ಮುಖ್ಯ ಸುದ್ದಿ
ಚಿತ್ರದುರ್ಗ ರೈಲ್ವೆ ಯೋಜನೆಗಳಿಗೆ ಶುಕ್ರದೆಸೆ | ನೇರ ಮಾರ್ಗಕ್ಕೆ ಅನುದಾನ ಬಿಡುಗಡೆ

CHITRADURGA NEWS | 05 MARCH 2024
ಚಿತ್ರದುರ್ಗ: ಚಿತ್ರದುರ್ಗದ ರೈಲ್ವೆ ಯೋಜನೆಗಳಿಗೆ ಶುಕ್ರ ದೆಸೆ ಶುರುವಾಗಿದೆ. ಫೆ.26 ರಂದು ಅಮೃತ್ ಭಾರತ್ ರೈಲ್ವೆ ಸ್ಟೇಷನ್ ಯೋಜನೆಯಡಿ ಬರೋಬ್ಬರಿ ₹ 11.78 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ ನಗರದ ರೈಲ್ವೆ ನಿಲ್ದಾಣ ನವೀಕರಣ ಹಾಗೂ ಮೇಲ್ದರ್ಜೆಗೇರಿಸುವ ಕಾಮಗಾರಿ ಚಾಲನೆ ನೀಡಿದ ಬೆನ್ನಲ್ಲೇ ತುಮಕೂರು– ಚಿತ್ರದುರ್ಗ– ದಾವಣಗೆರೆ ನೇರ ರೈಲ್ವೆ ಯೋಜನೆಗೆ ₹50 ಕೋಟಿ ಬಿಡುಗಡೆಯಾಗಿದೆ.
ತುಮಕೂರು– ಚಿತ್ರದುರ್ಗ– ದಾವಣಗೆರೆ ನೇರ ಮಾರ್ಗ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ₹50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಕೇಂದ್ರ ಸರ್ಕಾರವು ಕೈಗೆತ್ತಿಕೊಳ್ಳುವ ಕೆಲವು ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರವು ಶೇಕಡ 50ರಷ್ಟನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಈಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಮುಗಿದ ತಕ್ಷಣ ಕಾಮಗಾರಿಗಳು ವೇಗ ಪಡೆಯಲಿವೆ’ ಎಂದು ತಿಳಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: https://chitradurganews.com/muktinath-meditated-in-the-lap-of-jogimatti
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೇ ಯೋಜನೆಗೆ ಕೇಂದ್ರ ಸರ್ಕಾರ 1,900 ಕೋಟಿ ರೂ. ಮಂಜೂರು ಮಾಡಿದೆ. ದಾವಣಗೆರೆ-ಚಿತ್ರದುರ್ಗ-ಹಿರಿಯೂರು ಭಾಗದಲ್ಲಿ ಈಗಾಗಲೇ ರೈಲ್ವೇ ಯೋಜನೆಗೆ ಅಗತ್ಯವಾದ ಶೇ.82 ರಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ರೈಲ್ವೇ ಇಲಾಖೆಗೆ ಹಸ್ತಾಂತರಿಸಲಾಗಿದೆ. ಯೋಜನೆಯ ಟೆಂಡರ್ ಪ್ರಕ್ರಿಯೆ ಆರಂಭಿಸಲು ಶೇ.90 ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಈ ಹಿನ್ನಲೆಯಲ್ಲಿ ಮುಂದಿನ ವಾರದಲ್ಲಿ ಶೇ.8 ರಷ್ಟು ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ರೈಲ್ವೇ ಇಲಾಖೆಗೆ ನೀಡಲಾಗುವುದು. ಮುಂದಿನ ತಿಂಗಳ ವೇಳೆಗೆ ಯೋಜನೆ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳುವುದಾಗಿ ತಿಳಿಸಿದ್ದರು.

ಕ್ಲಿಕ್ ಮಾಡಿ ಓದಿ: https://chitradurganews.com/heavy-rain-forecast/
ದಾವಣಗೆರೆ-ಭರಮಸಾಗರ ನಡುವಿನ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಈ ಭಾಗದ ಯೋಜನೆಗೆ ಚಾಲನೆ ನೀಡಲಾಗಿದೆ. ಭರಮಸಾಗರ-ಚಿತ್ರದುರ್ಗ ನಡುವಿನ ಭೂ ಸ್ವಾಧೀನ ಪಕ್ರಿಯೆಯೂ ಮುಗಿಯುವ ಹಂತಕ್ಕೆ ಬಂದಿದ್ದು, ಭರಮಸಾಗರ-ಚಿತ್ರದುರ್ಗ ನಡುವಿನ ರೈಲ್ವೇ ಯೋಜನೆಯನ್ನು ಸಹ ಆದಷ್ಟು ಶೀಘ್ರ ಆರಂಭಿಸಲಾಗುತ್ತದೆ ಎಂದು ಮುಖ್ಯ ಯೋಜನಾ ವ್ಯವಸ್ಥಾಪಕ ಆನಂದ ಭಾರತಿ ತಿಳಿಸಿದ್ದಾರೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಗೆ ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಒಟ್ಟು 101 ಕಿ.ಮೀ. ಮಾರ್ಗಕ್ಕಾಗಿ 1211.13 ಎಕರೆ ಭೂಮಿಗಾಗಿ ಬೇಡಿಕೆ ಸಲ್ಲಿಸಿದಂತೆ ಈಗಾಗಲೆ 639.09 ಎಕರೆ ಭೂಸ್ವಾಧೀನಕ್ಕಾಗಿ ಪರಿಹಾರ ವಿತರಿಸಲಾಗಿದೆ. ಉಳಿದಂತೆ 572.04 ಎಕರೆ ಭೂಸ್ವಾಧೀನ ವಿವಿಧ ಹಂತದಲ್ಲಿದೆ.
ಕ್ಲಿಕ್ ಮಾಡಿ ಓದಿ: https://chitradurganews.com/chitradurga-will-be-hit-by-water-shortage
ಭರಮಸಾಗರ-ಚೋಳಗಟ್ಟದವರೆಗೆ 36 ಕಿ.ಮೀ. ಪ್ರದೇಶದಲ್ಲಿ 281 ಎಕರೆ ಪ್ರದೇಶವನ್ನು ಈಗಾಗಲೆ ರೈಲ್ವೆ ಇಲಾಖೆಗೆ ಹಸ್ತಾಂತರಿಸಿದ್ದು, ಉಳಿದ 67.24 ಎಕರೆ ಜಮೀನು ಶೀಘ್ರ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ವಿಶೇಷ ಭೂಸ್ವಾಧೀನ ಅಧಿಕಾರಿಗಳು ತಿಳಿಸಿದ್ದಾರೆ.
