ಕ್ರೈಂ ಸುದ್ದಿ
ಕಂದನ ಕೊಂದು ಸೂಟ್‍ಕೇಸಿನಲ್ಲಿ ತುಂಬಿಕೊಂಡು ಬಂದಿದ್ದ ಮಹಿಳೆ ವಿರುದ್ಧ ಚಾರ್ಜ್‍ಶೀಟ್ | ಸಾವಿನ ರಹಸ್ಯ ಬಯಲು ಮಾಡಿದ ಪೊಲೀಸರು

CHITRADURGA NEWS | 4 MARCH 2024
ಪಣಜಿ: ಹೆತ್ತ ಕಂದನನ್ನೇ ಕೊಂದು ಸೂಟ್‍ಕೇಸ್‍ನಲ್ಲಿ ತುಂಬಿಕೊಂಡು ಗೋವಾದಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಚಿತ್ರದುರ್ಗ ಜಿಲ್ಲೆಯ ಐಮಂಗಲ ಪೊಲೀಸರ ಬಲೆಗೆ ಬಿದ್ದಿದ್ದ ಮಹಿಳೆ ವಿರುದ್ಧ ಗೋವಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
2024 ಜನವರಿ 9 ರಂದು ಗೋವಾದಲ್ಲಿ ಬೆಂಗಳೂರಿನ ಖಾಸಗಿ ಕಂಪನಿಯ ಸಿಇಓ ಆಗಿದ್ದ ಮಹಿಳೆ ಸುಚನಾ ಸೇಠ್ ತಾನು ಹೆತ್ತ ಮಗುವನ್ನೇ ಕೊಂದು ಸೂಟ್‍ಕೇಸ್‍ಗೆ ತುಂಬಿಕೊಂಡು ಅಲ್ಲಿಂದ ಕಾರು ಬಾಡಿಗೆಗೆ ಹಿಡಿದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು.

ಇದನ್ನೂ ಓದಿ: ನನ್ನ ಮಗುವನ್ನು ಕೊಂದಿದ್ದು ನಾನೇ…| ನಿರ್ಭಾವುಕಳಾಗಿ ಹೇಳಿದ ಹಂತಕಿ ಸುಚನಾ ಸೇಠ್
ಆಕೆಯ ನಡವಳಿಕೆ ಬಗ್ಗೆ ಅನುಮಾನ ಮೂಡಿದ್ದ ಗೋವಾದ ಹೋಟೆಲ್ ಸಿಬ್ಬಂದಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರು ಚಾಲಕನ ಮೊಬೈಲ್ ನಂಬರ್ ಪತ್ತೆ ಮಾಡಿದ್ದ ಪೊಲೀಸರು ಮುಂದೆ ಸಿಗುವ ಪೊಲೀಸ್ ಠಾಣೆ ಬಳಿ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದರು.
ಈ ಪ್ರಕರಣವನ್ನು ಗೋವಾದ ಕಲಂಗುಂಟೆ ಪೊಲೀಸರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ 642 ಪುಟಗಳ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮಗುವಿನ ಹಂತಕಿ ಸುಚನಾ ಪ್ರಯಾಣಿಸುತ್ತಿದ್ದ ಕಾರು ಚಾಲಕ ಐಮಂಗಲ ಪೊಲೀಸ್ ಠಾಣೆ ಹುಡುಕಿದ್ದೇಗೆ ಗೊತ್ತಾ..?
ಪೊಲೀಸರು ಸಲ್ಲಿಸಿರುವ ಚಾರ್ಜ್‍ಶೀಟ್‍ನಲ್ಲಿ ಮಗುವನ್ನು ಉಸಿರುಗಟ್ಟಿಸಿ ಕೊಂದಿರುವುದಾಗಿ ತಿಳಿಸಿರುವುದು ದಾಖಲಾಗಿದೆ. ವಿಷ ನೀಡಿ ಮಗುವನ್ನು ಕೊಂದಿಲ್ಲ ಎನ್ನುವುದು ಕೂಡಾ ಉಲ್ಲೇಖವಾಗಿದೆ.
ಸದರಿ ಪ್ರಕರಣದಲ್ಲಿ 59 ಸಾಕ್ಷಿಗಳ ಹೆಸರು ಉಲ್ಲೇಖಿಸಲಾಗಿದೆ. ಇನ್ನೂ ಮಗುವಿನ ಶವ ಪರೀಕ್ಷೆ ವೇಳೆ ಕರುಳಿನಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎನ್ನುವುದನ್ನೂ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಮಗುವಿನ ಮೇಲಿನ ವಾತ್ಸಲ್ಯಕ್ಕಿಂತ ಗಂಡನ ಮೇಲಿನ ಹಠವೇ ಹೆಚ್ಚಾಯಿತೇ
ಮಗುವನ್ನು ತಂದೆಯ ಬಳಿಗೆ ಕಳಿಸಲು ಅಥವಾ ಮಾತನಾಡಿಸಲು ಇಷ್ಟವಿರಲಿಲ್ಲ. ಆದರೆ, ನ್ಯಾಯಾಲಯ ತಂದೆಯ ಜೊತೆಗೆ ಮಗುವನ್ನು ಕಳಿಸಬೇಕು, ಮಾತನಾಡಿಸಬೇಕು ಎಂದು ಆದೇಶ ಮಾಡಿತ್ತು. ಇದನ್ನು ತಪ್ಪಿಸಲು ಅನ್ಯ ಮಾರ್ಗಗಳಿಲ್ಲದೇ ಮಗುವನ್ನೇ ಕೊಲ್ಲುವ ನಿರ್ಧಾರ ಮಾಡಿರುವುದಾಗಿ ಎಂದು ಸುಚನಾ ಸೇಠ್ ಟಿಶ್ಯೂ ಪೇಪರ್‍ನಲ್ಲಿ ಬರೆದಿದ್ದನ್ನು ಸಾಕ್ಷ್ಯವಾಗಿ ಬಳಕೆ ಮಾಡಿಕೊಳ್ಳಲಾಗಿದೆ.
ಗೋವಾ ನ್ಯಾಯಾಲಯ ಚಾರ್ಜ್‍ಶೀಟ್ ಅನ್ನು ಪರಿಶೀಲನೆ ನಡೆಸಿದ್ದು, 2024 ಜೂನ್ 14 ರಿಂದ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಹೆತ್ತ ಕಂದನ ಕೊಂದು ನಿರ್ಭಾವುಕಳಾಗಿ ಕಾರು ಹತ್ತಿದ ತಾಯಿ | ಮಗನ ಶವದೊಂದಿಗೆ 395 ಕಿ.ಮೀ ಸಾಗಿದ ನಂತರ ಅರೆಸ್ಟ್
