CHITRADURGA NEWS | 09 MARCH 2026
ಚಿತ್ರದುರ್ಗ: ಯುವಕರು ದೇಶದ ಶಕ್ತಿ, ಸಂಪತ್ತು ಮತ್ತು ಭವಿಷ್ಯ. ಈ ನಿಟ್ಟಿನಲ್ಲಿ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಯುವ ಪೀಳಿಗೆಗೆ ಸ್ಪಷ್ಟ ಅರಿವು ಇರಬೇಕು. ಇಲ್ಲವಾದರೆ ಭವಿಷ್ಯ ಕರಾಳವಾಗಲಿದೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವುಯಾದವ್ ಹೇಳಿದರು.
ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣೆ ಶಿಬಿರ
ನಗರದ ಡಾನ್ ಬೋಸ್ಕೋ ಪದವಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ, ದಾವಣಗೆರೆ ವಿಶ್ವವಿದ್ಯಾಲಯ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಯುವ ಸಂಸತ್ ಸ್ಪರ್ಧೆಯಲ್ಲಿ ‘ತುರ್ತು ಪರಿಸ್ಥಿತಿಗೆ 50 ವರ್ಷ; ಭಾರತೀಯ ಪ್ರಜಾಪ್ರಭುತ್ವಕ್ಕೆ ಪಾಠಗಳು’ ಕುರಿತ ಅಣಕು ಸಂಸತ್ ಮಾದರಿಯ ಪರ- ವಿರೋಧ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ದೇಶದ ಜನಸಂಖ್ಯೆಯಲ್ಲಿ ಬಹುಪಾಲು ಯುವ ಜನರಿದ್ದಾರೆ. ವಿಕಸಿತ ಭಾರತ ನಿರ್ಮಾಣ ಮಾಡಲು ಯುವಕರ ಚಿಂತನೆಗಳು ಸಕಾರಾತ್ಮವಾಗಿರಬೇಕು. ಜತೆಗೆ ಅಭಿವೃದ್ಧಿ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಲ್ಲಬೇಕು ಎಂದರು.
ವಿಕಸಿತ ಭಾರತದ ಪರಿಕಲ್ಪನೆ ಎಂದರೆ ಕೇವಲ ಆರ್ಥಿಕ ಬೆಳವಣಿಗೆ ಮಾತ್ರವಲ್ಲದೆ ಸಮಾನತೆ, ಸ್ವಚ್ಛತೆ, ಶಾಂತಿ, ವೈಜ್ಞಾನಿಕ ಮನೋಭಾವನೆ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಬೇಕು. ಯುವಕರು ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸತ್ಯ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮದಿಂದ ಬರೆಯಿರಿ | ಇಓ ರವಿಕುಮಾರ್
ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜ್ಞಾನ, ಕೌಶಲ ಮತ್ತು ನೈತಿಕ ಮೌಲ್ಯಗಳನ್ನು ಯಾವ ರೀತಿ ವೃದ್ಧಿಸಿಕೊಳ್ಳುವ ಮೂಲಕ ಯುವಕರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಡಾನ್ ಬೋಸ್ಕೋ ಪದವಿ ಕಾಲೇಜು ಪ್ರಾಂಶುಪಾಲ ಫಾ.ಬೆನ್ನಿ ಕ್ರಿಸ್ತುದಾಸ್ ಮಾತನಾಡಿ, ವಿಶ್ವದಲ್ಲೇ ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿರುವ ಭಾರತ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದ ಯುವಶಕ್ತಿ ಸಕಾರಾತ್ಮಕವಾಗಿ ಬಳಕೆಯಾಗಬೇಕು. ಯುವಜನತೆ ಸಾಮಾಜಿಕ ಹಾಗೂ ರಾಜಕೀಯ ಅರಿವು ಬೆಳೆಸಿಕೊಳ್ಳಬೇಕು ಎಂದರು.
ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯಲ್ಲಿ ಪರಸ್ಪರ ಚರ್ಚೆ, ಭಿನ್ನಾಭಿಪ್ರಾಯ ಮತ್ತು ನಿರ್ಣಯಗಳು ಪ್ರಮುಖ ಅಂಶಗಳಾಗಿದ್ದು, ಗೌರವದಿಂದ ಸೌಹಾರ್ದಯುತವಾಗಿ ಚರ್ಚಿಸುವ, ಒಳಿತನ್ನು ಆಯ್ಕೆಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬ ಭಾರತೀಯ ನಾಗರಿಕನೂ ಸಂವಿಧಾನವನ್ನು ಗೌರವಿಸುವುದು, ದೇಶದ ಏಕತೆ ಅಖಂಡತೆ ಮತ್ತು ಶಾಂತಿಗಾಗಿ ಕೈಜೋಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಿವೃತ್ತ ಶಿಕ್ಷಕರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ
ಆಡಳಿತಾಧಿಕಾರಿ ಫಾ.ಫೆಲಿಕ್ಸ್ ಸೆರೋವೋ ಮಾತನಾಡಿ, ಇದು ಕೇವಲ ಸ್ಪರ್ಧೆಯಲ್ಲ, ನಾಯಕತ್ವವನ್ನು ಹೊರತರುವ ಒಂದು ವೇದಿಕೆ. ದೇಶದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆ ಅರಿಯಲು ಮತ್ತು ಸಂಸತ್ತಿನ ಕಾರ್ಯವಿಧಾನ ತಿಳಿಯಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಎಂದು ವಿವರಿಸಿದರು.
ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಎನ್.ಧನಕೋಟಿ ಮಾತನಾಡಿ, ಯುವಜನತೆಯ ಆಲೋಚನೆಗಳು ಆಧುನಿಕವಾಗುವುದರ ಜೊತೆಗೆ ಮಾನವೀಯ ಮೌಲ್ಯಗಳು ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿದಾಗ ಮಾತ್ರ ನಿಜವಾದ ‘ವಿಕಸಿತ ಭಾರತ’ ನಿರ್ಮಾಣವಾಗುತ್ತದೆ ಎಂದರು.
ಯುವಶಕ್ತಿ ದೇಶದ ಸಾಮರ್ಥ್ಯ ಹಾಗೂ ಆಸ್ತಿಯಾಗಿದ್ದು ಸದ್ಬಳಕೆಯಾಗಬೇಕು. ಭವಿಷ್ಯದ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ಯುವಜನತೆಯ ಮೇಲಿದ್ದು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.
ಜಿಲ್ಲೆಯ ವಿವಿಧ ಪದವಿ ಕಾಲೇಜುಗಳಿಂದ 30 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 09 | ಮೆಕ್ಕೆಜೋಳ ರೇಟ್..
ಡಾನ್ ಬೋಸ್ಕೋ ಪದವಿ ಕಾಲೇಜಿನ ವೈಷ್ಣವಿ, ನಿಧಿಶ್ರೀ, ಎಸ್‌ಜೆಎಂ ಕಾನೂನು ಕಾಲೇಜಿನ ಆದಿ, ಝೇವಿಬಾ, ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುದಾಸಿರಾ ರಾಜ್ಯಮಟ್ಟಕ್ಕೆ ಆಯ್ಕೆಯಾದರು.
ಉಪ ಪ್ರಾಂಶುಪಾಲ ಫಾ.ಕ್ರಿಸ್ಟಿ ಜೋಸೆಫ್, ಉಪನ್ಯಾಸಕರಾದ ಲೋಕೇಶ್ ನಾಯಕ್, ವಿ.ಪ್ರಸಾದ್, ನಾಗರಾಜ್ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
