ಚಿತ್ರದುರ್ಗ ನ್ಯೂಸ್:
ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಪ್ರಮುಖವಾಗಿರುವ ಗೃಹಲಕ್ಷ್ಮೀ ಯೋಜನೆಗೆ ರಾಜ್ಯಾದ್ಯಂತ ಚಾಲನೆ ದೊರೆತಿದೆ. ಈಗಾಗಲೇ ಅನೇಕರ ಖಾತೆಗಳಿಗೆ ಹಣವೂ ಬಂದು ಜಮೆಯಾಗಿದೆ.
ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡುವ ಹೊತ್ತಿಗೆ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ನೇರ ಪ್ರಸಾರದ ಜೊತೆಗೆ ಯೋಜನೆಗೆ ಚಾಲನೆ ನೀಡುವ ಪ್ರಕ್ರಿಯೆಗಳು ನಡೆದವು.
ಹೊಳಲ್ಕೆರೆ ತಾಲೂಕಿನ ಎಚ್.ಡಿ.ಪುರದಲ್ಲಿ ನಡೆದ ಗೃಹಲಕ್ಷ್ಮೀ ಯೋಜನೆ ಜಾರಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಭಾಗಿಯಾಗಿ ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಎಚ್.ಆಂಜನೇಯ, ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ, ನಮ್ಮ ಯೋಜನೆಗಳನ್ನು ನೋಡಿ ಸಹಿಸಿಕೊಳ್ಳಲು ಆಗದವರು ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡಬೇಡಿ. ನಮ್ಮ ಸರ್ಕಾರ ಇರುವವರೆಗೆ ನಮ್ಮ ಯೋಜನೆಗಳು ಜಾರಿಯಲ್ಲಿರುತ್ತವೆ ಎಂದು ಭರವಸೆ ನೀಡಿದರು.
ಚುನಾವಣೆಗೂ ಮುಂಚೆ ಐದು ಗ್ಯಾರಂಟಿ ಯೋಜನೆಗಳು ಜಾರಿ ಅಸಾಧ್ಯ, ಇವೆಲ್ಲವೂ ಸುಳ್ಳು ಎಂದು ಹೇಳಿದರು. ಬಳಿಕ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು ಮೊದಲ ಸಚಿವ ಸಂಪುಟದಲ್ಲಿಯೇ ಎಲ್ಲ ಯೋಜನೆಗಳ ಜಾರಿಗೆ ಒಪ್ಪಿಗೆ ಸೂಚಿಸಿ, ಒಂದೊಂದನ್ನು ಜಾರಿಗೊಳಿಸುತ್ತಿದ್ದಂತೆ, ರಾಜ್ಯ ದಿವಾಳಿ ಆಗಲಿದೆ ಎಂದು ಸುಳ್ಳು ಹಬ್ಬಿಸಿದರು. ಯೋಜನೆಗಳು ಜನಪ್ರಿಯತೆ ಪಡೆಯುತ್ತಿದ್ದಂತೆ ಈಗ ಮತ್ತೊಂದು ಸುಳ್ಳು ಹರಡುತ್ತಿದ್ದಾರೆ ಎಂದು ದೂರಿದರು.
ಮಹಿಳೆಯರು ಉಚಿತವಾಗಿ ಬಸ್ ಸಂಚಾರ ಮಾಡುವ ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆ ಸಾರಿಗೆ ನಿಗಮ ಆರ್ಥಿಕವಾಗಿ ಬಲವರ್ಧನೆಗೊಳ್ಳುತ್ತಿದೆ. ಮನೆ ದೇವರು, ಒಡಹುಟ್ಟಿದವರು, ಸಂಬಂಧಿಕರ ಮನೆಗೆ ಹೋಗಲು ಕೈಯಲ್ಲಿ ದುಡ್ಡಿಲ್ಲದವರು ಸಂಭ್ರಮದಿಂದ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ಜನರಲ್ಲಿ ಗೊಂದಲ ಉಂಟು ಮಾಡಲು ಮತ್ತು ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ನೂಕುನುಗ್ಗಲು ಉಂಟಾಗಿ ಅವಘಡ ಸಂಭವಿಸಲಿ ಎಂಬ ಕೆಟ್ಟ ದೃಷ್ಟಿಯಿಂದ ಒಂದುವಾರದಲ್ಲಿ ಉಚಿತ ಬಸ್ ಪ್ರಯಾಣ ಯೋಜನೆ ರದ್ದಾಗಲಿದೆ ಎಂದು ಹುಯಿಲೆಬ್ಬಿಸಿದರು.
