ಲೋಕಸಮರ 2024
ಶಾಸಕ ಚಂದ್ರಪ್ಪನ ದೃತರಾಷ್ಟ್ರ ಪ್ರೇಮ ಒಳ್ಳೆಯದಲ್ಲ | ಕೆ.ಎಸ್.ನವೀನ್

CHITRADURGA NEWS | 31 MARCG 2024
ಚಿತ್ರದುರ್ಗ: ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಮ್ಮ ಪುತ್ರನಿಗೆ ಟಿಕೇಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಭೋವಿ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎನ್ನುವುದನ್ನು ನಿಲ್ಲಿಸಬೇಕು. ಚಂದ್ರಪ್ಪನವರ ದೃತರಾಷ್ಟ್ರ ಪ್ರೇಮ ಒಳ್ಳೆಯದಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಕೆ.ಎಸ್.ನವೀನ್ ಹೇಳಿದರು.
ಬಿಜೆಪಿ ಚುನಾವಣಾ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಪ್ಪ, ಎಷ್ಟು ಜನ ಭೋವಿ ನಾಯಕರನ್ನು ಬೆಳೆಸಿದ್ದಾರೆ. ಎಷ್ಟು ಜನರನ್ನು ಜಿಲ್ಲಾ ಪಂಚಾಯಿತಿ, ನಿಗಮ ಮಂಡಳಿಗಳಿಗೆ ತಂದಿದ್ದಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕೆರೆಗೆ ನೀರು ಹರಿಸದಿದ್ದರೆ ಚುನಾವಣೆ ಬಹಿಷ್ಕಾರ | ಗ್ರಾಮಗಳಲ್ಲಿ ಪಾದಯಾತ್ರೆ
ಚಿತ್ರದುರ್ಗ ಲೋಕಸಭೆ ಎಸ್ಸಿ ಮೀಸಲು ಕ್ಷೇತ್ರವಾದ ತಕ್ಷಣ ಭೋವಿ ಸಮುದಾಯದ ಜನಾರ್ಧನಸ್ವಾಮಿ ಅವರಿಗೆ ಟಿಕೇಟ್ ಕೊಡಲಾಗಿತ್ತು. ಹೊಳಲ್ಕೆರೆ ಮೀಸಲು ಕ್ಷೇತ್ರವಾದ ವರ್ಷದಿಂದ ಈವರೆಗೆ ಬಿಜೆಪಿ ಭೋವಿ ಸಮುದಾಯದ ಚಂದ್ರಪ್ಪ ಅವರಿಗೆ ಟಿಕೇಟ್ ನೀಡುತ್ತಿದೆ. ಹೊಸದುರ್ಗ ಸಾಮಾನ್ಯ ಕ್ಷೇತ್ರದಲ್ಲಿ ಗೂಳಿಹಟ್ಟಿ ಶೇಖರ್ ಅವರಿಗೆ ಟಿಕೇಟ್ ಕೊಟ್ಟಿದೆ. ಗೂಳಿಹಟ್ಟಿಗೆ ಟಿಕೇಟ್ ಕೈ ತಪ್ಪಿದಾಗ ಚಂದ್ರಪ್ಪ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ನವೀನ್ ಕೇಳಿದರು.
