ಮುಖ್ಯ ಸುದ್ದಿ
ಕುಂಭ ಮೇಳದಲ್ಲಿ ಚಿತ್ರದುರ್ಗ ಮೂಲದ ನಾಗಾಸಾಧು ನಿಧನ

CHITRADURGA NEWS | 31 JANUARY 2025
ಚಿತ್ರದುರ್ಗ: ಉತ್ತರ ಪ್ರದೇಶದ ಪ್ರಯಾಗರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆಯಂದು ನಡೆದ ದುರಂತದಲ್ಲಿ ಚಿತ್ರದುರ್ಗದಲ್ಲಿ ವಾಸ್ತವ್ಯ ಹೊಂದಿದ್ದ ನಾಗಾಸಾಧು ಒಬ್ಬರು ಮೃತಪಟ್ಟಿರುವ ಪ್ರಕರಣ ಇಂದು ಬೆಳಕಿಗೆ ಬಂದಿದೆ.
ನಗರದ ಹೊರವಲಯದ ಬಂಜಾರ ಗುರುಪೀಠದಲ್ಲಿ ಸರ್ದಾರ್ ಶ್ರೀ ಸೇವಾಲಾಲ್ ಸ್ವಾಮೀಜಿ ಅವರ ಒಡನಾಡಿಯಾಗಿದ್ದ ನಾಗಾಸಾಧು ರಾಜನಾಥ್ ಮಹಾರಾಜ್(49) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಬಿಸಿಎಂ ಅಧಿಕಾರಿ ಮೇಲೆ ಲೋಕಾಯುಕ್ತ ದಾಳಿ
ಮೌನಿ ಅಮಾವಾಸ್ಯೆಯಂದು ನಡೆದ ಅಮೃತ ಸ್ನಾನದ ವೇಳೆ ನಡೆದ ಕಾಲ್ತುಳಿತದಲ್ಲಿ ರಾಜನಾಥ್ ಮಹಾರಾಜ್ ಮೃತಪಟ್ಟಿದ್ದಾರೆ ಎಂದು ಸೇವಾಲಾಲ್ ಸ್ವಾಮೀಜಿ ಅವರಿಗೆ ಉತ್ತರ ಪ್ರದೇಶದಿಂದ ಮಾಹಿತಿ ಬಂದಿದೆ.
ಈ ಹಿನ್ನೆಲೆಯಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮೃತ ಶ್ರೀಗಳ ಪಾರ್ಥಿವ ಶರೀರವನ್ನು ಚಿತ್ರದುರ್ಗಕ್ಕೆ ತರಿಸಿಕೊಡಲು ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಚಿತ್ರದುರ್ಗ ಹೊರವಲಯದ ಸೇವಾಲಾಲ್ ಗುರುಪೀಠದಲ್ಲಿ ಸರ್ದಾರ್ ಶ್ರೀ ಸೇವಾಲಾಲ್ ಸ್ವಾಮೀಜಿ ಅವರ ಒಡನಾಟದಲ್ಲಿದ್ದ ರಾಜನಾಥ್ ಮಹಾರಾಜ್ ಅವರು, 13 ದಿನಗಳ ಹಿಂದೆ ಮಹಾಕುಂಭ ಮೇಳಕ್ಕೆ ತೆರಳಿದ್ದರು.
ಇದನ್ನೂ ಓದಿ: ಕುಂಭಮೇಳದಲ್ಲಿ ಕೋಟೆನಾಡಿನ ಮಠಧೀಶರು | ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ
ರಾಜನಾಥ್ ಮಹಾರಾಜ್ ಅವರ ಆಧಾರ್ ಕಾರ್ಡ್‍ನಲ್ಲಿ ನಮ್ಮ ಮಠದ ವಿಳಾಸ ಇದ್ದ ಕಾರಣಕ್ಕೆ ಅಲ್ಲಿನ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮುಖ್ಯಮಂತ್ರಿ ಆಪ್ತರ ಮೂಲಕ ಮೃತ ರಾಜನಾಥ್ ಮಹಾರಾಜ್ ಅವರ ಪಾರ್ಥಿವ ಶರೀರವನ್ನು ಚಿತ್ರದುರ್ಗಕ್ಕೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರನ್ನೂ ಸಂಪರ್ಕಿಸಿ ಚಿತ್ರದುರ್ಗಕ್ಕೆ ಶ್ರೀಗಳ ಪಾರ್ಥಿವ ಶರೀರ ತರಿಸಲು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಲದಲ್ಲಿ ನಾಲ್ಕು ಚಿರತೆಗಳು ಪತ್ತೆ | ಆತಂಕದಲ್ಲಿ ರೈತರು
ಕರ್ನಾಟಕ ಮೂಲದ ಈ ನಾಗಾಸಾಧು 14ನೇ ವಯಸ್ಸಿಗೆ ಸನ್ಯಾಸ ಸ್ವೀಕರಿಸಿ, ಉಂತ್ತರ ಭಾರತದ ಗುಜರಾತ್, ಹಿಮಾಲಯದಲ್ಲಿ 35 ವರ್ಷಗಳ ಕಾಲ ನಾಗಾಸಾಧುವಾಗಿದ್ದರು.
7 ವರ್ಷಗಳ ಹಿಂದೆ ಸೇವಾಲಾಲ್ ಸ್ವಾಮೀಜಿ ಪರಿಚಯವಾದ ನಂತರ ಚಿತ್ರದುರ್ಗಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಆಗಾಗ, 2-3 ತಿಂಗಳುಗಳ ಕಾಲ ಸಂಚಾರಕ್ಕೆ ಹೋಗಿ ಮತ್ತೆ ವಾಪಾಸು ಬರುತ್ತಿದ್ದರು ಎಂದು ಸೇವಾಲಾಲ್ ಸ್ವಾಮೀಜಿ ಸ್ಮರಿಸಿಕೊಂಡಿದ್ದಾರೆ.
