ಮುಖ್ಯ ಸುದ್ದಿ
ಬೇಸಿಗೆ ಬಿಸಿಲು ಎದುರಿಸಲು ಇಲ್ಲಿದೆ ಸಲಹೆ | ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಮಾಹಿತಿ

CHITRADURGA NEWS | 18 MARCH 2025
ಚಿತ್ರದುರ್ಗ: ಬೇಸಿಗೆ ಕಾಲ ತೀವ್ರವಾಗುತ್ತಿದ್ದು, ವಾತಾವರಣದ ಉಷ್ಣಾಂಶ ಏರುತ್ತಲಿದೆ. ಆದ ಕಾರಣ ಸಾರ್ವಜನಿಕರು ಬಿಸಿಲಿನ ತಾಪದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೂಕ್ತ ಮುಂಜಾಗ್ರತಾ ಕ್ರಮ ವಹಿಸಬೇಕು. ಜತೆಗೆ ಬೇಸಿಗೆ ಎದುರಿಸಲು ಆಯುಷ್ ಉಪಾಯಗಳನ್ನು ಅಳವಡಿಸಿಕೊಂಡು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಸಲಹೆ ನೀಡಿದ್ದಾರೆ.
Also Read: ಬಾನಾಡಿಗಳ ಬಾಯಾರಿಕೆಗೆ ನೀರೆರೆದ ಜಿಪಂ ಸಿಇಓ | ಮರ ಮರದಲ್ಲೂ ನೀರು, ಕಾಳಿನ ವ್ಯವಸ್ಥೆ

ವಿಶೇಷವಾಗಿ ಹಿರಿಯ ನಾಗರೀಕರು, ಮಕ್ಕಳು ತೀವ್ರ ಬಿಸಿಲಿನಿನ ತಾಪಕ್ಕೆ ಬರಬಾರದು. ಬಿಸಿಲಿನ ತಾಪದಿಂದ ಚರ್ಮ ಕಪ್ಪಾಗುವುದು, ಅಲರ್ಜಿ, ತುಟಿ ಒಣಗುವುದು, ಮೂಗಿನಲ್ಲಿ ರಕ್ತಸ್ರಾವ, ದೇಹದ ಉಷ್ಣಾಂಶದಲ್ಲಿ ಏರಿಕೆ, ಸುಸ್ತು, ತಲೆಸುತ್ತುವುದು, ಎಲೆಕ್ಟ್ರೋಲೈಟ್‍ಗಳಲ್ಲಿ ಏರುಪೇರಿನಂತಹ ಲಕ್ಷಣಗಳು ಕಂಡುಬರುತ್ತವೆ. ನೀರಿನ ಮೂಲದಿಂದ ಹರಡುವ ಸಾಂಕ್ರಾಮಿಕ ರೋಗಗಳೂ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವುಗಳನ್ನು ತಡೆಗಟ್ಟಲು ಸಾರ್ವಜನಿಕರು ವಿಶೇಷ ಜಾಗ್ರತೆ ವಹಿಸಬೇಕು.
ತೀವ್ರ ಬಿಸಿಲಿದ್ದಾಗ ಮನೆಯಿಂದ ಹೊರಗಡೆ ಹೋಗಬೇಡಿ, ಅವಶ್ಯಕ ಕೆಲಸಗಳನ್ನು ಬಿಸಿಲು ಹೆಚ್ಚಾಗುವ ಮೊದಲೇ ಪೂರೈಸಿಕೊಳ್ಳಿ, ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮರದ ನೆರಳನ್ನು ಆಶ್ರಯಿಸಿ. ಹತ್ತಿಯ ಬಟ್ಟೆಗಳನ್ನೇ ಧರಿಸಿ, ಮೇಲಿಂದ ಮೇಲೆ ನೀರನ್ನು ಕುಡಿಯುತ್ತಿರಿ.
