ಹೊಸದುರ್ಗ
ಸಾಣೇಹಳ್ಳಿ ಶ್ರೀಗಳಿಗೆ ಗಣಪದವಿ ಪ್ರಶಸ್ತಿ ಪ್ರದಾನ | ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ

CHITRADURGA NEWS | 30 MAY 2024
ಹೊಸದುರ್ಗ: ಶಿವಮೊಗ್ಗ ಜಿಲ್ಲೆಯ ಸಂತೆಕಡೂರಿನಲ್ಲಿ ನಡೆದ ಜಗಜ್ಯೋತಿ ಗ್ರಂಥ ಲೋಕಾರ್ಪಣೆ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಮಹೋತ್ಸವ ಹಾಗೂ ಗಣಪದವಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗಣಪದವಿ ಪ್ರಶಸ್ತಿ ನೀಡಲಾಯಿತು.
ಇದನ್ನೂ ಓದಿ: ಜಲಜೀವನ್ ಮಿಷನ್ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಗಳು, ನಾವು ಯಾವಾಗಲೂ ಪ್ರಶಸ್ತಿ ಪುರಸ್ಕಾರಗಳಿಗೆ ಆಸೆ ಪಟ್ಟವರಲ್ಲ. ಆದರೆ ಅವರ ಪ್ರೀತಿಯಿಂದ ಕೊಡುವ ಪ್ರಶಸ್ತಿಯನ್ನು ಪೂರ್ಣ ತಿರಸ್ಕಾರ ಮಾಡಲಿಲ್ಲ. ಏನೂ ಮಾತನಾಡದೇ ಮೌನದಿಂದ ಇದ್ವಿ. ಆ ಮೌನವೇ ನಮ್ಮ ಒಪ್ಪಿಗೆ ಅಂತ ಭಾವಿಸಿಕೊಂಡು ಈ ಪ್ರಶಸ್ತಿಯನ್ನು ನಮಗೆ ಪ್ರದಾನ ಮಾಡಿದರು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.
ಲಿಂಗಧಾರಿಗಳೆಂದು ಬೆಳಗ್ಗೆ, ಮಧ್ಯಾಹ್ನ, ಸಂಜೆ ಮೂರು ಹೊತ್ತು ತಪ್ಪದೇ ಲಿಂಗಪೂಜೆ ಮಾಡಿಕೊಳ್ಳುತ್ತೇವೆಂದು ಹೇಳಿಕೊಂಡು ಬೇರೆಯವರಿಗೆ ಟೋಪಿ ಹಾಕುವಂಥ ಕೆಲಸ ಮಾಡಿದರೆ, ಬೇರೆಯವರಿಗೆ ಕಷ್ಟ ಕೊಟ್ಟರೆ ಮೂರು ಹೊತ್ತು ಪೂಜೆ ಮಾಡಿದರೂ ಅದರ ಫಲ ಸಿಗೋದಿಲ್ಲ.
ನಿಜವಾದ ಪೂಜೆಯ ಫಲ ಸಿಗಬೇಕು ಅಂದರೆ ನಿಷ್ಠೆ ಮತ್ತು ಪ್ರಾಮಾಣಿಕನಾಗಿರಬೇಕು. ಜನರ ಸುಖವೇ ನಮ್ಮ ಸುಖ ಎಂದು ಭಾವಿಸಬೇಕು. ಸಜ್ಜನರ, ಅರಿವು-ಆಚಾರ ಒಂದಾಗಿರುವಂಥವರ, ಸಾತ್ವಿಕರ ಮನಸ್ಸಿಗೆ ನೋವಾಗದ ಹಾಗೆ ನಡೆದುಕೊಳ್ಳಬೇಕು. ಮನುಷ್ಯನಿಗೆ ಆಳವಾದ ಅನುಭಾವ ಪ್ರೀತಿಸುವಂತೆ, ಗೌರವಿಸುವಂತೆ ಮಾಡುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಮೊಬೈಲ್ ಬಳಕೆ ಮಡಿಮೆ ಮಾಡಿ ಓದುವ ಪ್ರವೃತ್ತಿಯನ್ನು ಬೆಳಸಿಕೊಂಡಾಗ ಪುಸ್ತಕ ಸಂಸ್ಕೃತಿ ಉಳಿಸಿಕೊಳ್ಳಲಿಕ್ಕೆ ಸಾಧ್ಯ. ಇತ್ತೀಚಿನ ದಿನಗಳಲ್ಲಿ ಬೋಧನೆ ಮಾಡುವಂಥವರಿಗೇನೂ ಕೊರತೆಲ್ಲ. ಆದರೆ ಸಾಧನೆ ಮಾಡಿ ಬೋಧನೆ ಮಾಡಿದಂಥವರು ಬೆರಳೆಣಿಕೆಯಷ್ಟು ಮಾತ್ರ.
