CHITRADURGA NEWS | 26 SEPTEMBER 2025
ಚಿತ್ರದುರ್ಗ: ಸರ್ಕಾರಿ ನೌಕರರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ ಶುಕ್ರವಾರ ಮೌನ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ: ವೇದಾವತಿ-ಅಘನಾಶಿನಿ ನದಿ ಜೋಡಣೆ ?|ಉತ್ತರ ಕನ್ನಡದಿಂದ ಬಯಲು ಸೀಮೆಗೆ 35 ಟಿಎಂಸಿ ನೀರು !
ನಗರದ ಪ್ರವಾಸಿ ಮಂದಿರದಿಂದ ಮೌನ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸರ್ಕಾರಿ ನೌಕರರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಭಯಮುಕ್ತ ವಾತಾವರಣದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು, ವಿನಾಕಾರಣ ಕಿರುಕುಳ ನೀಡುವ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಾಲತೇಶ ಮುದಜ್ಜಿ ಅವರು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಸರ್ಕಾರಿ ನೌಕರರು ಈಗಲೇ ಒತ್ತಡದ ನಡುವೆ ಕೆಲಸ ಮಾಡುತ್ತಿದ್ದಾರೆ. ಕೆಲ ಕಿಡಿಗೇಡಿಗಳು, ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವುದು, ಕಿರುಕುಳ ನೀಡುವಂತಹ ಕಾರ್ಯ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಇದರಿಂದಾಗಿ ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿಯೇ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅಕ್ರಮಗಳಿಗೆ ಸಹಕಾರ ನೀಡುವಂತೆ ಬೆದರಿಕೆ ಹಾಕುವ ದುಷ್ಕರ್ಮಿಗಳು, ಸಹಕರಿಸದೇ ಇದ್ದರೆ, ಅಂತಹ ನೌಕರರನ್ನು ಹೆದರಿಸಿ, ಕಿರುಕುಳ ನೀಡುವುದು, ವಿನಾಕಾರಣ ನೂರಾರು ಸಂಖ್ಯೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿ ಕಾಯ್ದೆಯ ದುರುಪಯೋಗ ಮಾಡುವುದು, ನೌಕರರ ಮೇಲೆ ಹಲ್ಲೆ ಮಾಡುವಂತಹ ಪ್ರಕರಣಗಳು ಕೂಡ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿವೆ.
ಇದನ್ನೂ ಓದಿ: ವಾಣಿವಿಲಾಸ ಸಾಗರ ಭರ್ತಿಗೆ ದಿನಗಣನೆ | ಈ ಭಾರಿ ಭರ್ತಿಯಾದರೆ ಹೊಸ ಇತಿಹಾಸ
ಹೀಗಾಗಿ ಸರ್ಕಾರಿ ನೌಕರರು ಪ್ರಾಮಾಣಿಕತೆಯಿಂದ ಭಯಮುಕ್ತ ವಾತಾವರಣದಲ್ಲಿ ಕೆಲಸ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಬೆದರಿಕೆ ಒಡ್ಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಯತ್ನಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸರ್ಕಾರಿ ದಾಖಲೆಗಳನ್ನು ಹರಿದು ಹಾಕಿರುವ ಎಂ.ಸತೀಶ್ ಕುಮಾರ್ ಎಂಬುವರನ್ನು ಬಂಧಿಸಿ, ಆತನಿಂದಾಗುವ ಮಾನಸಿಕ ಕಿರುಕುಳ ತಪ್ಪಿಸಲು ಹಾಗೂ ಸರ್ಕಾರಿ ಅಧಿಕಾರಿಗಳ ಹಾಗೂ ನೌಕರರ ತೇಜೋವಧೆ ಮಾಡುವುದನ್ನು ತಪ್ಪಿಸಲು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು.
