
CHITRADURGA NEWS | 27 JULY 2025
ಚಿತ್ರದುರ್ಗ: ಎಲ್ಲಾ ರಂಗಗಳಲ್ಲಿಯೂ ಪೈಪೋಟಿಯಿರುವುದರಿಂದ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮುಸ್ಲಿಂ ಸಮುದಾಯದವರಿಗೆ ಕರೆ ನೀಡಿದರು.
ಇದನ್ನೂ ಓದಿ: ಯೂರಿಯಾಗೆ ಮುಗಿಬಿದ್ದ ಸಾವಿರಾರು ರೈತರು | ಎಪಿಎಂಸಿ ಬಳಿ ದಿನವಿಡೀ ಸರತಿ ಸಾಲು | ಸರ್ಕಾರದ ಬೇಜವಾಬ್ದಾರಿಗೆ ಆಕ್ರೋಶ

ಎಸ್.ಎಸ್.ಎಲ್.ಸಿ. ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘ ಜಿಲ್ಲಾ ಶಾಖೆಯಿಂದ ಅಹಮದ್ ಪ್ಯಾಲೇಸ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣಕ್ಕೆ ಎಲ್ಲಾ ಜಾತಿ ಧರ್ಮದವರಿಗೂ ಸಮಾನತೆ ಕಲ್ಪಿಸಿದ್ದಾರೆ. ಶಿಕ್ಷಣದಿಂದ ಮಾತ್ರ ಜಾತಿ ತಾರತಮ್ಯವಿಲ್ಲದೆ ಐಕ್ಯತೆಯಿಂದ ಬದುಕಲು ಸಾಧ್ಯ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಭಿವೃದ್ದಿ ನಿಗಮದಿಂದ ಸಾಕಷ್ಟು ಸೌಲಭ್ಯಗಳಿವೆ. ಚಿಕ್ಕಂದಿನಲ್ಲಿಯೇ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿ ಕೆಲಸಕ್ಕೆ ಕಳಿಸಬೇಡಿ. ಮನೆಯಲ್ಲಿ ಓದುವ ವಾತಾವರಣವಿಲ್ಲದಿದ್ದರೆ ವಸತಿ ಶಾಲೆಗಳಿವೆ. ಮಕ್ಕಳನ್ನು ಅಲ್ಲಿಗೆ ಸೇರಿಸಿ ಶಿಕ್ಷಣವಂತರನ್ನಾಗಿಸಿ ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನದಲ್ಲಿ ಗುಡಿ ಕೈಗಾರಿಕೆಗಳು ನಿಲ್ಲುತ್ತಿವೆ. ವಿದ್ಯೆ ಕಲಿತ ಮನೆಯಲ್ಲಿ ಸಾಮಾಜಿಕ ಸಂಘರ್ಷವಿರುವುದಿಲ್ಲ. ಸಮಸ್ಯೆಗಳಿಂದ ಹೊರ ಬರಬಹುದು. ಶಿಕ್ಷಣದ ಜೊತೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವುದು ತಂದೆ-ತಾಯಿಗಳ ಕರ್ತವ್ಯ.
ಇದನ್ನೂ ಓದಿ: ಬಿಜೆಪಿ ಜಿಲ್ಲಾ ಘಟಕದಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ
ವಿದ್ಯೆ ಸಾಧಕನ ಸ್ವತ್ತೆ ವಿನಃ ಎಂದಿಗೂ ಸೋಮಾರಿಯ ಸ್ವತ್ತಾಗುವುದಿಲ್ಲ. ವಿದ್ಯಾವಂತರಿಗೆಲ್ಲಾ ಸರ್ಕಾರಿ ನೌಕರಿ ಸಿಗುವುದು ಕಷ್ಟ. ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಭಿಗಳಾಗಿ ಬದುಕಲು ಅನೇಕ ದಾರಿಗಳಿವೆ ಎಂದು ತಿಳಿಸಿದರು.
