
CHITRADURGA NEWS | 11 DECEMBER 2025
ಚಿತ್ರದುರ್ಗ: ನ್ಯೂಮೋನಿಯಾ ತೊಲಗಿಸಿ ಆರೋಗ್ಯವಂತ ಬಾಲ್ಯ ಒದಗಿಸಿ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಡಿ.ಎಂ ಅಭಿನವ ಹೇಳಿದರು.
ಇದನ್ನೂ ಓದಿ: ಭದ್ರೆ ನೀರು ಜಿಲ್ಲೆಗೆ ಹರಿಯಲು ಯಾರೆಲ್ಲಾ ಕಾರಣ ಗೊತ್ತಾ | ನೀರಾವರಿ ಯೋಜನೆ ಕುರಿತು ಶ್ರೀ ಶಾಂತವೀರ ಸ್ವಾಮೀಜಿ ಮುಕ್ತ ಮಾತು
ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಶ್ವ ನ್ಯೂಮೋನಿಯ ದಿನದ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ನ್ಯೂಮೋನಿಯಾ ಐದು ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುವ ಶ್ವಾಸಕೋಶದ ಸೋಂಕು, ವಾಯು ಮಾಲಿನ್ಯ ಮಕ್ಕಳ ಶ್ವಾಸಕೋಶದ ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿದೆ. ಜ್ವರ, ಹಸಿವು ಇಲ್ಲದಿರುವುದು, ಕೆಮ್ಮು ಮತ್ತು ಹಳದಿ ರಕ್ತದ ಕಫ ಇವು ನ್ಯೂಮೊನಿಯಾದ ಲಕ್ಷಣಗಳು. ಸರಿಯಾದ ಸ್ತನ್ಯಪಾನ ನೀಡದಿರುವುದು, ಅಪೌಷ್ಟಿಕತೆ ಕೈತೊಳೆಯುವ ಸೌಲಭ್ಯ ಇಲ್ಲದಿರುವುದು, ಕಡಿಮೆ ಜನನ ತೂಕ ಇವು ನ್ಯೂಮೊನಿಯಾದ ಅಪಾಯಕಾರಿ ಅಂಶಗಳಾಗಿವೆ ಎಂದು ತಿಳಿಸಿದರು.
ನ್ಯೂಮೋನಿಯ ತಡೆಯಲು ಮೊದಲ ಆರು ತಿಂಗಳು ಮಗುವಿಗೆ ತಾಯಿಯ ಎದೆಹಾಲನ್ನು ಮಾತ್ರ ನೀಡುವುದು. ಸಾಕಷ್ಟು ಪೌಷ್ಠಿಕಾಂಶವನ್ನು ಮಕ್ಕಳಿಗೆ ಒದಗಿಸುವುದು, ಸರಿಯಾದ ಸಮಯಕ್ಕೆ ಚುಚ್ಚುಮದ್ದು ಹಾಕಿಸುವುದು, ಮನೆಯೊಳಗೆ ಮಾಲಿನ್ಯ ನಿಯಂತ್ರಿಸಿ, ನ್ಯೂಮೋನಿಯಾ ಲಕ್ಷಣಗಳು ಕಂಡು ಬಂದಲ್ಲಿ 24 ಗಂಟೆ ಒಳಗೆ ಆರೋಗ್ಯ ಸೇವೆಗಳ ಪಡೆದಲ್ಲಿ ರೋಗ ಹರಡದಂತೆ ತಡೆಯಬಹುದು ಎಂದರು.
ಇದನ್ನೂ ಓದಿ: ಅಬಕಾರಿ ಅಧಿಕಾರಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ
ಆರೋಗ್ಯ ಇಲಾಖೆ ನೌಕರರು ಸಾರ್ವಜನಿಕರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಮುಖಾಂತರ ಸಕಾಲಕ್ಕೆ ಉಚಿತವಾದ ಲಸಿಕೆ ನೀಡಿ ಐದು ವರ್ಷದ ಒಳಗಿನ ಮಕ್ಕಳ ಮರಣ ಪ್ರಮಾಣ ತಗ್ಗಿಸಲು ಶ್ರಮವಹಿಸಬೇಕು ಎಂದರು.
ತಾಲೂಕ ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಕಳೆದ ನವಂಬರ್ 12 ರಿಂದ ಮುಂಬರುವ ಫೆಬ್ರವರಿ 28 ರ ವರೆಗೆ ಆಶಾ ಕಾರ್ಯಕರ್ತೆಯರು ಸೇರಿದಂತೆ ಮುಂಚೂಣಿ ಆರೋಗ್ಯ ಕಾರ್ಯಕರ್ತರು ಐದು ವರ್ಷದ ಒಳಗಿನ ಮಕ್ಕಳ ಮನೆ ಭೇಟಿಗಳನ್ನು ನಡೆಸಿ, ಆರಂಭಿಕ ಹಂತದಲ್ಲಿ ನ್ಯೂಮೋನಿಯ ಪ್ರಕರಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ, ನಿರ್ವಹಣೆ, ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆ ಆಸ್ಪತ್ರೆಗೆ ರೆಫರ್ ಮಾಡಿ ಚಿಕಿತ್ಸೆಗೆ ಸಹಕರಿಸಬೇಕೆಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ನ್ಯೂಮೋನಿಯಾ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮವು 2019 ರಿಂದ ದೇಶ ವ್ಯಾಪಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ನ್ಯೂಮೋನಿಯ ಪೀಡಿತ ಮಕ್ಕಳ ಆರೋಗ್ಯ ಸುಧಾರಿಸಲು ಹಾಗೂ ಮಾಹಿತಿ ಶಿಕ್ಷಣದ ಮೂಲಕ ಐದು ವರ್ಷದೊಳಗಿನ ಮಕ್ಕಳ ಮರಣ ದರ ಕಡಿಮೆ ಮಾಡಲು ಇದು ಪರಿಣಾಮಕಾರಿಯಾದ ಕಾರ್ಯಕ್ರಮವಾಗಿದೆ ಎಂದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 11 | ಹತ್ತಿ ರೇಟ್ ಎಷ್ಟಿದೆ?
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಬಾಬು, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಆರೋಗ್ಯ ಇಲಾಖೆಯ ಬಾಗೇಶ್ ಉಗ್ರಾಣ, ಆರೋಗ್ಯ ನಿರೀಕ್ಷಣಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ನಿರ್ಮಲ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಮತ್ತು ಮೇಲ್ವಿಚಾರಕರು ಹಾಗೂ ಮತ್ತಿತರರು ಹಾಜರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