ಹೊಳಲ್ಕೆರೆಯಲ್ಲಿ ಅತೀ ಹೆಚ್ಚು ಲಿಂಗಾಯತ ಮತದಾರರಿದ್ದಾರೆ. ಇವರ ನಡವಳಿಕೆಯಿಂದ ಅಲ್ಲಿ ಬೇಸರವಾಗಿದ್ದಾರೆ. ಚಿತ್ರದುರ್ಗದಂತಹ ಒಂದು ಕ್ಷೇತ್ರಕ್ಕೆ ಮುತ್ಸದ್ದಿ ರಾಜಕಾರಣಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ನಾಯಕರಿಗೆ ಬ್ಲಾಕ್‍ಮೇಲ್ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ ಅಂತಹ ಅನಿವಾರ್ಯತೆ ಅವರಿಗೆ ಏನಿದೆ ಹೇಳಿ ಎಂದ ಅವರು, ಚಂದ್ರಪ್ಪ ಅವರನ್ನು ಬೆಳೆಸಿದ ಬಿ.ಟಿ.ಚನ್ನಬಸಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಪೋಟೊವನ್ನು ಮನೆಯಲ್ಲಿ ಹಾಕಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಯಡಿಯೂರಪ್ಪ ಮೇಲಿನ ವಿಶ್ವಾಸ ಅಚಲ | ತಂದೆಯ ಸ್ಥಾನದಲ್ಲಿ ನಿಂತು ನ್ಯಾಯ ಕೊಡುವ ವಿಶ್ವಾಸವಿದೆ | ಎಂ.ಸಿ.ರಘುಚಂದನ್
ಜನರ ಮುಂದೆ ಯಡಿಯೂರಪ್ಪ ಕುತ್ತಿಗೆ ಕೊಯ್ದರು ಎಂದು ಹೇಳಿ, ಮಾಧ್ಯಮಗಳ ಮುಂದೆ ತಂದೆ ಸಮಾನ ಎನ್ನುತ್ತಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಹೊಳಲ್ಕೆರೆ ಕ್ಷೇತ್ರದ ಜನ ನೋವಿನಲ್ಲಿದ್ದಾರೆ. ಈಗಲೂ ಚಂದ್ರಪ್ಪ ಅವರ ಕೈಯಲ್ಲೇ ನಿರ್ಧಾರ ಇದೆ. ತಮ್ಮ ಪಟ್ಟು ಸಡಿಲಿಸಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲಿ ಎಂದು ತಿಳಿಸಿದರು.
ರಘುಚಂದನ್ ಕಳ್ಳಿನರಸಪ್ಪನ ಕೆಲಸ ಮಾಡಿ ಟಿಕೇಟ್ ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ. ಹಾಗಂದರೇನು ಎನ್ನುವುದನ್ನು ತಿಳಿಸಬೇಕು. ಇನ್ನೂ ಬೆಳೆಯುವ ಯುವ ನಾಯಕ. ಪಕ್ಷದಲ್ಲಿ ಮುಂದೆ ಭವಿಷ್ಯವಿದೆ. ಹಾಗಾಗಿ ತಮ್ಮ ನಿರ್ಧಾರ ಬದಲಾವಣೆ ಮಾಡಿಕೊಳ್ಳಲಿ ಎಂದು ಹೇಳಿದರು.
ಸಾಮಾಜಿಕ ನ್ಯಾಯದಡಿ ಚಿತ್ರದುರ್ಗಕ್ಕೆ ಎಡಗೈ ಸಮಾಜಕ್ಕೆ ಟಿಕೇಟ್:
ಸಾಮಾಜಿಕ ನ್ಯಾಯದಡಿ ಚಿತ್ರದುರ್ಗದಲ್ಲಿ ಎಸ್ಸಿ ಎಡಗೈ ಸಮುದಾಯಕ್ಕೆ ಟಿಕೇಟ್ ಕೊಡಲಾಗಿದೆಯೇ ಹೊರತು, ಶಾಸಕ ಎಂ.ಚಂದ್ರಪ್ಪ ಪುತ್ರ ರಘುಚಂದನ್ ಅವರಿಗೆ ತಪ್ಪಿಸುವ ಉದ್ದೇಶದಿಂದಲ್ಲ ಎಂದು ನವೀನ್ ಸ್ಪಷ್ಟಪಡಿಸಿದರು.
