
CHITRADURGA NEWS | 24 MARCH 2026
ಚಿತ್ರದುರ್ಗ: ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಕೇವಲ ಸರ್ಕಾರಿ ಕಾರ್ಯಕ್ರಮವನ್ನಾಗಿ ನೋಡದೆ, ನಮ್ಮ ಜವಾಬ್ದಾರಿಯೆಂದು ಭಾವಿಸಿ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅಚ್ಚುಕಟ್ಟಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.
ಇದನ್ನೂ ಓದಿ: ಬದುಕಿಗೆ ನೆಮ್ಮದಿ ಕರುಣಿಸುವ ಶಕ್ತಿ ಮಠಗಳಿಗಿದೆ | ಶ್ರೀ ವೀರಭದ್ರ ಸ್ವಾಮೀಜಿ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉಭಯ ಮಹನೀಯರ ಜಯಂತಿ ಆಚರಣೆ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏ.5 ರಂದು ಲಿಡ್ಕರ್ ಭವನದ ಶಿವಶರಣ ಮಾದಾರ ಚನ್ನಯ್ಯ ಸಭಾಭವನದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಿಸಲಾಗುವುದು. ತರಾಸು ರಂಗಮಂದಿರ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದೆ. ಏ.14 ರಂದು ನವೀಕರಣಗೊಂಡ ತರಾಸು ರಂಗಮಂದಿರ ಉದ್ಘಾಟನೆಯ ಜೊತೆಗೆ ಡಾ. ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ಸಹ ಆಚರಿಸಲಾಗುವುದು.
ಅವಕಾಶ ವಂಚಿತರಿಗೆ ಪ್ರಾತಿನಿದ್ಯ ಕಲ್ಪಿಸುವಲ್ಲಿ ಈ ಇಬ್ಬರು ಮಹನೀಯರ ಕೊಡೆಗೆ ಮಹತ್ವವಾದುದು. ಸಮಾಜದ ಪ್ರತಿಯೊಂದು ವರ್ಗದವರು ಸಹ ಸಂತಸದಿಂದ ಜಯಂತಿಯಲ್ಲಿ ಪಾಲ್ಗೊಳ್ಳಬೇಕು. ಜಯಂತಿ ದಿನಗಳಂದು ಪೊಲೀಸ್ ಇಲಾಖೆಯ ಸಲಹೆಯ ಮೇರೆಗೆ ಮೆರವಣಿಗೆ ಮಾರ್ಗವನ್ನು ನಿಗದಿಗೊಳಿಸಲಾಗುವುದು. ಜಯಂತಿಗಳ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ.
ಇದನ್ನೂ ಓದಿ: ಚಿತ್ರದುರ್ಗಕ್ಕೆ ಗುಡ್ ನ್ಯೂಸ್ | ಕೇಂದ್ರೀಯ ವಿದ್ಯಾಲಯ ಪ್ರಾರಂಭ | ತರಗತಿ ಪ್ರವೇಶಕ್ಕೆ ನೊಂದಣಿಗೆ ಏ.2 ಕೊನೆ ದಿನ
ವಿವಿಧ ಇಲಾಖೆಗಳಿಂದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಇಬ್ಬರೂ ಮಹನೀಯರ ಜೀವನ ಸಾಧನೆ ಕುರಿತು ಕರ ಪತ್ರಗಳನ್ನು ಜಯಂತಿ ದಿನಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಉಪನ್ಯಾಸಕ್ಕಾಗಿ ಸಮುದಾಯದ ಮುಖಂಡರು ಸೂಚಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ, ಲಭ್ಯ ಇರುವವರನ್ನು ಆಯ್ಕೆ ಮಾಡಲಾಗುವುದು.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಪೌರ ಕಾರ್ಮಿಕರಿಗೆ ಸನ್ಮಾನಿಸಲಾಗುವುದು. ಕಳೆದ ವರ್ಷದಿಂದ ಸಮಾಜಸೇವೆಯಲ್ಲಿ ತೊಡಗಿರುವ ಗಣ್ಯರನ್ನು ಗುರುತಿಸಿ ಗೌರವಿಸುವ ಪರಂಪರೆ ಜಯಂತಿಯಲ್ಲಿ ಅಳವಡಿಸಲಾಗಿದೆ. ಈ ವರ್ಷವು ಕೂಡ ಕಳೆದ ಬಾರಿ ಗೌರವ ಪಡೆದವರನ್ನು ಹೊರತುಪಡಿಸಿ, ಈ ಬಾರಿ ಹೊಸದಾಗಿ, ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಾಯಕರು ಹಾಗೂ ಉದಯೋನ್ಮುಖ ಸಾಧಕರನ್ನು ಆಯ್ಕೆ ಮಾಡಲಾಗುವುದು.
ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರಲ್ಲಿ ಮತ್ತಷ್ಟು ಉತ್ಸಾಹ ತುಂಬುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 23 | ಮೆಕ್ಕೆಜೋಳ, ಶೇಂಗಾ, ರಾಗಿ ರೇಟ್…
ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೇವಲ ನಿಮ್ನ ಹಾಗೂ ಶೋಷಿತರ ವರ್ಗಕ್ಕೆ ಸೀಮಿತಗೊಳಿಸುವ ಮನೋಭಾವ ಬದಲಾಗಬೇಕು. ಜಿಲ್ಲೆಯಲ್ಲಿ ಇರುವ ಎಲ್ಲಾ ಸಮುದಾಯಗಳ ಮಠಗಳ ಸ್ವಾಮೀಜಿಗಳನ್ನು ಜಯಂತಿಗೆ ಆಹ್ವಾನಿಸಬೇಕು. ಐತಿಹಾಸಿಕ ಕೋಟೆ ಮುಂಭಾಗದಿಂದ ಮೆರವಣಿಗೆಯನ್ನು ಆಯೋಜಿಸಬೇಕು. ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಧಕರು ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು. ಜನಪ್ರತಿನಿಧಿಗಳು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರು, ತಪ್ಪದೇ ಜಯಂತಿಗಳಲ್ಲಿ ಪಾಲ್ಗೊಳ್ಳಬೇಕು.
ವೃತ್ತಿಪರ ಕಲಾ ಸಂಘಗಳ ಕಲಾವಿದರನ್ನು ಆಹ್ವಾನಿಸಿ ನಾಡಗೀತೆ ಹಾಗೂ ಗೀತ ಗಾಯನ ಕಾರ್ಯಕ್ರಮ ಆಯೋಜಿಸಬೇಕು. ನಗರದ ರಸ್ತೆಗೆ ಡಾ.ಬಾಬು ಜಗಜೀವನ್ ರಾಮ್ ಅವರ ಹೆಸರು ಇಡುವಂತೆ ಮತ್ತು ನಗರದಲ್ಲಿ ಬಾಬು ಜಗಜೀವನರಾಂ ಅವರ ಪುತ್ಥಳಿ ಸ್ಥಾಪಿಸುವಂತೆ ದಲಿತ ಮುಖಂಡರುಗಳು ಜಿಲ್ಲಾಧಿಕಾರಿಗಳಲ್ಲಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕಾನೂನು ಹಾಗೂ ನಿಯಮಗಳ ಚೌಕಟ್ಟಿನಲ್ಲಿ ಈ ಕುರಿತಂತೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ತೊಗರಿ ಬೆಳೆಗಾರರ ಸಂಘದಿಂದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಗೆ ಸನ್ಮಾನ
ಸಭೆಯಲ್ಲಿ ಜಿ.ಪಂ.ಸಿಇಓ ಡಾ.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ದಲಿತ ಪರ ಸಂಘಟನೆಗಳ ಮುಖಂಡರುಗಳಾದ ಕೆ.ರಾಜಪ್ಪ, ದುರ್ಗ ಹನುಮಂತಪ್ಪ, ತಿಪ್ಪೇಸ್ವಾಮಿ, ಅವಿನಾಶ್, ಡಿ.ಓ.ಮೊರಾರ್ಜಿ, ಅರುಣ್‍ಕುಮಾರ್, ವಿಶ್ವ ನಾರಾಯಣ ಮೂರ್ತಿ, ಗುರುಮೂರ್ತಿ ಸೇರಿದಂತೆ ಹಲವು ಮುಖಂಡರುಗಳು, ವಕೀಲರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
