
ಚಿತ್ರದುರ್ಗ ನ್ಯೂಸ್.ಕಾಂ: ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ಡಿ.ಟಿ.ಶ್ರೀನಿವಾಸ್ ಈಗಾಗಲೇ ಕಾಂಗ್ರೆಸ್ ಸೇರಿಯಾಗಿದೆ.
ಆದರೆ, ಪೂರ್ಣಿಮಾ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿಗಳು ಕಳೆದ ವಿಧಾನಸಭೆ ಚುನಾವಣೆಗೂ ಮೊದಲಿನಿಂದಲೇ ಹರಿದಾಡುತ್ತಿದ್ದವು. ಇದನ್ನು ಪೂರ್ಣಿಮಾ ತಳ್ಳಿ ಹಾಕಿದ್ದರು.
ಆದರೆ, ಈ ವಿಚಾರ ಸತ್ಯ ಎನ್ನುವುದನ್ನು ಈಗ ಅವರ ಪತಿ ಶ್ರೀನಿವಾಸ್ ಅವರೇ ಬಹಿರಂಗಪಡಿಸಿದ್ದಾರೆ.
ಕಾಂಗ್ರೆಸ್ ಸೇರ್ಪಡೆಯಾದ ನಂತರ ಮಾಜಿ ಶಾಸಕಿ ಪೂರ್ಣಿಮಾ ಹಾಗೂ ಅವರ ಪತಿ ಡಿ.ಟಿ.ಶ್ರೀನಿವಾಸ್ ಮೊದಲ ಬಾರಿ ಚಿತ್ರದುರ್ಗ ಜಿಲ್ಲೆಗೆ ಆಗಮಿಸಿ, ಮೊದಲ ಭೇಟಿಯಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಹೋಗಿದ್ದರು.
ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಉದ್ದೇಶಿಸಿ ಇಬ್ಬರೂ ಮಾತನಾಡಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಡಿ.ಟಿ.ಶ್ರೀನಿವಾಸ್ ಮಾತನಾಡುತ್ತಾ, ನಾವಿಬ್ಬರೂ ಕಾಂಗ್ರೆಸ್ ಸೇರುವ ಬಗ್ಗೆ ಕಳೆದ ಒಂದೂವರೆ ವರ್ಷದಿಂದ ಚರ್ಚೆ ನಡೆಯುತ್ತಲೇ ಇತ್ತು. ಆಗಿನಿಂದಲೇ ಡಿ.ಕೆ.ಸಾಹೇಬರು ಸಂಪರ್ಕದಲ್ಲಿದ್ದರು ಎಂದು ವಿಷಯ ಹಂಚಿಕೊಂಡರು.

ಇದನ್ನೂ ಓದಿ: ಚಿತ್ರದುರ್ಗ-ತುಮಕೂರು ನಡುವೆ ವಿಮಾನ ನಿಲ್ದಾಣ
ಹಿಂದುಳಿದ ವರ್ಗಗಳಿಗೆ ನೀಡುವ ಸೌಲಭ್ಯಗಳಲ್ಲಿ ಕಡಿತ, ಗಂಗಾ ಕಲ್ಯಾಣ ಯೋಜನೆಯಲ್ಲಿ ಕಡಿತ ಸೇರಿದಂತೆ ಹಲವು ಯೋಜನೆಗಳು ಕಡಿಮೆಯಾಗಿದ್ದನ್ನು ಗಮನಿಸಿ ಒಂದೂವರೆ ವರ್ಷದ ಹಿಂದೆಯೇ ಪೂರ್ಣಿಮಾ ಅವರಿಗೆ ನಾನು, ನಿಮ್ಮ ಪಕ್ಷ (ಆಗ ಬಿಜೆಪಿ) ವಿಧಾನಸಭೆ ಚುನಾವಣೆಯಲ್ಲಿ 65 ಸೀಟು ದಾಟುವುದಿಲ್ಲ ಎಂದು ಹೇಳಿದ್ದೆ ಎಂದು ನೆನಪಿಸಿದರು.
