Connect with us

    ಮಠಗಳಲ್ಲಿ ಹೋಮ – ಹವನ ನಾಚಿಕೆಗೇಡಿನ ಸಂಗತಿ | ಚಿಂತಕ ಎಸ್‌.ಜಿ.ಸಿದ್ದರಾಮಯ್ಯ

    ಮುಖ್ಯ ಸುದ್ದಿ

    ಮಠಗಳಲ್ಲಿ ಹೋಮ – ಹವನ ನಾಚಿಕೆಗೇಡಿನ ಸಂಗತಿ | ಚಿಂತಕ ಎಸ್‌.ಜಿ.ಸಿದ್ದರಾಮಯ್ಯ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 18 FEBRUARY 2024
    ಚಿತ್ರದುರ್ಗ: 12ನೇ ಶತಮಾನದಲ್ಲಿ ಬದುಕಿನ ಪರಿಭಾಷೆಯಲ್ಲಿ ಹುಟ್ಟಿಕೊಂಡಿದ್ದು ಲಿಂಗಾಯತ ಧರ್ಮ. ಶರಣರು ಸನಾತನದ ವಿರುದ್ಧವಾಗಿ ಪುರಾತನ ಎಂದು ಹೇಳಿದರು. ಲಿಂಗಾಯತ ಧರ್ಮ ನಿಸರ್ಗಕ್ಕೆ ಪೂರಕವಾಗಿರುವ ಧರ್ಮ. ಆದರೂ ಈಗಲೂ ಎಷ್ಟೋ ಮಠಗಳಲ್ಲಿ ಹೋಮ – ಹವನ ನಡೆಯುತ್ತಿರುವುದನ್ನು ನಾಚಿಕೆಗೇಡಿನ ಸಂಗತಿ ಎಂದು ಚಿಂತಕ ಎಸ್‌.ಜಿ.ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

    ಹೊಸದುರ್ಗದ ಸಾಣೇಹಳ್ಳಿಯ ಮಠದಲ್ಲಿ ನಡೆದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಬಿಡುಗಡೆ ಸಮಾರಂಭ ಹಾಗೂ ಮಾನವೀಯ ಸಮಾಜ ನಿರ್ಮಾಣದಲ್ಲಿ ವಚನ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಲಿಂಗಾಯತ ಧರ್ಮ ನಿಸರ್ಗಕ್ಕೆ ಪೂರಕವಾಗಿರುವ ಧರ್ಮ. ಈಗಲೂ ಎಷ್ಟೋ ಮಠಗಳಲ್ಲಿ ಹೋಮ – ಹವನ ನಡೆಯುತ್ತಿರುವುದನ್ನು ನಾಚಿಕೆಗೇಡಿನ ಸಂಗತಿ. ಶರಣರು ವೈದಿಕ ಪಠ್ಯಗಳನ್ನು ವಿರೋಧಿಸುವರು. ಕೇಡಿನ ಮೂಲ ಕುರಿತಂತೆ ಅರಿವಿನ ಎಚ್ಚರದೊಳಗೆ ಮಾತನಾಡುವಂಥವರು. ದಾನದ ವಿರುದ್ಧವಾಗಿ ದಾಸೋಹ ರೂಪ ಕೊಟ್ಟವರು’ ಎಂದರು.

    ‘ಅನೇಕ ವರ್ಗದವರು ನಮ್ಮ ಸಾಂಸ್ಕೃತಿಕ ಗುಲಾಮರನ್ನಾಗಿ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ನಮ್ಮಲ್ಲಿನ ಅಜ್ಞಾನ. ಅಜ್ಞಾನವನ್ನು ಹೋಗಲಾಡಿಸುವ ಕೆಲಸ ಮೊದಲು ಆಗಬೇಕು. ವಚನ ಸಾಹಿತ್ಯವನ್ನಿಟ್ಟುಕೊಂಡು ಕಮ್ಮಟಗಳನ್ನು ಏರ್ಪಡಿಸಿ ಬಸವ ವಿಚಾರಗಳನ್ನು ಪ್ರಸಾರ ಮಾಡಬೇಕು’ ಎಂದು ತಿಳಿಸಿದರು.