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ, ಪ್ರತಿ ವ್ಯಕ್ತಿ ಖಾತೆಗೆ 170 ರೂ. ಹಾಗೂ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಈಗ ಗೃಹಲಕ್ಷ್ಮೀ ಯೋಜನೆ ಮೂಲಕ ಮನೆ ಯಜಮಾನಿ ಖಾತೆಗೆ 2000 ರೂ. ಜಮಾ ಆಗಿದೆ. ರಾಜ್ಯದಲ್ಲಿ 1.10 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದರು.
ದೇಶದಲ್ಲಿ ಇಂತಹ ಯೋಜನೆಗಳನ್ನು ಜಾರಿಗೊಳಿಸಿದ ಏಕೈಕ ರಾಜ್ಯ ಕರ್ನಾಟಕ ಮತ್ತು ಏಕೈಕ ಪಕ್ಷ ಕಾಂಗ್ರೆಸ್ ಸರ್ಕಾರ ಎಂದು ಹೆಮ್ಮೆಯಿಂದ ಕಾರ್ಯಕರ್ತರು ಹೇಳಿಕೊಳ್ಳಬಹುದು. ಪೆಟ್ರೋಲ್, ಡಿಸೇಲ್ ಸೇರಿ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಕ್ಕೆ ಏರಿದೆ. ಜನರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಅವರನ್ನು ಪಾರು ಮಾಡಲು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದು, ವಿದ್ಯಾನಿಧಿ-ಯುವನಿಧಿ ಯೋಜನೆಯೂ ಶೀಘ್ರ ಜಾರಿ ಆಗಲಿದೆ. ಈ ಮೂಲಕ ನಿರುದ್ಯೋಗ ಯುವ ಪೀಳಿಗೆಯಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಸರ್ಕಾರ ಅಸ್ತಿತ್ವಕ್ಕೆ ಬಂದು ಕೇವಲ 100 ದಿನಗಳಲ್ಲಿ ನುಡಿದಂತೆ ನಡೆದು ಜನರ ಪ್ರೀತಿ ಗಳಿಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಇನ್ನಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸಲು ಸಿದ್ಧವಿದೆ. ಅದಕ್ಕೆ ಜನರ ಸಹಕಾರ, ಬೆಂಬಲ ಬೇಕು. ಅಸೂಹೆ ಪಡುವ ಜನರ ಸುಳ್ಳು ಮಾತುಗಳನ್ನು ನಿರ್ಲಕ್ಷಿಸಬೇಕು ಎಂದು ಕೋರಿದರು.
ಸಿಲಿಂಡರ್ ಬೆಲೆ ಇಳಿಕೆ ಗ್ಯಾರಂಟಿಗಳ ಎಫೆಕ್ಟ್:
ಸುಳ್ಳೇ ದೇವರು ಎಂದು ನಂಬಿರುವ ಕೆಲ ಪಕ್ಷದವರು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಒಂದೊಂದಾಗಿ ಜಾರಿಗೊಳಿಸುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಭೀತಿಗೆ ಒಳಗಾಗಿದ್ದಾರೆ ಎಂದು ವ್ಯಂಗ್ಯವಾಡಿದ ಆಂಜನೇಯ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರೀಯತೆಗೆ ಹೆದರಿ ಕೇಂದ್ರದ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಸಿಲಿಂಡರ್ ಬೆಲೆಯನ್ನು 200 ರೂಪಾಯಿಗೆ ಇಳಿಸಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ನೀಡುತ್ತಿದ್ದಂತೆ ಸಿಲಿಂಡರ್ ಬೆಲೆಯನ್ನು 400 ರೂಪಾಯಿಗೆ ಇಳಿಸಲಾಗುವುದು. ಜತೆಗೆ ದೇಶದ ಎಲ್ಲ ರಾಜ್ಯದಲ್ಲೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಬದ್ಧತೆ ಪ್ರದರ್ಶಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಹೆಚ್.ಡಿ.ಪುರ ಗ್ರಾಪಂ ಅಧ್ಯಕ್ಷ ದಿವಾಕರ್, ಉಪಾಧ್ಯಕ್ಷೆ ಗೀತಾ, ಚಿತ್ರಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಭಾಗ್ಯಮ್ಮ, ಎನ್.ಜೆ.ಹಳ್ಳಿ ಗ್ರಾಪಂ ಅಧ್ಯಕ್ಷ ವೀರನಾಗಪ್ಪ, ಉಪಾಧ್ಯಕ್ಷೆ ಗೀತಾಂಜಲಿ, ಮುಖಂಡರಾದ ಎಚ್.ಡಿ.ರಂಗಯ್ಯ, ಕೆ.ಸಿ.ರಮೇಶ್, ಕಾಟಲಿಂಗಪ್ಪ ಉಪಸ್ಥಿತರಿದ್ದರು.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
