ಮುಖ್ಯ ಸುದ್ದಿ
ಶಿವರಾತ್ರಿಗೆ ಅಬ್ಬರಿಸಲಿದ್ದಾನೆ ವರುಣ ದೇವ | ಭರ್ಜರಿ ಮಳೆಯ ಮುನ್ಸೂಚನೆ

CHITRADURGA NEWS | 04 MARCH 2024
ಚಿತ್ರದುರ್ಗ: ಬರದ ತೀವ್ರತೆಗೆ ಸಿಲುಕಿ ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಹವಾಮಾನದಲ್ಲಿನ ಬದಲಾವಣೆ ಕೊಂಚ ಆಶಾಭಾವನೆ ಮೂಡಿಸಿದೆ. ಇದರ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ರೈತರು ಹಾಗೂ ಜನರಲ್ಲಿ ಒಂದಿಷ್ಟು ನಿರಾಳತೆಯನ್ನು ತಂದಿದೆ.
2023ರಲ್ಲಿ ಮಳೆ ಸರಿಯಾಗಿ ಬೀಳದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯನ್ನೇ ಆಶ್ರಯಿಸಿ ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿದೆ. ಕೆಲವು ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ, ಹಲವು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ ಮಳೆರಾಯ ಕೃಪೆ ತೋರಲಿದ್ದಾನೆ.
ಸಾಮಾನ್ಯವಾಗಿ ಶಿವರಾತ್ರಿ ಬಳಿಕ ಬೇಸಿಗೆ ಅಬ್ಬರ ಶುರುವಾಗುತ್ತದೆ. ಆದರೆ ಈ ಬಾರಿ ಶಿವನಾಮ ಸ್ಮರಣೆಯ ವೇಳೆಗೆ ಭರ್ಜರಿ ಮಳೆಯಾಗುವ ಲಕ್ಷಣಗಳು ಸ್ಪಷ್ಟವಾಗಿವೆ.
ಎಲ್‌ನಿನೋ ಜಾಗತಿಕ ವಾತಾವರಣದಲ್ಲಿ ಭಾರಿ ಪರಿಣಾಮ ಬೀರಿದೆ. ಅದರಲ್ಲೂ ನಮ್ಮ ದೇಶದಲ್ಲಿ ಕೂಡ ವಾತಾವರಣ ಮತ್ತು ಮಳೆ ನಿರ್ಧಾರ ಆಗುವುದೇ ಎಲ್‌ನಿನೋ ಪರಿಣಾಮದಿಂದ ಎನ್ನಬಹುದು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ಭರ್ಜರಿಯಾಗಿ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿವೆ. ನೈರುತ್ಯ ಮಾನ್ಸೂನ್ ಸಮಯದಲ್ಲಿ ಭರ್ಜರಿ, ಗುಡುಗು ಮತ್ತು ಸಿಡಿಲು ಸಹಿತ ಮಳೆ ಬೀಳುವ ನಿರೀಕ್ಷೆ ಇದೆ.
ಹವಾಮಾನ ಇಲಾಖೆ ತಜ್ಞರ ಪ್ರಕಾರ ಮಾರ್ಚ್ 10 ರೊಳಗೆ ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಮೈಸೂರು, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಬರುವ ಸಾಧ್ಯತೆಯಿದೆ. ಮಾರ್ಚ್‌ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಯನ್ನು ಸಹ ಐಎಂಡಿ ತೆರೆದಿಟ್ಟಿದೆ.
ಜತೆಗೆ ಈ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿಯಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದು, ಕೃಷಿಗೆ ಅನುಕೂಲ ಆಗಲಿದೆ. ಮೇ ತಿಂಗಳ ಬಳಿಕ ಪೆಸಿಫಿಕ್ ಪ್ರದೇಶದಲ್ಲಿ ಎಲ್ ನಿನೋ ಪರಿಸ್ಥಿತಿ ಕಡಿಮೆಯಾಗಿ ಮತ್ತು ಲಾ ನಿನಾ ಪರಿಸ್ಥಿತಿಗಳ ಪ್ರಭಾವ ಹೆಚ್ಚಾಗುವುದರಿಂದ ಮುಂಗಾರಿನಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ.
ಕ್ಲಿಕ್ ಮಾಡಿ ಓದಿ: https://chitradurganews.com/bjp-leader-pritam-gowda-warned/
ಇನ್ನೂ ಉತ್ತರ ಭಾರತದ ಬಹುತೇಕ ರಾಜ್ಯದಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಬಿದ್ದಿದೆ. ಬಹುತೇಕ ರಾಜ್ಯಗಳ ಶಾಲಾ, ಕಾಲೇಜು ಬಂದ್ ಮಾಡಿ ರಜೆ ಘೋಷಣೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
