ಮುಖ್ಯ ಸುದ್ದಿ
ರಾಜ್ಯ ಬಿಜೆಪಿ ವಕ್ತಾರರಾಗಿ ಕೆ.ಎಸ್.ನವೀನ್ ನೇಮಕ | ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ

ಚಿತ್ರದುರ್ಗ ನ್ಯೂಸ್.ಕಾಂ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಶಾಸಕ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆ ಕಾರ್ಯಕ್ಕೆ ವೇಗ ನೀಡಿದ್ದಾರೆ. ಹಂತ ಹಂತವಾಗಿ ಹೊಸ ತಂಡ ಕಟ್ಟುತ್ತಿದ್ದಾರೆ.
ಕೆಲ ದಿನ ಹಿಂದೆಯಷ್ಟೇ ರಾಜ್ಯ ಬಿಜೆಪಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶಿಸಿದ್ದರು. ಅದರ ಬೆನ್ನಲ್ಲೇ ಪಕ್ಷದ ಮುಖ್ಯ ವಕ್ತಾರರು, ವಕ್ತಾರರು, ಸಾಮಾಜಿಕ ಜಾಲತಾಣ ಸಂಚಾಲಕರು, ಸಹ-ಸಂಚಾಲಕರು, ಮಾಹಿತಿ ತಂತ್ರಜ್ಞಾನ ವಿಭಾಗದ (ಐಟಿ) ಸಂಚಾಲಕರು, ಸಹ-ಸಂಚಾಲಕರು ಮತ್ತು ಮಾಧ್ಯಮ ವಿಭಾಗ ಸಂಚಾಲಕರನ್ನು ಸಹ ನೇಮಿಸಿ ಗುರುವಾರ ಆದೇಶಿಸಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದ ಹಿರಿಯ ಸಾಹಿತಿ ಪ್ರೊ.ಎಚ್.ಶ್ರೀಶೈಲ ಆರಾಧ್ಯ ಇನ್ನಿಲ್ಲ
ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ಅವರನ್ನು ಮುಖ್ಯ ವಕ್ತಾರರನ್ನಾಗಿ ನೇಮಕ ಮಾಡಿದ್ದು, ಚಿತ್ರದುರ್ಗ– ದಾವಣಗೆರೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಸೇರಿ 10 ಜನರನ್ನು ವಕ್ತಾರರನ್ನಾಗಿ ನೇಮಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಅವರು ಈ ಹಿಂದೆ ಸಂಘ ಪರಿವಾರದ ಧರ್ಮ ಜಾಗರಣದಲ್ಲಿ ಸೇವೆ ಸಲ್ಲಿಸಿ, ನಂತರ ಬಿಜೆಪಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2017 ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, 2019 ಬಿಜೆಪಿ ರಾಜ್ಯ ಕಾರ್ಯದರ್ಶಿ, ತುಮಕೂರು–ದಾವಣಗೆರೆ– ಚಿತ್ರದುರ್ಗ ಜಿಲ್ಲೆ ಪ್ರಭಾರಿಯಾಗಿದ್ದರು. ಬಳಿಕ 2021 ವಿಧಾನ ಪರಿಷತ್ ಸದಸ್ಯರಾಗಿ ಚುನಾಯಿತಗೊಂಡಿದ್ದಾರೆ.
ಉಳಿದಂತೆ ತಂಡದಲ್ಲಿ ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ, ಛಲವಾದಿ ನಾರಾಯಣಸ್ವಾಮಿ, ಡಾ. ತೇಜಸ್ವಿನಿ ಗೌಡ, ಎಂ.ಜಿ. ಮಹೇಶ್, ಎಚ್.ಎನ್. ಚಂದ್ರಶೇಖರ್, ಡಾ. ನರೇಂದ್ರ ರಂಗಪ್ಪ, ಕು. ಸುರಭಿ ಹೊದಿಗೆರೆ, ಅಶೋಕ್ ಕೆ.ಎಂ. ಗೌಡ, ಎಚ್. ವೆಂಕಟೇಶ್ ದೊಡ್ಡೇರಿ ಅವರನ್ನು ಆಯ್ಕೆ ಮಾಡಲಾಗಿದೆ.
ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕರು, ಸಹ-ಸಂಚಾಲಕರು, ಮಾಹಿತಿ ತಂತ್ರಜ್ಞಾನ ವಿಭಾಗದ (ಐಟಿ) ಸಂಚಾಲಕರು, ಸಹ-ಸಂಚಾಲಕರು ಮತ್ತು ಮಾಧ್ಯಮ ವಿಭಾಗ ಸಂಚಾಲಕರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಸಾಮಾಜಿಕ ಜಾಲತಾಣ: ಸಂಚಾಲಕರು: ಪ್ರಶಾಂತ್ ಮಾಕನೂರು, ಸಹ ಸಂಚಾಲಕರು: ನರೇಂದ್ರ ಮೂರ್ತಿ. ಮಾಹಿತಿ ತಂತ್ರಜ್ಞಾನ ವಿಭಾಗ (ಐಟಿ): ಸಂಚಾಲಕರು: ನಿತಿನ್ ರಾಜ್ ನಾಯಕ್, ಸಹ ಸಂಚಾಲಕರು: ಶ್ಯಾಮಲಾ ರಘುನಂದನ್. ಮಾಧ್ಯಮ ವಿಭಾಗ (ಐಟಿ): ಸಂಚಾಲಕರು: ಕರುಣಾಕರ ಖಾಸಲೆ, ಸಹ ಸಂಚಾಲಕರು: ಪ್ರಶಾಂತ್ ಕೆಡಂಜಿ ನೇಮಕಗೊಂಡಿದ್ದಾರೆ.
