಷೇತ್ರವನ್ನು ವಿಸ್ತಾರ ಮಾಡುವುದಕ್ಕಾಗಿ ರಾಜ್ಯದ ಅನೇಕ ಕಡೆ ಸಂಶೋಧನಾ ಕೇಂದ್ರಗಳಿಗೆ ಮಾನ್ಯತೆಯನ್ನು ನೀಡುತ್ತಿದ್ದೇವೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 26 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಶ್ರೀಮಠದಲ್ಲಿ ಸಾಕಷ್ಟು ಇತಿಹಾಸದ ಆಲೋಚನೆಗಳು ಇರುವುದರಿಂದ ಶ್ರೀಮಠಕ್ಕೆ ಸಂಶೋಧನಾ ಕೇಂದ್ರದ ಮಾನ್ಯತೆಯನ್ನು ನೀಡಿದ್ದೇವೆ. ಇಲ್ಲಿ ಹೆಚ್ಚು ಹೆಚ್ಚು ಸಂಶೋಧನೆಗಳ ನಡೆಯಬೇಕೆಂಬ ಆಶಯ ನಮ್ಮದು ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯವಾಗಬೇಕು ಎಂದು ಆಶಿಸಿದರು.
ಅಧ್ಯಯನಾಂಗ ನಿರ್ದೇಶಕ ಡಾ.ಅಮರೇಶ್ ಯತಗಲ್ ಮಾತನಾಡಿ, ಇದೊಂದು ತ್ರಿವೇಣಿ ಸಂಗಮ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಭಿನ್ನ ಸಂಶೋಧನೆಗಳು ನಡೆಯುತ್ತವೆ. ಜನ ಸಮುದಾಯ, ಬುಡಕಟ್ಟು ಸಂಸ್ಕೃತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿದೆ. ಪ್ರತಿ ವರ್ಷ 200 ರಿಂದ 250 ವಿದ್ಯಾರ್ಥಿಗಳು ಪಿಹೆಚ್‌ಡಿ ಪದವಿ ಪಡೆಯುತ್ತಿದ್ದಾರೆ. ನಾಡಿನ 24 ಕಡೆ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಚರಿತ್ರೆ, ಭಾಷೆ, ಪುರಾತತ್ವ, ಜಾನಪದ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ವಿಷಯಗಳಿಗೆ ಮಾನ್ಯತೆ ಕೊಡಲಾಗಿದೆ. ಇಲ್ಲಿ ಅಧ್ಯಯನವನ್ನು ಮಾಡುವವರಿಗೆ ಸುಸಜ್ಜಿತವಾದ ಕಟ್ಟಡ, ಉತ್ತಮವಾದ ಗ್ರಂಥಾಲಯವನ್ನು ಒದಗಿಸಲಾಗಿದೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜಿ, ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ವನಕಲ್ಲು ಮಲ್ಲೇಶ್ವರ ಮಠದ ಡಾ.ಬಸವ ರಮಾನಂದ ಸ್ವಾಮೀಜಿ ಇದ್ದರು.
ಶ್ರೀ ಮುರಿಗಿ ಶಾಂತವೀರ ಸ್ವಾಮೀಜಿ ಕೃತಿಗಳ ಕುರಿತ ವಿಚಾರ ಸಂಕಿರಣ:
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಶ್ರೀ ಮುರಿಗಿ ಶಾಂತವೀರ ಸ್ವಾಮಿಗಳ ಕುರಿತು ಇಡೀ ದಿನ ವಿಚಾರ ಸಂಕಿರಣ ನಡೆಯಿತು.
ಇದನ್ನೂ ಓದಿ: ವೇದಾವತಿ-ಅಘನಾಶಿನಿ ನದಿ ಜೋಡಣೆ ?|ಉತ್ತರ ಕನ್ನಡದಿಂದ ಬಯಲು ಸೀಮೆಗೆ 35 ಟಿಎಂಸಿ ನೀರು !
ಧಾರವಾಡದ ಇತಿಹಾಸ ತಜ್ಞ ಡಾ.ಲಕ್ಷ್ಮಣ ತೆಲಗಾವಿ ಮುರಿಗಿ ತಾರಾವಳಿ ಕುರಿತು ಮಾತನಾಡಿ, ತಾರಾವಳಿ ಕೃತಿಯು ಚಾರಿತ್ರಿಕ ಸಾಂಸ್ಕೃತಿಕ ಐತಿಹಾಸಿಕ ಅಂಶಗಳನ್ನು ಒಳಗೊಂಡ ಅಮೂಲ್ಯ ಕೃತಿಯಾಗಿದೆ. ಚಿತ್ರದುರ್ಗ ಮುರುಘಾಮಠ ಮತ್ತು ಪಾಳೆಗಾರರ ಸಂಸ್ಥಾನಗಳ ಮೇಲೆ ವಿಶೇಷವಾದ ಬೆಳಕು ಚೆಲ್ಲುತ್ತದೆ.