ಮನೆಯಿಂದ ಹೊರಡುವಾಗ ಕಡ್ಡಾಯವಾಗಿ ಮನೆಯ ಶುದ್ಧನೀರನ್ನು ಜೊತೆಗೆ ತೆಗೆದುಕೊಂಡು ಹೋಗಿ, ತಂಪು ಪಾನೀಯ ಐಸ್ ಕ್ರೀಮ್ ನಂತಹ ಕೃತಕ ತಂಪು ವಸ್ತುಗಳಿಗಿಂತ ನೈಸರ್ಗಿಕವಾದ ಹಣ್ಣಿನ ರಸ, ಕಬ್ಬಿನಹಾಲು, ಎಳನೀರು ಹಾಗೂ ಶರಬತ್ತುಗಳನ್ನು ಸೇವಿಸಿ, ಇವುಗಳಿಂದ ದೇಹಕ್ಕೆ ಪೋಷಕಾಂಶವು ದೊರೆಯುತ್ತದೆ ಹಾಗೂ ದೇಹಕ್ಕೂ ತಂಪು.
Also Read: ಅಗ್ನವೀರ್ ನೇಮಕಾತಿ | ಭಾರತೀಯ ಸೇನೆ ಸೇರಲು ಸುವರ್ಣವಕಾಶ | ಇಂದೇ ಅರ್ಜಿ ಸಲ್ಲಿಸಿ
ಕೃತಕ ತಂಪು ಪದಾರ್ಥಗಳಲ್ಲಿ ಸಕ್ಕರೆ ಅಂಶ ಹಾಗೂ ಇತರೆ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ಅವು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಮಸಾಲೆ ಹೆಚ್ಚಾಗಿರುವ ಪದಾರ್ಥಗಳನ್ನು ಸೇವಿಸಬೇಡಿ.
ಹಸಿ ಸೊಪ್ಪು ತರಕಾರಿಗಳನ್ನು ಹೆಚ್ಚು ಬಳಸಿ, ನೀರಿನ ಅಂಶ ಹೆಚ್ಚಾಗಿರುವ ಸೌತೆಕಾಯಿ, ಕ್ಯಾರೆಟ್‍ನಂತಹ ಪದಾರ್ಥಗಳನ್ನು ಹೆಚ್ಚು ಬಳಸಿ. ಮನೆಯಿಂದ ಹೊರಗೆ ಹೋಗುವಾಗ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅವಶ್ಯವಿರುವ ಛತ್ರಿ, ತಂಪು ಕನ್ನಡಕ, ವಸ್ತ್ರಗಳನ್ನು ತೆಗೆದುಕೊಂಡು ಹೋಗಿ. ಶ್ರಮದಾಯಕ ಕೆಲಸಗಳನ್ನು ತೀವ್ರ ಬಿಸಿಲ ತಾಪವಿದ್ದಾಗ ಮಾಡಬಾರದು. ಇವೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಕರೆ ನೀಡಿದ್ದಾರೆ.
ಬಿಸಿಲಿನಿಂದ ರಕ್ಷಣೆ, ಬೇಸಿಗೆ ಕಾಲದಲ್ಲಿ ಅನುಸರಿಸಬೇಕಾದ ಜೀವನಶೈಲಿ, ಆಹಾರ ವಿಹಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಆಯುಷ್ ಚಿಕಿತ್ಸಾಲಯಗಳಿಗೆ ಭೇಟಿ ನೀಡಬಹುದಾಗಿದೆ.
Also Read: ಸ್ಪ್ರಿಂಕ್ಲರ್ ನೀರಾವರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ | ಯಾವೆಲ್ಲಾ ದಾಖಲೆ ಬೇಕು?
ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ, ಸಾರ್ವಜನಿಕರು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿ ಬೇಸಿಗೆಕಾಲದ ಕಾಯಿಲೆಗಳು ಹಾಗೂ ಉಷ್ಣ ಹವಾಮಾನದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಹಾಗೂ ವಾತಾವರಣದ ಉಷ್ಣತೆಯನ್ನು ತಗ್ಗಿಸಲು ಈಗಿನಿಂದಲೇ ಎಷ್ಟು ಸಾಧ್ಯವೂ ಅಷ್ಟು ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಮನವಿ ಮಾಡಿದ್ದಾರೆ.