    ಇದನ್ನೂ ಓದಿ: ಲೋಕಸಭೆ ಚುನಾವಣೆ ಸ್ಪರ್ಧೆಗೆ ಭೋವಿ ಸಮುದಾಯಕ್ಕೆ ಟಿಕೆಟ್ ನೀಡಿ | ಕಾಂಗ್ರೆಸ್ ನಾಯಕರಿಗೆ ಮನವಿ

    ‘ದಾಸೋಹಕ್ಕೆ ವಿರುದ್ಧವಾದ ಪ್ರಕ್ರಿಯೆ ಬಜೆಟ್. ಮಠಗಳಿಗೆ ಸರಕಾರದಿಂದ ಕೋಟಿ ಕೋಟಿ ಹಣ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರಿಂದ ಮಠವೂ ಕೂಡ ಅಪವೀತ್ರೀಕರಣವಾಗಿದೆ. ಕಾಯಕನೀತಿ ಪ್ರತಿಯೊಬ್ಬರಲ್ಲಿ ಬರಬೇಕಾಗಿದೆ. ವಚನಗಳು ನಮ್ಮ ಬದುಕಿನ ಭಾಗವಾಗಬೇಕು. ಹಂಗಿನಿಂದ ಬಿಡಿಸಿಕೊಳ್ಳುವ ಮುಖೇನ ನಮ್ಮ ಹಕ್ಕನ್ನು ಚಲಾಸಿಕೊಳ್ಳಬೇಕು’ ಎಂದರು.

    ‘ಶ್ರೇಣೀಕರಣದ ವರ್ಗದೊಳಗೆ ಬಸವಣ್ಣ ನೀಚಾತಿನೀಚ ಎನಿಸಿಕೊಂಡು ಎಲ್ಲರಿಗೂ ಹತ್ತಿರವಾದರು. ನಿಗರ್ಸದ ಪರವಾಗಿರುವ ಉಪನಿಷತ್ತುಗಳನ್ನು ಶರಣರು ವಿರೋಧಿಸಿದವರಲ್ಲ. ನಮ್ಮ ನರಳುವಿಕೆಯಿಂದ ಹೊರಬರೋದಕ್ಕೆ ವಚನ ಸಾಹಿತ್ಯ ದಿವ್ಯವೌಷಧಿಯಾಯಿತು. ಹೆಣ್ತನ ಗಂಡ್ತನ ಎಂಬುದು ಅಂದೊಂದು ಅರಿವು, ಪ್ರಜ್ಞೆಯ ಸಂಕೇತ’ ಎಂದು ತಿಳಿಸಿದರು.

    ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ವಿಶ್ವದ ಅನೇಕ ಸಂತರಲ್ಲಿ, ಶರಣರಲ್ಲಿ, ಸಾಮಾಜಿಕ ನೇತಾರರಲ್ಲಿ ಪ್ರಥಮ ಸ್ಥಾನ ಲಭ್ಯವಾಗುವಂಥದ್ದು ಬಸವಣ್ಣನವರಿಗೆ. ಕಾರಣ ಬಸವಣ್ಣನವರು ತಳಮೂಲದ ಸಂಸ್ಕೃತಿಯಿಂದ ಸಮಾಜವನ್ನು ಕಟ್ಟುವ ಕಾರ್ಯ ಮಾಡಿದರು. ಅಜ್ಞಾನ, ಮೂಢನಂಬಿಕೆ, ಮೌಢ್ಯವನ್ನು ಕಿತ್ತುಹಾಕುವ ಕಾರ್ಯದಲ್ಲಿ ಯಶಸ್ವಿಯಾಗಿ ಸಮಸಮಾಜ ಕಟ್ಟುವ ಅವರ ಕನಸು ನನಸಾಯಿತು’ ಎಂದರು.