ರಾಜ್ಯದ 5 ಎಸ್ಸಿ ಮೀಸಲು ಕ್ಷೇತ್ರಗಳ ಪೈಕಿ ಬಿಜೆಪಿ ಸೋಷಿಯಲ್ ಇಂಜಿನಿಯರಿಂಗ್ ಮಾಡಿ, ನಮ್ಮ ಮಿತ್ರ ಪಕ್ಷ ಜೆಡಿಎಸ್ ಕೋಲಾರದಲ್ಲಿ ಭೋವಿ ಸಮುದಾಯಕ್ಕೆ ಟಿಕೇಟ್ ಫೈನಲ್ ಮಾಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಕಾರಜೋಳ ಅವರಿಗೆ ಘೋಷಣೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ರಘುಚಂದನ್ ಮನವೊಲಿಕೆಗೆ ಬಿಜೆಪಿ ಯತ್ನ | ತಡರಾತ್ರಿವರೆಗೆ ಮಾತುಕತೆ | ಶಾಸಕ ಚಂದ್ರಪ್ಪ ಮನೆಗೆ ಎನ್.ರವಿಕುಮಾರ್ ಭೇಟಿ
ಶಾಸಕ ಎಂ.ಚಂದ್ರಪ್ಪ ಹಾಗೂ ರಘುಚಂದನ್ ಅವರನ್ನು ಬಿಜೆಪಿಗೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಎತ್ತಿಕಟ್ಟುವ ಕೆಲಸ ಮಾಡಿದ್ದಾರೆ. ದಲಿತ ನಾಯಕ, ಉಪಮುಖ್ಯಮಂತ್ರಿ ಆಗಿದ್ದವರಿಗೆ ಮೊಟ್ಟೆ ಎಸೆಯಲು, ಕಪ್ಪು ಆಯಿಲ್ ಬಳಿಯಲು, ಕಪ್ಪು ಭಾವುಟ ಪ್ರದರ್ಶನ ಮಾಡಲು ಸಜ್ಜಾಗಿದ್ದರು ಎನ್ನುವ ಮಾಹಿತಿಗಳು ಪೊಲೀಸರಿಂದ ನಮಗೆ ಸಿಕ್ಕಿದ ಹಿನ್ನೆಲೆಯಲ್ಲಿ ಮಾರ್ಗ ಬದಲಾಯಿಸಬೇಕಾಯಿತು. ಅವರ ಬೆಂಬಲಿಗರು ಎಂದು ಹೇಳಿಕೊಂಡವರು ಹೀಗೆ ಮಾಡಲು ಹೊರಟಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹೊಳಲ್ಕೆರೆಯಲ್ಲೂ ಶನಿವಾರ ಬೆಂಬಲಿಗರು ಸೇರಿ ಪ್ರತಿಭಟನೆ ಮಾಡಿದ್ದಾರೆ. ಹೀಗೆ ಬಿಜೆಪಿಯನ್ನು ಹೆದರಿಸುವ ಪ್ರಯತ್ನ ಮಾಡಿದರೆ ನಡೆಯುವುದಿಲ್ಲ. ಬಿಜೆಪಿ ಇಂತಹ ನೂರಾರು ಚುನಾವಣೆ, ಸಾವಿರಾರು ಟಿಕೇಟ್ ಕೊಟ್ಟಿದೆ. ಇಂದಿನಿಂದ ಯಾರಾದರೂ ಗೋ ಬ್ಯಾಕ್ ಎಂದರೆ ತಕ್ಕ ಶಾಸ್ತಿ ಮಾಡಲು ಬಿಜೆಪಿ ಸಿದ್ಧವಾಗಿದೆ. ಬಿಜೆಪಿ ಕಾರ್ಯಕರ್ತರು ಆ ವೇದಿಕೆಗಳಲ್ಲಿ ಕಾಣಿಸಿಕೊಂಡರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಏಪ್ರಿಲ್ 12ರಂದು ಹೊಳಲ್ಕೆರೆಯಲ್ಲಿ ಬೃಹತ್ ಸಮಾವೇಶ:
ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರ ಹೊಳಲ್ಕೆರೆ ಪ್ರವೇಶ ಮಾಡಲು ಅಡ್ಡಿ ಮಾಡಿದ್ದಾರೆ. ಈ ಬಗ್ಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಜೊತೆಗೆ ಮಾತನಾಡಿದ್ದು, ಏಪ್ರಿಲ್ 12 ರಂದು 50 ಸಾವಿರ ಜನರನ್ನು ಸೇರಿಸಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆ.ಎಸ್.ನವೀನ್ ತಿಳಿಸಿದರು.
ಇದನ್ನೂ ಓದಿ: ಹೊಳಲ್ಕೆರೆ ಪ್ರವಾಸ ರದ್ದುಗೊಳಿಸಿದ ಕಾರಜೋಳ | ಮಾರ್ಗ ಬದಲಾಯಿಸಿ ಸಂಚಾರ
ಏ.2 ರಂದು ರಾಜ್ಯಕ್ಕೆ ಕೇಂದ್ರ ನಾಯಕ ಅಮಿತ್ ಶಾ ಆಗಮಿಸಲಿದ್ದು, ಅಲ್ಲಿ ಚಿತ್ರದುರ್ಗದ ಸಮಸ್ಯೆಯೂ ಚರ್ಚೆಗೆ ಬರಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮುಖಂಡರಾದ ಜಿ.ಟಿ.ಸುರೇಶ್, ಸಂಪತ್, ಎಸ್.ಆರ್.ಗಿರೀಶ್, ಛಲವಾದಿ ತಿಪ್ಪೇಸ್ವಾಮಿ, ನವೀನ್ ಇತರರಿದ್ದರು.