ಇದನ್ನೂ ಓದಿ: ಶಿಕ್ಷಕರ ಧ್ವನಿಯಾದ ನಾರಾಯಣಸ್ವಾಮಿ | ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ
ಅಮರಗಣಂಗಳ ಸವಿನೆನಪಿಗಾಗಿ ಪ್ರತಿವರ್ಷ ಸಂತೇ ಕಡೂರಿನ ಪ್ರಭುದೇವ ಜ್ಞಾನಕೇಂದ್ರ ಸಂಗಮದಲ್ಲಿ ಅಮರಗಣ ಪ್ರಶಸ್ತಿಯನ್ನು ಕೊಡುತ್ತಿರುವುದು ತುಂಬಾ ಸಂತೋಷ. ಯಾವುದೇ ಪ್ರಶಸ್ತಿಯನ್ನು ಕೊಡುವ ಉದ್ದೇಶ ಬೇರೆಯವರಿಗೆ ಸ್ಪೂರ್ತಿಯನ್ನು ನೀಡುವಂಥದ್ದು.
ನಮಗೆ ಪ್ರಶಸ್ತಿ ಕೊಟ್ಟು ನಮ್ಮನ್ನು ದೊಡ್ಡವರನ್ನಾಗಿ ಮಾಡೋದಲ್ಲ. ನಮ್ಮ ಮುಖಾಂತರ ಬೇರೆಯವರಿಗೆ ಸ್ಪೂರ್ತಿಯನ್ನು ನೀಡುತ್ತದೆ. ನಾವೆಲ್ಲರೂ ಅಮರಗಣಗಳಾಗಬೇಕು ಎನ್ನುವ ಭಾವನೆ ಸಾರ್ವಜನಿಕರಲ್ಲಿ ಮೂಡಬೇಕು. ನೂರಾರು ಜನ ಸ್ವಾಮಿಗಳಿದ್ದಾರೆ. ಎಲ್ಲರಿಗೂ ಆ ಪ್ರಶಸ್ತಿಯನ್ನು ಕೊಡಲಿಕ್ಕೆ ಸಾಧ್ಯವಿಲ್ಲ. ಎಲ್ಲರ ಪರವಾಗಿ ನಮಗೆ ಕೊಟ್ಟಿದ್ದಾರೆ ಎಂದು ಭಾವಿಸಿದ್ದೇವೆ.
ಇದನ್ನೂ ಓದಿ: ಮುರುಘಾಮಠದಿಂದ ಸಸಿ ನೆಡುವ ಸಪ್ತಾಹಕ್ಕೆ ಚಾಲನೆ | ಸಂಸ್ಥೆ ಮುಖ್ಯಸ್ಥರಿಗೆ ಸಸಿಗಳ ಪೋಷಣೆ ಹೊಣೆ
ಮನುಷ್ಯ ಕಿರೀಟದಿಂದ ದೊಡ್ಡ ವ್ಯಕ್ತಿಯಾಗಲಾರ. ಯಾವುದೇ ವ್ಯಕ್ತಿ ದೊಡ್ಡವನಾಗುವುದು ಅರಿವು-ಆಚಾರದಿಂದ. ಬಸವಣ್ಣನವರು ಅರಿವು ಆಚಾರವನ್ನು ಒಂದಾಗಿಸಿಕೊಂಡಿದ್ದರಿಂದ ಇವತ್ತಿಗೂ ನಾವು ನೆನಪಿಸಿಕೊಳ್ಳುತ್ತೇವೆ.
ಬಸವಣ್ಣನವರಷ್ಟು ವಿನಯವಂತಿಕೆ ಜಗತ್ತಿನಲ್ಲಿ ಬೇರೆ ಯಾವ ವ್ಯಕ್ತಿಯಲ್ಲೂ ಕಾಣಲಿಕ್ಕೆ ಸಾಧ್ಯ ಇಲ್ಲ. ಮುಗಿದ ಕೈ ಬಾಗಿದ ತಲೆ ಬಸವಣ್ಣನವರದಾಗಿತ್ತು. ಪ್ರತಿಯೊಬ್ಬರು ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಸ್ವೇಚ್ಛಾಚಾರಿಗಳಂತೆ ನಡೆದುಕೊಳ್ಳುವಂಥವರು ಸಮಾಜದಲ್ಲಿ ಹೆಚ್ಚಿದ್ದಾರೆ ಎಂದರು.
ಇದನ್ನೂ ಓದಿ: ಶಿಕ್ಷಣ ಕ್ಷೇತ್ರದ ಸಮಸ್ಯೆ ಪರಿಹರಿಸಲು ಶ್ರೀನಿವಾಸ್ ಸಮರ್ಥರು | ಡಾ.ಪ್ರಭಾ ಮಲ್ಲಿಕಾರ್ಜುನ್
ಈ ಸಂದರ್ಭದಲ್ಲಿ ಬಾಲ್ಕಿಯ ಬಸವಲಿಂಗಪಟ್ಟದ್ದೇವರಿಗೆ ಹಾಗೂ ಇಳಕಲ್ಲಿನ ಗುರುಮಹಾಂತ ಮಹಾಸ್ವಾಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಶಿವಮೊಗ್ಗದ ಬೆಕ್ಕಿನಕಲ್ಮಠ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಪಾಂಡೋಮಟ್ಟಿಯ ಗುರುಬಸವ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದರು.
