
CHITRADURGA NEWS | 11 JANUARY 2024
ಚಿತ್ರದುರ್ಗ: ನಾಲ್ಕು ವರ್ಷದ ಪುಟ್ಟ ಕಂದನನ್ನು ಕೊಂದು ಬ್ಯಾಗಿನಲ್ಲಿ ತುಂಬಿಕೊಂಡು ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸುಚನಾ ಸೇಠ್ ಅವರನ್ನು ಗೋವಾ ಪೊಲೀಸರು ನಾನಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸ್ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾದ ಬೆಂಗಳೂರಿನ ನವೋದ್ಯಮ ಆಟಿಫಿಷಿಯಲ್ ಇಂಟಲಿಜೆನ್ಸ್ ಕಂಪನಿಯ ಸಿಇಓ ಸುಚನಾ ತನಿಖೆಯ ವೇಳೆ ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಮಗನನ್ನು ಮುದ್ದಾಡಿ ಬಿಕ್ಕಿ ಬಿಕ್ಕಿ ಅತ್ತ ವೆಂಕಟರಾಮಾನ್
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ತನ್ನ ಹೆತ್ತ ಮಗುವನ್ನೇ ಕೊಲ್ಲುವ ತಾಯಿಯ ನಿರ್ಧಾರ ಕಠಿಣವಾದುದು. ಮಾನಸಿಕ ಖಿನ್ನತೆಯೂ ಇರಬಹುದು. ಈ ಕಾರಣಕ್ಕೆ ಆಕೆಯ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಮಾನಸಿಕ ಪರೀಕ್ಷೆಯನ್ನು ನಡೆಸಲು ಮುಂದಾಗಿದ್ದಾರೆ.
ತನಿಖೆ ವೇಳೆ ‘ನನ್ನ ಮಗುವನ್ನ ನಾನೇಕೆ ಕೊಲ್ಲಲಿ. ರಾತ್ರಿ ಮಲಗಿ ಜ.8 ರಂದು ಬೆಳಗ್ಗೆ ಎದ್ದು ನೋಡಿದಾಗ ಮಗು ಮೃತಪಟ್ಟಿತ್ತು’ ಎಂಬ ಹೇಳಿಕೆಯನ್ನೂ ಸುಚನಾ ನೀಡಿದ್ದಾರೆ.
ಇದನ್ನೂ ಓದಿ: ನನ್ನ ಮಗುವನ್ನು ಕೊಂದಿದ್ದು ನಾನೇ
ಮತ್ತೊಂದು ಸಲ, ‘ಅಪ್ಪನೊಂದಿಗೆ ವೀಡಿಯೋ ಕಾಲ್ ಮೂಲಕ ಮಾತನಾಡಬೇಕು ಎಂದು ಮಗ ಬಹಳ ಹಠ ಮಾಡುತ್ತಿದ್ದ, ಅವನ ಬಾಯಿ ಮುಚ್ಚಿಸಲು ದಿಂಬು ಒತ್ತಿದೆ ಅಷ್ಟೇ’ ಉಸಿರುಗಟ್ಟಿಸುವ ಉದ್ದೇಶ ಇರಲಿಲ್ಲ ಎಂದಿದ್ದಾರೆ.
ಈ ಕಾರಣಕ್ಕೆ ಪೊಲೀಸರು ಯಾವ ಹೇಳಿಕೆಯನ್ನು ಸದ್ಯಕ್ಕೆ ನಂಬದ ಸ್ಥಿತಿಯಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಗೋವಾ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ತಾರ್ಕಿಕ ಅಂತ್ಯ ಸಿಗಲಿದೆ ಎಂದಿದ್ದಾರೆ.

ಕೊಲ್ಲಲೆಂದೇ ಕೆಮ್ಮಿನ ಸಿರಪ್ ಕುಡಿಸಿದ್ದಳೇ ಮಹಾತಾಯಿ:
ನವೋದ್ಯಮದ ಸಿಇಓ ಆಗಿದ್ದ ಸುಚನಾ ಸೇಠ್, ಗೋವಾದ ಕ್ಯಾಂಡೋಲಿಮ್‍ನ ಸೋಲ್ ಬ್ಯಾನಿಯನ್ ಗ್ರ್ಯಾಂಡೇ ಸರ್ವೀಸ್ ಅಪಾರ್ಟ್‍ಮೆಂಟ್‍ನಲ್ಲಿ ಗೋವಾ ಪೊಲೀಸರು ತನಿಖೆ ನಡೆಸಿದಾಗ ಎರಡು ಕೆಮ್ಮಿನ ಸಿರಪ್ ಬಾಟಲಿಗಳು ಪತ್ತೆಯಾಗಿವೆ.
ಇದರಿಂದ ಮಗುವನ್ನು ಕೊಲ್ಲಲೆಂದು ಪೂರ್ವ ಯೋಜನೆ ಮಾಡಿಕೊಂಡಿದ್ದಳೇ ಎನ್ನುವ ಅನುಮಾನ ಮೂಡುತ್ತಿದೆ.
ಇದನ್ನೂ ಓದಿ: ಹೆತ್ತ ಕಂದನ ಕೊಂದು ನಿರ್ಭಾವುಕಳಾಗಿ ಕಾರು ಹತ್ತಿದ ತಾಯಿ
ಸಾಯಿಸುವಾಗ ನರಳಾಟ ನೋಡಲಾಗದು. ಈ ಕಾರಣಕ್ಕೆ ನಿದ್ದೆ ಬರಲೆಂದು ಓವರ್‍ಡೋಸ್ ಕೆಮ್ಮಿನ ಡೋಸ್ ನೀಡಿರಬಹುದೇ ಎನ್ನುವ ಸಂಶಯ ಮೂಡಿದೆ ಎನ್ನುವ ಪೊಲೀಸ್ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.
ಸುಚನಾ ಮೊದಲೇ ಒಂದು ಬಾಟಲ್ ಕೆಮ್ಮಿನ ಸಿರಪ್ ತೆಗೆದುಕೊಂಡು ಹೋಗಿರಬಹುದು. ಆನಂತರ ಮತ್ತೊಂದು ಬಾಟಲನ್ನು ಹೋಟೆಲ್ ಸಿಬ್ಬಂದಿಯಿಂದ ತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಗುವಿನ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ತಲೆದಿಂಬು ಅಥವಾ ಬಟ್ಟೆಯಿಂದ ಉಸಿರುಗಟ್ಟಿಸಿ ಕೊಂದಿರಬಹುದು ಎನ್ನುವ ಅನುಮಾನವನ್ನು ಮೇಲ್ನೋಟಕ್ಕೆ ವೈದ್ಯರು ವ್ಯಕ್ತಪಡಿಸಿದ್ದರು.