    ಇದನ್ನೂ ಓದಿ: ಬರಿದಾಗುತ್ತಿದೆ ಸೂಳೆಕೆರೆ | 10 ಅಡಿಗೆ ಕುಸಿದ ನೀರಿನ ಮಟ್ಟ | ಜಲ ಕಂಟಕದ ಆತಂಕ

    ‘ಎಲ್ಲ ಸಂಪತ್ತು ನಮ್ಮಲ್ಲೇ ಇದ್ದಾಗ ಮತ್ತೆ ಬೇರೆ ಕಡೆ ಆ ಸಂಪತ್ತನ್ನು ಹುಡುಕಿಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ಹಿನ್ನಲೆಯಲ್ಲಿ ಸರಕಾರ ವಿಶ್ವಗುರು ಬಸವಣ್ಣನವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಣೆ ಮಾಡಿದೆ. ಬಸವಣ್ಣನವರು ಮೇಲ್ವರ್ಗದ ಜನರನ್ನು ತಮ್ಮ ಕನಸನ್ನು ನನಸನ್ನಾಗಿ ಮಾಡಿಕೊಳ್ಳಲಿಕ್ಕೆ ಬಳಸಿಕೊಳ್ಳಲಿಲ್ಲ. ತಳಸಮುದಾಯದ ಜನರನ್ನು ಸಂಘಟಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ತನ್ಮೂಲಕ ಸಮಾಜದಲ್ಲಿ ಅದ್ಭುತವಾದ ಬದಲಾವಣೆ ತಂದರು. ಅಂತಹ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಂತ ಹೇಳಿ ಸರಕಾರ ಗೌರವಿಸಿದ್ದು ಇಡೀ ಕನ್ನಡ ನಾಡಿಗೆ, ಭಾರತಕ್ಕೆ ಗೌರವ ತಂದುಕೊಟ್ಟ ಹಾಗೆ’ ಎಂದು ತಿಳಿಸಿದರು.

    ಚಿಂತಕ ನಟರಾಜ್ ಬೂದಾಳು ಮಾತನಾಡಿ, ‘ಬಸವಣ್ಣನವರು ಹಾಕಿಕೊಟ್ಟ ವಿಚಾರಗಳನ್ನು ಜಾರಿಗೆ ತರುವಲ್ಲಿ ನಾವೆಲ್ಲ ಸೋತಿದ್ದೇವೆ. ನಮ್ಮ ನಡುವಿನ ಬುದ್ಧ, ಬಸವ, ಅಂಬೇಡ್ಕರ್‌ರವರ ಚಿಂತನೆಗಳು ತತ್ವಗಳು ಕೇವಲ ತತ್ವಗಳಾಗಿ ಉಳಿದುಕೊಳ್ಳದೇ ಆಚರಣೆಗೆ ತಂದಾಗ ಮಾತ್ರ ಏನಾದರೂ ಬದಲಾವಣೆ ಮಾಡಲಿಕ್ಕೆ ಸಾಧ್ಯ. ಬಸವಣ್ಣನವರ ಪೋಟೋ ಹಾಕಿ ಪೂಜೆ ಮಾಡುತ್ತೇವೆ, ಆದರೆ ಹೋಟೇಲ್, ಮನೆಗಳಲ್ಲಿ ಅಸ್ಪೃಶ್ಯರು ಇಂದಿಗೂ ಪ್ರವೇಶ ಆಗದೇ ಇರುವುದು ದುರಂತ’ ಎಂದು ಬೇಸರಿಸಿದರು.

