
CHITRADURGA NEWS | 28 JUNE 2024
ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಉದ್ಘಾಟಿಸಿದ್ದ ದೃಶ್ಯಕಲಾ ಕಾಲೇಜಿಗೆ 60 ವರ್ಷ ತುಂಬಿದೆ. ಈ ವಜ್ರಮಹೋತ್ಸವ ಸಂಭ್ರಮವನ್ನು ಜುಲೈನಿಂದ 2025ರ ಮೇ ತಿಂಗಳವರೆಗೆ ನಿರಂತರ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ.
1964ರ ಏ.25ರಂದು ಆರಂಭವಾದ ಸರ್ಕಾರಿ ಚಿತ್ರಶಾಲೆ ಮತ್ತು ಕರಕುಶಲ ಶಾಲೆಯನ್ನು ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ಉದ್ಘಾಟಿಸಿದ್ದರು. ಮೊದಲ ವರ್ಷ ಕಾಲೇಜಿಗೆ 72 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 60 ವರ್ಷಗಳಲ್ಲಿ 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಕಲೆ ಮತ್ತು ಕರಕುಶಲ ಕಲಾ ಶಿಕ್ಷಣ ಪಡೆದಿದ್ದಾರೆ. ಕೆಲ ಕಲಾವಿದರು ಜಾಗತಿಕ ಮಟ್ಟದಲ್ಲಿ ಬೆಳೆದಿದ್ದಾರೆ.

1992ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ಕಾಲೇಜು ವಿಶ್ವವಿದ್ಯಾಲಯದ ಲಲಿತಕಲಾ ಮಹಾವಿದ್ಯಾಲಯವಾಗಿ ಬದಲಾಯಿತು. ಚಿತ್ರಕಲೆ, ಅನ್ವಯಿಕ ಕಲೆ, ಶಿಲ್ಪಕಲೆ, ಮುದ್ರಣಕಲೆ, ಲಿಥೋಗ್ರಫಿ, ಛಾಯಾಗ್ರಹಣ ಪಠ್ಯವಾಗಿಸಿಕೊಂಡಿತು. ಐದು ವರ್ಷಗಳ ತರಬೇತಿಯನ್ನು ರಾಷ್ಟ್ರೀಯ ಡಿಪ್ಲೊಮಾ ಎಂದು ಪರಿಗಣಿಸಲಾಯಿತು. ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ಕಾಲೇಜು 2012ರಲ್ಲಿ ವಿಶ್ವವಿದ್ಯಾಲಯ ದೃಶ್ಯಕಲಾ ಕಾಲೇಜು ಎಂಬುದಾಗಿ ಮರುನಾಮಕರಣಗೊಂಡಿದೆ.

‘ವಜ್ರ ಮಹೋತ್ಸವದ ಮಹತ್ವದ ಮೈಲುಗಲ್ಲು ಸ್ಮರಿಸಲು ಕಾಲೇಜಿನಲ್ಲಿ ವರ್ಷವಿಡೀ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜುಲೈನಲ್ಲಿ ವಜ್ರಮಹೋತ್ಸವದ ಉದ್ಘಾಟನೆ ಸರಳವಾಗಿ ನಡೆಯಲಿದೆ. ಹಳೆ ವಿದ್ಯಾರ್ಥಿಗಳ ಸಭೆ, ಚಿತ್ರಕಲೆ ಸ್ಪರ್ಧೆ, ಕಲಾ ಪ್ರದರ್ಶನ, ವಿಚಾರ ಸಂಕಿರಣ, ನವ ಮಾಧ್ಯಮ ಕಾರ್ಯಾಗಾರ, ಹಿರಿಯ ಕಲಾವಿದರಿಗೆ ಸನ್ಮಾನ ಸೇರಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾಹಿತಿ ನೀಡಿದ್ದಾರೆ.
ಕ್ಲಿಕ್ ಮಾಡಿ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ‘ಮೆಜೆಸ್ಟಿಕ್–2’ | ಹಿರಿಯ ನಟಿ ಶ್ರುತಿ ಎಂಟ್ರಿ
ರಾಜ್ಯದ ವಿವಿಧ ಪ್ರದೇಶದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ದಾರಿದೀಪವಾಗಿದೆ. ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದವರು ಹೆಚ್ಚಾಗಿ ಕಾಲೇಜು ಶಿಕ್ಷಣ ಪಡೆದಿದ್ದು, ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಲಾವಿದ ವಿ.ಬಿ. ಹಿರೇಗೌಡರ 27 ವರ್ಷ ಪ್ರಾಂಶುಪಾಲರಾಗಿದ್ದರು. ಕಲಾವಿದ ಚಿ.ಸು. ಕೃಷ್ಣಸೆಟ್ಟಿ, ಗೊಟಗೋಡಿಯ ರಾಕ್‌ಗಾರ್ಡನ್ ನಿರ್ಮಾತೃ ಟಿ.ಬಿ. ಸೊಲಬಕ್ಕನವರ ಈ ಕಾಲೇಜಿನ ಹಳೆ ವಿದ್ಯಾರ್ಥಿಗಳು ಎಂದು ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
