
CHITRADURGA NEWS | 05 JUNE 2026
ಚಿತ್ರದುರ್ಗ: ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ಸ್ಥಳ ಪರಿಶೀಲನಾ ವರದಿ ಪಡೆಯದೆ, ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಹಿರೇಹಳ್ಳಿ ಗ್ರಾಮದ ರೈತರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪದಡಿ ನಿಯಮ ಬಾಹಿರವಾಗಿ ಬೆಳೆವಿಮೆ ಪಾವತಿ ಮಾಡಿದ ವಿಮಾ ಕಂಪನಿ ಪ್ರತಿನಿಧಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದ್ದಾರೆ.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ | 1200 ಕ್ಕಿಂತ ಹೆಚ್ಚು ಮತದಾರಿದ್ದರೆ ಹೊಸ ಬೂತ್ ರಚನೆ | ಜಿಲ್ಲಾಧಿಕಾರಿ ವೆಂಕಟೇಶ್
ಘಟನೆ ಕುರಿತು ರೈತರು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ, ಜಿಲ್ಲಾಧಿಕಾರಿಗಳು ಗುರುವಾರ ನಗರದ ಗೃಹ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ವಿಮಾ ಕಂಪನಿ ಪ್ರತಿನಿಧಿಗಳ ಸಭೆ ನಡೆಸಿದರು.
ನಿಯಮಗಳ ಪ್ರಕಾರ ಬೆಳೆ ಹಾನಿ ಬಗ್ಗೆ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ವಿಮಾ ಕಂಪನಿಗಳನ್ನೊಳಗೊಂಡ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ, ಯಾವುದೇ ಸಮೀಕ್ಷೆ ನಡೆಸದೇ ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 77 ಜನರಿಗೆ ರೂ.44,51,655 ಬೆಳೆವಿಮೆಯನ್ನು ನಿಯಮಬಾಹಿರವಾಗಿ ಪಾವತಿಸಿರುವುದು ಜಿಲ್ಲಾಡಳಿತದ ತನಿಖೆಯಿಂದ ಬಹಿರಂಗವಾಗಿದೆ. ಈ ಕುರಿತು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ತಡೆ ಹಾಗೂ ಪ್ರತಿಭಟನೆಗಳನ್ನು ನಡೆಸಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.
ಜಿಲ್ಲಾಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ವಿಮಾ ಕಂಪನಿಯ ಪ್ರತಿನಿಧಿಗಳು ಸೂಕ್ತ ವಿವರಣೆ ನೀಡದೇ ಬೇಜವಾಬ್ದಾರಿತನ ತೋರಿದರು. ಯಾವ ಆಧಾರದ ಮೇಲೆ ವಿಮೆ ಪಾವತಿಸಲಾಗಿದೆ ಎಂಬ ಬಗ್ಗೆ ಸಮಂಜಸ ಮಾಹಿತಿ ನೀಡಲು ವಿಫಲರಾದರು.
ಇದನ್ನೂ ಓದಿ: ರೋಟರಿ ಕ್ಲಬ್ ವತಿಯಿಂದ ಹೊಲಿಗೆ ಯಂತ್ರಗಳ ವಿತರಣೆ
ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡುಬಂದ ಹಿನ್ನಲೆಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾ ಕಂಪನಿ ಪ್ರತಿನಿಧಿಗಳಾದ ಮಹೇಶ್, ಸಲಾವುದ್ದೀನ್, ರಾಜಶೇಖರ್ ಇವರಿಂದ ಸಂಪೂರ್ಣ ಮಾಹಿತಿ ಪಡೆಯಲು ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶಿಸಿದರು.
ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 77 ರೈತರಿಗೆ ರೂ.44,51,655 ಬೆಳೆ ವಿಮೆ ಪಾವತಿಸಲಾಗಿದೆ. ಈ ಪೈಕಿ 59 ರೈತರಿಗೆ ಅವರು ನೋಂದಾಯಿಸಿದ್ದ ಬೆಳೆಗಳಿಗೆ ವಿಮೆ ಪಾವತಿಯಾಗಿದೆ. ಆದರೆ, ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ವರದಿಯನ್ನು ವಿಮಾ ಕಂಪನಿ ಪಡೆದಿಲ್ಲ.
ಪಾವತಿಯಾದ 5 ಪ್ರಕರಣಗಳಲ್ಲಿ ರೈತರು ಬೆಳೆವಿಮೆ ಮಾಡಿಸಿದ್ದರೂ ಜಮೀನಿನಲ್ಲಿ ಯಾವುದೇ ಬೆಳೆ ಇರಲಿಲ್ಲ. ಇಂತಹ ಬೀಳು ಭೂಮಿಗೂ ವಿಮೆ ಪಾವತಿ ಮಾಡಲಾಗಿದೆ. 11 ಪ್ರಕರಣಗಳಲ್ಲಿ ರೈತರು ನೋಂದಾಯಿಸಿದ ಬೆಳೆಗೂ, ಹೊಲದಲ್ಲಿದ್ದ ಬೆಳೆಗೂ ಯಾವುದೇ ಸಾಮ್ಯತೆ ಇರಲಿಲ್ಲ. 2 ಪ್ರಕರಣಗಳಲ್ಲಿ ರೈತರು ನೋಂದಾಯಿಸಿರುವ ಭೂ ವಿಸ್ತೀರ್ಣಕ್ಕಿಂತ ಹೆಚ್ಚಿನ ಪ್ರದೇಶಕ್ಕೆ ವಿಮೆಯನ್ನು ಪಾವತಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಯಶಸ್ವಿ 12 ವರ್ಷ | ಚಂದ್ರವಳ್ಳಿ ಬಳಿ ಸ್ವಚ್ಛತೆ ಮಾಡಿದ ಬಿಜೆಪಿ ಕಾರ್ಯಕರ್ತರು
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