    ‘ಬಸವಣ್ಣ ಸಮಸ್ತ ಕೋಮಿನವರ ಮಧ್ಯ ಇರುವಂಥವರು. ಶರಣರು ತೋರಿಸಿಕೊಟ್ಟ ಮಾರ್ಗದಲ್ಲಿ ಯಾರೂ ನಡೆಯದೇ ಇರುವುದು ಬಸವಣ್ಣನವರಿಗೆ ಮಾಡುತ್ತಿರುವ ಅವಮಾನ. ನಮ್ಮ ಅಜ್ಞಾನವನ್ನು ಸರಿಪಡಿಸಿಕೊಳ್ಳದೇ ಆ ಅಜ್ಞಾನವನ್ನು ಬೇರೆ ವರ್ಗದವರು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಎಚ್ಚರ ಪ್ರತಿಯೊಬ್ಬರಲ್ಲೂ ಇರಬೇಕು. ಅಂತಹ ಅಜ್ಞಾನವನ್ನು ಹೋಗಲಾಡಿಸುವ ಕಾರ್ಯವನ್ನು ನಾವು ಮಾಡಿಕೊಳ್ಳಬೇಕು. ದೇವಸ್ಥಾನಗಳು ಮಾರಾಟಕ್ಕಿವೆ ಎನ್ನುವ ವಾತಾವರಣ ನಿರ್ಮಾಣ ಆಗಾದಾಗ ಮಾತ್ರ ಜ್ಞಾನವಂತರಾಗಲಿಕ್ಕೆ ಸಾಧ್ಯ. ಹಿರಿಯ ವರ್ಗದವರಿಂದ ಮಕ್ಕಳನ್ನು ದಿಕ್ಕುತಪ್ಪಿಸುವ ಕಾರ್ಯ ನಿರಂತರವಾಗಿ ನಡೀತಾ ಇದೆ. ಅವರನ್ನು ದಿಕ್ಕು ತಪ್ಪಿಸದೇ ಸನ್ಮಾರ್ಗದಲ್ಲಿ ಕಡೆದುಕೊಂಡು ಹೋಗುವ ವರ್ಗ ನಿರ್ಮಾಣ ಆಗಬೇಕು’ ಎಂದರು.

    ಚಿಂತಕ ರಹಮತ್ ತರೀಕೆರೆ ಮಾತನಾಡಿ, ‘ಬಸವಣ್ಣನವರನ್ನು ಗೌರವಿಸುವುದು ಎಂದರೆ ನಮ್ಮ ಸುತ್ತಮುತ್ತ ಶ್ರಮಿಕ ವರ್ಗದವರನ್ನು ಗೌರವಿಸುವುದು ಎಂದರ್ಥ. ಬಸವಣ್ಣನವರನ್ನು, ಸಂಸ್ಕೃತಿಯನ್ನು ಉಳಿಸಬೇಕು ಎಂದರೆ ಅದಕ್ಕೊಂದು ಅವಕಾಶ ಮತ್ತು ಜಾಗಬೇಕು. ಆ ಜಾಗವನ್ನು ಬಳಸಿಕೊಳ್ಳಬೇಕೇ ವಿನಃ ಅಚ್ಚಿಕೊಳ್ಳಬಾರದು. 12ನೆಯ ಶತಮಾನದಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಎಲ್ಲ ಶರಣರು ಒಪ್ಪಿಕೊಂಡಿದ್ದರು. ಅದನ್ನು ಈಗ ಸರಕಾರ ಘೋಷಣೆ ಮಾಡಿದೆ’ ಎಂದು ಹೇಳಿದರು.

    ‘ಬಸವಾದಿ ಶರಣರು. ಬಡತನ, ಜಾತಿ, ಗಂಡು ಹೆಣ್ಣಿನ ನಿಲುವೇನು ಎನ್ನುವುದನ್ನು ಶರಣರು ಅರ್ಥ ಮಾಡಿಕೊಂಡಿದ್ದರು. ಶರಣರನ್ನು ಯಾರು ಕೊಂದರೋ ಅವರೇ ಈಗ ಕೋಮುವಾದಿಗಳಾಗಿ ರೂಪಾಂತರ ಹೊಂದುತ್ತಿರುವುದು ದುರಂತ. ಧರ್ಮ ಧರ್ಮಗಳ ಮಧ್ಯ ಇದ್ದ ದ್ವೇಷ ಅಳಿಸಿ ಸಾಮರಸ್ಯ ಮೂಡಿಸುವಂಥದ್ದು ಶರಣರ ಆಶಯ. ನಮ್ಮ ದೋಷಗಳನ್ನು ಒಪ್ಪಿಕೊಳ್ಳದೇ ಹೋದರೇ ಸಾಂಸ್ಕೃತಿಕ ಲೋಕವನ್ನು ಕಟ್ಟಿಕೊಳ್ಳಲಿಕ್ಕೆ ಸಾಧ್ಯವಿಲ್ಲ’ ಎಂದರು.

    ಚಿಂತಕ ಶಿವನಕೆರೆ ಬಸವಲಿಂಗಪ್ಪ, ಬಸವರಾಜ ಸಾದರ, ಐ.ಜಿ.ಚಂದ್ರಶೇಖರಯ್ಯ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top