ಐತಿಹಾಸಿಕ ಅಂಶಗಳನ್ನು ಪರಿಷ್ಕರಿಸುವ ಈ ತಾರಾವಳಿ ಕೃತಿಯು ಅಪೂರ್ವವಾದದ್ದು. ಈ ಕೃತಿಯು ಚಿತ್ರದುರ್ಗದ ಐತಿಹಾಸಿಕ ಮಹತ್ವದ ಅಂಶಗಳನ್ನು ಹಾಗೂ 17 ಮತ್ತು 18ನೇ ಶತಮಾನದ ವಾಸ್ತವ ಚಿತ್ರಣವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಶಾಸನ ತಜ್ಞ ಡಾ.ಬಿ.ರಾಜಶೇಖರಪ್ಪ ಹಮ್ಮೀರಕಾವ್ಯ (ರಾಜೇಂದ್ರ ವಿಜಯ) ಕುರಿತು ಮಾತನಾಡಿ, ಇದೊಂದು ಚಂಪೂ ಕೃತಿಯಾಗಿದ್ದು ಸ್ವತಃ ಮುರುಗಿ ಶಾಂತವೀರರೇ ರಚನೆ ಮಾಡಿದ್ದಾರೆ. ಈ ಕಾವ್ಯವನ್ನು ಗಮನಿಸಿದಾಗ ಪಂಪ, ಪೊನ್ನ, ರನ್ನ, ಜನ್ನ ಕಾವ್ಯದ ಓದುವನ್ನು ಮತ್ತು ಶಬ್ಧ ಸಾಮರ್ಥ್ಯವನ್ನು ಮುರುಗಿ ಶಾಂತವೀರರಲ್ಲಿ ಕಾಣುತ್ತೇವೆ. ಈ ಕೃತಿಯಲ್ಲಿ ಚಿತ್ರದುರ್ಗದ ಕೆಲ ಐತಿಹಾಸಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದರು.
ಇದನ್ನೂ ಓದಿ: ವಾಣಿವಿಲಾಸ ಸಾಗರ ಭರ್ತಿಗೆ ದಿನಗಣನೆ | ಈ ಭಾರಿ ಭರ್ತಿಯಾದರೆ ಹೊಸ ಇತಿಹಾಸ
ಮುರುಗಿ ಶಾಂತವೀರರು ಸಂಗೀತ ಜ್ಞಾನ ಹೊಂದಿರುವುದಕ್ಕೆ ಈ ಕೃತಿಯಲ್ಲಿ ಬರುವ ರಾಗಗಳೇ ಸಾಕ್ಷಿ. ಅವರು ಪರಿಸರ ಪ್ರಜ್ಞೆ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದರು. ಶಬ್ಧ ಚಮತ್ಕಾರವನ್ನು ಕೃತಿಯಲ್ಲಿ ಕಾಣಬಹುದು ಎಂದು ತಿಳಿಸಿದರು.
ತುಮಕೂರಿನ ಹಸ್ತಪ್ರತಿ ತಜ್ಞ ಡಾ.ಬಿ.ನಂಜುಂಡಸ್ವಾಮಿ ಪ್ರಭುಲಿಂಗಕಂದ ಕುರಿತು ಮಾತನಾಡಿ, ಇಷ್ಟಲಿಂಗದ ಬಗ್ಗೆ ಮಹತ್ವಪೂರ್ಣವಾಗಿ ಚರ್ಚಿಸಿರುವ ಈ ಕೃತಿಗೆ ಎಳಂದೂರು ಪರ್ವತ ಶಿವಯೋಗಿಗಳು ಹಾಗೂ ಮತ್ತೊಬ್ಬರು ಸೇರಿ ಎರಡು ಟೀಕೆ ಬಂದಿವೆ ಎಂದರು.
ಕೃತಿಯಲ್ಲಿ ಇಷ್ಟಲಿಂಗ ಪೂಜೆಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಹಾಗೆಯೇ ಪೂಜೆಗೆ ಬಳಸುವ ಹಲವು ಪುಷ್ಪಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಚಿತ್ರದುರ್ಗ ಮುರುಘಮಠದ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಇತಿಹಾಸದ ಮೇಲೆ ಬೆಳಕನ್ನು ಚೆಲ್ಲುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಆಡಳಿತ ನ್ಯಾಯಾಧೀಕರಣ ತರಬೇತಿ | ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ
ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣ ಮಾತನಾಡಿ, ಮುರುಗಿ ಶಾಂತವೀರ ಸ್ವಾಮಿಗಳ ಗದ್ದುಗೆ ಮಾತ್ರ ಸುತ್ತುತ್ತಿದ್ದ ನಮಗೆ ಅವರ ಸುತ್ತ ಇಷ್ಟೊಂದು ಸಾಹಿತ್ಯ ರಚನೆಗೊಂಡಿದೆ ಎಂಬುದು ಅರಿವಿಗೆ ಬಂದಾಗ ಆಶ್ಚರ್ಯವಾಗುತ್ತದೆ. ಇಂದಿನ ತಲೆಮಾರು ಅಧ್ಯ್ಯಯನ ವಿದ್ವತ್ತಿನಿಂದ ತುಂಬಾ ದೂರವಿದೆ. ಬಹುದೊಡ್ಡ ಹಸ್ತ ಪ್ರತಿ ಸಂಶೋಧಕರಾದ ಶಿವಣ್ಣನವರು ಮುರುಗಿ ಶಾಂತವೀರ ಸ್ವಾಮಿಗಳ ಬಗ್ಗೆ ಸಂಶೋಧನೆ ಸಂಪಾದನೆ ಮಾಡಿಕೊಡದಿದ್ದರೆ ನಮಗಿಂದು ಶ್ರೀ ಮಠದ ಮೂಲ ಕರ್ತೃ ಬಗ್ಗೆ ಅಪೂರ್ಣ ಮಾಹಿತಿಯಾಗಿಯೇ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಹಂಪಿಯ ಹಸ್ತಪ್ರತಿ ತಜ್ಞ ಡಾ.ಎಫ್.ಟಿ.ಹಳ್ಳಿಕೇರಿ, ಬೆಂಗಳೂರಿನ ವಿದ್ವಾಂಸ ಡಾ.ಸಿ.ಕೆ ಜಗದೀಶ್, ಡಾ.ವೀರೇಶ್ ಬಡಿಗೇರ, ಡಾ.ಪಿ.ಯಶೋದಾ ರಾಜಶೇಖರಪ್ಪ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
