ಲೋಕಸಮರ 2024
ರಘುಚಂದನ್ ಮನವೊಲಿಕೆಗೆ ಬಿಜೆಪಿ ಯತ್ನ | ತಡರಾತ್ರಿವರೆಗೆ ಮಾತುಕತೆ | ಶಾಸಕ ಚಂದ್ರಪ್ಪ ಮನೆಗೆ ಎನ್.ರವಿಕುಮಾರ್ ಭೇಟಿ

CHITRADURGA NEWS | 31 MARCH 2024
ಚಿತ್ರದುರ್ಗ: ಬಿಜೆಪಿ ಟಿಕೇಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಎಂ.ಚಂದ್ರಪ್ಪ ಮನೆಗೆ ಬಿಜೆಪಿ ಮುಖಂಡ ಹಾಗೂ ಎಂಎಲ್ಸಿ ಎನ್.ರವಿಕುಮಾರ್ ಶನಿವಾರ ರಾತ್ರಿ ಆಗಮಿಸಿ ಮಾತುಕತೆ ನಡೆಸಿದರು.
ಎನ್.ರವಿಕುಮಾರ್ ಭೇಟಿ ವೇಳೆ ಶಾಸಕ ಎಂ.ಚಂದ್ರಪ್ಪ ಮನೆಯಲ್ಲಿರಲಿಲ್ಲ. ಚಳ್ಳಕೆರೆಯಲ್ಲಿ ಮುಖಂಡರ ಭೇಟಿಗೆ ತೆರಳಿದ್ದರು.

ಇದನ್ನೂ ಓದಿ: ಬಿಜೆಪಿ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲು ಆಗಿದೆ | ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ | ಬಿ.ಎನ್ ಚಂದ್ರಪ್ಪ
ಮನೆಯಲ್ಲಿ ಯುವ ಮುಖಂಡ ಎಂ.ಸಿ.ರಘುಚಂದನ್ ಹಾಗೂ ಅವರ ತಾಯಿ ಚಂದ್ರಕಲಾ ಅವರ ಜೊತೆಗೆ ಸುಧೀರ್ಘವಾಗಿ ರವಿಕುಮಾರ್ ಚರ್ಚೆ ನಡೆಸಿದರು. ರಾತ್ರಿ 11 ಗಂಟೆ ವೇಳೆಗೆ ಮನೆಯಿಂದ ಹೊರಗೆ ಬಂದರು. ಈ ವೇಳೆ ರಘುಚಂದನ್ ಕೂಡಾ ಗೇಟ್ ವರೆಗೆ ಬಂದು ರವಿಕುಮಾರ್ ಅವರನ್ನು ಬೀಳ್ಕೊಟ್ಟರು.
ಹೊರಗೆ ಕಾಯುತ್ತಿದ್ದ ಸುದ್ದಿಗಾರರು, ರವಿಕುಮಾರ್ ಅವರನ್ನು ಸಂಧಾನ ಯಶಸ್ವಿಯಾಯಿತಾ ಸರ್ ಎಂದು ಪ್ರಶ್ನಿಸಿದಾಗ, ಚಂದ್ರಪ್ಪ ನಮ್ಮ ಹಿರಿಯ ಶಾಸಕರು, ರಾಜ್ಯ ನಾಯಕರು, ಅವರ ಮನೆ ಭೇಟಿಗೆ ಬಂದಿದ್ದೇನೆ ಎಂದರು.
ಇದನ್ನೂ ಓದಿ: ಹೊಳಲ್ಕೆರೆ ಶಾಸಕರ ಕ್ಷಮೆಗೆ ಸ್ವಕ್ಷೇತ್ರದವರ ಪಟ್ಟು | ತಟ್ಟಲಿದೆ ನಿಷ್ಠಾವಂತರ ಶಾಪ
ಚಂದ್ರಪ್ಪ ತಮ್ಮ ಸುಪತ್ರ ರಘುಚಂದನ್ ಅವರಿಗೆ ಲೋಕಸಭೆಗೆ ಟಿಕೇಟ್ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ತಾಯಿ ಮತ್ತು ರಘು ಜೊತೆಗೆ ಮಾತನಾಡಿದ್ದೇವೆ.
ಮುಂದೆ ಇನ್ನೂ ಅವಕಾಶಗಳಿವೆ. ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ. ಒಳ್ಳೆಯ ದಿನಗಳು ಬರಲಿವೆ. ಬಿಜೆಪಿಯಲ್ಲಿ ಭವಿಷ್ಯವಿದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ ಎಂದು ವಿವರಿಸಿದರು.
ಅವರು ಅಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎನ್ನುವ ವಿಶ್ವಾಸವಿದೆ. ಮುಂದೆ ಅವರ ಜೊತೆಗೆ ನಮ್ಮ ನಾಯಕರು ಕೂಡಾ ಮಾತನಾಡುತ್ತಾರೆ ಎಂದು ತಿಳಿಸಿ ರವಿಕುಮಾರ್ ತೆರಳಿದರು.
ಈ ವೇಳೆ ಮುಖಂಡರಾದ ಮಲ್ಲಿಕಾರ್ಜುನ್, ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೆ ಮತ್ತಿತರರಿದ್ದರು.