ಸುಚನಾ ಕೂಡಾ ಆತ್ಮಹತ್ಯೆ ಯತ್ನ ಮಾಡಿರಬಹುದು:
ಮಗುವಿನ ಜೊತೆಗೆ ಸುಚನಾ ಕೂಡಾ ಆತ್ಮಹತ್ಯೆಗೆ ಮೊದಲೇ ತೀರ್ಮಾನ ಮಾಡಿರುವ ಶಂಕೆಯೂ ಇದೆ.
ಮಗುವನ್ನು ಕೊಂದ ನಂತರ ತಾನೂ ಕೂಡಾ ಸಾಯಬೇಕು ಎನ್ನುವ ಕಾರಣಕ್ಕೆ ಆಕೆ, ತನ್ನ ಎಡಗೈ ಮಣಿಗಂಟನ್ನು ಕೊಯ್ದುಕೊಂಡಿದ್ದಾಳೆ. ಇದರಿಂದಲೇ ಅಪಾರ್ಟ್‍ಮೆಂಟ್‍ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: ಅರ್ಧ ಲಕ್ಷದತ್ತ ಅಡಿಕೆ ದರ ದಾಪುಗಾಲು
ಆಕೆ ಏಕಾಏಕಿ ಕೈ ಕೊಯ್ದುಕೊಳ್ಳುವ ಬದಲು ತುಸು ಹೆದರಿ ಚೂರು ಚೂರೇ ಕೊಯ್ದುಕೊಂಡಿರಬಹುದು. ತೀವ್ರವಾಗಿ ರಕ್ತಸ್ರಾವ ಆಗದೆ, ಹೆಪ್ಪುಗಟ್ಟಿ ಆಕೆ ಬದುಕಿರಬಹುದು ಎನ್ನುವ ಶಂಕೆಯೂ ಘಟನೆಯ ಹಿಂದೆ ಕೇಳಿಬರುತ್ತಿದೆ.
ಒಟ್ಟಾರೆ ಇಡೀ ಘಟನೆ ಕುರಿತು ಸುಚನಾ ಬಾಯಿ ಬಿಡಬೇಕು. ಮಗು ಕೊಲ್ಲುವ ಮೊದಲಿದ್ದ ಆಕೆಯ ಮನಸ್ಥಿತಿ ಗೊತ್ತಾಗಬೇಕಿದೆ.

ಗಂಡನಿಂದ 2.5 ಲಕ್ಷ ಜೀವನಾಂಶ ಕೇಳಿದ್ದ ಸುಚನಾ:
ಮಗು ಕೊಲೆ ಆರೋಪಿ ಸುಚನಾ ಹಾಗೂ ಆಕೆಯ ಪತಿ ಪಿ.ಆರ್.ವೆಂಕಟರಾಮನ್ ದಾಂಪತ್ಯ ಚೆನ್ನಾಗಿರಲಿಲ್ಲ. ಕೆಲವು ವರ್ಷಗಳಿಂದ ಬೇರೆ ಬೇರೆಯಾಗಿದ್ದರು.
ಇದನ್ನೂ ಓದಿ: ಗೋವಾದಲ್ಲಿ ಮಗನನ್ನು ಕೊಂದ ತಾಯಿ | ಚಿತ್ರದುರ್ಗದಲ್ಲಿ ಬಂಧನ
2019ರಲ್ಲಿ ವಿಚ್ಚೇದನಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಅರ್ಜಿ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ವರ್ಷಕ್ಕೆ 1 ಕೋಟಿಗೂ ಅಧಿಕ ಆದಾಯ ಹೊಂದಿರುವ ಪತಿ ವೆಂಕಟರಾಮನ್ ಅವರಿಂದ ಪ್ರತಿ ತಿಂಗಳು 2.5 ಲಕ್ಷ ರೂ. ಜೀವನಾಂಶ ಕೋರ್ಟ್ ಮೊರೆ ಹೋಗಿದ್ದರು ಎನ್ನಲಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