ಮಕ್ಕಳು ಮೊಬೈಲ್‍ಗೆ ದಾಸರಾಗುವ ಬದಲು ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಜ್ಞಾನ ವೃದ್ದಿಯಾಗುತ್ತದೆ. ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವುದರಿಂದ ಇತರೆ ಮಕ್ಕಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಬೆಂಗಳೂರಿನಲ್ಲಿರುವ ಹಜ್ ಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಅರಿವು ಯೋಜನೆಯಡಿ ವಿದ್ಯಾರ್ಥಿ ವೇತನ ಸಿಗುತ್ತದೆ. ಸರ್ಕಾರ ನಿಮ್ಮ ಜೊತೆಗಿದೆ. ಶಿಕ್ಷಣದ ಜೊತೆ ನೈಪುಣ್ಯ ವೃತ್ತಿಯಲ್ಲಿ ತೊಡಗಿಕೊಂಡರೆ ಸುಂದರವಾದ ಬದುಕು ಕಟ್ಟಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬಹುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಮುಸ್ಲಿಂರು ಮಕ್ಕಳ ಶಿಕ್ಷಣಕ್ಕೆ ಮಾನ್ಯತೆ ಕೊಡುವುದಿಲ್ಲ. ಚಿಕ್ಕಂದಿನಲ್ಲಿಯೇ ಗ್ಯಾರೆಜ್ ಇಲ್ಲವೇ ಬೇರೆ ಬೇರೆ ಕೆಲಸಗಳಿಗೆ ಕಳಿಸುತ್ತಾರೆಂಬ ತಪ್ಪು ಕಲ್ಪನೆಯಿತ್ತು. ಈಗ ಕಾಲ ಬದಲಾಗಿದೆ. ಸರ್ಕಾರದ ಅನೇಕ ಯೋಜನೆಗಳ ಪ್ರಯೋಜನ ಪಡೆದುಕೊಂಡು ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿಸಬೇಕೆಂಬ ಛಲ ಪೋಷಕರುಗಳಲ್ಲಿ ಮೂಡಿದೆ. ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿದರೆ ಪೋಷಕರುಗಳಿಗೆ ಖುಷಿಯಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳಿಸುವುದಷ್ಟೆ ಅಲ್ಲ. ಅವರ ಚಲನವಲನಗಳ ಮೇಲೆ ನಿಗಾ ಇಡುವುದು ಹೆತ್ತವರ ಜವಾಬ್ದಾರಿಯಾಗಬೇಕೆಂದು ಸಲಹೆ ನೀಡಿದರು.
ನಿವೃತ್ತ ನೌಕರರನ್ನು ನಿಮ್ಮ ಸಂಘದಲ್ಲಿ ಸೇರಿಸಿಕೊಳ್ಳಿ. ಆಗ ಇನ್ನು ಹೆಚ್ಚಿನ ಚಟುವಟಿಕೆಗಳನ್ನು ನಡೆಸಲು ಸಹಾಯವಾಗಲಿದೆ. ಸರ್ಕಾರಿ ನೌಕರಿಗಾಗಿಯೇ ಶಿಕ್ಷಣ ಪಡೆಯಬೇಡಿ. ಸ್ವಾವಲಂಭಿಗಳಾಗಿ ಬದುಕಲು ಶಿಕ್ಷಣ ಮುಖ್ಯ ಎಂದು ನುಡಿದರು.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಡಿಕ್ಕಿ | ಕರಡಿ ಸಾವು
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಇಕ್ಬಾಲ್, ಸಂಘದ ಪ್ರಧಾನ ಕಾರ್ಯದರ್ಶಿ ತಾಜೀರ್‍ಭಾಷ ಮಾತನಾಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಕ್ರಷರ್ ಮತ್ತು ಕ್ವಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಅಬುಲ್ ಮಜೀದ್, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಉಪಾಧ್ಯಕ್ಷ ನಯಾಜ್‍ಖಾನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ್, ಹಿರಿಯೂರು ನಗರಸಭೆ ಕಮಿಷನರ್ ವಸೀಂ, ಕೆ.ಪಿ.ಟಿ.ಸಿ.ಎಲ್. ಇಂಜಿನಿಯರ್ ಸಾಜಿಯಾ ಪರ್ವಿನ್, ಡಾ.ಇಫ್ತಿಯಾರ್, ಮಹಮದ್ ಆಲಿ, ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಸಹೋದರಿ ವೀಣ, ಹನೀಸ್ ಸೈಯದ್ ಖುದ್ದೂಸ್, ಸಂಘಧ ಕಾರ್ಯದರ್ಶಿ, ಕಾರ್ಯಾಧ್ಯಕ್ಷ ಹಾಗೂ ಪದಾಧಿಕಾರಿಗಳು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