ಸತೀಶ್ ಕುಮಾರ್ ಎಂಬ ವ್ಯಕ್ತಿ ಜಿಲ್ಲೆಯಲ್ಲಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಸುಮಾರು 200ಕ್ಕೂ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಿ, ಮಾಹಿತಿ ಹಾಗೂ ಹಣ ಕೊಡುವಂತೆ ಕಳೆದ ಸುಮಾರು 9-10 ತಿಂಗಳಿಂದ ಪೀಡಿಸುತ್ತಿದ್ದು, ಯಾವುದೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಣ ನೀಡದೇ ಇದ್ದಾಗ ಹತಾಶನಾಗಿ ದಾಖಲೆರಹಿತವಾಗಿ ಸರ್ಕಾರಕ್ಕೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಂಸದರಿಗೆ ಸುಳ್ಳು ದೂರು ಅರ್ಜಿ ಸಲ್ಲಿಸಿ, ದೂರು ಅರ್ಜಿಗಳನ್ನು ಸಲ್ಲಿಸಿರುವುದಕ್ಕೆ ಸ್ವೀಕೃತಿ ಪಡೆದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಬೆದರಿಸುತ್ತಾ ಸುಳ್ಳು ದೂರು ಅರ್ಜಿಗಳ ಮೇಲೆ, ನಿಮ್ಮನ್ನು ಅಮಾನತು ಮಾಡಿಸುವುದಾಗಿ ಹಾಗೂ ಆರೋಪಗಳನ್ನು ಸಾಬೀತುಪಡಿಸಿ ನಿಮ್ಮನ್ನು ಕೆಲಸದಿಂದ ವಜಾ ಮಾಡಿಸುತ್ತೇನೆ ಎಂದು ಬೆದರಿಕೆ ಒಡ್ಡುತ್ತಾ ಸರ್ಕಾರಿ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಸಾಧ್ಯವಾಗದೇ ಇರುವಂತಹ ವಾತಾವರಣ ಸೃಷ್ಠಿ ಮಾಡಿರುತ್ತಾನೆ ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ತೇಜೋವಧೆ ಮಾಡಿದ್ದಾರೆ ಎಂದು ದೂರಿದರು.
ಸಂಸದರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆ ಸಮಯದಲ್ಲಿ ಕೆಲವು ಪುಂಡರ ಜೊತೆ ಜಿ.ಪಂ. ಗೆ ಮುತ್ತಿಗೆ ಹಾಕಿ ಹಿರಿಯ ಅಧಿಕಾರಿಗಳ ತೇಜೋವಧೆ ಮಾಡಿರುತ್ತಾರೆ. ಜಿಲ್ಲೆಯ ವಿವಿಧ ಸರ್ಕಾರಿ ಅಧಿಕಾರಿಗಳನ್ನು ಹಾಗೂ ನೌಕರರನ್ನು ಹೆದರಿಸಿ, ಬೆದರಿಸಿ ಬ್ಲಾಕ್ಮೇಲ್ ಮಾಡುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 26 | ಮೆಕ್ಕೆಜೋಳ ರೇಟ್ ಎಷ್ಟಿದೆ?
ಕುಪಿತಗೊಂಡು ಪಿಡಿಒ ಟಿ.ವೀರೇಶ್ ಅವರ ಮೇಲೆ ಮರಣಾಂತಿಕ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಚಿತ್ರದುರ್ಗ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈಗಾಗಲೆ ದೂರು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸತೀಶ್ ನಾಯ್ಕ್ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮುನ್ನ ರಾಜ್ಯ ಸರ್ಕಾರಿ ನೌಕರರು ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಮೌನ ಮೆರವಣಿಗೆ ನಡೆಸಿ, ಪ್ರತಿಭಟನೆ ವ್ಯಕ್ತಪಡಿಸಿದರು.
ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಅಧ್ಯಕ್ಷ ಮಾಲತೇಶ ಮುದ್ದಜ್ಜಿ, ಜಿಲ್ಲಾ ಕಾರ್ಯದರ್ಶಿ ಆರ್.ಶ್ರೀನಿವಾಸ್, ಖಜಾಂಚಿ ಮಲ್ಲಿಕಾರ್ಜುನ್, ರಾಜ್ಯ ಪರಿಷತ್ ಸದಸ್ಯ ಎಸ್.ರಾಜಪ್ಪ, ಉಪಾಧ್ಯಕ್ಷ ಪೂಜಾರ್ ಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಬಸವರಾಜಪ್ಪ, ಪಿಡಿಒ ಸಂಘದ ಜಿಲ್ಲಾ ಅಧ್ಯಕ್ಷ ನಯಾಜ್ ಇತರರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