ಇಂತಹ ವಿಚಾರಗಳ ಬಗ್ಗೆ ನನ್ನ ಹಾಗೂ ಪೂರ್ಣಿಮಾ ನಡುವೆ ಆಗಾಗ ಸಣ್ಣ ಜಟಾಪಟಿ ನಡೆಯುತ್ತಿರುತ್ತದೆ ಎಂದು ಶ್ರೀನಿವಾಸ್ ನಕ್ಕರು.
ಇನ್ನೂ, ಕಾಂಗ್ರೆಸ್ ಪಕ್ಷ ಸೇರುವುದು ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗುವ ಬಗ್ಗೆ ಡಿ.ಕೆ.ಶಿವಕುಮಾರ್ ಜೊತೆಗೆ ನಡೆದ ಸ್ವಾರಸ್ಯಗಳನ್ನು ಹಂಚಿಕೊಂಡ ಅವರು, ನಿಮ್ಮ ಪಕ್ಷದಿಂದ ಯಾರು ಚುನಾವಣೆಗೆ ನಿಲ್ತಾರಣ್ಣ, ಕೊನೆ ಕ್ಷಣದಲ್ಲಿ ಟಿಕೇಟ್ ಘೋಷಣೆ ಮಾಡುತ್ತೀರಿ, ಕ್ಷೇತ್ರ ಸುತ್ತಾಡಲು ಸಮಯ ಸಾಕಾಗುವುದಿಲ್ಲ ಎಂದಿದ್ದೆ.
ಆನಂತರ ನಾವು ಕಾಂಗ್ರೆಸ್ ಸೇರಿದ ನಂತರ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು, ಕರೆದು ಏಳು ತಿಂಗಳ ಮೊದಲೇ ಟಿಕೇಟ್ ಘೋಷಣೆ ಮಾಡಿಸಿದ್ದಾರೆ ಎಂದು ಶ್ರೀನಿವಾಸ್ ಸ್ಮರಿಸಿದರು.

ಇಂದಿರಾಗಾಂಧಿ ಪೋಟೋ ಯಾಕೆ ಎಂದು ಕೇಳಿದ್ದ ಬಿಜೆಪಿ ನಾಯಕರು:
ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ತಮ್ಮ ಮನೆಯಲ್ಲಿ ಕಾಂಗ್ರೆಸ್ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪೋಟೋ ಇದೆ. ಹಿಂದೆ ನಾವು ಬಿಜೆಪಿಯಲ್ಲಿದ್ದಾಗ ಮನೆಗೆ ಬಂದಿದ್ದ ಕೇಂದ್ರದ ಸಚಿವರೊಬ್ಬರು, ಈಗಲೂ ನಿಮ್ಮ ಮನೆಯಲ್ಲಿ ಇಂದಿರಾಗಾಂಧಿ ಪೋಟೋ ಯಾಕೆ ಎಂದು ಕೇಳಿದ್ದರು.
ನಾನಾಗ, ಈ ಪೋಟೋ ಇರುವ ಕಾರಣಕ್ಕೆ ನೀವು ನಮ್ಮ ಮನೆಗೆ ಬಂದಿದ್ದೀರಿ ಎಂದು ಪ್ರತಿಕ್ರಿಯಿಸಿದ್ದೆ. ರಾಜಕೀಯ ಬದುಕು ಕಟ್ಟಿಕೊಟ್ಟವರನ್ನು ಎಂದು ಮರೆಯಬಾರದು. ಮರೆತರೆ ಅನ್ನ ಸಿಗುವುದಿಲ್ಲ. ಕೃಷ್ಣಪ್ಪ ಅವರನ್ನು ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ಈ ಕಾರಣಕ್ಕೆ ಬಿಜೆಪಿಯಲ್ಲಿದ್ದಾಗಲೂ ನಮ್ಮ ಮನೆಯಲ್ಲಿ ಇಂದಿರಾ ಗಾಂಧೀ ಪೋಟೋ ಇತ್ತು ಎಂದು ತಿಳಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
